Lynching in Mangalore: ಮಂಗಳೂರಿನಲ್ಲಿ ಅಶ್ರಫ್ ಗುಂಪು ಹತ್ಯೆ: ʼದೇಶ ವಿರೋಧಿʼ ಘೋಷಣೆ ನಿಜವೇ?
ಮಂಗಳೂರು ಸಮೀಪದ ಕುಡುಪುವಿನಲ್ಲಿ ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿಯ ಯುವಕ ಮೊಹಮದ್ ಅಶ್ರಫ್ ಗುಂಪು ಹಲ್ಲೆಯಿಂದ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ವ್ಯಾಪಕ ಆಕ್ರೋಶ, ಪರ-ವಿರೋಧ ಚರ್ಚೆಗಳು ಮತ್ತು ರಾಜಕೀಯ ಬೆರೆಸುವಿಕೆಯೂ ಶುರುವಾಗಿದೆ.;
ಮಂಗಳೂರು ಸಮೀಪದ ಕುಡುಪುವಿನಲ್ಲಿ ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿಯ ಯುವಕ ಮೊಹಮದ್ ಅಶ್ರಫ್ ಗುಂಪು ಹಲ್ಲೆಯಿಂದ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ವ್ಯಾಪಕ ಆಕ್ರೋಶ, ಪರ-ವಿರೋಧ ಚರ್ಚೆಗಳು ಮತ್ತು ರಾಜಕೀಯ ಬೆರೆಸುವಿಕೆಯೂ ಶುರುವಾಗಿದೆ.
ಪ್ರಕರಣ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ.ಆರ್. ಸಹಿತ ಮೂವರನ್ನು ಅಮಾನತು ಮಾಡಲಾಗಿದೆ. ಹೆಡ್‌ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಯಲ್ಲಾಲಿಂಗ ಕೂಡಾ ಅಮಾನತಾಗಿದ್ದಾರೆ. ಘಟನೆಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದು ಮತ್ತು ಅದರ ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಲುಪಿಸದಿರುವುದು ಅಮಾನತಿಗೆ ಕಾರಣ ಎನ್ನಲಾಗಿದೆ.
ಘಟನೆ ಏನು?
ಏಪ್ರಿಲ್ 27ರ ಸಂಜೆ ಕುಡುಪುವಿನ ಭಟ್ರ ಕಲ್ಲುರ್ಟಿ ದೇವಸ್ಥಾನದ ಬಳಿ ಸಾಮ್ರಾಟ್ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ತಂಡವೊಂದು ಅಶ್ರಫ್ ಮೇಲೆ ಹಲ್ಲೆ ನಡೆಸಿತ್ತು. ತೀವ್ರ ಹಲ್ಲೆಗೊಳಗಾದ ಅಶ್ರಫ್ ಮೃತಪಟ್ಟಿದ್ದರು. ಪ್ರಕರಣ ಸಂಬಂಧಿಸಿ ಏ. 29ರಂದು ಮಂಗಳೂರು ಪೊಲೀಸರು 20 ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಸ್ಥಳೀಯ ರಿಕ್ಷಾ ಚಾಲಕ ಸಚಿನ್ ಟಿ (26), ದೇವದಾಸ್ (50), ಮಂಜುನಾಥ್ (32), ಸಾಯಿದೀಪ್ (29), ನಿತೇಶ್ ಕುಮಾರ್ ಯಾನೆ ಸಂತೋಷ್ (33), ದೀಕ್ಷಿತ್ ಕುಮಾರ್, ಸಂದೀಪ್ (23), ವಿವಿಯನ್ ಆಳ್ವಾರೀಸ್ (41), ಶ್ರೀದತ್ತ (32), ರಾಹುಲ್ (23), ಪ್ರದೀಪ್ ಕುಮಾರ್ (35), ಮನೀಷ್ ಶೆಟ್ಟಿ (21), ಧನುಷ್ (31), ದೀಕ್ಷಿತ್ (27), ಕಿಶೋರ್ ಕುಮಾರ್ (37) , ಯತಿರಾಜ್, ಸಚಿನ್, ಅನಿಲ್, ಸುಶಾಂತ್ ಹಾಗೂ ಆದರ್ಶ್ ಬಂಧಿತರು.
‘ಘಟನೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆಯೊಬ್ಬರ ಪತಿ ಕೂಡಾ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆ ಬಗ್ಗೆ ತನಿಖೆ ಮುಂದುವರಿದಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ತಿರುವು ಪಡೆಯುತ್ತಿದ್ದ ಪ್ರಕರಣ
"ಅಶ್ರಫ್ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಬಳಿಕ ಆತನ ಮೇಲೆಯೇ ಹಲ್ಲೆ ಆರೋಪಿಗಳು ದೇಶವಿರೋಧಿ ಘೋಷಣೆಯ ಆರೋಪ ಹೊರಿಸಿದ್ದಾರೆ. ಆತ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಕ್ಕಾಗಿ ಹಲ್ಲೆ ನಡೆಸಿದ್ದೇವೆ," ಎಂದು ಆರೋಪಿಗಳು ಹೇಳಿದ್ದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಈ ಹೇಳಿಕೆಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಶ್ರಫ್ ಯಾರು?
ಮೃತ ಅಶ್ರಫ್ ಮೂಲತಃ ಕೇರಳದ ವಯನಾಡಿನ ಪುಲ್ಪಳ್ಳಿಯವನು. ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಊರೂರು ಅಲೆಯುತ್ತಿದ್ದ ಆತ ಎಲ್ಲೆಂದರಲ್ಲಿ ವಾಸಿಸುತ್ತಿದ್ದ. ʼಅವನ ಪಾಡಿಗೆ ಇರುತ್ತಿದ್ದ. ಯಾರ ತಂಟೆಗೂ ಹೋಗುತ್ತಿರಲಿಲ್ಲ. ಅವನು ಈ ರೀತಿ ಹಲ್ಲೆಗೊಳಗಾಗಿ ಸಾವಿಗೀಡಾಗಿರುವುದು ಆಘಾತ ತಂದಿದೆʼ ಎಂದು ಅಶ್ರಫ್ ಅವರ ತಂದೆ ಮುಚ್ಚಿಕದನ್ ಕುಂಜೀತುಕುಟ್ಟಿ ಕೇರಳದ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ನಂತರ ನಗರದ ಜೀನತ್ ಭಕ್ಷ್ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮೃತದೇಹವನ್ನು ಅಶ್ರಫ್ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಶ್ರಪ್ ಸಹೋದರ ಅಬ್ದುಲ್ ಜಬ್ಬಾರ್, " ನನ್ನ ಸಹೋದರ ಅಶ್ರಫ್‌ನಿಗೆ ಹಲವು ವರ್ಷಗಳಿಂದ ಮಾನಸಿಕ ಸಮಸ್ಯೆ ಇತ್ತು. ಆತ ಅವಿವಾಹಿತ. ಮಾನಸಿಕ ಸಮಸ್ಯೆ ಇದ್ದುದರಿಂದ ಊರೂರು ಸುತ್ತುತ್ತಿದ್ದ. ನಾವು ಆತನ ಸಮಸ್ಯೆಗೆ ಚಿಕಿತ್ಸೆ ಕೊಡಿಸಿದ್ದೆವು. ಆದರೂ ಆತನ ಆರೋಗ್ಯ ಸಮಸ್ಯೆ ನಿವಾರಣೆ ಆಗಿರಲಿಲ್ಲ," ಎಂದರು.
"ನಾನು ಎರ್ನಾಕುಲಂನಲ್ಲಿ ವಾಸಿಸುತ್ತಿದ್ದೇನೆ. ಅಲ್ಲಿಗೆ ಅಣ್ಣ ಬರುತಿದ್ದ. ಬಂದಾಗ ಬಟ್ಟೆ, ಮೊಬೈಲ್ ಕೊಡುತ್ತಿದ್ದೆ. ಅದನ್ನು ಎಲ್ಲೆಲ್ಲೋ ಬಿಟ್ಟು ಬರುತ್ತಿದ್ದ. ನನ್ನ ಹೆಸರಿನಲ್ಲೇ ನಾನು ಅವನಿಗೆ ಸಿಮ್ ತೆಗೆದುಕೊಡುತ್ತಿದ್ದೆ. ಇತ್ತೀಚೆಗೆ ನನ್ನ ಬಳಿ ಮಂಗಳೂರಿನಲ್ಲಿ ಇದ್ದೇನೆ ಎಂದಿದ್ದ. ಪುಲ್ಪಳ್ಳಿಯಲ್ಲಿರುವ ನಮ್ಮ ಮನೆಗೆ ಅಮ್ಮನನ್ನು ನೋಡಲು ಬರುತ್ತಿದ್ದ. ಕಳೆದ ಈದುಲ್ ಫಿತ್ರ್ ಗೆ ಮನೆಗೆ ಬಂದಿದ್ದ. ಹಲವು ವರ್ಷಗಳಿಂದ ಮಂಗಳೂರಿನಲ್ಲೇ ವಾಸ ಮಾಡುತ್ತಿದ್ದ," ಎಂದು ಜಬ್ಬಾರ್ ಹೇಳಿದ್ದಾರೆ.
ತೀವ್ರ ಸಂಕಷ್ಟದಲ್ಲಿ ಅಶ್ರಫ್ ಕುಟುಂಬ
ವಯನಾಡಿನ ಪುಲ್ಪಳ್ಳಿಯ ಸಾಂದೀಪನಿ ಕಾಲೊನಿಯಲ್ಲಿ ಅಶ್ರಫ್ ಅವರ ಕುಟುಂಬ ವಾಸಿಸುತ್ತಿದೆ. ಇನ್ನೊಬ್ಬ ಸಹೋದರ ಅಬ್ದುಲ್ ಹಮೀದ್ ಪುಲ್ಪಳ್ಳಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಅದಕ್ಕೂ ಮೊದಲು ಈ ಕುಟುಂಬಕ್ಕೆ ಮಲಪುರಂ ಜಿಲ್ಲೆಯ ಕೋಟಕ್ಕಲ್‌ನಲ್ಲಿ ಆಸ್ತಿ, ಮನೆ ಇತ್ತು. ಸಾಲದ ಕಾರಣದಿಂದ ಅದು ಬ್ಯಾಂಕ್ ಜಫ್ತಿಗೆ ಒಳಗಾಯಿತು. ಆ ಬಳಿಕ ಅವರ ಕುಟುಂಬ ಜೀವನೋಪಾಯಕ್ಕಾಗಿ ವಯನಾಡಿನ ಪುಲ್ಪಳ್ಳಿಗೆ ಬಂದು ನೆಲೆಸಿತ್ತು. ಕುಟುಂಬ ಆರ್ಥಿಕ ಸಂಕಷ್ಟದಿಂದ ಇನ್ನೂ ಹೊರಬಂದಿಲ್ಲ. ಅಶ್ರಫ್ ಹತ್ಯೆಯಾಗುವ ನಾಲ್ಕು ದಿನಗಳ ಮೊದಲು ಅವರ ಅಜ್ಜಿ ತೀರಿಕೊಂಡಿದ್ದರು. ಇದೀಗ ಅಶ್ರಫ್ ಅವರ ಸಾವು ಕುಟುಂಬವನ್ನು ಮತ್ತಷ್ಟು ದುಃಖಕ್ಕೆ ತಳ್ಳಿದೆ.
ಮಂಗಳೂರಿನಲ್ಲಿ ಗುಂಪು ದಾಳಿ ಪ್ರಕರಣಗಳು
2023ರ ಜುಲೈ 28ರಂದು ಬಿ.ಸಿ ರೋಡಿನಲ್ಲಿ ಡಿವೈಎಸ್‌ಪಿ ಕಚೇರಿಯ ಪೊಲೀಸ್ ಸಿಬ್ಬಂದಿ ಕುಮಾರ್ ಹನುಮಂತಪ್ಪ ಹಾಗೂ ಕುಟುಂಬದ ಮೇಲೆ ದಾಳಿ ನಡೆದಿತ್ತು. ಹನುಮಂತಪ್ಪ ಅವರನ್ನು ಬ್ಯಾರಿ ಎಂದು ನಿಂದಿಸಿದ ಗುಂಪು ಹಿಂದೂ ಹುಡುಗಿಯರ (ಹನುಮಂತಪ್ಪ ಅವರ ಪತ್ನಿ ಮತ್ತು ನಾದಿನಿಯನ್ನು ಉದ್ದೇಶಿಸಿ) ಜೊತೆ ತಿರುಗಾಡುತ್ತಿದ್ದೀಯಾ ಎಂದು ಅವಾಚ್ಯವಾಗಿ ನಿಂದಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ ಆಚಾರ್ಯ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.
ಗಡ್ಡಬಿಟ್ಟಿದ್ದ ಎಂಬ ಕಾರಣಕ್ಕೆ ಮುಸ್ಲಿಂ ಎಂದು ಭಾವಿಸಿ ಹರೀಶ್ ಪೂಜಾರಿ ಎಂಬುವವರನ್ನು ಬಂಟ್ವಾಳದಲ್ಲಿ ಥಳಿಸಿ ಕೊಲೆ ಮಾಡಲಾಗಿತ್ತು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಅವರು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನೆನಪಿಸಿದರು. ಅಶ್ರಫ್ ಪ್ರಕರಣದ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಇತ್ತ ಬಿಜೆಪಿ ಶಾಸಕ ಭರತ್ ಶೆಟ್ಟಿ, ʼದೇಶ ವಿರೋಧಿ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಯುವಕರನ್ನು ಕೇಸಿನಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ರಾಜಕೀಯ ಒತ್ತಡವನ್ನೂ ಪೊಲೀಸರ ಮೇಲೆ ಹಾಕಲಾಗುತ್ತಿದೆʼ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಪರಸ್ಪರ ದ್ವೇಷ ಭಾಷಣಗಳು, ಪ್ರಚೋದನೆಗಳು, ಭಾರತ- ಪಾಕಿಸ್ತಾನದ ನಡುವೆ ನೆಲೆಸಿದ ಉದ್ವಿಘ್ನ ಸ್ಥಿತಿ ಎಲ್ಲವೂ ಸೇರಿ ಸ್ಥಳೀಯ ಮಟ್ಟದಲ್ಲಿ ಗುಂಪು ಹತ್ಯೆ, ಅನೈತಿಕ ಪೊಲೀಸ್‌ಗಿರಿಯಂತಹ ದುಷ್ಕೃತ್ಯಗಳಿಗೆ ಕಾರಣವಾಗುತ್ತಿದೆ.