The Federal Reality Check: ಮೂರು ಗಂಟೆಯಿಂದ ಮೂವತ್ತು ನಿಮಿಷಗಳವರೆಗೆ ಇಳಿದ ಐಟಿ ಹಬ್ ಪ್ರಯಾಣ
3 ತಾಸುಗಳ ಕಾಲ ಟ್ರಾಫಿಕ್ ಜಾಬ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಜನರಿಗೆ ಮೆಟ್ರೋ ವರದಾನವಾಗಿದೆ. ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರಕ್ಕೆ ಅರ್ಧಗಂಟೆಯಲ್ಲಿ ಸಂಚರಿಸಬಹುದಾಗಿದೆ.;
ನಮ್ಮ ಮೆಟ್ರೊ (ಹಳದಿ ಮಾರ್ಗ)
ಬಹುನಿರೀಕ್ಷಿತ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತವಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಐಟಿ-ಬಿಟಿ ಹಬ್ ಆಗಿದ್ದರಿಂದ ಜಯದೇವ ಆಸ್ಪತ್ರೆ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ವಾಹನ ದಟ್ಟಣೆಯಿಂದ ಹೈರಾಣಾದ ಜನ ಇದೀಗ ನಿಟ್ಟುಸಿರು ಬಿಡುವಂತಾಗಿದೆ.
2-3 ತಾಸುಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಜನರಿಗೆ ಮೆಟ್ರೋ ವರದಾನವಾಗಿದೆ. ಗಂಟೆಗಟ್ಟಲೇ ರಸ್ತೆಯಲ್ಲಿ ನಿಂತು ಬಳಲಿ ಬೆಂಡಾಗುತ್ತಿದ್ದವರು ಈಗ ಕೆಲವು ನಿಮಿಷಗಳ ಅಂತರದಲ್ಲಿ ಹೋಗಲು ಮೆಟ್ರೋ ಹಳದಿ ಮಾರ್ಗ ಅನುಕೂಲ ಮಾಡಿಕೊಟ್ಟಿದೆ. ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರಕ್ಕೆ ಅರ್ಧಗಂಟೆಯಲ್ಲಿ ಸಂಚರಿಸಬಹುದಾಗಿದೆ.
ಮೆಟ್ರೋ ಹಳದಿ ಮಾರ್ಗದ ಬಗ್ಗೆ ದ ಫೆಡರಲ್ ಕರ್ನಾಟಕವು ಈ ಬಗ್ಗೆ ಮಂಗಳವಾರ ರಿಯಾಲಿಟಿ ಚೆಕ್ ನಡೆಸಿತು. ಇದೇ ವೇಳೆ ಆರ್.ವಿ.ರಸ್ತೆಯಿಂದ ಪ್ರಯಾಣ ಆರಂಭಿಸಿದಾಗ ಹಳದಿ ಮಾರ್ಗದ ಹಲವು ವೈಶಿಷ್ಯ ಕಂಡಿದೆ. ಹಸಿರು ಮತ್ತು ನೇರಳೆ ಮಾರ್ಗಕ್ಕಿಂತ ಹಳದಿ ಮಾರ್ಗವು ವಿಭಿನ್ನವಾಗಿದೆ. ಮೆಟ್ರೋ ರೈಲು ಮಾರ್ಗ ನಿರ್ಮಾಣದಲ್ಲಿ ಮೂರು ಕಂಪನಿಗಳು ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಿವೆ.
ಹಳದಿ ಮಾರ್ಗದಲ್ಲಿ ಸದ್ಯಕ್ಕೆ ಕೇವಲ ಮೂರು ರೈಲುಗಳ ಓಡಾಟ ಮಾತ್ರ ಇರುವುದರಿಂದ ಪ್ರಯಾಣಿಕರು 15-20 ನಿಮಿಷಗಳ ಕಾಲ ಕಾಯಲೇಬೇಕು. ಹೀಗಾಗಿ ರೈಲು ಸಹಜವಾಗಿ ಹೌಸ್ ಫುಲ್ ಆಗಿದೆ. ವಿದ್ಯಾರ್ಥಿಗಳು, ಐಟಿ ವೃತ್ತಿಪರರು, ಬೊಮ್ಮಸಂದ್ರದ ಕಾರ್ಖಾನೆಯ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು ಸೇರಿದಂತೆ ಹಲವರು ಪ್ರಯಾಣಿಸುತ್ತಾರೆ. ಪ್ರಯಾಣಿಕರು ಸಹ ಹಳದಿ ಮಾರ್ಗ ಆರಂಭಕ್ಕೆ ಫುಲ್ ಖುಷಿಯಾಗಿದ್ದಾರೆ.
ಹೊಸ ಮಾರ್ಗದ ರೈಲಿನಲ್ಲಿ ಪ್ರಯಾಣಿಸಲು ಕುತೂಹಲದಿಂದ ಬಂದವರೂ ಹೆಚ್ಚಾಗಿದ್ದರು. ವಿಶೇಷವಾಗಿ ನಿತ್ಯ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವ ಟೆಕ್ಕಿಗಳು ಹೆಚ್ಚಾಗಿದ್ದರು. ದಟ್ಟಣೆ ಅವಧಿಯ ಬೆಳಗ್ಗೆ ಮತ್ತು ಸಂಜೆ ರೈಲಿನಲ್ಲಿ ಪ್ರಯಾಣಿಕರು ತುಂಬಿದ್ದರು. ಅನೇಕರು ಹೊಸ ರೈಲು, ನಿಲ್ದಾಣಗಳ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಹಸಿರು-ಹಳದಿ ಮಾರ್ಗದ ನಡುವಿನ ಹೊಸ ಇಂಟರ್‌ಚೇಂಜ್ ಅಗಿ ಬದಲಾಗಿರುವ ಕಾರಣ ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕ ದಟ್ಟಣೆ ಹೆಚ್ಚಾಗಿತ್ತು.
ಮತ್ತೊಂದು ರೈಲು ಬಂದ ಬಳಿಕ ಕಾಯುವ ಅಂತರ ಕಡಿಮೆ
ಹೊಸ ಮಾರ್ಗ ಆರಂಭ ಒಂದು ಕಡೆಯಾದರೆ 25-30 ನಿಮಿಷಗಳ ಕಾಲ ಪ್ರಯಾಣಿಕರು ಕಾದು ನಿಲ್ಲಬೇಕಾಗಿತ್ತು. ಪ್ರಮುಖ ನಿಲ್ದಾಣಗಳಾದ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಜಯದೇವ ಮೆಟ್ರೋ ನಿಲ್ದಾಣ, ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಸೇರಿ ಪ್ರಮುಖ ನಿಲ್ದಾಣಗಳಲ್ಲಿ ರೈಲಿಗಾಗಿ ಅನಿವಾರ್ಯವಾಗಿ ಕಾಯಲೇಬೇಕಾಗಿದೆ. ಪ್ರಸ್ತುತ ಮೂರು ರೈಲುಗಳು ಸಂಚಾರವಾಗುತ್ತಿದ್ದು, ಈ ತಿಂಗಳ ಅಂತ್ಯಕ್ಕೆ ಮತ್ತೊಂದು ರೈಲು ಆಗಮಿಸಲಿದೆ. ಅದನ್ನು ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ನಾಲ್ಕು ರೈಲುಗಳು ಓಡಾಟ ಆರಂಭವಾಗಲಿದೆ. ಆಗ ಕಾಯುವ ಸಮಯದ ಅಂತರವು ಕಡಿಮೆಯಾಗಲಿದೆ.
ಮೆಟ್ರೋ ಹಳದಿ ಮಾರ್ಗವು ಸದ್ಯ 3 ಮೆಟ್ರೋ ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದೆ. ಹಸಿರು ಮಾರ್ಗ, ಗುಲಾಬಿ, ನೀಲಿ ಮಾರ್ಗಕ್ಕೆ ಹಳದಿ ಮಾರ್ಗವು ಸಂಪರ್ಕಿಸುತ್ತದೆ. ರಾಷ್ಟ್ರೀಯ ವಿದ್ಯಾಲಯ ರಸ್ತೆ (ಆರ್‌ವಿ ರೋಡ್) ನಿಲ್ದಾಣದಲ್ಲಿ ಇಂಟರ್‌ಚೇಂಜ್ ಆಗಲಿದ್ದು, ಹಸಿರು ಮಾರ್ಗ ರೇಷ್ಮೆ ಸಂಸ್ಥೆ - ಮಾದಾವರ ಮಾರ್ಗ ಸಂಚರಿಸಲಿದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಇಂಟರ್‌ಚೇಂಜ್ ಆಗಲಿದ್ದು, ಗುಲಾಬಿ ಮಾರ್ಗ ನಾಗಾವರ - ಕಾಳೇನ ಅಗ್ರಹಾರ ಮಾರ್ಗ ಸಂಚಾರವಾಗಲಿದೆ. ಸಿಲ್ಕ್ ಬೋರ್ಡ್‌ನಲ್ಲಿ ಮತ್ತೊಂದು ಇಂಟರ್‌ಚೇಂಜ್ ಆಗಲಿದೆ. ಇದು ನೀಲಿ ಮಾರ್ಗ ಸಿಲ್ಕ್‌ಬೋರ್ಡ್ - ಕೆಆರ್ ಪುರಂಗೆ ಸಂಚಾರವಾಗಲಿದೆ.
ಸಂತಸ ವ್ಯಕ್ತಪಡಿಸಿದ ಪ್ರಯಾಣಿಕರು
ಪ್ರಯಾಣಿಕ ಈಶ್ವರ್‌ಕೆ. ಮಾತನಾಡಿ, ಹಳದಿ ಮೆಟ್ರೋ ಮಾರ್ಗದಿಂದ ಬಹಳ ಉಪಯೋಗವಾಗಿದೆ. ಮೆಜಿಸ್ಟಿಕ್ ಹೋಗಲು 2-3 ತಾಸುಗಳ ಬೇಕಾಗಿತ್ತು. ಈಗ ಒಂದು ಗಂಟೆಯಲ್ಲಿ ಹೋಗಲು ಸಾಧ್ಯವಾಗುತ್ತಿದೆ. ಸದ್ಯಕ್ಕೆ ಮೂರೇ ರೈಲು ಬಿಟ್ಟಿರುವುದರಿಂದ ಅನಿವಾರ್ಯವಾಗಿ ಕಾಯಲೇಬೇಕಾಗಿದೆ. ಬೇರೆ ಮಾರ್ಗಗಳ ರೈಲಿನಂತೆ ಮೂರು ನಿಮಿಷಕ್ಕೊಮ್ಮೆ ಸಂಚರಿಸುವ ವ್ಯವಸ್ಥೆಯನ್ನು ಸರ್ಕಾರ ಅದಷ್ಟು ಬೇಗ ಕ್ರಮಕೈಗೊಳ್ಳಬೇಕು ಎಂದು ಸಂತಸ ವ್ಯಕ್ತಪಡಿಸಿದರು.
ಮತೋರ್ವ ಪ್ರಯಾಣಿಕ ಗೋಪಾಲ್ ಮಾತನಾಡಿ, ಮೊದಲು ಜಾಲಹಳ್ಳಿಯಿಂದ ಬರಲು ಮೂರುವರೆ ತಾಸು ಬೇಕಾಗಿತ್ತು. ಈಗ ಒಂದೂವರೆ ತಾಸಿನಲ್ಲಿ ಬರಬಹುದು. ಐಟಿ-ಬಿಟಿ ಉದ್ಯೋಗಿಗಳಿಗೆ ಮಾತ್ರವಲ್ಲದೇ ಗಾರ್ಮೆಂಟ್ಸ್ ಸೇರಿದಂತೆ ಇತರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಅನುಕೂಲವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.
ಬಯೋಕಾನ್ ಕಂಪನಿ ಉದ್ಯೋಗಿ ಸ್ವಾತಿಶ್ರೀ ಮಾತನಾಡಿ, ದೆಹಲಿ ಮೆಟ್ರೋದಂತೆ ಬೆಂಗಳೂರು ಮೆಟ್ರೋ ವ್ಯವಸ್ಥೆ ಇಲ್ಲ. ಮುಂದಿನ ದಿನದಲ್ಲಿ ಇದು ಸರಿಹೋಗಬಹುದು. ಆದರೂ, ಮೆಟ್ರೋದಲ್ಲಿ ಸಂಚರಿಸಿದ್ದು ಸಂತೋಷ ತಂದಿತು. ಮೊದಲು ಬೊಮ್ಮನಹಳ್ಳಿಯಿಂದ ಬೊಮ್ಮಸಂದ್ರಕ್ಕೆ ಬರಲು 20 ನಿಮಿಷ ಬೇಕಾಗಿತ್ತು. ಮೆಟ್ರೋಗಿಂತ ಮೊದಲು 40 ನಿಮಿಷಗಳ ಕಾಲ ಬೇಕಾಗಿತ್ತು. ಸಂಚಾರದ ಅವಧಿ ಕಡಿಮೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಉದ್ಯಮಿ ಗುರುಪ್ರಸಾದ್ ಮಾತನಾಡಿ, ಜ್ಞಾನಭಾರತಿಯಿಂದ ಪ್ರಯಾಣಿಸುತ್ತೇನೆ. ಸುಮಾರು ಎರಡೂವರೆಗೆ ಗಂಟೆ ಬೇಕಾಗಿತ್ತು. ಈಗ 45 ನಿಮಿಷ ಸಾಕು. ಬೆಂಗಳೂರಿನ ವಾಹನದಟ್ಟಣೆ ತಪ್ಪಿಸಲು ನೈಸ್ ರಸ್ತೆ ಮೂಲಕ ಬರುತ್ತಿದ್ದೇವೆ. ಈಗ ಮೆಟ್ರೋ, ಜನರಿಗೆ ನಿಜವಾಗಲೂ ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಹಳದಿ ಮಾರ್ಗದ ವೈಶಿಷ್ಟ್ಯಗಳು
ಬೊಮ್ಮಸಂದ್ರ ನಿಲ್ದಾಣಕ್ಕೆ Delta Electronics ಹೆಸರು ಇಡಲಾಗಿದೆ. ಮುಂದಿನ 30 ವರ್ಷದವರೆಗೆ ಈ ನಿಲ್ದಾಣಕ್ಕೆ ತನ್ನ ಹೆಸರನ್ನು ನಾಮಕರಣ ಮಾಡಿಕೊಳ್ಳುವ ಹಕ್ಕು ಪಡೆದಿದ್ದು, ಕಂಪನಿಯು ಬಿಎಂಆರ್‌ಸಿಎಲ್‌ಗೆ ರೂ. 65 ಕೋಟಿ ಪಾವತಿಸಿದೆ. ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ನಿಲ್ದಾಣದ ಹೊಣೆ ಹೊತ್ತಿದೆ. ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆಯ ಬೆಂಬಲಕ್ಕಾಗಿ ಡೆಲ್ಟಾ ಮುಂದಾಗಿದೆ ಎಂದು ಹೇಳಲಾಗಿದೆ.
ದ ಫೆಡರಲ್ ಕರ್ನಾಟಕ ನಡೆಸಿದ ರಿಯಾಲಿಟಿ ಚೆಕ್‌ನ ವಿಡಿಯೋ ಇಲ್ಲಿದೆ.
ಮೆಟ್ರೋ ಪಿಲ್ಲರ್‌ಗಳ ಮೇಲೆ ಆಕರ್ಷಕ ಚಿತ್ತಾರ
ಬಯೋಕಾನ್ ನಿಲ್ದಾಣದ ಪಿಲ್ಲರ್‌ಗಳ ಮೇಳೆ ಚನ್ನಪಟ್ಟಣದ ಕಲೆಯನ್ನು ಬಿಂಬಿಸುವ ಅದ್ಬುತ ಕಲಾಕೃತಿಗಳನ್ನು ಚಿತ್ರಿಸಲಾಗಿದೆ. ಹುಸ್ಕೂರ್ ಗೇಟ್ ಮತ್ತು ಹೆಬ್ಬಗೋಡಿ ಮೆಟ್ರೋ ನಿಲ್ದಾಣದ ನಡುವಿನ 50 ಮೆಟ್ರೋ ಪಿಲ್ಲರ್ ಗಳ ಮೇಲೆ ಈ ಕಲೆಗಳನ್ನು ಕಾಣಬಹುದಾಗಿದೆ. ಪಿಲ್ಲರ್ಸ್ ಆಫ್ ಬೆಂಗಳೂರು - ಸೆಲೆಬ್ರೇಟಿಂಗ್ ಎವ್ರಿಡೇ ಚಾಂಪಿಯನ್ಸ್ - ಶೀರ್ಷಿಕೆಯಡಿ ಪಿಲ್ಲರ್ ಗಳ ಮೇಲೆ ಚಿತ್ತಾರಗಳನ್ನು ಬಿಡಿಸಲಾಗಿದೆ.ನಿತ್ಯ ನಗರಕ್ಕೆ ಜೀವ ತುಂಬುವ ಹೂವು ಮಾರಾಟಗಾರರು, ಎಲೆಕ್ಟ್ರಿಷಿಯನ್‌ಗಳು, ಚಮ್ಮಾರರು, ವೈದ್ಯರು, ದಾದಿಯರು, ಸಂಗೀತಗಾರರು, ವಿಜ್ಞಾನಿಗಳು, ಐಟಿ ವೃತ್ತಿಪರರು, ಏರೋಸ್ಪೇಸ್ ಎಂಜಿನಿಯರ್‌ಗಳು ಮತ್ತು ಇನ್ನೂ ಹಲವು ವೃತ್ತಿಪರರನ್ನು ಚನ್ನಪಟ್ಟಣದ ಗೊಂಬೆಗಳಂತೆ ಚಿತ್ರಿಸುವ ಮೂಲಕ ಗೌರವಿಸಲಾಗಿದೆ. ಪ್ರತಿಯೊಂದು ಕಂಬವು ಬೆಂಗಳೂರಿನ ಚೈತನ್ಯವನ್ನು ಪ್ರದರ್ಶಿಸುವ ರೋಮಾಂಚಕ ಕ್ಯಾನ್ವಾಸ್ ಆಗಿದ್ದು, ನಗರವನ್ನು ಅಭಿವೃದ್ಧಿ ಹೊಂದುವಂತೆ ಮಾಡುವವರ ಸಾರವನ್ನು ಈ ಪಿಲ್ಲರ್‌ಗಳು ಸೆರೆಹಿಡಿಯುತ್ತವೆ.
ಮೆಟ್ರೋದಿಂದ ಇನ್ಫೋಸಿಸ್‌ಗೆ ನೇರ ಮಾರ್ಗ
ಟೆಕ್ ಹಬ್ ಆಗಿರುವ ಎಲೆಕ್ಟ್ರಾನಿಕ್‌ಸಿಟಿ ಬಳಿಯ ಕೋನಪ್ಪನ ಅಗ್ರಹಾರ ನಿಲ್ದಾಣವನ್ನು ಇನ್ಫೋಸಿಸ್ ಫೌಂಡೇಷನ್ ನಿರ್ಮಿಸಿದೆ. ಈ ನಿಲ್ದಾಣವು ಇನ್ಫೋಸಿಸ್ ಕ್ಯಾಂಪಸ್‌ಗೆ ನೇರ ಪ್ರವೇಶ ಪಡೆಯಲಿದೆ. ಇನ್ಫೋಸಿಸ್ ಫೌಂಡೇಶನ್ 30 ವರ್ಷಗಳ ಅವಧಿಗೆ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಈ ನಿಲ್ದಾಣವನ್ನು ನವದೆಹಲಿ ಮೂಲದ ಸಿಸ್ತ್ರಾ ವಿನ್ಯಾಸಗೊಳಿಸಿದೆ ಮತ್ತು ಶೋಭಾ ಡೆವಲಪರ್‌ಗಳು ವಾಸ್ತುಶಿಲ್ಪವನ್ನು ಪೂರ್ಣಗೊಳಿಸುವ ಕೆಲಸವನ್ನು ನಿರ್ವಹಿಸಿದ್ದಾರೆ.
ಪ್ಲಾಟ್‌ಫಾರ್ಮ್ ಪರದೆಯ ಗೇಟ್‌ಗಳು ಕಲಾತ್ಮಕವಾಗಿ ಮಾಡಲಾಗಿದೆ. ವಸ್ತುಪ್ರದರ್ಶನಗಳಿಗೆ ಸ್ಥಳಾವಕಾಶದ ಸೌಲಭ್ಯಗಳನ್ನು ನೀಡಲಾಗಿದೆ. ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತ್ತು ಇನ್ಫೋಸಿಸ್ ಸಿಬ್ಬಂದಿಗೆ ತೆರಳುವ ವ್ಯವಸ್ಥೆ ಮಾಡಲಾಗಿದೆ. ಒಂದು ಪ್ರಯಾಣಿಕರಿಗೆ ಇದ್ದು, ಹೊಸೂರು ರಸ್ತೆಯನ್ನು ದಾಟಲು ಅನುವು ಮಾಡಿಕೊಡುತ್ತದೆ. ಇನ್ನೊಂದು ಇನ್ಫೋಸಿಸ್ ಕ್ಯಾಂಪಸ್‌ಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಈ ನಿಲ್ದಾಣವನ್ನು ಒಟ್ಟು 10,185 ಚದರ ಮೀಟರ್‌ನಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಇನ್ಫೋಸಿಸ್ ಫೌಂಡೇಶನ್‌ಗೆ 3ಸಾವಿರ ಚದರ ಅಡಿಗಳನ್ನು ನಿಗದಿಪಡಿಸಲಾಗಿದೆ. ನಿಲ್ದಾಣದಲ್ಲಿ ಸೌರಶಕ್ತಿಯಿಂದ ದೀಪಾಲಂಕಾರ ಇರಲಿದೆ. ನಿಲ್ದಾಣದ ಮೇಲ್ಛಾವಣಿಯಲ್ಲಿ ಸೌರಫಲಕ ನಿರ್ಮಾಣ ಮಾಡಲಾಗಿದೆ ಎಂದು ಮೆಟ್ರೋ ಸಿಬ್ಬಂದಿ ಹೇಳಿದ್ದಾರೆ.