ಮಾಲೂರು ಶಾಸಕ ನಂಜೇಗೌಡರ ಆಯ್ಕೆ ಅಸಿಂಧು: ಹೈಕೋರ್ಟ್‌ನಿಂದ ಬಿಗ್ ಶಾಕ್, ಮರು ಎಣಿಕೆಗೆ ಆದೇಶ

ಒಂದು ವೇಳೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ತಡೆಯಾಜ್ಞೆ ಬರದಿದ್ದರೆ, ಹೈಕೋರ್ಟ್ ಆದೇಶದಂತೆ ನಂಜೇಗೌಡರ ಶಾಸಕ ಸ್ಥಾನ ರದ್ದಾಗಲಿದ್ದು, ಮಾಲೂರು ಕ್ಷೇತ್ರದಲ್ಲಿ ಮರು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.;

Update: 2025-09-16 10:23 GMT

2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 248 ಮತಗಳ ಅಂತರದಿಂದ ರೋಚಕ ಜಯ ಸಾಧಿಸಿದ್ದ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿ ಮಹತ್ವದ ತೀರ್ಪು ನೀಡಿದೆ. ಅಲ್ಲದೆ, ಕ್ಷೇತ್ರದಲ್ಲಿ ಮತಗಳ ಮರು ಎಣಿಕೆ ನಡೆಸುವಂತೆ ಸೂಚಿಸಿದೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನಂಜೇಗೌಡ ಅವರು 50,955 ಮತಗಳನ್ನು ಪಡೆದು, ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ (50,707 ಮತ) ವಿರುದ್ಧ ಕೇವಲ 248 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು. ಈ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮಂಜುನಾಥ್ ಗೌಡ, ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯಲ್ಲಿ, "ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು 17ಸಿ ಫಾರಂಗಳನ್ನು ಒದಗಿಸುವಂತೆ ಕೋರ್ಟ್ ಆದೇಶಿಸಿದ್ದರೂ, ಸೂಕ್ತ ದಾಖಲೆಗಳನ್ನು ನೀಡಿಲ್ಲ. 251 ಫಾರಂಗಳಲ್ಲಿ 120 ಫಾರಂಗಳಲ್ಲಿ ನಮ್ಮ ಏಜೆಂಟರ ಸಹಿಯೇ ಇಲ್ಲ. ಮರು ಮತ ಎಣಿಕೆ ನಡೆಸಬೇಕು," ಎಂದು ಮಂಜುನಾಥ್ ಗೌಡ ವಾದಿಸಿದ್ದರು.

ಕಳೆದ ಎರಡು ವರ್ಷಗಳಿಂದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯಪೀಠವು, ಮಂಗಳವಾರ ಅಂತಿಮ ತೀರ್ಪು ಪ್ರಕಟಿಸಿತು. ಮತ ಎಣಿಕೆಯಲ್ಲಿ ಲೋಪವಾಗಿರುವುದನ್ನು ಪರಿಗಣಿಸಿ, ಶಾಸಕ ನಂಜೇಗೌಡರ ಆಯ್ಕೆಯನ್ನು ಅಸಿಂಧುಗೊಳಿಸಿ, ಮರು ಮತ ಎಣಿಕೆಗೆ ಆದೇಶಿಸಿದೆ.

ಮೇಲ್ಮನವಿಗೆ ಅವಕಾಶ

ತೀರ್ಪು ಪ್ರಕಟವಾದ ತಕ್ಷಣ, ಶಾಸಕ ಕೆ.ವೈ. ನಂಜೇಗೌಡರ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, ತನ್ನ ಆದೇಶಕ್ಕೆ 30 ದಿನಗಳ ಕಾಲ ತಾತ್ಕಾಲಿಕ ತಡೆ ನೀಡಿದೆ. ಈ ಅವಧಿಯೊಳಗೆ ನಂಜೇಗೌಡರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಒಂದು ವೇಳೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ತಡೆಯಾಜ್ಞೆ ಬರದಿದ್ದರೆ, ಹೈಕೋರ್ಟ್ ಆದೇಶದಂತೆ ನಂಜೇಗೌಡರ ಶಾಸಕ ಸ್ಥಾನ ರದ್ದಾಗಲಿದ್ದು, ಮಾಲೂರು ಕ್ಷೇತ್ರದಲ್ಲಿ ಮರು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. 

Tags:    

Similar News