ಮಹಾರಾಷ್ಟ್ರ ಭೀಕರ ಮಳೆ | ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ; ಜನಜೀವನ ಅಸ್ತವ್ಯಸ್ಥ

Update: 2024-07-27 07:20 GMT

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭೀಕರ ಮಳೆ ಸುರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ, ದೂದಗಂಗಾ, ವೇದಗಂಗಾ, ಘಟಪ್ರಭಾ ನದಿ ಅಬ್ಬರ ಜೋರಾಗಿದ್ದು, ನದಿ ಪಾತ್ರದ ಜನರು ಪ್ರವಾಹದ ಆತಂಕ ಎದುರಿಸುತ್ತಿದ್ದಾರೆ.

ಘಟಪ್ರಭಾ ನದಿ ಪ್ರವಾಹದಿಂದ ಗೋಕಾಕ್ ನಗರದ ಬಳಿಯಿರುವ ಸಂಕೇಶ್ವರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆ ಮುಳುಗಡೆಯಾಗಿದೆ. ಇದರಿಂದ ಸಂಕೇಶ್ವರ-ಧಾರವಾಡ ರಾಜ್ಯ ಹೆದ್ದಾರಿ ಬಂದ್​ ಆಗಿದೆ. ಲೋಳಸೂರ ಸೇತುವೆ ಮೇಲೆ ನದಿ ನೀರು ರಭಸವಾಗಿ ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆಯ ಎರಡೂ ಕಡೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ.

ಗೋಕಾಕ್ ನಗರದ ಮಟನ್ ಮಾರ್ಕೆಟ್, ಹಳೆ ದನದ ಪೇಟೆ, ಕುಂಬಾರ ಗಲ್ಲಿಗೆ ನೀರು ನುಗ್ಗಿದೆ. ಅಂಗಡಿಗಳ ಮಾಲೀಕರು ಕ್ರೂಸರ್, ಆಟೋದಲ್ಲಿ ಸಾಮಗ್ರಿಗಳನ್ನು ಬೇರೆ ಕಡೆ ಸಾಗಿಸುತ್ತಿದ್ದಾರೆ. ಘಟಪ್ರಭಾ ಒಳಹರಿವಿನ ಪ್ರಮಾಣ ಸದ್ಯ 80 ಸಾವಿರ ಕ್ಯೂಸೆಕ್ ತಲುಪಿದೆ.

ಕೃಷ್ಣಾ ನದಿ ತಟದಲ್ಲಿ ಪ್ರವಾಹದ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದೋಣಿಯಲ್ಲಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಕಾಗವಾಡ ತಾಲೂಕಿನ ಕಮತಾ ತೋಟದ ಜನ ಕೈ ದೋಣಿ ಮೊರೆ ಹೋಗಿದ್ದಾರೆ. ದೋಣಿಯಲ್ಲಿ ಬೈಕ್‌ ಹಾಗೂ ಎಮ್ಮೆಗಳನ್ನು ಹಾಕಿಕೊಂಡು ಜನ ತೆರಳುತ್ತಿದ್ದಾರೆ. ಚೂರು ಆಯ ತಪ್ಪಿದರೂ ಜನರು ಕೃಷ್ಣಾ ನದಿ ಪಾಲಾಗುವ ಸಾಧ್ಯತೆ ಇದೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಶಂಕರಲಿಂಗ ದೇವಸ್ಥಾನದ ಒಳಗೆ ಹಿರಣ್ಯಕೇಶಿ ನದಿ ನೀರು ನುಗ್ಗಿದೆ. ದೇವಸ್ಥಾನದ ಅರ್ಚಕರು ನದಿಯ ನೀರಿನಲ್ಲಿಯೇ ಪೂಜೆ ನೇರವೇರಿಸಿದರು. ಅಲ್ಲದೆ ದೇವಸ್ಥಾನದ ಸುತ್ತಮುತ್ತಲಿನ 40ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ಕೋಯ್ನಾ ಜಲಾಶಯದಿಂದ ಕೃಷ್ಣ ನದಿಗೆ ನೀರು ಬರುತ್ತಿರುವುದರಿಂದ ಗೋಕಾಕ್​, ಚಿಕ್ಕೋಡಿ ತಾಲೂಕಿನ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಒಂದೇ ದಿನ ಬೆಳಗಾವಿ ಜಿಲ್ಲೆಯ 6 ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಈವರೆಗೆ ಒಟ್ಟು 36 ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ.

ಗೋಕಾಕ್‌ನಲ್ಲಿ ಐದು ಸೇತುವೆಗಳು, ಮೂಡಲಗಿ ತಾಲೂಕಿನಲ್ಲಿ ಐದು ಸೇತುವೆ ಜಲಾವೃತಗೊಂಡಿವೆ. ಹುಕ್ಕೇರಿ ತಾಲೂಕಿನ ಐದು, ಚಿಕ್ಕೋಡಿ ತಾಲೂಕಿನ ನಾಲ್ಕು, ನಿಪ್ಪಾಣಿ ತಾಲೂಕಿನ ನಾಲ್ಕು, ರಾಯಬಾಗ ತಾಲೂಕಿನ ಮೂರು, ಖಾನಾಪುರ ಎರಡು, ಕಾಗವಾಡ ಒಂದು, ಅಥಣಿ ಒಂದು ಸೇತುವೆ ಜಲಾವೃತಗೊಂಡಿವೆ. ಇದರಿಂದ ಜಿಲ್ಲೆಯ 60 ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಮ್ಮದ್​​ ರೋಷನ್, ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 25 ಮಿ.ಮೀ ದಾಖಲೆಯ ಮಳೆಯಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಬೆಳಗಾವಿ ಜಿಲ್ಲಾಡಳಿತ ಸಿದ್ಧವಿದೆ. ಈಗಾಗಲೇ 427 ಕಡೆ ಕಾಳಜಿ ಕೇಂದ್ರ ಗುರುತಿಸಲಾಗಿದೆ. ಜಿಲ್ಲಾಡಳಿತ ಈಗಾಗಲೆ ಐದು ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆದಿದೆ. ಕಾಳಜಿ ಕೇಂದ್ರಗಳಲ್ಲಿ 200ಕ್ಕೂ ಹೆಚ್ಚು ಜನರಿಗೆ ಆಶ್ರಯ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರಿಗೆ ಉತ್ತಮ ಆಹಾರ ನೀಡಲು ಕ್ರಮಕೈಗೊಳ್ಳಲಾಗುವುದು. ಇಂದಿನಿಂದ ಕಾಳಜಿ ಕೇಂದ್ರಗಳಲ್ಲಿ ಬ್ಲ್ಯಾಂಕೆಟ್​ ನೀಡಲಾಗುವುದು. ಸಂತ್ರಸ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಕಾಳಜಿ ವಹಿಸಲಾಗುತ್ತೆ. ಮಹಾರಾಷ್ಟ್ರದ ಎರಡು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇದೆ. ನಾರಾಯಣಪುರ ಜಲಾಶಯದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.

ಪಶ್ಚಿಮಘಟ್ಟ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ದೂದ್​ಸಾಗರ್ ಮತ್ತು ಸೋನಾಲಿಯಂ ರೈಲು ನಿಲ್ದಾಣಗಳ ಮಧ್ಯೆ ರೈಲು‌ ಹಳಿಗಳ ಮೇಲೆ ತಡರಾತ್ರಿ ಗುಡ್ಡ ಕುಸಿದಿದೆ. ಹಳಿ ಮೇಲೆ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಲೋಂಡಾ ಮಾರ್ಗವಾಗಿ ಬೆಳಗಾವಿಗೆ ಬರುವ ರೈಲುಗಳು ತಡವಾಗಿ ಚಲಿಸುತ್ತಿವೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ರೈಲ್ವೆ ಇಲಾಖೆ ಬಸ್ ವ್ಯವಸ್ಥೆ ಮಾಡಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಪ್ರವಾಹ ಸಹಾಯವಾಣಿ ಆರಂಭಿಸಿದೆ. ಪ್ರವಾಹ ಸಹಾಯವಾಣಿ ಸಂಖ್ಯೆ 0831-2407290, ಪೊಲೀಸ್ ಸಹಾಯವಾಣಿ ಸಂಖ್ಯೆ 08321-2474054, ತುರ್ತು ನೆರವಿಗಾಗಿ 112 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ​

Tags:    

Similar News