ಲೈಂಗಿಕ ದೌರ್ಜನ್ಯ ಪ್ರಕರಣ | ಎಸ್‌ಐಟಿ ಮುಂದೆ ಹಾಜರಾಗದೇ ಇದ್ದರೆ ರೇವಣ್ಣ ಅರೆಸ್ಟ್: ಡಾ ಜಿ ಪರಮೇಶ್ವರ್
ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಎಐಟಿ ರಚನೆ ಆಗಿದ್ದು, ತನಿಖೆ ಚುರುಕುಗೊಂಡಿದೆ.;
ಕಲಬುರಗಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹೆಚ್.ಡಿ ರೇವಣ್ಣ ಹಾಗೂ ಎರಡನೇ ಆರೋಪಿ ಪ್ರಜ್ವಲ್ ರೇವಣ್ಣ ಇಬ್ಬರಿಗೂ ವಿಚರಾಣೆಗೆ ಹಾಜರಾಗುವಂತೆ ಎಸ್ ಐಟಿ ನೋಟಿಸ್ ನೀಡಲಾಗಿದೆ. ಗುರುವಾರ(ಏ.2) ಎಚ್.ಡಿ.ರೇವಣ್ಣ ಎಸ್ ಐ ಟಿ ಮುಂದೆ ವಿಚಾರಣೆಗೆ ಹಾಜರಾಗದೇ ಇದ್ದರೆ, ಅವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಎಐಟಿ ರಚನೆ ಆಗಿದ್ದು, ತನಿಖೆ ಚುರುಕುಗೊಂಡಿದೆ ಎಂದರು.
24 ತಾಸಿನೊಳಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ನೋಟಿಸ್ ಜಾರಿ ಮಾಡಿ ಎರಡು ದಿನಗಳಾಗಿದೆ. ಆ ಹಿನ್ನೆಲೆಯಲ್ಲಿ ಆರೋಪಿ ಎಚ್.ಡಿ.ರೇವಣ್ಣ ಎಐಟಿ ಮುಂದೆ ಹಾಜರಾಗದಿದ್ದರೆ ಅವರನ್ನು ಬಂಧಿಸಲಾಗುವುದು ಎಂದರು. ಎರಡನೇ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದು ಸತ್ಯ. ಕೇಂದ್ರ ಸರ್ಕಾರವೇ ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ನೀಡಿದೆ. ಹಾಗಾಗಿ ವಿದೇಶಕ್ಕೆ ತೆರಳಿದ್ದಾರೆ. ಅವರನ್ನು ಶೀಘವೇ ಕರೆ ತರಲಾಗುವುದು ಎಂದರು.
ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟೀಸ್ ನೀಡಲಾಗಿದೆ. ಎಲ್ಲಾ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಬಂದರುಗಳಿಗೂ ನೋಟೀಸ್ ನೀಡಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.