ಮರಕುಂಬಿ ಪ್ರಕರಣ | ಜೀವಾವಧಿ ಶಿಕ್ಷೆಗೆ ಒಳಗಾಗಿರುವ 97 ಅಪರಾಧಿಗಳಿಗೆ ಜಾಮೀನು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ, 98 ಜನ ಅಪರಾಧಿಗಳಲ್ಲಿ 97 ಮಂದಿಗೆ ಧಾರವಾಡ ಹೈಕೋರ್ಟ್ ಪೀಠ ಜಾಮೀನು ನೀಡಿದೆ.;
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ, 98 ಜನ ಅಪರಾಧಿಗಳಲ್ಲಿ 97 ಮಂದಿಗೆ ಧಾರವಾಡ ಹೈಕೋರ್ಟ್ ಪೀಠ ಜಾಮೀನು ನೀಡಿದೆ.
ಪ್ರಕರಣದ ಎ1 ಮಂಜುನಾಥ ಜಾಮೀನಿಗೆ ಅರ್ಜಿ ಹಾಕದ ಹಿನ್ನೆಲೆಯಲ್ಲಿ ಆತನಿಗೆ ಜಾಮೀನು ಸಿಕ್ಕಿಲ್ಲ. ಪ್ರತಿಯೊಬ್ಬರಿಂದ 50 ಸಾವಿರ ರೂ. ಬೆಲೆಯ ಬಾಂಡ್ ಹಾಗೂ ಒಬ್ಬ ಶ್ಯೂರಿಟಿ ಪಡೆದು ನ್ಯಾಯಾಲಯ ಜಾಮೀನು ನೀಡಿದೆ. ಇನ್ನೂ, ಇದೇ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ.
2014 ರ ಆಗಸ್ಟ್ 28 ರಂದು ಮರಕುಂಬಿ ಗ್ರಾಮದಲ್ಲಿ ದಲಿತರು ಹಾಗೂ ಸವರ್ಣಿಯರ ನಡುವೆ ಗಲಾಟೆ ನಡೆದಿತ್ತು. ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ 98 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ತಲಾ 5000ರೂ.ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸಿವಿಲ್ ನ್ಯಾಯಾಲಯ ಅಕ್ಟೋಬರ್ 21 ರಂದು ತೀರ್ಪು ಪ್ರಕಟಿಸಿತ್ತು. ತೀರ್ಪು ಪ್ರಶ್ನಿಸಿ ಅಪರಾಧಿಗಳು ಧಾರವಾಡ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಬುಧವಾರ (ನ.13) ಹೈಕೋರ್ಟ್ ದ್ವಿ- ಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿ, ಜಾಮೀನು ನೀಡಿದೆ.
ಏನಿದು ಪ್ರಕರಣ?
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014 ರ ಆಗಸ್ಟ್ 28 ರಂದು ಸಿನಿಮಾ ಟಿಕೆಟ್ ವಿಚಾರವಾಗಿ ಮರಕುಂಬಿ ಗ್ರಾಮದ ಸವರ್ಣೀಯರು ಮತ್ತು ದಲಿತರ ನಡುವೆ ಗಲಾಟೆ ನಡೆದಿತ್ತು.
ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಸಂಬಂಧ ಕೊಲೆ ಯತ್ನ, ಹಲ್ಲೆ, ಜೀವ ಬೆದರಿಕೆ ಜೊತೆಗೆ ಜಾತಿ ನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಗಲಭೆ ಪ್ರಕರಣದಲ್ಲಿ ಒಟ್ಟು 117 ಜನರನ್ನು ಬಂಧಿಸಲಾಗಿತ್ತು. ಆದರೆ, ಅವರ ಪೈಕಿ 16 ಮಂದಿಯಲ್ಲಿ ಕೆಲವರು ನಿಧನರಾಗಿದ್ದರು. ಮತ್ತೆ ಕೆಲವು ಅಪರಾಧಿಗಳ ಹೆಸರು ಪುನರಾವರ್ತನೆಯಾಗಿತ್ತು.
ಘರ್ಷಣೆಗೆ ಕಾರಣವೇನು?
ಮರಕುಂಬಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿತ್ತು. ಗ್ರಾಮದಲ್ಲಿ ಸವರ್ಣೀಯರು ನಡೆಸುತ್ತಿದ್ದ ಅಸ್ಪೃಶ್ಯತೆಯನ್ನು ಗ್ರಾಮದ ದಲಿತರು ಖಂಡಿಸಿದ್ದರು. ಇದರಿಂದ ಸವರ್ಣಿಯರು ಹಾಗೂ ದಲಿತರ ಮಧ್ಯೆ ಆಗಿಂದಾಗ್ಗೆ ಘರ್ಷಣೆ ನಡೆಯುತಿತ್ತು. ಪೊಲೀಸ್ ಠಾಣೆಗಳಲ್ಲಿ ದೂರು, ಪ್ರತಿದೂರು ದಾಖಲಾಗುತ್ತಿತ್ತು.
2014 ಆಗಸ್ಟ್ 28 ರಂದು ಗಂಗಾವತಿ ನಗರದ ಶಿವ ಚಿತ್ರಮಂದಿರದಲ್ಲಿ ಮರಕುಂಬಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಮಂಜುನಾಥ ಮತ್ತು ಸ್ನೇಹಿತರು ಪುನೀತ್ ರಾಜಕುಮಾರ್ ಅಭಿನಯದ ʼಪವರ್ʼ ಸಿನಿಮಾ ನೋಡಲು ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ಪಡೆಯುವ ವಿಚಾರದಲ್ಲಿ ಜಗಳ ನಡೆದಿತ್ತು. ಗ್ರಾಮಕ್ಕೆ ಬಂದ ಮೇಲ್ಬರ್ಗದ ಸಮುದಾಯವರು ದಲಿತರು ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಗ್ರಾಮದಲ್ಲಿ ದೂರಿದ್ದರು. ಇದರಿಂದ ಕುಪಿತರಾದ ಸವರ್ಣಿಯರು ಅಂದು ಸಂಜೆ ದಲಿತರ ಕೇರಿಗೆ ನುಗ್ಗಿ ದಾಂಧಲೆ ಮಾಡಿ, ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಗಲಾಟೆ ಬಳಿಕ ಸುಮಾರು ಮೂರು ತಿಂಗಳ ಕಾಲ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.
ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ಹೋರಾಟ ನಡೆಸಿದ್ದ ಸಿಪಿಎಂ ಮುಖಂಡ ವೀರೇಶ ಮರಕುಂಬಿ ಅವರನ್ನು ಕೊಪ್ಪಳದ ರೈಲು ನಿಲ್ದಾಣದ ಬಳಿ ಕೊಲೆ ಮಾಡಲಾಗಿತ್ತು. ಮರಕುಂಬಿ ಪ್ರಕರಣದಲ್ಲಿ ವೀರೇಶ ಪ್ರಮುಖ ಸಾಕ್ಷಿದಾರರಾಗಿದ್ದರು. ಜುಲೈ 10, 2015 ರಂದು ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ಹೇಳಬೇಕಾಗಿತ್ತು. ಆದರೆ, ಅಂದು ಬೆಳಿಗ್ಗೆಯೇ ಅವರ ಶವ ಕೊಪ್ಪಳ ಹೊರವಲಯದ ರೈಲು ಹಳಿ ಮೇಲೆ ಪತ್ತೆಯಾಗಿತ್ತು.