ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮೈಸೂರಿನ ಮಧುಸೂದನ್‌ ಕೆ.ಎಸ್‌ ಆಯ್ಕೆ

ಶಿಕ್ಷಕರಾಗಿ ಅವರು ಸಲ್ಲಿಸಿದ ಸುದೀರ್ಘ ಸೇವೆ, ಶಾಲೆಗಳಲ್ಲಿ ತಂದ ಸುಧಾರಣಾ ಕ್ರಮಗಳು, ಮಕ್ಕಳ ಶೈಕ್ಷಣಿಕ ಹಾಗೂ ಶಿಕ್ಷಣೇತರ ಚಟುವಟಿಕೆಗಳ ಬೆಳವಣಿಗೆಗೆ ಅವರು ರೂಪಿಸಿದ ಕಾರ್ಯಕ್ರಮಗಳನ್ನು ಪರಿಗಣಿಸಿ 2025ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.;

Update: 2025-08-26 10:36 GMT

ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕ ಮಧಸೂದನ್‌ ಕೆ.ಎಸ್‌ 

ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸುವ ಅತ್ಯುತ್ತಮ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಮೈಸೂರು ಜಿಲ್ಲೆ ಹಿನಕಲ್‌ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಧುಸೂದನ್ ಕೆ.ಎಸ್ ಭಾಜನರಾಗಿದ್ದಾರೆ.

ಶಿಕ್ಷಕರಾಗಿ ಅವರು ಸಲ್ಲಿಸಿದ ಸುದೀರ್ಘ ಸೇವೆ, ಶಾಲೆಗಳಲ್ಲಿ ತಂದ ಸುಧಾರಣಾ ಕ್ರಮಗಳು, ಮಕ್ಕಳ ಶೈಕ್ಷಣಿಕ ಹಾಗೂ ಶಿಕ್ಷಣೇತರ ಚಟುವಟಿಕೆಗಳ ಬೆಳವಣಿಗೆಗೆ ಅವರು ರೂಪಿಸಿದ ಕಾರ್ಯಕ್ರಮಗಳನ್ನು ಪರಿಗಣಿಸಿ 2025ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ಪ್ರಮಾಣ ಪತ್ರ, ಬೆಳ್ಳಿ ಪದಕ ಹಾಗೂ 50,000 ರುಪಾಯಿ ನಗದು ಒಳಗೊಂಡಿರುತ್ತದೆ. ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ವಿವಿಧ ರಾಜ್ಯಗಳಿಂದ ಒಟ್ಟು 48 ಶಿಕ್ಷಕರು ಆಯ್ಕೆಯಾಗಿದ್ದು, ಅವರೆಲ್ಲರಿಗೂ ಸೆ. 5ರಂದು ದೆಹಲಿಯಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಶಸ್ತಿ ಬಗ್ಗೆ ಮಾಹಿತಿ 

ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಕೆಲಸ ಮಾಡುವ ಪ್ರತಿಭಾನ್ವಿತ ಶಿಕ್ಷಕರಿಗೆ ಸಾರ್ವಜನಿಕ ಮನ್ನಣೆ ನೀಡಲು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ( ಶಿಕ್ಷಕರ ದಿನ ) ಭಾರತದ ರಾಷ್ಟ್ರಪತಿಗಳು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡುತ್ತಾರೆ . ಈ ಪ್ರಶಸ್ತಿಯನ್ನು 1958 ರಲ್ಲಿ ಸ್ಥಾಪಿಸಲಾಯಿತು. 2017 ರಿಂದ ರಾಷ್ಟ್ರೀಯ ಪ್ರಶಸ್ತಿಗಳಿಗೆ ಶಿಕ್ಷಕರ ಆಯ್ಕೆಗೆ ಶಿಕ್ಷಣ ಸಚಿವಾಲಯವು ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.

2023ರಲ್ಲಿ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 300 ದಾಟಿತ್ತು, 2025 ರಲ್ಲಿ ಪುರಸ್ಕೃತರ ಸಂಖ್ಯೆಯನ್ನು 50ಕ್ಕೆ ಇಳಿಸಲಾಗಿದೆ. ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯ ವ್ಯಾಪ್ತಿಗೆ ಉನ್ನತ ಶಿಕ್ಷಣ ಇಲಾಖೆ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಶಿಕ್ಷಕರನ್ನು ಸೇರಿಸಲಾಗಿದೆ. 50 ಶಾಲಾ ಶಿಕ್ಷಕರು, ಉನ್ನತ ಶಿಕ್ಷಣದಿಂದ 13 ಶಿಕ್ಷಕರು ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದಿಂದ 12 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ತಂತ್ರಜ್ಞಾನದ ಬಳಕೆ, ನವೀನ ಶಿಕ್ಷಣಶಾಸ್ತ್ರ ಮತ್ತು ಆನಂದದಾಯಕ ಕಲಿಕೆ, ಕಲಿಕಾ ಸಾಮಗ್ರಿ ಮತ್ತು ಮಾರ್ಗದರ್ಶನ, ಆಡಳಿತ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆ ಕುರಿತು ಅಂಕಗಳನ್ನು ನಿಗದಿಗೊಳಿಸಲಾಗಿದೆ. ಇವುಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತದೆ.

Tags:    

Similar News