ಮಂಡ್ಯ ಸಾಹಿತ್ಯ ಸಮ್ಮೇಳನ | ವೈದಿಕ ಶಿಕ್ಷಣದ ಬದಲು 3-ಎಚ್ ಸೂತ್ರ ಅಗತ್ಯ: ಸಿಎಂ ಸಲಹೆ
ಸಂಕಷ್ಟದಲ್ಲಿರುವ ಭಾಷೆಗಳಲ್ಲಿ ಕನ್ನಡವೂ ಒಂದು. ಇದಕ್ಕೆ ಕಾರಣಗಳೇನು ಎಂಬುದನ್ನು ವಿದ್ವಾಂಸರು, ಸಾಹಿತ್ಯಾಸಕ್ತರು ಕಂಡುಕೊಳ್ಳಬೇಕಾಗಿದೆ. ನನಗೆ ತಿಳಿದ ಮಟ್ಟಿಗೆ ಶಿಕ್ಷಣ ವ್ಯವಸ್ಥೆಯ ಲೋಪಗಳು ಕೂಡ ಕಾರಣವಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು
ಆಡಳಿತದಲ್ಲಿ ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯ ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅದಕ್ಕಾಗಿ ಸಮಗ್ರ ಕನ್ನಡ ಭಾಷಾ ಬಳಕೆ ಕಾಯ್ದೆ ಜಾರಿಗೆ ತಂದಿದ್ದು, ಕನ್ನಡ ಕೃತಿಗಳ ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಸಕ್ಕರೆ ನಗರಿ ಮಂಡ್ಯದಲ್ಲಿ ಶುಕ್ರವಾರ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಆಂಗ್ಲ ಭಾಷೆ ಸೇರಿದಂತೆ ಎಲ್ಲ ಪ್ರಮುಖ ಭಾಷೆಗಳ ಮಹತ್ವದ ಕೃತಿಗಳು ಡಿಜಿಟಲೀಕರಣಗೊಂಡು ಜಗತ್ತಿನೆಲ್ಲೆಡೆ ಮುಕ್ತವಾಗಿ ಸಿಗುತ್ತಿವೆ. ಅದೇ ರೀತಿ ಸಮಗ್ರ ಕನ್ನಡ ಸಾರಸ್ವತ ಲೋಕದ ಡಿಜಿಟಲೀಕರಣವನ್ನು ಸರ್ಕಾರ ಆರಂಭಿಸಿದೆ ಎಂದು ಹೇಳಿದರು.
ಸಂಕಷ್ಟದಲ್ಲಿರುವ ಭಾಷೆಗಳಲ್ಲಿ ಕನ್ನಡವೂ ಒಂದು. ಇದಕ್ಕೆ ಕಾರಣಗಳೇನು ಎಂಬುದನ್ನು ವಿದ್ವಾಂಸರು, ಸಾಹಿತ್ಯಾಸಕ್ತರು ಕಂಡುಕೊಳ್ಳಬೇಕಾಗಿದೆ. ನನಗೆ ತಿಳಿದ ಮಟ್ಟಿಗೆ ಶಿಕ್ಷಣ ವ್ಯವಸ್ಥೆಯ ಲೋಪಗಳು ಕೂಡ ಕಾರಣವಾಗಿವೆ. ಮಕ್ಕಳಿಗೆ ಶಿಕ್ಷಣ ನೀಡುವ ವೇಳೆ 3-ಎಚ್ ಸೂತ್ರ(head -ಮೆದುಳು, heart -ಕರುಣೆ ಹಾಗೂ hand -ಕೌಶಲ್ಯ) ಒಳಗೊಂಡ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು. ಗೌತಮ ಬುದ್ಧ, ಮಹಾತ್ಮ ಗಾಂಧಿ ಅವರು ಇಂತಹ ಶಿಕ್ಷಣ ವ್ಯವಸ್ಥೆಯನ್ನು ಬಳಸಿದ್ದರು. ಈಗಿನ ಶಿಕ್ಷಣ ವ್ಯವಸ್ಥೆ ಹಳೆಯ ವೈದಿಕ ಶಿಕ್ಷಣವಾದ ಬಾಯಿಪಾಠದಂತಿದೆ. ಇದು ಬದಲಾಗಬೇಕಾದರೆ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕು ಎಂದು ಶಿಕ್ಷಕರು, ಬೋಧಕರಿಗೆ ಸಲಹೆ ನೀಡಿದರು.
ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಉತ್ಪಾದನೆಯಾಗುವ ಪ್ರತಿ ಉತ್ಪನ್ನದ ಮೇಲೂ ಕನ್ನಡ ಕಡ್ಡಾಯವಾಗಿ ನಮೂದಿಸಲು ಕ್ರಮ ಕೈಗೊಳ್ಳಲಾಗಿದೆ. ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ನಾಡಿನ ಸಮಗ್ರ ನಾಗರಿಕತೆಯ ವಿಕಾಸ, ಸಂಸ್ಕೃತಿ, ಇತಿಹಾಸಗಳನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಲಾಗಿದೆ. ಆಡಳಿತದಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಸರ್ಕಾರ ಬದ್ಧವಾಗಿದೆ. ಸಚಿವ ಸಂಪುಟದ ನಿರ್ಣಯ, ಸಚಿವರ ಟಿಪ್ಪಣಿ, ವಿಧೇಯಕಗಳು ಕನ್ನಡದಲ್ಲಿರುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಡಳಿತ ಸೇರಿದಂತೆ ಪ್ರತಿ ಹಂತದಲ್ಲೂ ಕನ್ನಡದ ಅಸ್ಮಿತೆ ಉಳಿಸಬೇಕಾಗಿದೆ ಎದು ಹೇಳಿದ್ದಾರೆ.
ಜ್ಞಾನ ವಿಸ್ತರಿಸುವ ಕೆಲಸವಾಗಲಿ
ಜಗತ್ತಿನ ಬೇರೆ ಬೇರೆ ಭಾಷೆಗಳಿಂದ ಕೃತಿಗಳು ಕನ್ನಡಕ್ಕೆ ಅನುವಾದ ಆಗಬೇಕಿದೆ. ಆ ಮೂಲಕ ಜ್ಞಾನವನ್ನು ವಿಸ್ತರಿಸುವ ಕೆಲವಾಗಬೇಕಿದೆ. ವೈಜ್ಞಾನಿಕ, ವೈಚಾರಿಕ ಸಾಹಿತ್ಯದ ಮೂಲಕ ದೇಶಕ್ಕೆ ಬಂದೊದಗಿರುವ ಕೇಡುಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಇಂತಹ ವಿಚಾರಗಳು ಸಮ್ಮೇಳನದಲ್ಲಿ ಚರ್ಚೆಯಾಗಬೇಕಾಗಿದೆ ಎಂದು ಸಾಹಿತಿಗಳು, ಚಿಂತಕರಿಗೆ ಸಲಹೆ ನೀಡಿದ್ದಾರೆ.
ಮಂಡ್ಯದಲ್ಲಿ ಕೆಲವು ದ್ವೇಷವಾದಿ, ಹಿಂಸಾವಾದಿ ಶಕ್ತಿಗಳು ಸೇರಿಕೊಂಡು ಜನರ ಮನಸ್ಸಿನಲ್ಲಿ ವಿಷ ಬಿತ್ತಲು ನಿರಂತರವಾಗಿ ಪ್ರಯತ್ನಿಸಿವೆ. ಆದರೆ, ಸಕ್ಕರೆ ಹಾಗೂ ಸಿಹಿ ಬೆಳೆಯುವ ಮಂಡ್ಯದ ಜನರು ಅದಕ್ಕೆ ಅವಕಾಶ ನೀಡಲಿಲ್ಲ. ಮಂಡ್ಯದವರು ಸಿಹಿ ನೀಡುವವರೇ ಹೊರತು ವಿಷ ನೀಡುವವರಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರದಿಂದ ನಿರಂತರ ಅನ್ಯಾಯ
ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ನಿರಂತರ ಅನ್ಯಾಯವಾಗುತ್ತಿದೆ. ರಾಜ್ಯದಿಂದ 4.5 ಲಕ್ಷಕೋಟಿ ಗೂ ಹೆಚ್ಚು ತೆರಿಗೆ ಕೇಂದ್ರ ಸರ್ಕಾರ ಪಡೆಯುತ್ತಿದೆ. ಆದರೆ, ನಮಗೆ ಮಾತ್ರ 55-59 ಸಾವಿರ ಮಾತ್ರ ವಾಪಸ್ ಆಗುತ್ತಿದೆ. ಇದರಿಂದ ಅಭಿವೃದ್ಧಿಗೆ ಸಮಸ್ಯೆಯಾಗುತ್ತಿದೆ ಎಂದು ಪ್ರಸ್ತಾಪಿಸಿ, ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ರಾಷ್ಟ್ರ ಭಾಷೆ ಹೆಸರಿನಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುತ್ತಿದ್ದು, ಪ್ರಾದೇಶಿಕ ಭಾಷೆಗಳನ್ನು ದಮನಿಸುವ ಕೆಲಸ ನಡೆಯುತ್ತಿದೆ. ಬಹುತ್ವ ಸಾರುವ ಸಂವಿಧಾನದ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಈ ಆಕ್ರಮಣದ ವಿರುದ್ಧ ಕನ್ನಡಿಗರು ಹೋರಾಡಬೇಕಾದದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದ್ದಾರೆ.
2013-18 ರ ವರೆಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 1161ಕೋಟಿ ರೂ. ಅನುದಾನ ನೀಡಿದ್ದೆವು. 2023-24 ಮತ್ತು 2024-25 ರಲ್ಲಿ ಹೆಚ್ಚುವರಿಯಾಗಿ 506ಕೋಟಿ ರೂ. ಅನುದಾನ ನೀಡಿದ್ದೇವೆ. ಕನ್ನಡ ಉಳಿವಿಗಾಗಿ, ಏಳಿಗೆಗಾಗಿ ಸರ್ಕಾರ ಸದಾ ಸಿದ್ಧವಿರಲಿದೆ ಎಂದು ವಾಗ್ದಾನ ನೀಡಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯ ಸ್ವಾಮಿ, ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದು ಮುಖ್ಯವಲ್ಲ. ಕನ್ನಡ ಭಾಷೆಯನ್ನು ಪ್ರೀತಿಸಬೇಕು. ಕನ್ನಡಕ್ಕೆ ಧಕ್ಕೆ ಬಂದಾಗ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.
ಕನ್ನಡ ಸಾಹಿತ್ಯಕ್ಕಾಗಿ ದಿವಂಗತ ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರ ಕೊಡುಗೆಯನ್ನು ಇದೇ ವೇಳೆ ಸ್ಮರಿಸಿದರು. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಜನರ ಕೊಡುಗೆ ಇದೆ. ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ಮಂಡ್ಯದ ಜನರು ಸಿಹಿಯನ್ನೇ ಹಂಚಿದ್ದಾರೆ ಎಂದು ಶ್ಲಾಘಿಸಿದರು.
1973ರಲ್ಲಿ ಕರ್ನಾಟಕ ನಾಮಕರಣವಾದ ಮರು ವರ್ಷವೇ ಮಂಡ್ಯದಲ್ಲಿ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಈಗ ಮೂರನೇ ಬಾರಿಗೆ ಆತಿಥ್ಯ ವಹಿಸಿಕೊಂಡಿದೆ. ಕನ್ನಡದ ಉಳಿವಿಗಾಗಿ ಎಲ್ಲರೂ ಕಂಕಣ ತೊಡಬೇಕು. ಕನ್ನಡದ ಅಸ್ಮಿತೆ ಇಲ್ಲದ ಬದುಕು ಬದುಕೇ ಅಲ್ಲ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಆಶಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ನಾಡೋಜ ಡಾ. ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರ ಶೇಖರ ಕಂಬಾರ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆ.ಚ್.ಸಿ.ಮಹದೇವಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ, ಪಿ.ರವಿಕುಮಾರ್, ಎಂ.ಬಿ,ರಮೇಶ್ ಬಂಡಿ ಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ ಉಪಸ್ಥಿತರಿದ್ದರು.
ಅಕ್ಷರ ಜಾತ್ರೆಗೆ ಹರಿದು ಬಂದ ಜನಸಾಗರ
87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿ ಜನ ಸಾಗರ ಹರಿದು ಬಂದಿತು.
ಬೆಳಿಗ್ಗೆ 8 ಗಂಟೆಯಿಂದಲೇ ಸ್ಥಳೀಯ ನಾಗರಿಕರು, ಮಹಿಳೆಯರು, ವಿದ್ಯಾ ರ್ಥಿಗಳು ಸಾಹಿತ್ಯ ಸಮ್ಮೇಳನವನ್ನು ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಆಗಮಿಸಿದರು. ರಾಜ್ಯದ ನಾನಾ ಜಿಲ್ಲೆಗಳಿಂದ ಕನ್ನಡಾಭಿಮಾನಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಗುರುವಾರವೇ ನಗರಕ್ಕೆ ಆಗಮಿಸಿದ್ದರು.
ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಮೆರಗು ನೀಡಿದವು. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಒಟ್ಟು 3,200 ಪೊಲೀಸ್ ಸಿಬ್ಬಂದಿಯನ್ನು ಸಾಹಿತ್ಯ ಸಮ್ಮೇಳನಕ್ಕೆ ನಿಯೋಜಿಸಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರು ವೇದಿಕೆಗೆ ಆಗಮಿಸುತ್ತಿದ್ದಂತೆ ಅಭೂತಪೂರ್ವ ಸ್ವಾಗತ ಕೋರಲಾಯಿತು.