Malnad Distress | 17 ಸಾವಿರ ಒತ್ತುವರಿದಾರರಿಗೆ ನೋಟಿಸ್‌! ಮತ್ತೆ ಎದುರಾಯ್ತು ಎತ್ತಂಗಡಿ ಭೂತ

17 ಸಾವಿರ ರೈತರಿಗೆ ನೋಟಿಸ್‌ ಸಿದ್ಧವಾಗಿದ್ದು, ಇನ್ನೂ 50 ಸಾವಿರ ಮಂದಿಗೆ ನೋಟಿಸ್‌ ನೀಡುವ ಗುರಿ ಹೊಂದಲಾಗಿದೆ. ಹಾಗಾಗಿ ಈಗಾಗಲೇ ಒತ್ತುವರಿ ತೆರವು ನೋಟಿಸ್ ಪಡೆದಿರುವ ಮಲೆನಾಡಿನ ಸಾವಿರಾರು ರೈತರೊಂದಿಗೆ ಇನ್ನಷ್ಟು ಮಂದಿ ಸೇರಲಿದ್ದಾರೆ

Update: 2024-12-23 02:00 GMT

ಭಾರತೀಯ ಅರಣ್ಯ ಸ್ಥಿತಿಗತಿ ವರದಿ ಬಿಡುಗಡೆಯಾಗಿದೆ. ಕಳೆದ ಹತ್ತು ವರ್ಷದಲ್ಲಿ ದೇಶದ ಅರಣ್ಯದಲ್ಲಿ ಆಗಿರುವ ಬದಲಾವಣೆಗಳನ್ನು ಈ ವರದಿ ಬಹಿರಂಗಪಡಿಸಿದೆ. ಎಂದಿನಂತೆ ಹೆಚ್ಚುತ್ತಿರುವ ಅರಣ್ಯ ನಾಶದ ಬಗ್ಗೆ ವರದಿ ಆತಂಕಕಾರಿ ಅಂಕಿಅಂಶವನ್ನು ನೀಡಿದೆ.

ಅದರಲ್ಲೂ ಮುಖ್ಯವಾಗಿ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಹತ್ತು ವರ್ಷದಲ್ಲಿ 58.22 ಚದರ ಕಿಮೀ ಅರಣ್ಯ ನಾಶವಾಗಿದೆ ಎಂದು ಹೇಳಲಾಗಿದ್ದು, ತಮಿಳುನಾಡಿನ ನೀಲಗಿರಿ, ಕೇರಳದ ಇಡುಕ್ಕಿ, ಮಹಾರಾಷ್ಟ್ರದ ಪುಣೆ ಮತ್ತು ಕರ್ನಾಟಕದ ಶಿವಮೊಗ್ಗ ಜಿಲ್ಲೆಗಳು ಅತಿ ಹೆಚ್ಚು ಅರಣ್ಯ ನಾಶ ಕಂಡಿರುವ ಪಶ್ಚಿಮಘಟ್ಟ ವ್ಯಾಪ್ತಿಯ ಜಿಲ್ಲೆಗಳು ಎಂದು ವರದಿ ಹೇಳಿದೆ.

ಕಳೆದ ಎರಡೂವರೆ ದಶಕದಿಂದಲೂ ದೇಶದ ಅರಣ್ಯ ಸಂರಕ್ಷಣೆ ಮತ್ತು ಅದಕ್ಕೆ ಇರುವ ಸವಾಲುಗಳ ಕುರಿತ ಪ್ರಸ್ತಾಪಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೆಸರು ಅರಣ್ಯನಾಶದ ಕುಖ್ಯಾತಿಗೆ ಒಳಗಾಗುತ್ತಲೇ ಇದೆ. ಆದರೆ, ಯಾಕೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತಿಹೆಚ್ಚು ಅರಣ್ಯನಾಶವಾಗಿದೆ ಎಂಬ ಅಂಶದ ಕಡೆ ಜಿಲ್ಲೆಯಲ್ಲಿ ಜಾರಿಯಾಗಿರುವ ಅಭಿವೃದ್ಧಿ ಯೋಜನೆಗಳು ಮತ್ತು ಅಲ್ಲಿನ ಜನಜೀವನದ ಹಿನ್ನೆಲೆಯಲ್ಲಿ ಬೆಳಕು ಹರಿಸುವ ಪ್ರಯತ್ನಗಳು ಮಾತ್ರ ಸೊನ್ನೆ. ಕೇವಲ 100 ಕಿಮೀ ವ್ಯಾಪ್ತಿಯಲ್ಲಿ ಏಳು ಜಲಾಶಯಗಳು(ಚಿಕ್ಕಪುಟ್ಟ ಡ್ಯಾಮ್ಗಳನ್ನು ಹೊರತುಪಡಿಸಿ)ಮತ್ತು ಐದು ಅಭಯಾರಣ್ಯಗಳನ್ನು ಒಳಗೊಂಡಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಆ ಎಲ್ಲಾ ಯೋಜನೆಗಳ ಸಾವಿರಾರು ಮಂದಿ ಸಂತ್ರಸ್ತರಿಗೆ ಬದುಕಲು ಜಾಗ ಎಲ್ಲಿ? ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ 80 ವರ್ಷದ ಎತ್ತಂಗಡಿ ಇತಿಹಾಸವನ್ನು ನೋಡಿದರೆ ಶಿವಮೊಗ್ಗದ ಅರಣ್ಯ ನಾಶಕ್ಕೂ, ಸರಣಿ ಮುಳುಗಡೆ- ಎತ್ತಂಗಡಿಗಳಿಗೂ ಇರುವ ನಂಟು ಅರಿವಾಗಬಹುದು.

ಸರ್ಕಾರಿ ವರದಿಗಳು, ಅರಣ್ಯ ಮತ್ತು ಪರಿಸರ ಇಲಾಖೆಗಳ ಕಾಳಜಿಗಳು ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಮಲೆನಾಡಿನ ವಿಷಯದಲ್ಲಿ ಬಹುತೇಕ ಏಕಮುಖ ಅಭಿಪ್ರಾಯ, ಅಂಕಿಅಂಶಗಳ ಮೇಲೆಯೇ ಅಂತಿಮಗೊಳ್ಳುತ್ತಿವೆ ಎಂಬುದಕ್ಕೆ ಅರಣ್ಯ ನಾಶದ ಕುರಿತ ವರದಿಗಳೂ ಹೊರತಲ್ಲ.

ಆದರೆ, ಅಂತಹ ವರದಿಗಳನ್ನೇ ಮುಂದಿಟ್ಟುಕೊಂಡು ಅರಣ್ಯ ಇಲಾಖೆ ಒತ್ತುವರಿ ತೆರವಿನ ಅಸ್ತ್ರ ಪ್ರಯೋಗಿಸಲು ಇನ್ನಷ್ಟು ಮುಂದಾಗುತ್ತದೆ. ಈಗಾಗಲೇ ಒತ್ತುವರಿ ತೆರವು ನೋಟಿಸ್ ಪಡೆದಿರುವ ಮಲೆನಾಡಿನ ಸಾವಿರಾರು ರೈತರ ಆತಂಕಕ್ಕೆ ಇನ್ನಷ್ಟು ರೈತರು ಸೇರಲಿದ್ದಾರೆ. ನೆಲೆ ಕಳೆದುಕೊಳ್ಳುವ, ಬೀದಿಪಾಲಾಗುವ ಸರಣಿಗೆ ಅಂತಹ ವರದಿಗಳು ಇನ್ನಷ್ಟು ವೇಗ ಕೊಡಲಿವೆ ಎಂಬುದಕ್ಕೆ ಈಗಾಗಲೇ ಶಿವಮೊಗ್ಗ ಸೇರಿದಂತೆ ಮಲೆನಾಡಿನುದ್ದಕ್ಕೂ ಸಾಕಷ್ಟು ಉದಾಹರಣೆಗಳಿವೆ.

ಹತ್ತು ವರ್ಷದ ಹಿಂದೆಯೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿ ಅರಣ್ಯ ಒತ್ತುವರಿ ತೆರವಿಗೆ ಮೂರು ಹಂತದ ಕಾರ್ಯಾಚರಣೆ ನಡೆಸುವುದಾಗಿ ಹೇಳಿದೆ. ಆ ಕಾರ್ಯಾಚರಣೆಗೆ ಈ ಅರಣ್ಯ ಸ್ಥಿತಿ-ಗತಿ ವರದಿ ಇನ್ನಷ್ಟು ವೇಗ ಕೊಡುವ ಸಾಧ್ಯತೆ ಇದೆ.

ಏನದು ಪ್ರಮಾಣಪತ್ರ? ಯಾರು ಸಲ್ಲಿಸಿದ್ದು?

ಅರಣ್ಯ ನಾಶದ ಕುರಿತ ರಾಷ್ಟ್ರೀಯ ಹಸಿರು ಪೀಠದ ಆದೇಶ ಜಾರಿಗೆ ಸರ್ಕಾರ ಕಠಿಣ ಕ್ರಮ ಜರುಗಿಸುತ್ತಿಲ್ಲ ಎಂದು ಆಕ್ಷೇಪಿಸಿ ಸುಪ್ರೀಂಕೋರ್ಟ್ಗೆ ಪರಿಸರ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ ರಾಜ್ಯದಲ್ಲಿ ಇರುವ ಒಟ್ಟು ಅರಣ್ಯ ಒತ್ತುವರಿ ಪ್ರದೇಶವೆಷ್ಟು? ಅದರಲ್ಲಿ ಒತ್ತುವರಿದಾರರನ್ನು ಒತ್ತುವರಿ ಪ್ರದೇಶದ ಆಧಾರದ ಮೇಲೆ ಹೇಗೆ ವಿಂಗಡಿಸಿ, ಹಂತಹಂತವಾಗಿ ತೆರವು ಮಾಡಲಾಗುವುದು ಎಂಬ ಸಂಪೂರ್ಣ ಕಾರ್ಯತಂತ್ರವನ್ನು ಉಲ್ಲೇಖಿಸಿತ್ತು.

2014ರ ಅಕ್ಟೋಬರ್ 14ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ಪ್ರಮಾಣಪತ್ರವನ್ನು ಸಲ್ಲಿಸಿತ್ತು.

ಪ್ರಮಾಣಪತ್ರದಲ್ಲಿ ಏನಿತ್ತು?

ಮುಖ್ಯವಾಗಿ ರಾಜ್ಯದ ಅರಣ್ಯ ಒತ್ತುವರಿ ಪ್ರಮಾಣವೆಷ್ಟು ಮತ್ತು ಅದನ್ನು ತೆರವುಗೊಳಿಸಿ ವಾಪಸ್ ಅರಣ್ಯ ಇಲಾಖೆಗೆ ಭೂಮಿಯನ್ನು ಪಡೆದುಕೊಳ್ಳಲು ತಮ್ಮ ಸರ್ಕಾರದ ಕಾರ್ಯತಂತ್ರವೇನು ಎಂಬುದನ್ನು ಆ ಪ್ರಮಾಣಪತ್ರದಲ್ಲಿ ವಿವರಿಸಲಾಗಿತ್ತು.

ಆ ವರದಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 2.04 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿತ್ತು. ಅಷ್ಟು ಪ್ರಮಾಣದ ಭೂಮಿಯನ್ನು ಒಟ್ಟು 1.10 ಲಕ್ಷ ಕುಟುಂಬಗಳು ಒತ್ತುವರಿ ಮಾಡಿಕೊಂಡಿದ್ದವು. ಆ ಒತ್ತುವರಿಯನ್ನು ಮೂರು ಎಕರೆಗೂ ಕಡಿಮೆ ಪ್ರಮಾಣದ ಭೂ ಒತ್ತುವರಿ, ಮೂರರಿಂದ ಹತ್ತು ಎಕರೆವರೆಗಿನ ಒತ್ತುವರಿ, 10ರಿಂದ 30 ಎಕರೆ ಅರಣ್ಯ ಒತ್ತುವರಿ, 30 ಎಕರೆಗಿಂತ ಅಧಿಕ ಒತ್ತವರಿ ಎಂದು ನಾಲ್ಕು ವರ್ಗಗಗಳಾಗಿ ವರ್ಗೀಕರಿಸಲಾಗಿತ್ತು. ಆ ಪೈಕಿ 3 ಎಕರೆಯವರೆಗಿನ ಒತ್ತುವರಿ ಪ್ರಮಾಣ ಒಟ್ಟು 1,15,089 ಎಕರೆಯಾಗಿದ್ದು, ಆ ಭೂಮಿಯನ್ನು 86,352 ಕುಟುಂಬಗಳು ಒತ್ತುವರಿ ಮಾಡಿವೆ ಎಂದು ಹೇಳಲಾಗಿತ್ತು. 3ರಿಂದ 10 ಎಕರೆ ಒತ್ತುವರಿ ಪ್ರಮಾಣದಲ್ಲಿ ಒಟ್ಟು 70,108 ಎಕರೆ ಒತ್ತುವರಿಯಾಗಿದ್ದು, ಒಟ್ಟು 23,423 ಕುಟುಂಬಗಳು ಈ ಭೂಮಿಯನ್ನು ಒತ್ತುವರಿ ಮಾಡಿಕೊಂಡಿವೆ ಎನ್ನಲಾಗಿತ್ತು.

ದೊಡ್ಡ ಸಂಖ್ಯೆಯ ಒತ್ತುವರಿದಾರರು ಇರುವುದು 0-3 ಎಕರೆ ಮತ್ತು 3-10 ಎಕರೆ ತಲಾ ಒತ್ತುವರಿ ವರ್ಗದಲ್ಲಿಯೇ. ಇನ್ನುಳಿದಂತೆ 10 ರಿಂದ 30 ಎಕರೆ ಒತ್ತುವರಿ ವರ್ಗದಲ್ಲಿ 12,898 ಎಕರೆ ಭೂಮಿಯನ್ನು ಒಟ್ಟು 718 ಕುಟುಂಬಗಳು ಒತ್ತುವರಿ ಮಾಡಿದ್ದರೆ, 30 ಎಕರೆಗಿಂತ ಅಧಿಕ ಒತ್ತುವರಿ ವರ್ಗದಲ್ಲಿ ಒಟ್ಟು 5344 ಎಕರೆ ಭೂಮಿಯನ್ನು 133 ಕುಟುಂಬಗಳು ಒತ್ತುವರಿ ಮಾಡಿಕೊಂಡಿವೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿತ್ತು.


2014ರಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಕುರಿತ ಪ್ರಮಾಣಪತ್ರ

ಒತ್ತುವರಿ ತೆರವಿಗೆ ಯೋಜನೆ ಏನು?

ಈ ಒತ್ತುವರಿಯನ್ನು ತೆರವು ಮಾಡಲು ಸರ್ಕಾರ ಕರ್ನಾಟಕ ಅರಣ್ಯ ಕಾಯ್ದೆ1963ರ ಸೆಕ್ಷನ್ 64(ಎ) ಅಡಿಯಲ್ಲಿ ಕಾರ್ಯಯೋಜನೆ ಸಿದ್ಧಪಡಿಸಿತ್ತು. ಅದರಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಒತ್ತುವರಿ ತೆರವು ಕಾರ್ಯಪಡೆಗಳನ್ನು ರಚಿಸಿ, ಅವುಗಳ ಮೇಲುಸ್ತುವಾರಿಗೆ ರಾಜ್ಯಮಟ್ಟದ ಸಮಿತಿಗಳನ್ನು ನೇಮಕ ಮಾಡುವುದು ಮತ್ತು ನಾಲ್ಕೂ ವರ್ಗದ ಒತ್ತುವರಿದಾರರನ್ನು ಮೊದಲು ಹೆಚ್ಚು ಪ್ರದೇಶ ಒತ್ತುವರಿದಾರರನ್ನು ತೆರವುಗೊಳಿಸುವ ಮೂಲಕ ಹಂತಹಂತವಾಗಿ ಎಲ್ಲಾ ಒತ್ತುವರಿದಾರರನ್ನು ತೆರವುಗೊಳಿಸು ಸರ್ಕಾರ ಸ್ಪಷ್ಟ ಕಾರ್ಯಯೋಜನೆ ಹೊಂದಿದೆ ಎಂದು ಪ್ರಮಾಣಪತ್ರದಲ್ಲಿ ನ್ಯಾಯಾಲಯಕ್ಕೆ ವಿವರಿಸಲಾಗಿತ್ತು.

ಕಳೆದ ಹತ್ತು ವರ್ಷಗಳಿಂದ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರೂ, ಕೋರ್ಟು ಪ್ರಕರಣಗಳು ಮತ್ತು ಸರ್ಕಾರದ ಮಂತ್ರಿಗಳು, ಮುಖ್ಯಮಂತ್ರಿಗಳ ಕಾಲಕಾಲದ ಮೌಖಿಕ ಸೂಚನೆಗಳ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಆ ಕಾರ್ಯ ಆರಂಭವಾಗಿರಲಿಲ್ಲ. ಆದರೆ, ಇದೀಗ ನ್ಯಾಯಾಲಯದ ಸೂಚನೆಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 17 ಸಾವಿರ ಅರಣ್ಯ ಒತ್ತುವರಿ ತೆರವು ನೋಟಿಸ್ ಸಿದ್ಧಪಡಿಸಿದೆ. ಅಲ್ಲದೆ, ಸುಮಾರು 50 ಸಾವಿರ ರೈತರ ಎತ್ತಂಗಡಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ ಎಂಬುದು ಇಲಾಖೆಯ ಮೂಲಗಳ ಮಾಹಿತಿ.

ರೈತರ ಲಿಂಗನಮಕ್ಕಿ ಚಲೋ

ಆ ಹಿನ್ನೆಲೆಯಲ್ಲೇ ಎರಡು ತಿಂಗಳ ಹಿಂದೆ ಅರಣ್ಯ ಒತ್ತುವರಿ ತೆರವಿಗೆ ಮುನ್ನ ಮಲೆನಾಡಿನ ಶರಾವತಿ ಕಣಿವೆಯ ವಿವಿಧ ಯೋಜನಾ ಸಂತ್ರಸ್ತರು ಸೇರಿದಂತೆ ಎಲ್ಲಾ ಯೋಜನೆಗಳ ಯೋಜನಾ ಸಂತ್ರಸ್ತರಿಗೆ ನ್ಯಾಯಯುತವಾಗಿ ನೀಡಬೇಕಾದ ಭೂಮಿ ಹಕ್ಕು ನೀಡಿ, ಮುಳುಗಡೆಯಾಗದೇ ಉಳಿದಿರುವ ಕೆಪಿಸಿ ಭೂಮಿಯನ್ನು ಮೂಲ ಮಾಲೀಕರಿಗೆ ವಾಪಸ್ ಕೊಡಿ, 2012ರಲ್ಲಿ ರಹಸ್ಯ ಕಾರ್ಯಾಚರಣೆ ಮೂಲಕ ದಾಖಲೆ ತಿದ್ದುಪಡಿ ಮಾಡಿ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸಿಕೊಂಡಿರುವ ಸಂತ್ರಸ್ತರು ಸೇರಿ ಬಡ ರೈತರು ನೆಲೆಕಂಡುಕೊಂಡಿರುವ 2 ಲಕ್ಷ ಎಕರೆ ಭೂಮಿಯ ಜಂಟಿ ಸರ್ವೆ ಮಾಡಿಸಿ ಭೂಮಿಯ ವಾಸ್ತವಾಂಶದ ಮೇಲೆ ಹಂಚಿಕೆ ಮಾಡಿ ಎಂಬುದೂ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ನೂರಾರು ರೈತರು ಸಾಗರದಿಂದ ಲಿಂಗನಮಕ್ಕಿ ಜಲಾಶಯ ಚಲೋ ನಡೆಸಿದ್ದರು.

ಆ ಬಳಿಕ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮುಳುಗಡೆ ಸಂತ್ರಸ್ತರು ಸೇರಿದಂತೆ ಮಲೆನಾಡಿನ ಭೂಮಿ ಬಿಕ್ಕಟ್ಟಿನ ಕುರಿತು ಸಭೆ ನಡೆದಿತ್ತು.

ಆದರೆ, ಸಭೆಯ ಫಲಶೃತಿಗೆ ಮುನ್ನವೇ ಇದೀಗ ಅರಣ್ಯ ಇಲಾಖೆ ಬರೋಬ್ಬರಿ 17 ಸಾವಿರ ಒತ್ತುವರಿದಾರರನ್ನು ಎತ್ತಂಗಡಿ ಮಾಡಲು ಮುಂದಾಗಿದೆ.

ಸಂತ್ರಸ್ತರ ಹೋರಾಟ ತೀವ್ರಗೊಳ್ಳಲಿದೆ

ಆ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಲಿಂಗನಮಕ್ಕಿ ಚಲೋ ಹೋರಾಟದ ನೇತೃತ್ವ ವಹಿಸಿದ ರೈತ ಮುಖಂಡರಲ್ಲಿ ಒಬ್ಬರಾದ ಎಚ್ ಗಣಪತಿಯಪ್ಪ ಸ್ಥಾಪಿತ ರಾಜ್ಯ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಅವರು, “ಸರ್ಕಾರ ಶರಾವತಿ ಸೇರಿದಂತೆ ವಿವಿಧ ಯೋಜನೆಗಳ ಸಂತ್ರಸ್ತರೇ ಅತಿ ಹೆಚ್ಚು ಇರುವ ಒತ್ತುವರಿದಾರರ ವಿಷಯದಲ್ಲಿ ಮಾನವೀಯತೆಯಿಂದ ವರ್ತಿಸಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 75 ವರ್ಷಗಳಿಂದ ನಿರಂತರ ಮುಳುಗಡೆ ಮತ್ತು ಅಭಯಾರಣ್ಯಗಳ ಕರಾಳ ಇತಿಹಾಸವೇ ಇದೆ. ಸರ್ಕಾರವೇ ಮುಳುಗಿಸಿದ, ಎತ್ತಂಗಡಿ ಮಾಡಿದ ಆ ಜನಗಳನ್ನು ಅವರು ನೆಲೆಕಳೆದುಕೊಂಡಿರುವ ಭೂಮಿಯನ್ನೇ ಮತ್ತೆ ಇಂಡೀಕರಣ ಮಾಡಿ, ಅರಣ್ಯ ಭೂಮಿ ಎಂದು ದಾಖಲೆ ತಿದ್ದುಪಡಿ ಮಾಡಿ ಈಗ ಮತ್ತೆ ಎತ್ತಂಗಡಿಗೆ ನೋಟಿಸ್ ಕೊಟ್ಟು ಎತ್ತಂಗಡಿ ಮಾಡಿಸಿ ಬೀದಿ ಪಾಲು ಮಾಡಲು ರೈತರು ಬಿಡುವುದಿಲ್ಲ. ಈ ಬಾರಿ ನಾವು ನಿರ್ಣಾಯಕ ಹೋರಾಟಕ್ಕೆ ನಿಂತಿದ್ಧೇವೆ. ಸರ್ಕಾರ ಮಲೆನಾಡಿನ ಬಡ ರೈತರ ಮೇಲೆ ಪ್ರಹಾರ ನಡೆಸುವ ಪ್ರಯತ್ನಗಳು ಸರಿಯಲ್ಲ. ಹಾಗಾಗಿ ಕೂಡಲೇ ಒತ್ತುವರಿ ತೆರವು ನೋಟಿಸ್ ರದ್ದುಪಡಿಸಿ , ಮೊದಲು ದಶಕಗಳ ಸಮಸ್ಯೆ ಬಗೆಹರಿಸಬೇಕು. ನಮ್ಮ ಹೋರಾಟ ನಿಂತಿಲ್ಲ. ನೋಟಿಸ್ ಬಂದರೆ ಮತ್ತೆ ಹೋರಾಟ ಭುಗಿಲೇಳಲಿದೆ” ಎಂದರು.

ಒಟ್ಟಾರೆ, ಒಂದು ಕಡೆ ಏಳೆಂಟು ದಶಕದ ಮುಳುಗಡೆ ಸಂತ್ರಸ್ತರ ಭೂಮಿಯ ಹಕ್ಕಿನ ಪ್ರಶ್ನೆ ಇನ್ನೂ ಜಟಿಲವಾಗಿರುವಾಗಲೇ ಅರಣ್ಯ ಇಲಾಖೆ ಒತ್ತುವರಿ ತೆರವಿಗೆ ಸಮರೋಪಾದಿ ಕಾರ್ಯಾಚರಣೆಗೆ ಸಜ್ಜಾಗುತ್ತಿರುವುದು ಮಲೆನಾಡಿನಲ್ಲಿ ಆತಂಕ ಹೆಚ್ಚಿಸಿದೆ.

Tags:    

Similar News