Weather Alert| ಬೆಳಗ್ಗೆಯೇ ಬೆಂಗಳೂರಲ್ಲಿ ತುಂತುರು ಮಳೆ, 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರಿನ ಹೊರವಲಯಗಳಾದ ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ ಸುತ್ತಮುತ್ತ ಗುರುವಾರ ಬೆಳಗ್ಗೆ ತುಂತುರು ಮಳೆಯಾಗಿದೆ. ಇಡೀ ನಗರದಲ್ಲಿ ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.;

Update: 2025-04-03 06:40 GMT

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. 

ಬಿಸಿಲಿನ ಧಗೆಯಲ್ಲಿ ಕಂಗೆಟ್ಟಿದ್ದ ಸಿಲಿಕಾನ್‌ ಸಿಟಿ ಮಂದಿಗೆ ಬೆಳಗ್ಗೆಯೇ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರಿನ ಹೊರವಲಯಗಳಾದ ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ ಸುತ್ತಮುತ್ತ ಗುರುವಾರ ಬೆಳಗ್ಗೆ ತುಂತುರು ಮಳೆಯಾಗಿದೆ. ಇಡೀ ನಗರದಲ್ಲಿ ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. 

ಒಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಪರಿಣಾಮದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಗುರುವಾರ ಮತ್ತು ಶುಕ್ರವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಬೀದರ್, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. 

ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಐದು ದಿನಗಳವರೆಗೆ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಏಪ್ರಿಲ್ 3 ರಿಂದ ಏಪ್ರಿಲ್ 7 ರವರೆಗೆ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಈ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಏಪ್ರಿಲ್ 7 ರ ಭಾನುವಾರದಂದು ನಗರದಾದ್ಯಂತ ಮಳೆ ತೀವ್ರಗೊಳ್ಳುವ ನಿರೀಕ್ಷೆಯಿದೆ. ಏಪ್ರಿಲ್ 8 ರ ಸೋಮವಾರದ ವೇಳೆಗೆ ಹವಾಮಾನವು ಭಾಗಶಃ ಮೋಡ ಕವಿದ ವಾತಾವರಣಕ್ಕೆ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. 

ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ವಿಜಯನಗರ, ರಾಮನಗರ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

Tags:    

Similar News