ಲೋಕಸಭೆ ಚುನಾವಣೆ: ಮತದಾರರ ಜಾಗೃತಿಗೆ "ನಮ್ಮ ಬೆಂಗಳೂರು ರಾಯಭಾರಿ"ಗಳ ನಿಯೋಜನೆ
ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸುವುದು ಹಾಗೂ ಮತದಾರರಲ್ಲಿ ಹುಮ್ಮಸ್ಸು ಮೂಡಿಸುವ ಉದ್ದೇಶದಿಂದ ನಾಲ್ವರು ಪ್ರಮುಖರನ್ನು ರಾಯಭಾರಿಗಳಾಗಿ ಬಿಬಿಎಂಪಿ ನಿಯೋಜಿಸಿದೆ..;
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದ್ದು, ಇದೀಗ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಟ ರಮೇಶ್ ಅರವಿಂದ್ ಅವರು ಸೇರಿದಂತೆ ನಾಲ್ವರು ಪ್ರಮುಖರನ್ನು “ನಮ್ಮ ಬೆಂಗಳೂರು ಐಕಾನ್ಸ್(ರಾಯಭಾರಿ)” ಗಳನ್ನಾಗಿ ನಿಯೋಜಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
"ನಮ್ಮ ಬೆಂಗಳೂರು ಐಕಾನ್ಸ್" ಕಾರ್ಯಕ್ರಮಕ್ಕೆ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಮಂಗಳವಾರ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸುವುದು ಹಾಗೂ ಮತದಾರರಲ್ಲಿ ಹುಮ್ಮಸ್ಸು ಮೂಡಿಸುವ ಉದ್ದೇಶದಿಂದ ನಾಲ್ವರು ಪ್ರಮುಖರು ರಾಯಭಾರಿಗಳಾಗಿ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ನಾಲ್ವರು ರಾಯಭಾರಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ನಿಮಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದರೆ ನೋಟಾ ಸಹ ಚಲಾಯಿಸಲು ಅವಕಾಶವಿದ್ದು, ಎಲ್ಲರೂ ಮತ ಚಲಾಯಿಸಿ ಎಂದರು.
ಚುನಾವಣಾ ರಾಯಭಾರಿಯಾಗಿರುವ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಅವರು ಮಾತನಾಡಿ, ಏಪ್ರಿಲ್ 26 ರಂದು ಚುನಾವಣಾ ಹಬ್ಬವಿದ್ದು, ಎಲ್ಲರೂ ಸಡಗರದಿಂದ ಒಟ್ಟಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡೋಣ. ಒಂದು ಮತಕ್ಕೆ ಎಲ್ಲವನ್ನೂ ಬದಲಿಸುವ ಶಕ್ತಿಯಿದೆ. ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದರು.
ಚುನಾವಣಾ ರಾಯಭಾರಿಯಾದ ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ಅವರು ಮಾತನಾಡಿ, ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ, ನಾವು ಮತದಾನದಿಂದ ತಪ್ಪಿಸಿಕೊಂಡರೆ, ನಮಗೆ ಪ್ರಶ್ನೆ ಮಾಡಲು ಅರ್ಹತೆ ಇರುವುದಿಲ್ಲ. ಹೀಗಾಗಿ ಎಲ್ಲರೂ ತಪ್ಪದೇ ಮತಚಲಾಯಿಸೋಣ ಎಂದು ಪ್ರೇರೇಪಿಸಿದರು.
ಚುನಾವಣಾ ರಾಯಭಾರಿಯಾದ ನಟಿ ಹಾಗೂ ರೂಪದರ್ಶಿ ನೀತು ವನಜಾಕ್ಷಿ ಮಾತನಾಡಿ, ನಮ್ಮ ನಾಯಕನನ್ನು ನಾವು ಆಯ್ಕೆ ಮಾಡಬೇಕು ಎಂದರು.
ನಮ್ಮ ಬೆಂಗಳೂರು ಐಕಾನ್ಸ್ ವಿವರ |
ರಮೇಶ್ ಅರವಿಂದ್, ಖ್ಯಾತ ಚಿತ್ರ ನಟ ಮತ್ತು ನಿರ್ದೇಶಕ |
ನೀತು ವನಜಾಕ್ಷಿ, ನಟಿ ಹಾಗೂ ರೂಪದರ್ಶಿ |
ಅನುಪ್ ಶ್ರೀಧರ್, ಬ್ಯಾಡ್ಮಿಂಟನ್ ಆಟಗಾರ |
ಅರ್ಚನಾ ಜಿ ಕಾಮತ್, ಟೇಬಲ್ ಟೆನ್ನಿಸ್ ಆಟಗಾರ್ತಿ |
ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜ್, ವಿಶೇಷ ಆಯುಕ್ತ ಸುರೋಲ್ಕರ್ ವಿಕಾಸ್ ಕಿಶೋರ್, ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ ಸೇರಿದಂತೆ ಹಲವರು ಇದ್ದರು.