5ಕ್ಕೂ ಹೆಚ್ಚು ಬಾರಿ ಫೈನ್ ಬಿದ್ದರೆ ಲೈಸನ್ಸ್ ರದ್ದು; ಕೇಂದ್ರದಿಂದ ಹೊಸ ನಿಯಮ ಜಾರಿ
ಸಚಿವಾಲಯವು ಸೆಪ್ಟೆಂಬರ್ 29ರಂದು ಕೇಂದ್ರೀಯ ಮೋಟಾರು ವಾಹನ ನಿಯಮಗಳು, 1989ಕ್ಕೆ ತಿದ್ದುಪಡಿ ತರಲು ಕರಡು ಅಧಿಸೂಚನೆ ಹೊರಡಿಸಿದೆ. ಸಲಹೆ ಮತ್ತು ಆಕ್ಷೇಪ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಕಟ್ಟಿ ತಪ್ಪಿಸಿಕೊಳ್ಳುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು ಸಾಬೀತಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮತ್ತು ಸ್ವಯಂಚಾಲಿತವಾಗಿ ಇ-ಚಲನ್ ಜಾರಿಗೊಳಿಸುವ ಮಹತ್ವದ ನಿಯಮಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಸ್ತಾಪಿಸಿದೆ.
ಸಚಿವಾಲಯವು ಸೆಪ್ಟೆಂಬರ್ 29ರಂದು ಕೇಂದ್ರೀಯ ಮೋಟಾರು ವಾಹನ ನಿಯಮಗಳು, 1989ಕ್ಕೆ ತಿದ್ದುಪಡಿ ತರಲು ಕರಡು ಅಧಿಸೂಚನೆ ಹೊರಡಿಸಿದೆ. ಈ ಕರಡು ನಿಯಮಗಳಿಗೆ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಏನಿದು ಹೊಸ ನಿಯಮ?
1. ಪದೇ ಪದೇ ನಿಯಮ ಉಲ್ಲಂಘಿಸುವವರಿಗೆ ಕಠಿಣ ಕ್ರಮ:
ಹೊಸ ತಿದ್ದುಪಡಿಯ ಅಡಿಯಲ್ಲಿ, ನಿಯಮ 21ಕ್ಕೆ ಹೊಸ ಉಪ ಷರತ್ತು (25) ಅನ್ನು ಸೇರಿಸಲು ಪ್ರಸ್ತಾಪಿಸಲಾಗಿದೆ. ಇದರ ಪ್ರಕಾರ, ಯಾವುದೇ ವ್ಯಕ್ತಿಯು ಚಲನ್ ಇತಿಹಾಸದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಮೋಟಾರು ವಾಹನ ಕಾಯ್ದೆ ಅಥವಾ ನಿಯಮಗಳನ್ನು ಉಲ್ಲಂಘಿಸಿದ್ದು ದೃಢಪಟ್ಟರೆ, ಅದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವುದು ಅಥವಾ ರದ್ದುಪಡಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಈ ನಿಯಮವು ಅವಕಾಶ ಮಾಡಿಕೊಡಲಿದೆ.
2. ಸ್ವಯಂಚಾಲಿತ ಇ-ಚಲನ್ ವ್ಯವಸ್ಥೆ
ನಿಯಮ 167 ಅನ್ನು ಸಂಪೂರ್ಣವಾಗಿ ಬದಲಾಯಿಸಲು ಪ್ರಸ್ತಾಪಿಸಲಾಗಿದೆ. ಹೊಸ ನಿಯಮದ ಪ್ರಕಾರ, ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ ಅಥವಾ ರಾಜ್ಯ ಸರ್ಕಾರದಿಂದ ಅಧಿಕಾರ ಪಡೆದ ಯಾವುದೇ ಅಧಿಕಾರಿ, ನಿಯಮ ಉಲ್ಲಂಘಿಸಿದವರಿಗೆ ಭೌತಿಕ (ಕೈಯಲ್ಲಿ ನೀಡುವ) ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಚಲನ್ ನೀಡಬಹುದು.
ಮುಖ್ಯವಾಗಿ, ರಾಜ್ಯ ಸರ್ಕಾರಗಳು ಎಲೆಕ್ಟ್ರಾನಿಕ್ ಕಣ್ಗಾವಲು ಮತ್ತು ಜಾರಿ ವ್ಯವಸ್ಥೆ ಮೂಲಕ ಸ್ವಯಂಚಾಲಿತವಾಗಿ ಚಲನ್ ಸೃಷ್ಟಿಯಾಗುವ ವ್ಯವಸ್ಥೆಯನ್ನು ಜಾರಿಗೆ ತರಲು ಈ ನಿಯಮ ಅಧಿಕಾರ ನೀಡುತ್ತದೆ. ಇದರಿಂದ, ಹೆದ್ದಾರಿ ಮತ್ತು ನಗರಗಳಲ್ಲಿ ಅಳವಡಿಸಲಾಗಿರುವ ಎಐ ಕ್ಯಾಮೆರಾಗಳ ಮೂಲಕ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಿ, ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ನೇರವಾಗಿ ವಾಹನ ಮಾಲೀಕರಿಗೆ ಇ-ಚಲನ್ ಕಳುಹಿಸಲು ಕಾನೂನಾತ್ಮಕ ಮಾನ್ಯತೆ ಸಿಕ್ಕಂತಾಗುತ್ತದೆ.
ಆಕ್ಷೇಪಗಳಿಗೆ ಅವಕಾಶ
ಈ ಕರಡು ನಿಯಮಗಳ ಕುರಿತು ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆಗಳಿದ್ದರೆ, ಸಾರ್ವಜನಿಕರು ಅಧಿಸೂಚನೆ ಪ್ರಕಟವಾದ 30 ದಿನಗಳೊಳಗೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗೆ ಇಮೇಲ್ comments-morth@gov.in ಮೂಲಕ ಕಳುಹಿಸಬಹುದಾಗಿದೆ. ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಗಳನ್ನು ಪರಿಗಣಿಸಿದ ನಂತರ, ಅಂತಿಮ ನಿಯಮಗಳನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗುತ್ತದೆ.