ಸರ್ಕಾರಿ ಶಾಲೆಗಳ ಶೌಚಾಲಯಗಳು ಬಲು ಸೊಗಸು; ಇದು ಬಸ್ ಕಂಡಕ್ಟರ್ ಕನಸು
ಬಸ್ ಕಂಡಕ್ಟರ್ ಕಟ್ಟಿದ ಕೂಲಿ ಕಾರ್ಮಿಕರ ಸಂಘಟನೆ ಇದೀಗ ಸ್ವಯಂಪ್ರೇರಿತರಾಗಿ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಮಿಂಚುವಂತೆ ಮಾಡುತ್ತಿದ್ದಾರೆ. ಈ ಜನೋಪಕಾರಿ ಸಂಘಟನೆಯ ಹೆಸರು ʼರಾಜಕೇಸರಿʼ.;
ಟಿಕೆಟ್.. ಟಿಕೆಟ್... ಎನ್ನುವ ಬಸ್ ಕಂಡಕ್ಟರ್‌ಗಳು ಪ್ರಯಾಣಿಕರು ಹೋಗಬೇಕಾದ ನಿಗದಿತ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವುದನ್ನು ನೋಡಿದ್ದೇವೆ. ಅದು ಅವರ ಕೆಲಸ ಮತ್ತು ಹೊಟ್ಟೆಪಾಡು. ಇದೇ ಕಂಡಕ್ಟರ್‌ಗಳು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಫಲಾಪೇಕ್ಷೆಯಿಲ್ಲದೆ ಬಕೆಟ್ ಹಿಡಿದು ತೊಳೆದು, ಬಳಿದು ಸರ್ಕಾರಿ ಶಾಲೆಗಳ ಶೌಚಾಲಗಳನ್ನು ಸ್ಚಚ್ಛಗೊಳಿಸಿದರೆ ಅವರಿಗೊಂದು ಶಹಬ್ಬಾಸ್ ಹೇಳಲೇಬೇಕು. ಇಂಥದ್ದೊಂದು ಕೈಂಕರ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಂಡಕ್ಟರ್ ಕಟ್ಟಿದ ಈ ಸಂಘಟನೆಗೆ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ʼಸ್ವಚ್ಛಾಲಯʼ ಮಾಡುವುದೇ ಏಕಮೇವ ಉದ್ದೇಶ.
ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ, ಸ್ಚಚ್ಛ ಎಂದು ಹಲವು ಸೌಕರ್ಯಗಳನ್ನು ಆ ಶಾಲೆಯ ಮಾಲೀಕರು ಕೊಡುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳ ವಿಚಾರಕ್ಕೆ ಬಂದಾಗ ರಾಜಕಾರಣಿಗಳು ಮತ್ತು ಅಧಿಕಾರಿಗಳ ಘೋಷಣೆ ಮಾತ್ರ ಸೀಮಿತವಾಗಿರುತ್ತವೆ. ಸರ್ಕಾರದ ಕನಿಷ್ಠ ಅನುದಾನದಲ್ಲಿ ಪಡೆದ ವಸ್ತುಗಳಷ್ಟೇ ಮಕ್ಕಳ ಪಾಲಿನ ಪುಣ್ಯ. ಅದರಲ್ಲೂ ಶೌಚಾಲಯದ ವಿಚಾರಕ್ಕೆ ಬಂದಾಗ ಸ್ವಚ್ಛತೆಯ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲ. ಬಡವರ ಮಕ್ಕಳು ಹೇಗಾದರೂ ಇರಲಿ ಎಂಬ ಮನೋಭಾವವೇ ಹೆಚ್ಚು. ಹೀಗಾಗಿ ಅಶುಚಿ ಶೌಚಾಲಯ ಬಳಸುವ ಸರ್ಕಾರಿ ಶಾಲೆಯ ಮಕ್ಕಳು ರೋಗ, ರುಜಿನಗಳಿಗೆ ಪೀಡಿತರಾಗುತ್ತಾರೆ. ಈ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಬಸ್ ಕಂಡಕ್ಟರ್ ಕಟ್ಟಿದ ಕೂಲಿ ಕಾರ್ಮಿಕರ ಸಂಘಟನೆ ಸ್ವಯಂಪ್ರೇರಿತರಾಗಿ ಸರ್ಕಾರಿ ಶಾಲೆಯ ಶೌಚಾಲಯಗಳು ಮಿಂಚುವಂತೆ ಮಾಡುತ್ತಿದ್ದಾರೆ. ಈ ಜನೋಪಕಾರಿ ಸಂಘಟನೆಯ ಹೆಸರು ʼರಾಜಕೇಸರಿʼ.
ಈ ಸಂಘಟನೆ ಸದಸ್ಯರು ಶ್ರಮದಾನದ ಮೂಲಕ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿ, ದುರಸ್ತಿಪಡಿಸಿ, ಬಣ್ಣ ಬಳಿದು, ನವೀಕರಿಸುವ ಮಾದರಿ ಅಭಿಯಾನ ನಡೆಸುತ್ತಿದ್ದಾರೆ. ಹದಿಮೂರು ವರ್ಷಗಳ ಹಿಂದೆ ಕೂಲಿ ಕಾರ್ಮಿಕರ ಸಂಘಟನೆ ಎಂಬ ಹೆಸರಿನಲ್ಲಿ ಬೆಳ್ತಂಗಡಿಯ ಪುಟ್ಟ ಪ್ರದೇಶದಲ್ಲಿ ಹುಟ್ಟಿದ ʼರಾಜಕೇಸರಿ ʼ ಸಂಘಟನೆಯ ಸದಸ್ಯರು ಜನ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ 1200 ಶಾಲೆಗಳ ಶೌಚಾಲಯಗಳಿಗೆ ನವರೂಪ ನೀಡಿ ಸ್ವಚ್ಛಾಲಯ ಮಾಡುವ ಗುರಿಯನ್ನೂ ಹೊಂದಿದ್ದಾರೆ.
ಶೌಚಾಲಯ ಸ್ವಚ್ಛತೆ ಏಕೆ ಬೇಕು?
ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕನಿಷ್ಠಗೊಳಿಸಿ, ಸಮುದಾಯದ ಹೆಗಲಿಗೆ ಅಭಿವೃದ್ಧಿಯ ಹೊಣೆಗಾರಿಕೆಯನ್ನು ಸರಕಾರ ನೀಡುತ್ತಿದೆ. ಶಾಲಾಭಿವೃದ್ಧಿ ಸಮಿತಿಯಲ್ಲಿ ಮಕ್ಕಳ ಪೋಷಕರೇ ಇರುವ ಕಾರಣ ಇವರೆಲ್ಲರೂ ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ದಾನಿಗಳ ಮೊರೆ ಹೋಗುವುದು ಅನಿವಾರ್ಯ. ಈ ಕೆಲಸ ಮಾಡುವವರು ಯಾರು? ಹೀಗಾಗಿ ಬಹುತೇಕ ಸರಕಾರಿ ಶಾಲೆಗಳ ಶೌಚಾಲಯಗಳು ದುರ್ನಾತ ಬೀರುತ್ತಿವೆ. ಅದರಲ್ಲು ಹೆಣ್ಮಕ್ಕಳು ಇದರಿಂದ ಹೆಚ್ಚು ಸಂಕಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶದಿಂದ ರಾಜಕೇಸರಿ ಸಂಘಟನೆ ʼಸ್ವಚ್ಛಾಲಯʼ ಯೋಜನೆ ರೂಪಿಸಿದೆ.
ಈಗಾಗಲೇ ಮಂಗಳೂರು ತಾಲೂಕಿನಲ್ಲಿ 3, ಬಂಟ್ವಾಳ ತಾಲೂಕಿನಲ್ಲಿ 1 ಶೌಚಾಲಯಕ್ಕೆ ನವರೂಪ ನೀಡಲಾಗಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಆರೋಗ್ಯ, ನೈರ್ಮಲ್ಯ ಮತ್ತು ಹಕ್ಕು ಸಂರಕ್ಷಣೆ ಹಿತದೃಷ್ಟಿಯಿಂದ ಅಭಿಯಾನ ಆರಂಭಗೊಂಡಿದೆ.
ಬಡ ಮಕ್ಕಳ ಆರೋಗ್ಯ ನೈರ್ಮಲ್ಯದ ದೃಷ್ಟಿಯಿಂದ ಸ್ವಚ್ಛಾಲಯ ಅಭಿಯಾನ ಆರಂಭಿಸಲಾಗಿದ್ದು, ಮೂರು ವರ್ಷಗಳಲ್ಲಿ 1200 ಶೌಚಾಲಯ ನವೀಕರಣ ಮಾಡುತ್ತೇವೆ ಎಂದು ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ಮತ್ತು ಸಂಸ್ಥಾಪಕ ದೀಪಕ್ ಬೆಳ್ತಂಗಡಿ ಹೇಳುತ್ತಾರೆ.
ಸಮಾಜ ಸೇವೆಯ ಕನಸು, ನನಸಾದದ್ದು ಹೀಗೆ
ಬೆಳ್ತಂಗಡಿ ತಾಲೂಕಿನಲ್ಲಿ ಸ್ಥಳೀಯ ಬಸ್ ಒಂದರಲ್ಲಿ ನಿರ್ವಾಹಕ ವೃತ್ತಿ ಮಾಡುತ್ತಿದ್ದ ದೀಪಕ್ ಜಿ. ಬೆಳ್ತಂಗಡಿ ಈ ಸಂಘಟನೆಯ ರೂವಾರಿ. ಈಗವರು ಉಜಿರೆಯಲ್ಲಿ ಖಾಸಗಿ ಶಾಲೆಯೊಂದರ ಬಸ್ ಚಾಲಕರಾಗಿದ್ದಾರೆ. ತಮ್ಮಂತೆಯೇ ದಿನಗೂಲಿ ಕೆಲಸ ಮಾಡುತ್ತಿರುವ ಯುವಕರ ತಂಡವೊಂದನ್ನು ಕಟ್ಟಿ ಬೆಳೆಸಿದ್ದು ಅದೀಗ ಈಗ ಹೆಮ್ಮರವಾಗಿದೆ.
ಶೋಚನೀಯ ಸ್ಥಿತಿಯಲ್ಲಿರುವವರ ನೆರವಿಗೆ ಧಾವಿಸುವ ಈ ತಂಡ, ಅನಾರೋಗ್ಯಪೀಡಿತರು, ನಿರ್ಗತಿಕರಿಗೆ ಮೊದಲ ಆದ್ಯತೆ ನೀಡುತ್ತದೆ. ಇಬ್ಬರು ಇದ್ದ ಸಂಘಟನೆ ಈಗ ಬೆಳೆದಿದೆ. ಬೆಳ್ತಂಗಡಿಯಂಥ ಸಣ್ಣ ಪ್ರದೇಶದಲ್ಲಿ ಆರಂಭಗೊಂಡ ಸಂಘಟನೆ ರಾಜ್ಯದಾದ್ಯಂತ ವಿಸ್ತರಿಸಿದೆ.
ಸಂಘಟನೆ ಹೇಗೆ ಹುಟ್ಟಿತು?
35 ವರ್ಷದ ದೀಪಕ್ ಈಗ 300ಕ್ಕೂ ಅಧಿಕ ಸದಸ್ಯರಿರುವ ತಂಡದ ನಾಯಕ. ಮಂಗಳೂರಿನಿಂದ ಕುಪ್ಪೆಪದವಿಗೆ ತೆರಳುವ ಖಾಸಗಿ ಬಸ್ ಕಂಡಕ್ಟರ್ ಆಗಿ ವೃತ್ತಿ ಮಾಡುತ್ತಿದ್ದ ದೀಪಕ್, ಬಳಿಕ ಬೆಳ್ತಂಗಡಿ ಉಪ್ಪಿನಂಗಡಿ ರೂಟ್ ನಲ್ಲಿ ಸರ್ವೀಸ್ ಬಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಉಜಿರೆಯ ಸಾನಿಧ್ಯ ಶಾಲೆಯ ಮಕ್ಕಳ ವಾಹನ ಚಾಲಕರಾಗಿದ್ದಾರೆ.
ʼದ ಫೆಡರಲ್ʼ ಕರ್ನಾಟಕ ಜೊತೆ ಮಾತನಾಡಿದ ದೀಪಕ್, ‘’ನಮ್ಮ ಸಂಘಟನೆ ಕೂಲಿ ಕಾರ್ಮಿಕರ ಸಂಘಟನೆ. ಇದನ್ನು ಕಟ್ಟುವ ಮೊದಲೇ ನಾವು ಬೇರೆ ಬೇರೆ ಸಂಘ, ಸಂಸ್ಥೆಗಳಡಿಯಲ್ಲಿ ಸಮಾಜಸೇವೆ ಮಾಡುತ್ತಿದ್ದೆವು. ಸಣ್ಣಪುಟ್ಟ ಸಹಾಯ ನೀಡುವ ಕಾರ್ಯಕ್ಕೆ ಧಾವಿಸುತ್ತಿದ್ದೆವು. ನಾಲ್ಕೈದು ಮಂದಿ ಸೇರಿ ನಾವು ಮಾಡುತ್ತಿದ್ದ ಈ ಕೆಲಸಕ್ಕೊಂದು ಸ್ಪಷ್ಟ ರೂಪ ದೊರಕಿದ್ದು, ಬೆಳ್ತಂಗಡಿಯ ಹುಣ್ಸೆಕಟ್ಟೆಯಲ್ಲಿ. ಅಲ್ಲಿ ಪೈಂಟರ್, ಆಟೊ ಚಾಲಕರು ಹೀಗೆ ಬೇರೆ ಬೇರೆ ದುಡಿಯುವ ವರ್ಗದವರು ಸೇರಿ ನಾವೊಂದು ಸಂಘಟನೆ ರೂಪದಲ್ಲಿ ಸೇವಾ ಕಾರ್ಯ ನಡೆಸೋಣ ಎಂಬ ಚಿಂತನೆ ನಡೆಸಿದೆವು. ಹದಿಮೂರು ವರ್ಷಗಳ ಹಿಂದೆ ಹುಣ್ಸೆಕಟ್ಟೆಯ ಗಣೇಶೋತ್ಸವ ಸಂದರ್ಭ, ಸೇವಾಕಾರ್ಯಕ್ಕೆಂದು ಒಂದಷ್ಟು ಮಂದಿ ತರುಣರು ಸೇರಿಕೊಂಡು ರಾಜಕೇಸರಿ ಎಂಬ ಸಂಸ್ಥೆ ಸ್ಥಾಪಿಸಿದೆವು ’’ ಎಂದರು.
ಬೆಳ್ತಂಗಡಿ ತಾಲೂಕಿನ ಪುಟ್ಟ ಪ್ರದೇಶದಲ್ಲಿ ಆರಂಭಗೊಂಡ ಸಂಘಟನೆ ಬಳಿಕ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿತು. ಇದೀಗ ರಾಜ್ಯ ಮಟ್ಟದವರೆಗೆ ಬೆಳೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 300 ಸದಸ್ಯರು ಈಗಿದ್ದಾರೆ.
ಯಾರೆಲ್ಲ ಇದರ ಸದಸ್ಯರು? ಹೇಗೆ ಕೆಲಸ ಮಾಡುತ್ತಿದೆ?
ಹದಿಮೂರು ವರ್ಷಗಳಿಂದ ಸಂಘಟನೆ ನಾನಾ ರೀತಿಯಲ್ಲಿ ಕೆಲಸ ಮಾಡುತ್ತಿದೆ. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಸಂಘಟನೆ ಸದಸ್ಯರು ಒಟ್ಟುಗೂಡುತ್ತಾರೆ. ಪೈಂಟರ್, ಪ್ಲಂಬರ್, ಕಾರ್ಖಾನೆಗಳಲ್ಲಿ ದುಡಿಯುವವರು, ಮೇಸ್ತ್ರಿ ಕೆಲಸ ಮಾಡುವವರು, ಬಸ್ ಕಂಡಕ್ಟರ್, ಡ್ರೈವರ್, ಬಟ್ಟೆಯಂಗಡಿಯಲ್ಲಿ ಸೇಲ್ಸ್ ಮಾಡುವವರು, ಮಾರ್ಕೆಟಿಂಗ್ ಮಾಡುವವರು, ಹೀಗೆ ಎಲ್ಲರೂ ಒಟ್ಟಾಗಿ ಸೇರುವ ದಿನ ಭಾನುವಾರ. ಇಂಥ ದಿನ ಎಲ್ಲರೂ ತಮ್ಮ ದುಡಿಮೆಯ ಒಂದಂಶವನ್ನು ಹಾಕಿ, ಏನು ಮಾಡಬಹುದು ಎಂದು ಯೋಜನೆ ರೂಪಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಾತ್ರೆ, ಉತ್ಸವ, ಬಸ್ ನಿಲ್ದಾಣಗಳಲ್ಲೆಲ್ಲಾ ಮಿನರಲ್ ವಾಟರ್ ಮಾರಿ ಅದರಲ್ಲಿ ಬಂದ ಲಾಭಾಂಶವನ್ನು ಅಸಹಾಯಕರು, ನಿರ್ಗತಿಕರು, ಅನಾರೋಗ್ಯಪೀಡಿತರ ಕಷ್ಟಕ್ಕೆ ನೀಡುತ್ತಾರೆ. ಸೂರು ಇಲ್ಲದವರಿಗೆ ಮನೆ ಕಟ್ಟಲು ಶ್ರಮಿಕರಾಗಿ ದುಡಿಯುವ ಸದಸ್ಯರು, ಸಂತ್ರಸ್ತರ ಕಣ್ಣೊರೆಸಿ ಸಂತೃಪ್ತಿ ಕಾಣುತ್ತಾರೆ. ಇವರ ಈ ಸೇವಾ ಕಾರ್ಯ ಕಂಡು ದಾನಿಗಳೂ ಮುಂದೆ ಬಂದಿದ್ದಾರೆ. ಎಂಡೋಸಲ್ಫಾನ್ ಮತ್ತು ಅಂಗವಿಕಲರಿಗೆ ದಾನಿಗಳ ನೆರವಿನಿಂದ ಗಾಲಿಕುರ್ಚಿ ನೀಡಿದ್ದಾರೆ.
ಕೊರೊನಾ ಸಂದರ್ಭ ಸಾರ್ವಜನಿಕರ ನೆರವಿಗೆ ಧಾವಿಸಿದ್ದೆವು
ನಾವು ಕೊರೊನಾ ಸಂದರ್ಭ ಜನರ ನೆರವಿನ ತಂಡವಾಗಿ ದುಡಿದಿದ್ದೇವೆ. ಆ ಸಂದರ್ಭ ನಮ್ಮ ಕುಟುಂಬಗಳೂ ಸಂಕಷ್ಟದಲ್ಲಿದ್ದವು. ಆದರೂ ನಮ್ಮ ಸದಸ್ಯರು ಇತರರಿಗೆ ನೆರವಾಗುವ ಬದ್ಧತೆಯನ್ನು ಮರೆಯಲಿಲ್ಲ ಎನ್ನುತ್ತಾರೆ ದೀಪಕ್.
ಕೊರೊನಾ ಸಂದರ್ಭದಲ್ಲಿ ರಾಜಕೇಸರಿ ಟ್ರಸ್ಟ್ ಸುಮಾರು 600ಕ್ಕೂ ಅಧಿಕ ಕಡುಬಡವರನ್ನು ಹುಡುಕಿ, ಆಹಾರ ಕಿಟ್ ವಿತರಿಸಿದ್ದೇವೆ. ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರರರಾಗಿದ್ದವರನ್ನು ಗುರುತಿಸಿ ಅವರಿಗೆ ಕಿಟ್ ವಿತರಿಸಿದ್ದೇವೆ. ರೋಗಿಗಳಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ್ದೇವೆ . ಕೊರೊನಾ ವೇಳೆ ಮನೆಯವರೇ ಶವಸಂಸ್ಕಾರಕ್ಕೆ ಹಿಂದೆ ಮುಂದೆ ನೋಡುತ್ತಿದ್ದ ಸಂದರ್ಭ, ರಾಜಕೇಸರಿ ತಂಡದ ಸದಸ್ಯರು 85 ಮೃತದೇಹಗಳ ಸಂಸ್ಕಾರ ನಡೆಸಿದ್ದಾರೆ. ಎಂಡೋಪೀಡಿತರು, ಅಂಗವಿಕಲ ವ್ಯಕ್ತಿಗಳಿಗೆ ವೀಲ್ ಚೇರ್ ಹಸ್ತಾಂತರ ಮಾಡಿದ್ದೇವೆ . ಕೆಲಸ ಇಲ್ಲದೆ ಅಸಹಾಯಕರಾಗಿದ್ದ 13 ಮಹಿಳೆಯರಿಗೆ ಟೈಲರಿಂಗ್ ಮೆಷಿನ್ ಹಸ್ತಾಂತರ ಮಾಡಿದ್ದೇವೆ ಎಂದು ತಮ್ಮ ಸಂಘಟನೆಯ ಕಾರ್ಯಗಳನ್ನು ಪಟ್ಟಿ ಮಾಡುತ್ತಾರೆ ದೀಪಕ್.
ರಕ್ತದಾನದ ಮಹತ್ಕಾರ್ಯ
ಸುಮಾರು 13 ಸಾವಿರದಷ್ಟು ಯುವಕರಿಂದ ರಕ್ತದಾನ, 500ಕ್ಕೂ ಅಧಿಕ ನೇತ್ರದಾನ ನೋಂದಣಿ, ಅನಾಥಾಶ್ರಮಗಳಿಗೆ ಮಧ್ಯಾಹ್ನದ ಊಟ, ಗ್ರಾಮಾಂತರ ಭಾಗಗಳಲ್ಲಿ ಆರೋಗ್ಯ ತಪಾಸಣೆ, ಅಂಗವಿಕಲರ ಕಲ್ಯಾಣ ಕಾರ್ಯಕ್ರಮ, ಕ್ರೀಡೆ, ಕಲೆ, ಸಂಸ್ಕೃತಿ ಜಾಗೃತಿ, ಶಿಕ್ಷಣಕ್ಕೆ ಪ್ರೋತ್ಸಾಹ, ಶ್ರಮದಾನ ಸೇವೆ, ತುರ್ತು ಸೇವೆ ರಾಜಕೇಸರಿಯಿಂದ ಆಗುತ್ತಿದೆ. ಅನಾರೋಗ್ಯಪೀಡಿತ ಮಕ್ಕಳ ಚಿಕಿತ್ಸೆಗೆ ಬಸ್ ತಂಗುದಾಣದಲ್ಲಿ ಚಂದಾ ಎತ್ತಿ, ಸಾವಿರಾರು ರೂ ಸಂಗ್ರಹಿಸಿ ಅರ್ಹರಿಗೆ ನೀಡಲಾಗಿದೆ.