ಮೆಜೆಸ್ಟಿಕ್​​ನಲ್ಲಿ ಮೆಟ್ರೊ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನ

ರಾತ್ರಿ ಸುಮಾರು 10.04 ರ ಸುಮಾರಿಗೆ ಹಸಿರು ಮಾರ್ಗದ (ನಾಗಸಂದ್ರ-ರೇಷ್ಮೆ ಸಂಸ್ಥೆ) ಪ್ಲಾಟ್​ಫಾರ್ಮ್​ 1ರಲ್ಲಿ ಈ ಘಟನೆ ನಡೆದಿದೆ. ನಿಲ್ದಾಣಕ್ಕೆ ರೈಲು ಸಮೀಪಿಸುತ್ತಿದ್ದಂತೆಯೇ ವ್ಯಕ್ತಿಯು ಹಠಾತ್ತನೇ ಹಳಿಗೆ ಜಿಗಿದಿದ್ದಾರೆ.;

Update: 2025-08-12 04:50 GMT

ಮೆಜೆಸ್ಟಿಕ್​​ ಮೆಟ್ರೋ

ನಗರದ ಹೃದಯ ಭಾಗದಲ್ಲಿರುವ ಕೆಂಪೇಗೌಡ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ರಾತ್ರಿ ವ್ಯಕ್ತಿಯೊಬ್ಬ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.  ಸುಮಾರು 35 ವರ್ಷದ ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ರೈಲಿನ ಮುಂದೆ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ದೃಶ್ಯವನ್ನು ಕಣ್ಣಾರೆ ಕಂಡ ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ರಾತ್ರಿ ಸುಮಾರು 10.04 ಗಂಟೆಗೆ ಹಸಿರು ಮಾರ್ಗದ (ನಾಗಸಂದ್ರ-ರೇಷ್ಮೆ ಸಂಸ್ಥೆ) ಪ್ಲಾಟ್​ಫಾರ್ಮ್​ 1ರಲ್ಲಿ ಘಟನೆ ನಡೆದಿದೆ. ನಿಲ್ದಾಣಕ್ಕೆ ರೈಲು ಸಮೀಪಿಸುತ್ತಿದ್ದಂತೆಯೇ ವ್ಯಕ್ತಿಯು ಹಠಾತ್ತನೇ ಹಳಿಗೆ ಜಿಗಿದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಮೆಟ್ರೋ ಸಿಬ್ಬಂದಿ, ರೈಲನ್ನು ನಿಲ್ಲಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ನಗರದ ಅತ್ಯಂತ ಜನನಿಬಿಡ ನಿಲ್ದಾಣಗಳಲ್ಲಿ ಒಂದಾದ ಮೆಜೆಸ್ಟಿಕ್​​ನಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಇದ್ದರೂ, ಈ ಘಟನೆ ನಡೆದಿದೆ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಈ ಹಿಂದೆ ಕೂಡ ಇಂತಹ ಆತ್ಮಹತ್ಯೆ ಯತ್ನದ ಪ್ರಕರಣಗಳು ವರದಿಯಾಗಿವೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತನ್ನ ಎಲ್ಲಾ ನಿಲ್ದಾಣಗಳಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಇಂತಹ ಘಟನೆಗಳನ್ನು ತಡೆಯಲು ಹೆಚ್ಚಿನ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

Tags:    

Similar News