Loksabha Election Results 2024 | ಈ ಫಲಿತಾಂಶ ಯಾರಿಗೆಲ್ಲಾ ನಿರ್ಣಾಯಕ?
ರಾಜ್ಯದ ಮಟ್ಟಿಗೆ ಹಲವು ಘಟಾನುಘಟಿ ನಾಯಕರು ಈ ಬಾರಿ ಲೋಕಸಭಾ ಚುನಾವಣಾ ಕಣದಲ್ಲಿದ್ದು ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಇದು ನಿರ್ಣಾಯಕ ಚುನಾವಣೆ;
ಲೋಕಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 7.30 ರಿಂದಲೇ ಮತ ಎಣಿಕೆ ಆರಂಭವಾಗಿದ್ದು, ದೇಶದ ಅಧಿಕಾರದ ಚುಕ್ಕಾಣಿ ಯಾರ ಕೈಗೆ ಸಿಗಲಿದೆ? ಎಂಬ ನಿರ್ಣಾಯಕ ಚುನಾವಣೆಯ ಹಿನ್ನೆಲೆಯಲ್ಲಿ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.
ರಾಜ್ಯದ ಮಟ್ಟಿಗೆ ಹಲವು ಘಟಾನುಘಟಿ ನಾಯಕರು ಈ ಬಾರಿ ಲೋಕಸಭಾ ಚುನಾವಣಾ ಕಣದಲ್ಲಿದ್ದು ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಇದು ನಿರ್ಣಾಯಕ ಚುನಾವಣೆ. ಕೆಲವು ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶ ಸ್ವತಃ ಕಣದಲ್ಲಿರುವ ಅಭ್ಯರ್ಥಿಗಳ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದ್ದರೆ, ಮತ್ತೆ ಕೆಲವು ಕಡೆ ಅಭ್ಯರ್ಥಿಗಳಿಗಿಂತ ಅವರ ಹಿಂದಿರುವ ಪ್ರಭಾವಿಗಳ ಪಾಲಿಗೆ ಇದು ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿದೆ.
ಮುಖ್ಯವಾಗಿ ರಾಜ್ಯದ ಮೂವರು ಮಾಜಿ ಮುಖ್ಯಮಂತ್ರಿಗಳು ಈ ಚುನಾವಣೆಯಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಈ ಬಾರಿ ಲೋಕಸಭಾ ಕಣಕ್ಕಿಳಿದಿದ್ದು, ಮೂವರ ರಾಜಕೀಯ ಭವಿಷ್ಯವನ್ನು ಈ ಫಲಿತಾಂಶ ನಿರ್ಧರಿಸಲಿದೆ. ಜೊತೆಗೆ ಪ್ರಧಾನಿ ಮೋದಿಯವರ ಸಚಿವ ಸಂಪುಟದಲ್ಲಿ ಆಯಕಟ್ಟಿನ ಖಾತೆ ಹೊಂದಿರುವ ಹಾಗೂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಲ್ಹಾದ ಜೋಷಿ ಅವರ ರಾಜಕೀಯ ಭವಿಷ್ಯ ಕೂಡ ನಿರ್ಧಾರವಾಗಲಿದೆ.
ಮಂಡ್ಯದಿಂದ ಕುಮಾರಸ್ವಾಮಿ
ಹಾಲಿ ಚನ್ನಪಟ್ಟಣ ಶಾಸಕರಾಗಿರುವ ಜೆಡಿಎಸ್ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ದಶಕಗಳಿಂದ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಅಸ್ತಿತ್ವಕ್ಕೇ ಸಂಚಕಾರ ಬಂದಿದೆ ಎಂಬ ಚರ್ಚೆಗಳ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಈ ಚುನಾವಣಾ ಸಮರ ರಾಜಕೀಯವಾಗಿ ಅವರ ವೈಯಕ್ತಿಕ ಭವಿಷ್ಯವನ್ನಷ್ಟೇ ಅಲ್ಲದೆ, ಅವರ ಪಕ್ಷದ ಭವಿಷ್ಯವನ್ನೂ ನಿರ್ಣಯಿಸಲಿದೆ. ಅಲ್ಲದೆ, ಸ್ಥಳೀಯವಾಗಿ ಪಕ್ಷದ ಕೈತಪ್ಪಿಹೋಗುತ್ತಿರುವ ಮಂಡ್ಯ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತೆ ಪುನರುಜ್ಜೀವನಗೊಳಿಸುವ ಉದ್ದೇಶ ಕೂಡ ಕುಮಾರಸ್ವಾಮಿ ಅವರ ಈ ಹೋರಾಟದ ಹಿಂದಿದೆ.
ಆ ಹಿನ್ನೆಲೆಯಲ್ಲಿಯೇ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಸೋಲುಣಿಸಿದ ಕ್ಷೇತ್ರ ಮಂಡ್ಯದಲ್ಲೇ ಕಣಕ್ಕಿಳಿದಿದ್ದಾರೆ. ಕಳೆದುಕೊಂಡಲ್ಲೇ ಗಳಿಸಿಕೊಳ್ಳುವ ಛಲದ ಕುಮಾರಸ್ವಾಮಿ ಅವರ ಈ ಹೋರಾಟಕ್ಕೆ ಇಂದಿನ ಫಲಿತಾಂಶ ಯಾವ ಫಲ ಕೊಡಲಿದೆ ಎಂಬುದು ಅವರೊಬ್ಬರ ರಾಜಕೀಯ ಭವಿಷ್ಯವನ್ನು ಮಾತ್ರವಲ್ಲದೆ, ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಮುಂದಿನ ನಡೆಗಳನ್ನೂ ನಿರ್ಣಯಿಸಲಿದೆ. ಆ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇ ಗೌಡ(ಸ್ಟಾರ್ ಚಂದ್ರು) ಸವಾಲೊಡ್ಡಿದ್ದು, ತೀವ್ರ ಹಣಾಹಣಿಯ ಪೈಪೋಟಿಯಲ್ಲಿ ಜಯ ಯಾರ ಕಡೆಗೆ ವಾಲಲಿದೆ ಎಂಬುದನ್ನು ಕಾದುನೋಡಬೇಕಿದೆ.
ಹಾವೇರಿಯಿಂದ ಬೊಮ್ಮಾಯಿ
ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಪ್ರಮುಖ ಲಿಂಗಾಯತ ಮುಖಂಡ ಬಸವರಾಜ ಬೊಮ್ಮಾಯಿ ಅವರು ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ತಮ್ಮ ತವರು ಜಿಲ್ಲೆಯ ಹಾವೇರಿಯನ್ನೂ ಒಳಗೊಂಡಂತೆ ಪಕ್ಕದ ಗದಗ ಜಿಲ್ಲಾ ವ್ಯಾಪ್ತಿಗೂ ವಿಸ್ತರಿಸಿರುವ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಹ್ಯಾಟ್ರಿಕ್ ಗೆಲುವು ಪಡೆದು ಜನಪ್ರಿಯ ಸಂಸದರಾಗಿ ಗುರುತಿಸಿಕೊಂಡಿದ್ದ ಶಿವಕುಮಾರ್ ಉದಾಸಿ ಅವರು ಈ ಬಾರಿ ಕಣದಿಂದ ಹಿಂದೆ ಸರಿದಿದ್ದರು. ಆ ಹಿನ್ನೆಲೆಯಲ್ಲಿ ಬಿಜೆಪಿ ಅನಿವಾರ್ಯವಾಗಿ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿದೆ. ಹಾಲಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬೊಮ್ಮಾಯಿ ಅವರು ತಮ್ಮ ಶಾಸಕ ಸ್ಥಾನವನ್ನು ಪಣಕ್ಕಿಟ್ಟು ಲೋಕಸಭಾ ಕಣಕ್ಕಿಳಿದಿದ್ದಾರೆ. ಈವರೆಗೆ ಶಿಗ್ಗಾಂವಿ ಕ್ಷೇತ್ರದಿಂದ ನಿರಾಯಾಸವಾಗಿ ಗೆದ್ದು ವಿಧಾನಸಭೆಗೆ ಆಯ್ಕೆಯಾಗುತ್ತಿದ್ದ ಅವರಿಗೆ ಇದೇ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದ ಸವಾಲು ಎದುರಾಗಿದೆ. ರಾಜಕೀಯವಾಗಿ ಈ ಚುನಾವಣೆ ಅವರ ವೈಯಕ್ತಿಕ ರಾಜಕಾರಣದ ನಿರ್ಣಾಯಕ ಸಂಗತಿಯಾಗಿದ್ದು, ಗೆದ್ದರೆ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಪಡೆಯಲಿದ್ದಾರೆ. ಸೋತಲ್ಲಿ ಶಾಸಕರಾಗಿ ಮುಂದುವರಿಯುತ್ತಾರಾದರೋ ಪಕ್ಷದಲ್ಲಿ ಅವರ ಮಹತ್ವ ಕುಗ್ಗಲಿದೆ.
ಮಾಜಿ ಮುಖ್ಯಮಂತ್ರಿಯ ವಿರುದ್ಧ ಕಾಂಗ್ರೆಸ್ ಆನಂದ ಗಡ್ಡದೇವರ ಮಠ ಅವರನ್ನು ಕಣಕ್ಕಿಳಿಸಿದೆ. ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದರೂ ತಂದೆ ಗಡ್ಡಯ್ಯ ಗಡ್ಡದೇವರಮಠ ಅವರ ಪ್ರಭಾವ ಕ್ಷೇತ್ರದಲ್ಲಿದೆ. ಜೊತೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ಹಾಗಾಗಿ ಬೊಮ್ಮಾಯಿ ಅವರಿಗೆ ಇಲ್ಲಿ ಕಠಿಣ ಸವಾಲು ಇದೆ. ನೇರ ಹಣಾಹಣಿಯ ಕ್ಷೇತ್ರದ ಫಲಿತಾಂಶ ಕುತೂಹಲ ಮೂಡಿಸಿದೆ.
ಬೆಳಗಾವಿಯಲ್ಲಿ ಶೆಟ್ಟರ್ ಭವಿಷ್ಯ
ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಹಾಗೂ ಲಿಂಗಾಯತ ಮುಖಂಡ ಜಗದೀಶ್ ಶೆಟ್ಟರ್ ಕೂಡ ಈ ಬಾರಿಯ ಲೋಕಸಭಾ ಕಣದಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟಿದ್ದಾರೆ. ತಮ್ಮ ರಾಜಕೀಯ ಪ್ರತಿಸ್ಪರ್ಧಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರೊಂದಿಗಿನ ಪಕ್ಷದ ಆಂತರಿಕ ಹಗ್ಗಜಗ್ಗಾಟದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿ ಬೇಸತ್ತು ಕಾಂಗ್ರೆಸ್ ಗೆ ವಲಸೆ ಹೋಗಿದ್ದ ಮಾಜಿ ಮುಖ್ಯಮಂತ್ರಿ, ಆ ಚುನಾವಣೆಯಲ್ಲಿ ಸೋತು, ವಿಧಾನ ಪರಿಷತ್ ಸ್ಥಾನ ಪಡೆದಿದ್ದರೂ ಅದನ್ನೂ ತಳ್ಳಿಹಾಕಿ ಆರು ತಿಂಗಳ ಹಿಂದೆ ವಾಪಸ್ ಮಾತೃಪಕ್ಷಕ್ಕೆ ಸೇರಿದ್ದರು. ಇದೀಗ ಬಿಜೆಪಿ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ತಮ್ಮ ಬೀಗತಿ ಮಂಗಳಾ ಅಂಗಡಿಯವರು ಕಳೆದ ಬಾರಿ ಗೆಲುವು ಪಡೆದಿದ್ದ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಈ ಬಾರಿ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಲು ಮುಂದಾಗಿದ್ದಾರೆ.
ಆದರೆ, ಅವರಿಗೆ ಕಾಂಗ್ರೆಸ್ ಪ್ರಭಾವಿ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಭಾರೀ ಪೈಪೋಟಿ ಒಡ್ಡಿದ್ದಾರೆ. ಜಗದೀಶ್ ಶೆಟ್ಟರ್ ಪಾಲಿಗೆ ಇದು ಕೇವಲ ರಾಜಕೀಯ ಏಳಿಗೆಯ ಪ್ರಶ್ನೆಯಷ್ಟೇ ಅಲ್ಲದೆ, ಸೋಲುಂಡರೆ ಪಕ್ಷದಲ್ಲಿ ರಾಜಕೀಯವಾಗಿ ಮೂಲೆಗುಂಪಾಗುವ ಆತಂಕದ ಸವಾಲು ಕೂಡ. ಹಾಗೇ ಹೆಬ್ಬಾಳ್ಕರ್ ಅವರಿಗೆ ಪುತ್ರ ಗೆಲ್ಲದೇ ಹೋದಲ್ಲಿ ಪಕ್ಷದ ಪ್ರತಿಷ್ಠೆ ಮತ್ತು ತಮ್ಮ ಸಚಿವ ಸ್ಥಾನದ ಭವಿಷ್ಯದ ಪ್ರಶ್ನೆ. ಹಾಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ.
ಧಾರವಾಡದಿಂದ ಪ್ರಹ್ಲಾದ್ ಜೋಷಿ
ಕೇಂದ್ರ ಸಚಿವರಾಗಿ ರಾಜ್ಯದಿಂದ ಕಣಕ್ಕಿಳಿದಿರುವ ಪ್ರಮುಖ ಮುಖಂಡ ಪ್ರಹ್ಲಾದ್ ಜೋಷಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಸತತ ನಾಲ್ಕು ಬಾರಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರವನ್ನು ತಮ್ಮ ಭದ್ರಕೋಟೆ ಮಾಡಿಕೊಂಡಿರುವ ಅವರು, ಈ ಬಾರಿಯೂ ಗೆಲವು ಪಡೆದು ರಾಷ್ಟ್ರ ರಾಜಕಾರಣದಲ್ಲಿ ಇನ್ನಷ್ಟು ಮುನ್ನೆಲೆಗೆ ಬರುವ ಮಹತ್ವಾಕಾಂಕ್ಷೆಯಲ್ಲಿದ್ದಾರೆ. ಹಾಗಾಗಿ ಅವರಿಗೆ ಈ ಚುನಾವಣೆ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕ. ಆದರೆ, ಈ ಬಾರಿ ಅವರಿಗೆ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತ ಸಮುದಾಯದ ಪ್ರಭಾವಿ ಸ್ವಾಮೀಜಿ ದಿಂಗಾಲೇಶ್ವರ ಸ್ವಾಮೀಜಿ ಅವರಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ. ಸ್ವತಃ ಚುನಾವಣಾ ಕಣಕ್ಕಿಳಿದಿದ್ದ ಅವರು ಕೊನೇ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಹಾಗಾಗಿ ಲಿಂಗಾಯತ ಮತಗಳನ್ನು ಹಿಂದುತ್ವದ ದಾಳ ಉರುಳಿಸಿ ಸೆಳೆದು ಸುಲಭ ಗೆಲುವು ಪಡೆಯುತ್ತಿದ್ದ ಜೋಷಿ ಅವರಿಗೆ ಇದೇ ಮೊದಲ ಬಾರಿಗೆ ಕಠಿಣ ಸವಾಲು ಎದುರಾಗಿದೆ.
ಕೇಂದ್ರ ಸಂಪುಟದಲ್ಲಿ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರದಂತಹ ಪ್ರಭಾವಿ ಖಾತೆಗಳನ್ನು ಹೊಂದಿರುವ, ಪ್ರಧಾನಿ ಮೋದಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜೋಷಿ ಅವರು ಈ ಬಾರಿ ಗೆದ್ದಲ್ಲಿ, ಮತ್ತು ಬಿಜೆಪಿ ಅಧಿಕಾರಕ್ಕೆ ಮರಳಿದಲ್ಲಿ ಕೇಂದ್ರದಲ್ಲಿ ಮಹತ್ವದ ಸ್ಥಾನಮಾನ ಕಾದಿದೆ. ಆದರೆ, ಆ ನಿರೀಕ್ಷೆಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಮತ್ತು ದಿಂಗಾಲೇಶ್ವರ ಸ್ವಾಮೀಜಿ ಸವಾಲೊಡ್ಡಿದ್ದಾರೆ.