ಮಳಲಿ ಮಸೀದಿ ವಿವಾದ: ವಿಚಾರಣೆ ಫೆ.17 ಕ್ಕೆ ಮುಂದೂಡಿಕೆ
ಮಳಲಿ ಮಸೀದಿಯಲ್ಲೂ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿದ ಮಾದರಿಯ ಸಮೀಕ್ಷೆ ನಡೆಸಲು ಸಲ್ಲಿಸಿರುವ ಅರ್ಜಿಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಇಂದು ವಿಚಾರಣೆ ನಡೆಸಿದೆ
ಮಂಗಳೂರು: ಸುಮಾರು 6 ಶತಮಾನಗಳ ಇತಿಹಾಸವಿರುವ ಮಳಲಿ ಮಸೀದಿಯಲ್ಲೂ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿದ ಮಾದರಿಯ ಸಮೀಕ್ಷೆ ನಡೆಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಇಂದು(ಫೆ.8) ವಿಚಾರಣೆ ನಡೆಸಿದೆ.
ಪ್ರಕರಣ ಮಂಗಳವಾರ ಬೆಳಗ್ಗೆ ವಿಚಾರಣೆಗೆ ಬಂದಾಗ ನ್ಯಾಯಾಧೀಶೆ ನಿಖಿತಾ ಅಕ್ಕಿ ಅವರು ಗುರುವಾರ ವಿಚಾರಣೆ ನಡೆಸಲು ತೀರ್ಮಾನಿಸಿದ್ದರು. ಅದರಂತೆ, ಇಂದು ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಫೆ.17 ಕ್ಕೆ ಮುಂದೂಡಿದೆ.
ಮಸೀದಿ ಸಮೀಕ್ಷೆ ನಡೆಸುವ ಸಂಬಂಧ ನ್ಯಾಯಾಲಯ ಅಡ್ವೊಕೇಟ್ ಕಮಿಷನರ್ ಅವರನ್ನು ನೇಮಿಸಿ ಅವರಿಗೆ ತಜ್ಞರು ಅಥವಾ ಪುರಾತತ್ವ ಇಲಾಖೆಯ ಅಧಿಕಾರಿಗಳು ನೆರವು ಒದಗಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರರಾದ ಧನಂಜಯ್ ಹಾಗೂ ಇನ್ನಿತರರು ನ್ಯಾಯವಾದಿ ಚಿದಾನಂದ ಎಂ ಕೆದಿಲಾಯ ಮೂಲಕ ಅರ್ಜಿ ಸಲ್ಲಿಸಿದ್ದು, ಮಳಲಿಪೇಟೆ ಜುಮ್ಮಾ ಮಸೀದಿಯನ್ನು ಪ್ರತಿವಾದಿಯಾಗಿಸಲಾಗಿದೆ.
ಮಳಲಿ ಮಸೀದಿಯ ಹಳೆಯ ಕಟ್ಟಡ ಪುರಾತನ ದೇವಾಲಯ ಎಂದು ವಾದಿಸಿರುವ ಅರ್ಜಿದಾರರು, ʼಅದು ದೇವಾಲಯದ ಗರ್ಭಗುಡಿಯಾಗಿದೆ. ಅಲ್ಲಿನ ವಾಸ್ತುಶಿಲ್ಪ, ಗೋಡೆ, ಕೆತ್ತನೆಗಳು ಮತ್ತು ಐತಿಹಾಸಿಕ ಸ್ವರೂಪವನ್ನು ಆಧರಿಸಿ ವರದಿ ನೀಡಬೇಕುʼ ಎಂದು ಮನವಿ ಮಾಡಿದ್ದಾರೆ.
ಮಸೀದಿಯ ಅಡಿಯಲ್ಲಿ ಉತ್ಖನನ ನಡೆಸಿ ಅಲ್ಲಿ ಚಾರಿತ್ರಿಕ ಕುರುಹುಗಳಿವೆಯೇ? ಪ್ರತಿಮೆಗಳಿವೆಯೇ? ಎಂಬ ಬಗ್ಗೆ ವರದಿ ತಿಳಿಸಬೇಕು. ಸ್ಥಳದಲ್ಲಿರುವ ಕಟ್ಟಡದ ಕಾಲಮಾನದ ಕುರಿತು ವರದಿ ಮಾಡಬೇಕು. ಇಡೀ ಕಟ್ಟಡದ ಅಥವಾ ಅಲ್ಲಿ ಇರಬಹುದಾದ ಮತ್ತಾವುದೇ ಸ್ಮಾರಕಗಳ ಎಲ್ಲಾ ಸ್ವರೂಪದ ಬಗ್ಗೆ ವೈಜ್ಞಾನಿಕ ವರದಿ ನೀಡಬೇಕು ಎಂದು ಅರ್ಜಿದಾರರು ಹೇಳಿದ್ದಾರೆ.
2022ರಲ್ಲಿ ಮಸೀದಿಯ ದುರಸ್ತಿ ನಡೆಯುತ್ತಿದ್ದ ವೇಳೆ ಕಟ್ಟಡವನ್ನು ಭಾಗಶಃ ಕೆಡವಲಾಗಿದ್ದು, ಪುರಾತನ ಮಸೀದಿಯು ಕರಾವಳಿ ಭಾಗದಲ್ಲಿ ಕಂಡು ಬರುವ ಹಳೆಯ ದೇವಸ್ಥಾನ ಕಟ್ಟಡಗಳ ಮಾದರಿಯಲ್ಲೇ ಇರುವುದನ್ನು ಮುಂದಿಟ್ಟು ಹಿಂದೂ ಸಂಘಟನೆಗಳು ವಿವಾದ ಸೃಷ್ಟಿಸಿದ್ದವು. ಮಸೀದಿಯ ಒಳಗೆ ಶಿವನ ಸನ್ನಿಧಾನ ಇದೆ, ಹಾಗಾಗಿ, ದುರಸ್ತಿ ಕಾಮಗಾರಿ ಸ್ಥಗಿತಗೊಳಿಸಿ ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ಕೋರಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು.
ಮಳಲಿ ಮಸೀದಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಾಗಿದೆ ಎಂಬ ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೇರಿದೆ ಈ ಕುರಿತು ಹೈಕೋರ್ಟ್ ಆದೇಶ ಬಂದ ಬಳಿಕವಷ್ಟೇ ಮಸೀದಿಯ ಸರ್ವೇ ನಡೆಸುವ ಅವಕಾಶದ ಕುರಿತು ವಾದ ಮಂಡಿಸಲು ಸಾಧ್ಯ. ಹೈಕೋರ್ಟ್ ಆದೇಶ ಬರುವವರೆಗೆ ಸರ್ವೇಗೆ ಸಂಬಂಧಿಸಿದ ವಾದ ವಿವಾದವನ್ನು ಮುಂದೂಡಬೇಕು ಎಂದು ಮಸೀದಿ ಪರ ವಕೀಲರು ವಾದಿಸಿದ್ದಾರೆ.