The Federal Exclusive| ಬೆಂಗಳೂರಿಗೆ 400ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳ ಅಕ್ರಮ ರವಾನೆ? ಪ್ರಮುಖ ಆರೋಪಿ ನಾಪತ್ತೆ; ದೆಹಲಿ ಸ್ಫೋಟಕ್ಕಿದೆಯೇ ನಂಟು?
ದೆಹಲಿ ಪ್ರಕರಣ ಮತ್ತು ಆತ ನಾಪತ್ತೆಯಾಗಿರುವ ಪ್ರಕರಣ ಸಂಬಂಧದ ಬಗ್ಗೆ ಖಚಿತವಾಗಿ ಏನೂ ಹೇಳಲಾಗದಿದ್ದರೂ, ಪೊಲೀಸರು ವಿವಿಧ ದೃಷ್ಟಿಕೋನಗಳಿಂದ ತನಿಖೆ ಆರಂಭಿಸಿದ್ದಾರೆ.
ಸುಮಾರು 400ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ʼಕೂಲಿʼ ಹೆಸರಿನಲ್ಲಿ ಅಕ್ರಮವಾಗಿ ಬೆಂಗಳೂರಿಗೆ ಕರೆತಂದಿರುವ ಜಾಲವೊಂದು ಬೆಳಕಿಗೆ ಬಂದಿದ್ದು, ಬೆಂಗಳೂರಿಗೆ ಅಕ್ರಮವಾಗಿ ಕರೆತಂದಿರುವ ಹಾಗೂ ದೇಶದ ಭದ್ರತೆಗೇ ಸವಾಲಾಗಿರುವ ಈ ಪ್ರಕರಣ ಬೆಂಗಳೂರು ಪೊಲೀಸರ ತಲೆನೋವಿಗೆ ಕಾರಣವಾಗಿದೆ.
400ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಕಾನೂನುಬಾಹಿರವಾಗಿ ಬೆಂಗಳೂರಿಗೆ ಕರೆತಂದು, ಅವರಿಗೆ ಅಕ್ರಮವಾಗಿ ವಸತಿ ವ್ಯವಸ್ಥೆ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪತ್ತೆಗೆ ನಗರ ಪೊಲೀಸರು ಜಾಲ ಬೀಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಈಗ ಉತ್ತರ ಪ್ರದೇಶಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ದೆಹಲಿ ಕೆಂಪುಕೋಟೆ ಕಾರ್ ಬಾಂಬ್ ಪ್ರಕರಣಕ್ಕೆ ಲಿಂಕ್ ಬಗ್ಗೆ ತನಿಖೆ
ದೆಹಲಿ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲಿ ಇಬ್ಬರು ಶಂಕಿತ ಬಾಂಗ್ಲಾದೇಶಿ ಪ್ರಜೆಗಳನ್ನು ಜಮ್ಮುವಿನಲ್ಲಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳನ್ನು ಕರೆತಂದಿರುವ ಆರೋಪಿಗೂ ಅಥವಾ ಆತ ಕರೆತಂದಿರುವ ವ್ಯಕ್ತಿಗಳಿಗೂ ಏನು ಸಂಬಂಧ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ದೆಹಲಿ ಪ್ರಕರಣ ಮತ್ತು ಆತ ನಾಪತ್ತೆಯಾಗಿರುವ ಪ್ರಕರಣದ ಸಂಬಂಧದ ಬಗ್ಗೆ ಖಚಿತವಾಗಿ ಏನೂ ಹೇಳಲಾಗದಿದ್ದರೂ, ಪೊಲೀಸರು ವಿವಿಧ ದೃಷ್ಟಿಕೋನಗಳಿಂದ ತನಿಖೆ ಆರಂಭಿಸಿದ್ದಾರೆ.
ಜತೆಗೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ವಿಷಯವಾಗಿರುವುದರಿಂದ ರಾಷ್ಟ್ರೀಯ ತನಿಖಾ ದಳ (NIA) ಗೂ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾ ನಿವಾಸಿಗಳನ್ನು ಕರೆತಂದಿರುವ ವ್ಯಕ್ತಿಯ ನಿರೀಕ್ಷಣಾ ಜಾಮೀನು ಅರ್ಜಿ ಅಕ್ಟೋಬರ್ 27 ರಂದು ವಜಾಗೊಂಡಿದ್ದು, ಆ ದಿನದಿಂದಲೂ ಆತ ನಾಪತ್ತೆಯಾಗಿರುವುದು ಪೊಲೀಸರ ಆತಂಕಕ್ಕೆ ಕಾರಣವಾಗಿದೆ. (ದೆಹಲಿಯ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟಗೊಂಡು 13 ಮಂದಿ ಸಾವನ್ನಪ್ಪಿ ಅನೇಕ ಮಂದಿ ಗಾಯಗೊಂಡಿರುವ ಘಟನೆ ನ. 10ರಂದು ನಡೆದಿತ್ತು.)
ಆರೋಪಿ ಅಲ್ಲಾವುದ್ದೀನ್ (45) ಎಂಬವನ ಪತ್ತೆಗೆ ಕೇಂದ್ರ ಅಪರಾದ ದಳ (ಸಿಸಿಬಿ) ಮತ್ತು ಬನ್ನೇರುಘಟ್ಟ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂಲತಃ ಬಾಂಗ್ಲಾ ಪ್ರಜೆಯಾಗಿರುವ ಅಲ್ಲಾವುದ್ದೀನ್, ಪಶ್ಚಿಮ ಬಂಗಾಳ ಮೂಲದವನೆಂದು ಹೇಳಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಗಾರೆ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅದರೆ, ಆತನ ಚಲನವಲನದ ಮಾಹಿತಿ ಪಡೆದ ನಗರ ಪೊಲೀಸರು ಆತನ ಹಿನ್ನೆಲೆ ಮತ್ತು ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಆತ ಬಾಂಗ್ಲಾದೇಶದಿಂದ ಮಾನವ ಕಳ್ಳಸಾಗಾಣಿಕೆ ಮಾಡುವ ಬೃಹತ್ ಜಾಲದಲ್ಲಿ ಪಾಲ್ಗೊಂಡಿರುವುದು ಖಚಿತವಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಇನ್ನೂ ಮಹತ್ವದ ವಿಷಯವೆಂದರೆ, ಆತನ ಮೇಲೆ ಉತ್ತರಪ್ರದೇಶ ರಾಜ್ಯದ ಗೌತಮ್ ಬುದ್ಧನಗರ ಪೊಲೀಸ್ ಠಾಣೆಯಲ್ಲೂ 2019ರಲ್ಲಿ ಬಾಂಗ್ಲಾದಿಂದ ಅಕ್ರಮವಾಗಿ ಮಾನವ ಕಳ್ಳಸಾಗಾಣಿಕೆ ಮಾಡಿರುವ ಪ್ರಕರಣ ದಾಖಲಾಗಿದ್ದು ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಬಳಿಕ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಬಳಿಕ ಆತ ಬೆಂಗಳೂರಿನಲ್ಲೂ ಅಂತಹುದೇ ಕೃತ್ಯಗಳನ್ನು ಮುಂದುವರಿಸಿದ್ದು, ಸಿಸಿಬಿ ಪೊಲೀಸರಿಂದ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿದ್ದ. ಆದರೆ, ಆರೋಪಿ ಅಲ್ಲಾವುದ್ದೀನ್ ಮನವಿಯನ್ನು ನಗರ ನ್ಯಾಯಾಲಯ ತಿರಸ್ಕರಿಸಿದೆ. ಅದಾದ ಬಳಿಕ ಆತ ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಹೆಸರು ಮತ್ತು ಹುಟ್ಟಿದ ದಿನಾಂಕವು ವಿಭಿನ್ನವಾಗಿ ಹೊಂದಿರುವ ಆಧಾರ್ ಕಾರ್ಡ್ ಸೇರಿ ಇತರ ಗುರುತಿನ ಚೀಟಿ ಹೊಂದಿದ್ದಾನೆ ಎಂಬುದು ಗೊತ್ತಾಗಿದೆ. ಆರೋಪಿಯು ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಹಲವಾರು ಬಾಂಗ್ಲಾದೇಶಿ ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ.ಅಲ್ಲದೆ, 400ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬೆಂಗಳೂರಿಗೆ ಕರೆತಂದು ಬಿಟ್ಟಿರುವುದು ಆತಂಕ ಸೃಷ್ಟಿಸಿದೆ.
ಬಾಂಗ್ಲಾದೇಶದಲ್ಲಿರುವ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಮೊಬೈಲ್ ಫೋನ್ ಮೂಲಕ ಐಎಂಒ ನಂತಹ ಅಂತರರಾಷ್ಟ್ರೀಯ ಸಂವಹನ ಅಪ್ಲಿಕೇಶನ್ಗಳನ್ನು ಬಳಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಆತನ ಕರೆ ವಿವರಗಳ ದಾಖಲೆಗಳು ಸಹ ದೃಢಪಡಿಸಿರುವ ಬಗ್ಗೆ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ಹೇಳಿವೆ.
ಆ 400 ಮಂದಿ ಎಲ್ಲಿ?
ಆತ ಅಕ್ರಮವಾಗಿ ಬೆಂಗಳೂರಿಗೆ ಕರೆತಂದಿದ್ದಾನೆ ಎನ್ನಲಾದ ಆ 400 ಮಂದಿ ಬಾಂಗ್ಲಾ ಪ್ರಜೆಗಳು ಎಲ್ಲಿದ್ದಾರೆ ಎಂಬುದೇ ಪೊಲೀಸರ ಪ್ರಶ್ನೆಯಾಗಿದೆ. ಆತನ ಮೊಬೈಲ್ನಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಅಪ್ಲಿಕೇಶನ್ಗಳ ಮೂಲಕ, ವಿಶೇಷವಾಗಿ IMO ಅಪ್ಲಿಕೇಶನ್ ಮೂಲಕ ಹಲವಾರು ಬಾಂಗ್ಲಾದೇಶಿ ಪ್ರಜೆಗಳೊಂದಿಗೆ ಆರೋಪಿ ಅಲ್ಲಾವುದ್ದೀನ್ ಸಂಪರ್ಕ ಸಾಧಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆತನ ಮೊಬೈಲ್ ಫೋನ್ ದಾಖಲೆಗಳು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಶಂಕಿತ ವ್ಯಕ್ತಿಗಳೊಂದಿಗೆ ನಿಯಮಿತವಾಗಿ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಇದು ತನಿಖೆಯ ಮಹತ್ವವನ್ನು ಎತ್ತಿ ತೋರಿಸಿದೆ.
ಎರಡು ದೇಶ, ಎರಡು ಗುರುತಿನ ಚೀಟಿ...!
ಆರೋಪಿಯು ಎರಡು ಗುರುತಿನ ಚೀಟಿಗಳನ್ನು ಹೊಂದಿರುವುದು ಗೊತ್ತಾಗಿದೆ. ಭಾರತದಲ್ಲಿ 'ಅಲ್ಲಾವುದ್ದೀನ್ ಬಿನ್ ಅಬ್ದುಲ್ ಲತೀಫ್' ಹೆಸರಿನಲ್ಲಿ ಆಧಾರ್ ಕಾರ್ಡ್ ಪಡೆದಿದ್ದರೆ, ಬಾಂಗ್ಲಾದೇಶದಲ್ಲಿ 'ಅಲ್ಲಾದಿನ್ ಹೌಲಾದರ್' ಎಂಬ ಬೇರೆ ಹೆಸರು ಹೊಂದಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಆಲ್ಲಾವುದ್ದೀನ್, ತಾನು ಪಶ್ಚಿಮ ಬಂಗಾಳ ಮೂಲದ ಭಾರತೀಯ ಪ್ರಜೆಯಾಗಿದ್ದು, ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಕ್ರಮ ಬಾಂಗ್ಲಾದೇಶಿ ವಲಸಿಗ ಎಂಬ ಶಂಕೆಯ ಮೇಲೆ ಸಿಸಿಬಿ ಮತ್ತು ಬನ್ನೇರುಘಟ್ಟ ಪೊಲೀಸರು ಆತನನ್ನು ಪದೇ ಪದೇ ವಿಚಾರಣೆಗೆ ಕರೆದು ವಿಚಾರಣೆ ಮಾಡುತ್ತಿದ್ದರು. ಬಂಧನ ಭೀತಿಯಿಂದಾಗಿ ಆತ ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಜಾಮೀನು ನಿರಾಕರಣೆ ತೀರ್ಪಿನ ಬಳಿಕ ಸಂಪರ್ಕದಲ್ಲಿಲ್ಲ!
ಅಕ್ರಮವಾಗಿ ಬಾಂಗ್ಲಾ ವಲಸಿಗರನ್ನು ಕರೆತಂದು ನೆಲೆಸಲು ಅವಕಾಶ ನೀಡಿರುವ ಪ್ರಕರಣ ಸಂಬಂಧ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಆರೋಪಿ ಪರ ವಕೀಲ ಬಸವರಾಜು.ಟಿ.ಎ., ಕೆಳನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವಂತೆ ಆರೋಪಿಗೆ ತಿಳಿಸಲಾಯಿತು. ಆದರೆ, ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಉತ್ತರಪ್ರದೇಶದಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿ ಹೋಗಿರುವ ಸಾಧ್ಯತೆ ಇದೆ. ನ್ಯಾಯಾಲಯ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಬಳಿಕ ಆತ ಸಂಪರ್ಕದಲ್ಲಿಲ್ಲ. ವಕೀಲರಾಗಿ ನಮ್ಮ ಕರ್ತವ್ಯ ನಿಭಾಯಿಸುತ್ತೇವೆ. ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿರುವ ಆರೋಪಿ ಅಲ್ಲಾವುದ್ದೀನ್?
ಹೆಸರು ಹೇಳಲಿಚ್ಛಿಸದ ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸ್ ಅಧಿಕಾರಿಯೊಬ್ಬರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಣೆ ಮಾಡಿದ ಬಳಿಕ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಉತ್ತರಪ್ರದೇಶದಲ್ಲಿ ಆತನ ವಿರುದ್ಧ ಪ್ರಕರಣವೊಂದು ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಬಹುಶಃ ಅಲ್ಲಿಗೆ ಹೋಗಿರುವ ಸಾಧ್ಯತೆ ಇದೆ. ಕೆಲ ದಿನಗಳ ಕಾಲ ಗಮನಿಸಲಾಗುವುದು. ಬಳಿಕವೂ ಬೆಂಗಳೂರಿಗೆ ಬಾರದಿದ್ದರೆ ಮುಂದಿನ ಕಾನೂನೂ ಕ್ರಮ ಕೈಗೊಳ್ಳಲಾಗುವುದು. ಅಕ್ರಮವಾಗಿ ಬಾಂಗ್ಲಾದೇಶಿಗರನ್ನು ಕರೆತಂದಿರುವುದು ಕಾನೂನುಬಾಹಿರವಾಗಿದೆ. ಆತ ಕರೆತಂದಿರುವ ವ್ಯಕ್ತಿಗಳು ಎಲ್ಲೆಲ್ಲಿ ಇರಬಹುದು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಕ್ರಮ ನುಸುಳುವಿಕೆಗೆ ಸಹಾಯ?
ಪೊಲೀಸರು ಹೇಳುವ ಪ್ರಕಾರ, ಅತನ ವಿರುದ್ಧ ಲಭ್ಯವಿರುವ ಸಾಕ್ಷ್ಯಾಧಾರಗಳು ರಾಷ್ಟ್ರೀಯ ನುಸುಳುವಿಕೆ ಮತ್ತು ವಂಚನೆಯಂತಹ ಸಂಭಾವ್ಯ ಕೃತ್ಯಗಳತ್ತ ಬೊಟ್ಟು ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಜಾಮೀನು ನೀಡುವುದು ನ್ಯಾಯದ ಹಿತಾಸಕ್ತಿ ಮತ್ತು ರಾಜ್ಯದ ಭದ್ರತೆಗೆ ವಿರುದ್ಧವಾಗಿರುತ್ತದೆ ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿದೆ .
ಬಾಂಗ್ಲಾದೇಶಿ ಪ್ರಜೆಗಳನ್ನು ಕಾನೂನುಬಾಹಿರವಾಗಿ ಬೆಂಗಳೂರು ನಗರಕ್ಕೆ ಕರೆತಂದು, ಅವರಿಗೆ ನೆಲೆಸಲು ವ್ಯವಸ್ಥೆ ಮಾಡಿದ ಗಂಭೀರ ಆರೋಪ ಹೊತ್ತಿರುವ ಆತನಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.
ಈ ಘಟನೆಯು ರಾಜಧಾನಿಯಲ್ಲಿ ಅಕ್ರಮ ವಲಸಿಗರ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಮತ್ತೊಂದು ಆತಂಕಕಾರಿ ಸಾಕ್ಷ್ಯವನ್ನು ಒದಗಿಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ದಶಕಗಳಿಂದ ದೇಶವನ್ನು ಕಾಡುತ್ತಿರುವ ಅತ್ಯಂತ ಸೂಕ್ಷ್ಮ ಸಮಸ್ಯೆಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸೆಯು ಪ್ರಮುಖವಾಗಿದೆ. ಇದು ಕೇವಲ ಕಾರ್ಮಿಕರ ವಲಸೆಯಲ್ಲ, ಬದಲಾಗಿ ಇದೊಂದು ಅಂತರರಾಷ್ಟ್ರೀಯ ಮಟ್ಟದ ಮಾನವ ಕಳ್ಳಸಾಗಣೆ ಜಾಲದ ಭಾಗವಾಗಿದೆ. ಆರ್ಥಿಕತೆ, ಸಾಮಾಜಿಕ ಸಮತೋಲನ, ಉದ್ಯೋಗ ಮಾರುಕಟ್ಟೆ, ರಾಜಕೀಯ ಸಮೀಕರಣಗಳು ಹಾಗೂ ರಾಷ್ಟ್ರೀಯ ಭದ್ರತೆಗೆ ಇಂತಹ ಪ್ರಕರಗಳು ಗಂಭೀರ ಸವಾಲಾಗಿದೆ. ಈ ನಡುವೆ, ಬೆಂಗಳೂರಿಗೆ ಸುಮಾರು 400ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಕಾನೂನುಬಾಹಿರವಾಗಿ ಕರೆತಂದಿರುವುದು ʼಕೂಲಿಗಾಗಿʼ ಎಂದು ಹೇಳಲಾಗುತ್ತಿದ್ದರೂ ಇದರ ಹಿಂದೆ ಆಳವಾಗಿ ಬೇರೂರಿರುವ, ದೇಶದ ಭದ್ರತೆಗೇ ಸವಾಲೊಡ್ಡಬಲ್ಲ ದೊಡ್ಡ ಜಾಲವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
400ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳು
ಸುಮಾರು 400ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಕಾನೂನುಬಾಹಿರವಾಗಿ ಬೆಂಗಳೂರಿಗೆ ಕರೆತಂದು, ಅವರಿಗೆ ವಾಸ ವ್ಯವಸ್ಥೆ ಮಾಡಿದ ಗಂಭೀರ ಆರೋಪವನ್ನು ಆರೋಪಿ ಅಲ್ಲಾವುದ್ದೀನ್ ಎದುರಿಸುತ್ತಿದ್ದಾನೆ. ಇದರಿಂದ ರಾಜಧಾನಿಯಲ್ಲಿ ಅಕ್ರಮ ವಲಸಿಗರ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಗೊತ್ತಾಗಲಿದೆ.
ಯಾವ ನ್ಯಾಯಾಲಯದಿಂದ ಜಾಮೀನು ನಿರಾಕರಣೆ?
ಬೆಂಗಳೂರಿನ 69ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿ ಅಲ್ಲಾವುದ್ದೀನ್ (45) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಈ ಪ್ರಕರಣವು ದೇಶದ ಆಂತರಿಕ ಭದ್ರತೆ ಮತ್ತು ಜನಸಂಖ್ಯಾ ಸಮಗ್ರತೆಗೆ ಗಂಭೀರ ಸವಾಲನ್ನು ಒಡ್ಡಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಕಳವಳ ವ್ಯಕ್ತಪಡಿಸಿದೆ.
ಆರೋಪಿಯು 400ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಕಾನೂನುಬಾಹಿರವಾಗಿ ಬೆಂಗಳೂರಿಗೆ ಕರೆತಂದು, ಅವರ ವಾಸಕ್ಕೆ ವ್ಯವಸ್ಥೆ ಮಾಡಿದ್ದಾನೆ. ಇದು ಸಾಬೀತಾದರೆ, ಇದು ಕೇವಲ ಗಂಭೀರ ಶಾಸನಬದ್ಧ ಉಲ್ಲಂಘನೆಯಷ್ಟೇ ಅಲ್ಲ, ರಾಜ್ಯದ ಸುರಕ್ಷತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೃತ್ಯವೂ ಆಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಕಟುವಾಗಿ ಹೇಳಿದೆ.
ರಾಷ್ಟ್ರೀಯ ಅಖಂಡತೆ, ಅಕ್ರಮ ವಲಸೆ ಮತ್ತು ಅಂತರರಾಜ್ಯ ನುಸುಳಿಕೆಗಳಂತಹ ಪ್ರಕರಣಗಳಲ್ಲಿ ಮುಂಚಿತ ಜಾಮೀನು ನೀಡುವಲ್ಲಿ ನ್ಯಾಯಾಲಯಗಳು ಅತಿ ಎಚ್ಚರಿಕೆ ವಹಿಸಬೇಕು. ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡುವುದರಿಂದ ತನಿಖೆ ತೊಂದರೆಗೀಡಾಗುವ ಸಾಧ್ಯತೆಗಳಿವೆ. ಅಕ್ರಮವಾಗಿ ಬೆಂಗಳೂರಿಗೆ ಕರೆತಂದು ನೆಲೆಸಲು ನೆರವಾದರೆ, ಅದು ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲದೆ ರಾಷ್ಟ್ರದ ಸಾರ್ವಭೌಮತ್ವ ಹಾಗೂ ಭದ್ರತೆಗೆ ಧಕ್ಕೆಯಾಗುವ ಅಪರಾಧವಾಗಿದೆ. ವಿದೇಶಿಯರ ಕಾಯ್ದೆ (Foreigners Act, 1946)ಯ ಸೆಕ್ಷನ್ 14ರ ಅಡಿಯಲ್ಲಿ ಈ ಅಪರಾಧವು ಗಂಭೀರ ಸ್ವರೂಪದ್ದಾಗಿದ್ದು, ಜಾಮೀನು ರಹಿತವಾಗಿದೆ. ದೇಶದ ಪ್ರಾದೇಶಿಕ ಮತ್ತು ಜನಸಂಖ್ಯಾ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ, ಇಂತಹ ಪ್ರಕರಣಗಳಲ್ಲಿ ಪೂರ್ವ-ಬಂಧನ ಜಾಮೀನು ನೀಡುವುದು ಕಾನೂನನ್ನು ದುರ್ಬಲಗೊಳಿಸಬಹುದು ಮತ್ತು ತನಿಖಾ ಪ್ರಕ್ರಿಯೆಗೆ ಅಡ್ಡಿಯಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
"ಸಾಕ್ಷ್ಯಾಧಾರಗಳು ರಾಷ್ಟ್ರೀಯ ಒಳನುಸುಳುವಿಕೆ ಮತ್ತು ಸೋಗು ಹಾಕುವಿಕೆಯ ಸಂಭಾವ್ಯ ಕೃತ್ಯಗಳ ಬಗ್ಗೆ ಗಂಭೀರ ತನಿಖೆ ಆಗಬೇಕಿದೆ," ಎಂದೂ ಅಭಿಪ್ರಾಯಿಸಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಆತಂಕ
ಈ ಪ್ರಕರಣವು ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಮಸ್ಯೆ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಉತ್ತಮ ಉದ್ಯೋಗಾವಕಾಶಗಳನ್ನು ಅರಸಿ ಬರುವ ಆರ್ಥಿಕ ವಲಸಿಗರ ಸೋಗಿನಲ್ಲಿ, ಕೆಲವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಮತ್ತು ಅಪರಾಧ ಕೃತ್ಯಗಳನ್ನು ಎಸಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸುವ ಜಾಲ, ಮಾನವ ಕಳ್ಳಸಾಗಣೆ ಮತ್ತು ಅಕ್ರಮ ವಲಸಿಗರನ್ನು ಬಳಸಿಕೊಂಡು ನಡೆಯುವ ಇತರ ಅಪರಾಧ ಚಟುವಟಿಕೆಗಳ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಜಾಲದ ಹಿಂದಿರುವ ಪ್ರಮುಖರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವುದು ಪೊಲೀಸರ ಮುಂದಿರುವ ದೊಡ್ಡ ಸವಾಲಾಗಿದೆ.