ಭ್ರಷ್ಟಾಚಾರ ಆರೋಪ| ಎಸಿ, ತಹಶೀಲ್ದಾರ್‌ಗಳ ವಿರುದ್ಧ ಸುಮೋಟೋ ದೂರು ದಾಖಲಿಸಿಕೊಂಡ ಲೋಕಾಯುಕ್ತ

ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ದೇವನಹಳ್ಳಿ ತಹಶೀಲ್ದಾರ್ ಅನಿಲ್ ಎಂ, ಹೊಸಕೋಟೆ ತಹಶೀಲ್ದಾರ್ ಸೋಮಶೇಖರ್ ಕೆ.ಎಸ್, ದೊಡ್ಡಬಳ್ಳಾಪುರ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ನೆಲಮಂಗಲ ತಹಶೀಲ್ದಾರ್ ಶೀಥಲ್ ವಿ.ಎಸ್ ವಿರುದ್ಧ ಪ್ರಕರಣ ದಾಖಲಾಗಿದೆ.;

Update: 2025-09-17 12:55 GMT

ಕರ್ನಾಟಕ ಲೋಕಾಯುಕ್ತ ಕಚೇರಿ ಹಾಗೂ ಬೆಂಗಳೂರು ಗ್ರಾಮಾಂತರ ಎಸಿ ಕಚೇರಿ

Click the Play button to listen to article

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೈನಿಕರು, ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವಲಂಬಿತ ಕುಟುಂಬಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಒದಗಿಸುವಲ್ಲಿ ವಿಳಂಬ ಧೋರಣೆ  ಅನುಸರಿಸಿದ ಆರೋಪದ ಮೇಲೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ, ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳ ತಹಶೀಲ್ದಾರ್‌ಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಯು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. 

ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶೀಲ್ದಾರ್‌ ವಿಭಾ ವಿದ್ಯಾ ರಾಠೋಡ್‌, ದೇವನಹಳ್ಳಿ ತಹಶೀಲ್ದಾರ್ ಅನಿಲ್ ಎಂ, ಹೊಸಕೋಟೆ ತಹಶೀಲ್ದಾರ್ ಸೋಮಶೇಖರ್ ಕೆ.ಎಸ್, ನೆಲಮಂಗಲ ತಹಶೀಲ್ದಾರ್ ಶೀಥಲ್ ವಿ.ಎಸ್ ವಿರುದ್ಧ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ನಿವೃತ್ತ ಯೋಧರು, ಹುತಾತ್ಮ ಯೋಧರ ಅವಲಂಬಿತರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿತರಿಗೆ ನಿಯಮಾನುಸಾರ ಸರ್ಕಾರದಿಂದ ದೊರೆಯಬೇಕಾದ ನಿವೇಶನವನ್ನು ನಿಗದಿತ ಸಮಯದಲ್ಲಿ ನೀಡದೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿರುವುದು ಹಾಗೂ ಕರ್ತವ್ಯಲೋಪ ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೇ ಈ ವಿಷಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಇರುವುದರಿಂದ ಕೂಲಂಕಷ ತನಿಖೆಯ ಅವಶ್ಯಕತೆ ಇದೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.

ಈ ಹಿಂದೆಯೂ ಹಲವು ಬಾರಿ ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲೆಯ ನಾಲ್ಕು ತಾಲೂಕು ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಕೂಡ ದೊಡ್ಡಬಳ್ಳಾಪುರ ತಾಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

Tags:    

Similar News