ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ‘ಮನೆಗೊಂದು ಕೋಳಿ, ಊರಿಗೊಂದು ಕುರಿ’ ಸಂಗ್ರಹ ಅಭಿಯಾನಕ್ಕೆ ಚಾಲನೆ
ಸಾಹಿತ್ಯ ಸಮ್ಮೇಳನಗಳಲ್ಲಿ ಅಘೋಷಿತವಾಗಿ ಜಾರಿಯಲ್ಲಿರುವ ಮಾಂಸಾಹಾರ ನಿಷೇಧ ವಿರೋಧಿಸಿ ಬರುವ ಅತಿಥಿಗಳಿಗೆ ನಾಡೂಟವಾದ ಬಾಡೂಟ ಬಡಿಸಲು ‘ಮನೆಗೊಂದು ಕೋಳಿ, ಊರಿಗೊಂದು ಕುರಿ’ ಸಂಗ್ರಹ ಅಭಿಯಾನಕ್ಕೆ ಮುಂದಾಗಿದೆ.
ಸಕ್ಕರೆ ನಗರಿ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಾಡೂಟದ ವಿಷಯಕ್ಕೆ ಬಹಳಷ್ಟು ಗಮನ ಸೆಳೆಯುತ್ತಿದೆ. ಆಹಾರ ವಿಷಯವಾಗಿ ಸಾಕಷ್ಟು ವಿವಾದ ಉಂಟಾಗಿದೆ. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಸ್ಥಳೀಯ ಪ್ರಸಿದ್ಧ ಆಹಾರಕ್ಕೆ ಬಾಡೂಟಕ್ಕೆ ಆದ್ಯತೆ ನೀಡಬೇಕು ಎಂದು ಹಲವು ಸಂಘ ಸಂಸ್ಥೆಗಳು, ಪ್ರಗತಿಪರರು, ಆಹಾರ ಪ್ರಿಯರು, ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಈವರೆಗೂ ಮಾಂಸಾಹಾರ ಮಾಡುವ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಆದರೆ, ಮಂಡ್ಯ ಪ್ರಗತಿಪರ ಸಂಘಟನೆಗಳ ಒಕ್ಕೂಟ ಇದೀಗ ಹೊಸ ಅಭಿಯಾನಕ್ಕೆ ಮಂದಾಗಿದೆ.
ಸಾಹಿತ್ಯ ಸಮ್ಮೇಳನಗಳಲ್ಲಿ ಅಘೋಷಿತವಾಗಿ ಜಾರಿಯಲ್ಲಿರುವ ಮಾಂಸಾಹಾರ ನಿಷೇಧ ವಿರೋಧಿಸಿ ಬರುವ ಅತಿಥಿಗಳಿಗೆ ನಾಡೂಟವಾದ ಬಾಡೂಟ ಬಡಿಸಲು ‘ಮನೆಗೊಂದು ಕೋಳಿ, ಊರಿಗೊಂದು ಕುರಿ’ ಸಂಗ್ರಹ ಅಭಿಯಾನಕ್ಕೆ ಸಂಘಟನೆಯೊಂದು ಮುಂದಾಗಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಪ್ರಕಟಣೆಯಲ್ಲಿ ಏನಿದೆ?
ಮಂಡ್ಯದಲ್ಲಿ ಇದೇ ಡಿಸೆಂಬರ್ 20 ರಿಂದ 22 ರವರೆಗೆ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡೂಟವೇ ಆಗಿರುವ ಬಾಡೂಟ ನೀಡಲು ನಾಡಿನ ಸಹೃದಯರು ಮೊಟ್ಟೆ, ಕೋಳಿ ಮತ್ತು ಹಣ ಸಹಾಯ ನೀಡಲು ಮುಂದೆ ಬಂದಿರುವುದರಿಂದ ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಅವುಗಳನ್ನು ಇಂದಿನಿಂದ ಸಂಗ್ರಹಿಸಲು ಆರಂಭಿಸುತ್ತದೆ.
ಸಾಹಿತ್ಯ ಸಮ್ಮೇಳನಗಳಲ್ಲಿ ಇದುವರೆಗೆ ಪಾಲಿಸಿಕೊಂಡು ಬರುತ್ತಿರುವ ಆಹಾರ ಅಸ್ಪೃಶ್ಯತೆ ಮತ್ತು ಆಹಾರ ಅಸಮಾನತೆಯನ್ನು ಪ್ರತಿಭಟಿಸಿ ಅವುಗಳನ್ನು ಕೊನೆಗೊಳಿಸುವ ಉದ್ದೇಶವಿದೆ. ಮಂಡ್ಯ ಜಿಲ್ಲೆಯ ಹೆಮ್ಮೆಯ ಆಹಾರ, ಅತಿಥಿ ಸತ್ಕಾರದ ಪರಂಪರೆಯನ್ನು ಎತ್ತಿಹಿಡಿಯಲು ಇಂತಹ ಆಂದೋಲನಕ್ಕೆ ಮುಂದಾಗಿರುವ ಪ್ರಗತಿಪರ ಶಕ್ತಿಗಳ ಜೊತೆ ಕೈಜೋಡಿಸಬೇಕೆಂದು ವಿನಂತಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರಿ ಊಟದ ಜೊತೆಗೆ ಮಾಂಸದೂಟ ಹಾಕುವ ಮೂಲಕ ಆಹಾರ ಸಮಾನತೆಯನ್ನು ಎತ್ತಿಹಿಡಿಯುವ ಪ್ರಗತಿಪರ ಸಂಘಟನೆಗಳ ಬೇಡಿಕೆಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಸ್ವಾಗತ ಸಮಿತಿ ಇಲ್ಲಿಯವರೆಗೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ಸಚಿವರು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಚಲುವರಾಯಸ್ವಾಮಿಯರ ಜೊತೆ ನಡೆದ ಎರಡು ಸುತ್ತಿನ ಮಾತುಕತೆಗಳಲ್ಲಿ ಪ್ರಗತಿಪರ ಸಂಘಟನೆಗಳ ಮಾಂಸದೂಟದ ಬೇಡಿಕೆಯನ್ನು ನಿರಾಕರಿಸುವ ಮಾತುಗಳು ಬಂದಿಲ್ಲ. ಅದೇ ಸಂದರ್ಭದಲ್ಲಿ ಮಾಂಸದೂಟ ನೀಡುವ ಸಂಬಂಧ ಖಚಿತ ಅಭಿಪ್ರಾಯವನ್ನು ಸರ್ಕಾರ, ಜಿಲ್ಲಾಡಳಿತ ಮತ್ತು ಸ್ವಾಗತ ಸಮಿತಿ ವ್ಯಕ್ತಪಡಿಸಿಲ್ಲ.
ಈ ಹಿನ್ನೆಲೆಯಲ್ಲಿ ಮಾಂಸದೂಟ ನೀಡಲು ಬೇಕಾದ ಪರಿಕರಗಳನ್ನು ನೀಡಲು ಮುಂದೆ ಬಂದಿರುವ ದಾನಿಗಳಿಂದ ಅವುಗಳನ್ನು ಇಂದಿನಿಂದ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಸ್ವಾಗತ ಸಮಿತಿಯೇ ಮಾಂಸದೂಟ ನೀಡಲು ನಿರ್ಧರಿಸಿದಲ್ಲಿ ಪ್ರಗತಿಪರ ಸಂಘಟನೆಗಳು ಅದನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತವೆ ಮತ್ತು ಸಂಗ್ರಹಿಸಿದ ಪರಿಕರಗಳನ್ನು ಸ್ವಾಗತ ಸಮಿತಿಗೆ ಹಸ್ತಾಂತರಿಸಿ ಸಮ್ಮೇಳನದ ಯಶಸ್ಸಿಗೆ ದುಡಿಯುತ್ತವೆ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಆಹಾರ ಅಸ್ಪೃಶ್ಯತೆಯನ್ನು ಎತ್ತಿಹಿಡಿದ ಸಮ್ಮೇಳನ
ಒಂದು ವೇಳೆ ಸಮ್ಮೇಳನದ ಸಂಘಟಕರು ಸಸ್ಯಹಾರದ ಜೊತೆ ಮಾಂಸದೂಟ ನೀಡುವ ಮೂಲಕ ಆಹಾರ ಅಸ್ಪೃಶ್ಯತೆ, ಅಸಮಾನತೆ ಮತ್ತು ಮೇಲು - ಕೀಳಿನ ಪರಂಪರೆಯನ್ನು ಹೊಡೆದೋಡಿಸಲು ಮುಂದಾಗದಿದ್ದರೆ ಮಂಡ್ಯ ಜಿಲ್ಲೆಯ ಪ್ರಗತಿಪರ ಶಕ್ತಿಗಳು ಆ ಕೆಲಸವನ್ನು ಮಾಡೇ ತೀರುತ್ತವೆ ಎಂದು ವಿನಮ್ರವಾಗಿ ತಿಳಿಸಬಯಸುತ್ತೇವೆ ಮತ್ತು ಸಮ್ಮೇಳನದಲ್ಲಿ “ಈ ಸಮ್ಮೇಳನವು ಆಹಾರ ಅಸಮಾನತೆ ಮತ್ತು ಆಹಾರ ಅಸ್ಪೃಶ್ಯತೆಯನ್ನು ಎತ್ತಿಹಿಡಿದ ಸಮ್ಮೇಳನ” ಎಂದು ಪಲಕ ಹಾಕಿಕೊಂಡು ಪ್ರತಿಭಟಿಸುತ್ತೇವೆ ಎಂಬುದನ್ನು ಕೂಡಾ ಸಂಬಂಧಿಸಿದವರ ಗಮನಕ್ಕೆ ತರಬಯಸುತ್ತೇವೆ ಎಂದು ಸಂಘಟನೆಯ ಪದಾಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಮಂಡ್ಯ ಜಿಲ್ಲೆಯ ಪ್ರಗತಿಪರ ಶಕ್ತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಪುರೋಹಿತಶಾಹಿ ಮತ್ತು ಪಾಳೇಗಾರಿಕೆ ಹಾಗೂ ಕನ್ನಡ ಸಾಹಿತ್ಯ ಪರಂಪರೆಗೆ ಅಪಚಾರ ಎಸಗುವ ಧೋರಣೆಯ ವಿರುದ್ಧ ಹಲವು ಗೆಲುವುಗಳನ್ನು ದಾಖಲಿಸಿವೆ. ಸಾಹಿತ್ಯೇತರ ವ್ಯಕ್ತಿಯನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವ, ಮಾಂಸಹಾರವನ್ನು ಮದ್ಯ ಮತ್ತು ತಂಬಾಕಿನ ಜೊತೆ ಹೋಲಿಸುವ ರೋಗಿಷ್ಟ ಆಲೋಚನೆಯ ವಿರುದ್ಧ ಗೆಲುವನ್ನು ಸಾಧಿಸಲಾಗಿದೆ. ಆದರೂ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ರಾಷ್ಟ್ರಕವಿ ಕುವೆಂಪು ಅವರನ್ನು ಕಡೆಗಣಿಸುವ, ಆಹ್ವಾನ ಪತ್ರಿಕೆಯಲ್ಲಿ ಸಂವಿಧಾನ ಮತ್ತು ಸಾಂವಿಧಾನಿಕ ಹುದ್ದೆಗಳನ್ನು ಅಪಮಾನಿಸುವ ಕೆಲಸ ಮಾಡಿದ್ದಾರೆ. ಇದರ ವಿರುದ್ಧವೂ ಹೋರಾಟ ಮುಂದುವರೆಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಂಡ್ಯ - ಬಾಡೂಟಕ್ಕೆ ಹೆಸರಾಗಿದೆ. ಇದೇ ತಿಂಗಳು 20ಕ್ಕೆ ಆರಂಭವಾಗಲಿರುವ ಸಾಹಿತ್ಯ ಸಮ್ಮೇಳನ ಮೂರು ದಿನಗಳ ಕಾಲ ನಡೆಯಲಿದೆ. ಸಮ್ಮೇಳನಕ್ಕೆ ಭರ್ಜರಿ ಸಿದ್ದತೆಗಳು ಕೂಡ ನಡೆಯುತ್ತಿದ್ದು, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಊಟದ ಮೆನು ಕೂಡ ಸಿದ್ದತೆಗೊಂಡಿದೆ. ಸುಮಾರು 5 ಕೋಟಿಯನ್ನು ಆಹಾರಕ್ಕಾಗಿ ಮೀಸಲಿಟ್ಟಿದ್ದು ಇದರಲ್ಲಿ ಮಂಡ್ಯದ ಜನಪ್ರಿಯ ಬಾಡೂಟಕ್ಕೆ ಆದ್ಯತೆ ನೀಡದಿರುವು ಬಾಡೂಟ ಪ್ರಿಯರಿಗೆ ಬೇಸರ ತರಿಸಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಬಾಡೂಟ ಮಾಡಲು ಸಾಧ್ಯವಾಗದಿದ್ದರೆ ಮನೆಗೊಂದು ಕೋಳಿ ಅಭಿಯಾನ ಆರಂಭಿಸುವುದಾಗಿ ನಿರ್ಧರಿಸಿ ಈ ಅಭಿಯಾನವನ್ನು ಆರಂಭಿಸಿದ್ದಾರೆ.