ಕಸ್ತೂರಿ ರಂಗನ್‌ ವರದಿ | ಅಧಿಸೂಚನೆ ಹಿಂಪಡೆಯಲು ಕೇಂದ್ರಕ್ಕೆ ರಾಜ್ಯ ಸರ್ಕಾರದ ಪತ್ರ

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಬಳಿಕ ಕೇಂದ್ರ ಸರ್ಕಾರ ಕಸ್ತೂರಿ ರಂಗನ್‌ ವರದಿ ಜಾರಿಗೆ ತುದಿಗಾಲಲ್ಲಿ ನಿಂತಿದೆ. ಮಾರ್ಚ್ 2014, ಸೆಪ್ಟೆಂಬರ್ 2015, ಫೆಬ್ರವರಿ 2017, ಅಕ್ಟೋಬರ್ 2018, ಜುಲೈ 2022 ಮತ್ತು ಜುಲೈ 2024ರಲ್ಲಿ ಒಟ್ಟು ಆರು ಬಾರಿ ಅಧಿಸೂಚನೆ ಹೊರಡಿಸಿತ್ತು. ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ತಮಿಳುನಾಡು ಈಗಾಗಲೇ ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕರಿಸಿವೆ. ಅದರಂತೆ ಕೇರಳ ಹಾಗೂ ಕರ್ನಾಟಕ ಕೂಡ ವರದಿ ತಿರಸ್ಕರಿಸಲು ನಿರ್ಧರಿಸಿವೆ.;

Update: 2024-10-01 08:09 GMT

ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ವಲಯ ಗುರುತಿಸಲು ಶಿಫಾರಸು ಮಾಡಿದ್ದ ಡಾ.ಕೆ.ಕಸ್ತೂರಿ ರಂಗನ್‌ ವರದಿಯನ್ನು ಸಂಪೂರ್ಣ ತಿರಸ್ಕರಿಸಿರುವ ರಾಜ್ಯ ಸರ್ಕಾರ, ಈ ಸಂಬಂಧ ಹೊರಡಿಸಿರುವ ಆರೂ ಅಧಿಸೂಚನೆಗಳನ್ನು ಶಾಶ್ವತವಾಗಿ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಡಾ.ಕೆ. ಕಸ್ತೂರಿರಂಗನ್ ವರದಿಯ ಶಿಫಾರಸುಗಳನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾಗಿ 2024 ಜುಲೈ 31 ರಂದು ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಲೀನಾ ನಂದನ್ ಅವರಿಗೆ ಅರಣ್ಯ, ಪರಿಸರ ಇಲಾಖೆಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಬಳಿಕ ಕೇಂದ್ರ ಸರ್ಕಾರ ಕಸ್ತೂರಿ ರಂಗನ್‌ ವರದಿ ಜಾರಿಗೆ ತುದಿಗಾಲಲ್ಲಿ ನಿಂತಿದೆ. ಮಾರ್ಚ್ 2014, ಸೆಪ್ಟೆಂಬರ್ 2015, ಫೆಬ್ರವರಿ 2017, ಅಕ್ಟೋಬರ್ 2018, ಜುಲೈ 2022 ಮತ್ತು ಜುಲೈ 2024ರಲ್ಲಿ ಒಟ್ಟು ಆರು ಬಾರಿ ಅಧಿಸೂಚನೆ ಹೊರಡಿಸಿತ್ತು. ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ತಮಿಳುನಾಡು ಈಗಾಗಲೇ ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕರಿಸಿವೆ. ಅದಂತೆ ಕೇರಳ ಹಾಗೂ ಕರ್ನಾಟಕ ಕೂಡ ವರದಿ ತಿರಸ್ಕರಿಸಲು ನಿರ್ಧರಿಸಿವೆ.

ಕಸ್ತೂರಿ ರಂಗನ್‌ ವರದಿ ಜಾರಿಯಿಂದ ಪಶ್ಚಿಮ ಘಟ್ಟಗಳ ವಿಶಾಲ ಭೂಭಾಗವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಬೇಕಾಗುತ್ತದೆ. ಇದರಿಂದ ಈಗಾಗಲೇ ನೆಲೆ ಕಂಡುಕೊಂಡಿರುವ 10 ಜಿಲ್ಲೆ, 33 ತಾಲ್ಲೂಕುಗಳ 1,499 ಹಳ್ಳಿಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ತೊಂದರೆ ಆಗಲಿದೆ. ಹಾಗಾಗಿ ವರದಿ ಜಾರಿ ಮಾಡಬಾರದು ಎಂಬುದು ಕರ್ನಾಟಕದ ವಾದ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ನಿರ್ಬಂಧ ಮತ್ತು ಜನಜೀವನದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಸ್ಥಳೀಯರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ವರದಿಯ ಅನುಷ್ಠಾನದಲ್ಲಿ ಸ್ಥಳೀಯರೇ ಸ್ವಇಚ್ಛೆಯಿಂದ ಭಾಗವಹಿಸದ ಹೊರತು ಕ್ರಮಗಳು ಅನಗತ್ಯ ಎಂದು ಸರ್ಕಾರ ವಾದಿಸಿದೆ.

2012 ಆಗಸ್ಟ್ ತಿಂಗಳಲ್ಲಿ ರಚನೆಯಾದ ಡಾ.ಕೆ. ಕಸ್ತೂರಿರಂಗನ್ ಸಮಿತಿಯು ಪಶ್ಚಿಮ ಘಟ್ಟಗಳ ಪ್ರತಿಶತ 60 ರಷ್ಟು ಜೀವಸಂಕುಲದ ಭೂಭಾಗವಾಗಿದೆ. ಇದೇ ಭೂ ಭಾಗದಲ್ಲಿ ಕಟ್ಟಡ, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ ವಿಸ್ತರಿಸಿಕೊಂಡಿದೆ. ಉಳಿದ ಪ್ರತಿಶತ 37 ರಷ್ಟು(60 ಸಾವಿರ .ಚ.ಕಿ.ಮೀ) ಭೂಮಿ ನೈಸರ್ಗಿಕ ಶ್ರೀಮಂತ ಪ್ರದೇಶವಾಗಿದೆ. ಈ ಭಾಗದಲ್ಲಿ ಹೇರಳ ನೈಸರ್ಗಿಕ ಸಂಪತ್ತಿರುವ ಕಾರಣ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಬೇಕು ಅನ್ನುವುದು ವರದಿಯ ಶಿಫಾರಸು.

ಇನ್ನು ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಕೆಂಪು ವರ್ಗದ ಕೈಗಾರಿಕೆಗಳು ಮತ್ತು ಉಷ್ಣ ವಿದ್ಯುತ್ ಸ್ಥಾವರ ಯೋಜನೆಗಳ ಸ್ಥಾಪನೆ ಸೇರಿದಂತೆ ಇತರೆ ಚಟುವಟಿಕೆಗಳ ಮೇಲೆ ನಿಷೇಧ ಹೇರಬೇಕು ಎಂದು ವರದಿ ತಿಳಿಸುತ್ತದೆ.

ಪಶ್ಚಿಮ ಘಟ್ಟಗಳ ಕುರಿತು ಮಾಧವ್ ಗಾಡ್ಗೀಳ್ ಸಮಿತಿಯ ಶಿಫಾರಸುಗಳನ್ನು ಎಲ್ಲಾ ಆರು ರಾಜ್ಯಗಳು ತಿರಸ್ಕರಿಸಿದ ನಂತರ ಕಸ್ತೂರಿರಂಗನ್ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತ್ತು. ಮಾಧವ ಗಾಡ್ಗೀಳ್‌ ವರದಿಯು ಪಶ್ಚಿಮ ಘಟ್ಟ ಪ್ರದೇಶದ ಶೇ 75 ಅಥವಾ 129,037 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿತ್ತು.

Tags:    

Similar News