ಮಂಡ್ಯ ಸಾಹಿತ್ಯ ಸಮ್ಮೇಳನ | ಹತ್ತನೇ ತರಗತಿವರೆಗೆ ಕಡ್ಡಾಯ ಕನ್ನಡ ಮಾಧ್ಯಮ: ನಾಡೋಜ ಗೊ ರು ಚ ಆಗ್ರಹ

ತಂತ್ರಜ್ಞಾನದ ನೆರವು ಪಡೆದು ಕನ್ನಡವನ್ನು ಕಿರಿಯ ಪೀಳಿಗೆಯ ಎದೆಗೆ ಬೀಳುವ ಅಕ್ಷರವಾಗಿಸಬೇಕು. ಅಗತ್ಯವೆನಿಸಿರುವ ಇಂಗ್ಲೀಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು ಮತ್ತು ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು ಎಲ್ಲ ಸೌಲಭ್ಯಗಳೊಂದಿಗೆ ಪೂರ್ಣವಾಗಿ ಸಜ್ಜುಗೊಳಿಸಬೇಕು

Update: 2024-12-20 12:08 GMT
ಸಮ್ಮೇಳನಾಧ್ಯಕ್ಷ ಗೊ,ರು.ಚನ್ನಬಸಪ್ಪ
Click the Play button to listen to article

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಡಾ.ಗೊ.ರು. ಚನ್ನಬಸಪ್ಪ ಹೇಳಿದ್ದಾರೆ. 

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಧ್ಯಕ್ಷ ಭಾಷಣ ಮಂಡಿಸಿದ ಅವರು, ಕನ್ನಡ ಭಾಷಾ ಮಾಧ್ಯಮ, ಕನ್ನಡಿಗರಿಗೆ ಉದ್ಯೋಗ ಸೇರಿದಂತೆ 21 ಹಕ್ಕೊತ್ತಾಯಗಳನ್ನು ಮಂಡಿಸಿದರು.

ತಂತ್ರಜ್ಞಾನದ ನೆರವು ಪಡೆದು ಕನ್ನಡವನ್ನು ಕಿರಿಯ ಪೀಳಿಗೆಯ ಎದೆಗೆ ಬೀಳುವ ಅಕ್ಷರವಾಗಿಸಬೇಕು. ಅಗತ್ಯವೆನಿಸಿರುವ ಇಂಗ್ಲೀಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು ಮತ್ತು ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು, ಎಲ್ಲ ಸೌಲಭ್ಯಗಳಿಂದ ಪೂರ್ಣವಾಗಿ ಸಜ್ಜುಗೊಳಿಸಬೇಕು. ರಾಜ್ಯದ ಆಯವಯ್ಯದಲ್ಲಿ ಕನಿಷ್ಟ ಶೇ.15 ರಷ್ಟು ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಅವರು ತಿಳಿಸಿದರು. 

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು 

  • ಪ್ರಾಥಮಿಕ ಒಂದನೆಯ ತರಗತಿಯಿಂದ ಹತ್ತನೇ ತರಗತಿವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನೂ ಶಿಕ್ಷಣ ಮಾಧ್ಯಮವಾಗಿ ಹೇರಕೂಡದು. ಇಂಗ್ಲೀಷ್‌ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನು ಮತ್ತು ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನು ತಕ್ಷಣವೇ ನಿಲ್ಲಿಸಬೇಕು.
  • ಅಗತ್ಯವೆನಿಸಿರುವ ಇಂಗ್ಲೀಷ್‌ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು. ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು ಎಲ್ಲಾ ಸೌಲಭ್ಯಗಳಿಂದ ಪೂರ್ಣವಾಗಿ ಸಜ್ಜುಗೊಳಿಸಬೇಕು. ರಾಜ್ಯದ ಆಯವ್ಯಯದಲ್ಲಿ ಕನಿಷ್ಟ ಶೇ. 15ರಷ್ಟನ್ನಾದರೂ ಶಿಕ್ಷಣಕ್ಕೆ ಮೀಸಲಿರಬೇಕು.
  • ಕಳೆದ ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಶಾಸನಬದ್ದಗೊಳಿಸಿ ಅನುಷ್ಠಾನಗೊಳಿಸಬೇಕು. ಅನುಷ್ಠಾನದ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ವಹಿಸಬೇಕು. ಸಾರ್ವಜನಿಕವಿರಲಿ, ಖಾಸಗಿಯಿರಲಿ ಉದ್ಯೋಗಾವಕಾಶಗಳಲ್ಲಿ ವಿಶೇಷ ಅರ್ಹತೆಯ ಉನ್ನತ ಹುದ್ದೆಗಳ ಹೊರತಾಗಿ ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಪೂರ್ಣವಾಗಿ ಕನ್ನಡಿಗರಿಗೇ ಮೀಸಲಿಡಬೇಕು. ಕಾಲಕಾಲಕ್ಕೆ ಉದ್ಯೋಗ ಮಾಹಿತಿ ದೊರೆಯುವಂತಾಗಬೇಕು.
  • ನಾಡಿನ ವಿಶೇಷ ವ್ಯವಸ್ಥೆಗಳಾದ ಕನ್ನಡ ವಿಶ್ವವಿದ್ಯಾನಿಲಯ ಮತ್ತು ಜಾನಪದ ವಿಶ್ವವಿದ್ಯಾಲಯಗಳು ಅನುಭವಿಸುತ್ತಿರುವ ಹಣಕಾಸು ಮತ್ತು ಬೋಧನಾ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು.
  • ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಸ್ವತಂತ್ರ ಸ್ವಾಯತ್ತ ಕೇಂದ್ರವನ್ನಾಗಿ ಬೆಳೆಸಲು ಮತ್ತು ಕೇಂದ್ರದ ನೆರವನ್ನು ಪಡೆಯಲು ಅಗತ್ಯ ವ್ಯವಸ್ಥೆ ಮಾಡಬೇಕು.
  • ಅಪಾರ ಸಂಭಾವ್ಯ ಸಾಮರ್ಥ್ಯವಿರುವ ಪ್ರವಾಸೊದ್ಯಮವನ್ನು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದಲೇ ಅಲ್ಲದೇ ಆದಾಯ ಮತ್ತು ಉದ್ಯೊಗಾವಕಾಶ ದೃಷ್ಟಿಯಿಂದಲೂ ವಿಸ್ತರಣೆಯ ವಲಯವನ್ನಾಗಿ ಅಭಿವೃದ್ದಿಪಡಿಸಬೇಕು.
  • ಕೈಗಾರಿಕೋದ್ಯಮಗಳು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹಂಚಿಕೆಯಾಗಬೇಕು. ಯಾವುದೇ ಉದ್ಯಮವಿರಲಿ, ಅಲ್ಲಿ ಕನ್ನಡಗಿರಿಗೆ ಉದ್ಯೊಗಾವಕಾಶದ ಕಟ್ಟುನಿಟ್ಟಿನ ಷರತ್ತು ವಿಧಿಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
  • ಸರ್ಕಾರದ ಸಚಿವಾಲಯ ಕಚೇರಿಗಳ ಹೊರತಾಗಿ ಉಳಿದ ನಿರ್ದೇಶನಾಲಯ ಕಚೇರಿಗಳನ್ನು ಬೇರೆ- ಬೇರೆ ಜಿಲ್ಲಾ ಕೇಂದ್ರಗಳಿಗೆ ವರ್ಗಾಯಿಸಿ ಬೆಂಗಳೂರಿನ ಒತ್ತಡ ತಗ್ಗಿಸಬೇಕು.
  • ಶಿಕ್ಷಣ ಮಾಧ್ಯಮ ಅಂತಾರಾಜ್ಯ ಗಡಿ, ಜಲ, ಮತ್ತು ವಲಸೆ ಸಮಸ್ಯೆಗಳನ್ನು ಪರಿಹರಿಸಲು ಒಂದು ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.
  • ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸುವ ದಿಸೆಯಲ್ಲಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶಗಳ ಅಭಿವೃದ್ದಿಗೆ ಕಾಲಬದ್ದ ಕ್ರಮ ವಹಿಸಬೇಕು.
  • ಬಸವಣ್ಣನವರನ್ನು ರಾಜ್ಯದ ಸಾಂಸ್ಕತಿಕ ನಾಯಕ ಎಂದು ಘೋಷಿಸಿರುವ ಮತ್ತು ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ನಿರ್ಮಿಸುತ್ತಿರುವ ರಾಜ್ಯ ಸರ್ಕಾರ ಹನ್ನೆರಡನೆಯ ಶತಮಾನದ ಶರಣರ ಕೇತ್ರಗಳ ಸಂರಕ್ಷಣೆ ಮತ್ತು ಅಭಿವೃದ್ದಿ ಕಾರ್ಯಕ್ಕಾಗಿ ಒಂದು ಸ್ವಾಯತ್ತ ಪ್ರಾಧಿಕಾರ ರಚಿಸಬೇಕು. ಈಗಾಗಲೇ ಆಶ್ವಾಸನೆ ನೀಡಿರುವಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ವಚನ ವಿಶ್ವವಿದ್ಯಾನಿಲಯ ಆರಂಭಿಸಬೇಕು.
  • ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕೈಗಾರಿಕೆಗಳು, ಕಚೇರಿಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರುವುದು ಕಡ್ಡಾಯವಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
  • ಪರಿಸರದ ವಿಷಯವಾಗಿ ಪಶ್ಚಿಮ ಘಟ್ಟಗಳ ರಕ್ಷಣೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲಿ ಗಣಿಗಾರಿಕೆ ನಿಷೇಧಿಸಬೇಕು.
  • ಜ್ಞಾನ ಪ್ರಸಾರದ ಕೇಂದ್ರದಂತಿರುವ ಗ್ರಂಥಾಲಯ ಪೋಷಣೆತ ಬಗೆಗೆ ಪೂರ್ಣ ಗಮನ ಕೊಡಬೇಕು. ಗ್ರಂಥಗಳ ಸಗಟು ಖರೀದಿ ಪ್ರತಿ ವರ್ಷ ತಪ್ಪದೇ ನಡೆಯಬೇಕು. ಗ್ರಂಥಾಲಯ ತೆರಿಗೆಯಿಂದ ಸಂಗ್ರಹವಾದ ಹಣವನ್ನು ಗ್ರಂಥಾಲಯ ಅಭಿವೃದ್ದಿಗೆ ಬಳಸಬೇಕು.
  • ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಪ್ರಕಟಣೆ ಒಂದು ಒಳ್ಳೆಯ ಯೋಜನೆಯಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು
  • ಆಡಳಿತದಲ್ಲಿ ಕನ್ನಡ ಬಳಕೆಯ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಕನ್ನಡ ಲಿಪಿಯನ್ನು ಆಧುನಿಕ ತಂತ್ರ ವಿಧಾನಗಳಿಗೆ ಹೊಂದಿಸುವ ಕೆಲಸ ತ್ವರಿತವಾಗಿ ನಡೆಯಬೇಕು. ಯಾಂತ್ರಿಕ ಬುದ್ದಿಮತ್ತೆ ತಂತ್ರದ ಬಳಕೆ ಹೆಚ್ಚಬೇಕು.
  • ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧದ ಸಂಘ ಸಂಸ್ಥೆಗಳಿಗೆ ಉದಾರ ಧನ ಸಹಾಯ ದೊರಕಿಸಬೇಕು.
  • ಯಾವುದೇ ಕಾರಣಕ್ಕೆ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಬಾರದು.
  • ಕನ್ನಡ ಕೃತಿಗಳನ್ನು ಅನ್ಯಭಾಷೆಗೆ ಅನುವಾದಿಸಿ ಪ್ರಕಟಿಸುವ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ಇದಕ್ಕಾಗಿ ಭಾಷಾ ಪ್ರಾಧಿಕಾರಕ್ಕೆ ಅಗತ್ಯ ನೆರವು ಒದಗಿಸಬೇಕು.
  • ಕನ್ನಡ ಸಾಹಿತ್ಯ ಪರಿಷತ್ತು ಒಂದು ಪ್ರಾತಿನಿಧಿಕ ಸಂಸ್ಥೆಯಾಗಿದ್ದು ಅದು ನಡೆಸುವ ಇಂತಹ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಸಿ ವಿಳಂಬ ಮಾಡದೇ ಅದನ್ನು ಅನುಷ್ಠಾನಗೊಳಿಸಬೇಕು.
  • ಕನ್ನಡ ಸಾಹಿತ್ಯ ಪರಿಷತ್ತು ಶಾಲಾ ಶಿಕ್ಷಕರಿಗೆ ಸಾಹಿತ್ಯ ಸಂಸ್ಕೃತಿಗಳ ಬಗೆಗೆ ನಿಯತಕಾಲಿಕ ಶಿಬಿರಗಳನ್ನು ನಡೆಸಿ ಅವರಲ್ಲಿ ಸಾಹಿತ್ಯದ ಅಧ್ಯಯನಾಸಕ್ತಿ ಬೆಳೆಸಬೇಕು.
Tags:    

Similar News