ವಿಧಾನಸಭೆಯಲ್ಲಿ ಕಾರ್ಯದರ್ಶಿ-2 ಹುದ್ದೆ ನೇಮಕ: ಶೀತಲ ಸಮರಕ್ಕೆ ಕಾರಣವಾದ ಕಾನೂನು ಪದವಿ..!
ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆ ಸೃಷ್ಟಿ ಸಂಬಂಧ ಕಳೆದೊಂದು ವರ್ಷದಿಂದ ಮುಸುಕಿನ ಕಾದಾಟ ನಡೆಯುತ್ತಿದೆ. ಹುದ್ದೆಗೆ ಕಾನೂನು ಪದವಿ ಅಡ್ಡಿಯಾಗಿ ಶೀತಲ ಸಮರಕ್ಕೆ ಕಾರಣವಾಗಿದೆ.;
ರಾಜ್ಯದ ಶಾಸನಸಭೆಗೆ ಬೆನ್ನೆಲುಬಾಗಿರುವ ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆ ಸೃಷ್ಟಿ ಸಂಬಂಧ ಕಳೆದೊಂದು ವರ್ಷದಿಂದ ಮುಸುಕಿನ ಕಾದಾಟ ನಡೆಯುತ್ತಿದೆ. ಸಚಿವಾಲಯದೊಳಗಿನ ಘರ್ಷಣೆ ಸಭಾಧ್ಯಕ್ಷರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಾರ್ಯದರ್ಶಿ-2 ಹುದ್ದೆಗೆ ಕಾನೂನು ಪದವಿ ಅಡ್ಡಿಯಾಗಿರುವುದೇ ಶೀತಲ ಸಮರಕ್ಕೆ ಕಾರಣವಾಗಿದೆ.
ಕಾರ್ಯದರ್ಶಿಗಳ ಮೇಲಿನ ಕೆಲಸ ಒತ್ತಡ ಅಧಿಕವಾಗಿರುವ ಹಿನ್ನೆಲೆಯಲ್ಲಿ ವಿಧಾನಮಂಡಲದ ಉಭಯ ಸದನದಲ್ಲಿ ಕಾರ್ಯದರ್ಶಿ-2 ಹುದ್ದೆಗೆ ಸೃಷ್ಟಿ ಮಾಡಬೇಕು ಎಂಬ ಕೂಗು ಕೇಳಿಬಂದಿತು. ವಿಧಾನಪರಿಷತ್ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆ ಸೃಷ್ಟಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಆದರೆ, ವಿಧಾನಸಭೆ ಸಚಿವಾಲಯದಲ್ಲಿ ವರ್ಷ ಕಳೆದರೂ ಕಾರ್ಯದರ್ಶಿ-2 ಹುದ್ದೆ ಸೃಷ್ಟಿಯಾಗಿಲ್ಲ. ಹಣಕಾಸು ಇಲಾಖೆಯಿಂದ ಒಪ್ಪಿಗೆ ದೊರೆತಿದೆಯಾದರೂ, ಕಾನೂನು ಪದವಿ ಎಂಬ ಷರತ್ತು ಹುದ್ದೆ ನೇಮಕಕ್ಕೆ ತೊಡಕಾಗಿದೆ.
2024 ರ ಜೂ.29ರಂದು ಸಭಾಧ್ಯಕ್ಷ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಕಾರ್ಯದರ್ಶಿ-2 ಹುದ್ದೆ ಸೃಷ್ಟಿಗೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದರು. ಹಣಕಾಸು ಇಲಾಖೆ ಸಹ ಹುದ್ದೆಗೆ ಅನುಮೋದನೆ ನೀಡಿದೆ. ವಿಧಾನಸಭೆಯ ಕಾರ್ಯದರ್ಶಿ ಈ ಹುದ್ದೆಯ ರಚನೆಯ ಕುರಿತು ಆಡಳಿತಾತ್ಮಕ ಆದೇಶ ಹೊರಡಿಸಬೇಕಿತ್ತು. ಆದರೆ ಒಂದು ವರ್ಷ ಕಳೆದರೂ ಕಾರ್ಯದರ್ಶಿ ಈ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ. ಇದನ್ನು ಕೇಡರ್ ಮತ್ತು ನೇಮಕಾತಿ ಸಮಿತಿಯ ಮುಂದೆಯೂ ಮಂಡಿಸಲಾಗಿಲ್ಲ ಎಂದ ಆರೋಪಗಳು ಕೇಳಿಬಂದಿವೆ.
ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ. ಉಪ ಕಾರ್ಯದರ್ಶಿ, ಉಪ-ಕಾರ್ಯದರ್ಶಿ ಮತ್ತು ಶಾಖಾ ಅಧಿಕಾರಿಗಳ ಮೇಳೆ ಹೆಚ್ಚುತ್ತಿರುವ ಕೆಲಸದ ಹೊರೆಯಿಂದಾಗಿ, ಕಾರ್ಯದರ್ಶಿ-2 ಹುದ್ದೆಯನ್ನು ಅಗತ್ಯವೆಂದು ಪರಿಗಣಿಸಲಾಗಿದೆ. ಹುದ್ದೆ ಸೃಷ್ಟಿ ವಿಚಾರದಲ್ಲಿ ಕೆಲವು ಸಚಿವರು ಮತ್ತು ಮುಖ್ಯಮಂತ್ರಿಗಳ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಹುದ್ದೆ ಸೃಷ್ಟಿಗೆ ಶ್ರಮಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಯಾಕೆಂದರೆ ಕಾರ್ಯದರ್ಶಿ-2 ಸೃಷ್ಟಿಸಿದರೆ ತಮ್ಮ ಅಧಿಕಾರಕ್ಕೆ ಧಕ್ಕೆಯಾಗುತ್ತದೆ ಎನ್ನುವ ಕಾರಣಕ್ಕೆ ಹುದ್ದೆ ಸೃಷ್ಟಿಸಿ, ನೇಮಕ ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಮಂಜೂರಾಗಿರುವ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯನ್ನು ಸರ್ಕಾರ ಹಿಂಪಡೆಯುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ಹೇಳಿವೆ.
ಎದುರಾಗಿರುವ ತಾಂತ್ರಿಕ ಸಮಸ್ಯೆ ಏನು?
ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆಗೆ ಸಚಿವಾಲಯದಲ್ಲಿ ಕಂಪ್ಯೂಟರ್ ವಿಭಾಗದ ನಿರ್ದೇಶಕ ಜೆ.ಇ.ಶಶಿಧರ್ ಆಕಾಂಕ್ಷಿಯಾಗಿದ್ದಾರೆ. ನಿರ್ದೇಶಕ ಹುದ್ದೆಯಿಂದ ಕಾರ್ಯದರ್ಶಿ 2 ಹುದ್ದೆಗೆ ನಿಯೋಜನೆ ಮಾಡುವಂತೆ ಕೋರಿದ್ದಾರೆ. ಆದರೆ, ವಿಭಾಗವೇ ಬೇರೆಯಾಗಿರುವುದರಿಂದ ಅವರನ್ನು ನೇಮಕ ಮಾಡುವುದು ತೊಡಕಾಗಿದೆ ಎಂದು ಹೇಳಲಾಗಿದೆ. ಅಲ್ಲದೇ, ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಹುದ್ದೆಗೆ ಎಲ್‌ಎಲ್‌ಬಿ ವಿದ್ಯಾಭ್ಯಾಸ ಕಡ್ಡಾಯವಾಗಿ ಆಗಿರಬೇಕು. ಶಶಿಧರ್ ಅವರು ಕಂಪ್ಯೂಟರ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಂಪ್ಯೂಟರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್‌ಎಲ್‌ಬಿ ವಿದ್ಯಾಭ್ಯಾಸ ಆಗಿಲ್ಲ. ಇದು ಕಾರ್ಯದರ್ಶಿ-2 ಹುದ್ದೆ ಪಡೆಯುವುದಕ್ಕೆ ಅಡ್ಡಿಯಾಗಿದೆ. ಸಚಿವಾಲಯದ ಅಡಿಯಲ್ಲಿಯೇ ಸಾಮಾನ್ಯ ಮತ್ತು ತಾಂತ್ರಿಕ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದರೂ, ಹುದ್ದೆಯ ನೇಮಕಾತಿಯು ಪ್ರತ್ಯೇಕವಾಗಿ ನಡೆಯುತ್ತದೆ. ಈ ಕಾರಣದಿಂದಾಗಿ ಶಶಿಧರ್ ಅವರಿಗೆ ಕಾರ್ಯದರ್ಶಿ-2 ಹುದ್ದೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಯಾರು ಈ ಶಶಿಧರ್?
ವಿಧಾನಸಭೆ ಸಚಿವಾಲಯದಲ್ಲಿ ಕಂಪ್ಯೂಟರ್ ವಿಭಾಗದ ನಿರ್ದೇಶಕ ಜೆ.ಇ.ಶಶಿಧರ್ ಅವರು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರ ಅಳಿಯರಾಗಿದ್ದಾರೆ. ಶಾಸಕಿ ರೂಪಾ ಶಶಿಧರ್ ಪತಿಯಾಗಿದ್ದು, 2002ರಿಂದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಶಿಧರ್ ಅವರು ದಲಿತ ಸಮುದಾಯಕ್ಕೆ ಸೇರಿದ್ದು, ಈ ಕಾರಣಕ್ಕಾಗಿ ಅವರಿಗೆ ಈ ಹುದ್ದೆ ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂದು ಪರಿಶಿಷ್ಟ ಜಾತಿಯ ಸಂಘಟನೆಗಳು ಆರೋಪಿಸಿವೆ.
ಆದಾಗ್ಯೂ ಕಾಂಗ್ರೆಸ್ ಲಾಬಿಗೆ ಮಣಿದಿರುವ ಅಧಿಕಾರಿಗಳು ಶಶಿಧರ್ ಅವರನ್ನು ನಿರ್ದೇಶಕ ಹುದ್ದೆಯಿಂದ ಕಾರ್ಯದರ್ಶಿ 2 ಹುದ್ದೆಗೆ ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆದಿದೆ. ಈ ನಡುವೆ ಶಶಿಧರ್ ಅವರಿಗೆ ಕಾರ್ಯದರ್ಶಿ-2 ಹುದ್ದೆ ನೀಡಲು ಸಚಿವಾಲಯದಲ್ಲೇ ವಿರೋಧ ವ್ಯಕ್ತವಾಗಿದೆ. ಗಣಕ ವಿಭಾಗದ ಅಧಿಕಾರಿಯನ್ನು ಸಚಿವಾಲಯದಲ್ಲಿ ಪರಿಗಣಿಸಬಾರದು. ಸಚಿವಾಲಯದ ವಿಭಾಗದ ವೃಂದಗಳಲ್ಲೇ ಹುದ್ದೆ ಸೃಷ್ಟಿಸಿ ನೀಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.
ವಿಧಾನಪರಿಷತ್‌ನಲ್ಲಿಯೂ ವಿರೋಧ ವ್ಯಕ್ತವಾಗಿತ್ತು
ವಿಧಾನ ಪರಿಷತ್‌ನಲ್ಲಿ ಎಸ್. ನಿರ್ಮಲಾ ಅವರಿಗೆ ಹೊಸದಾಗಿ ಸೃಷ್ಟಿಸಲಾದ ಕಾರ್ಯದರ್ಶಿ-2 ಹುದ್ದೆಗೆ ಬಡ್ತಿ ನೀಡಲಾಗಿದೆ. ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿ ಮತ್ತು ನೌಕರರ ನೇಮಕಾತಿ ಹಾಗೂ ಸೇವಾ ಷರತ್ತುಗಳು)ನಿಯಮಗಳು, 2024ರ (2ನೇ ತಿದ್ದುಪಡಿ) ಅನ್ವಯ ಅಪರ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್.ನಿರ್ಮಲಾ ಅವರಿಗೆ ಬಡ್ತಿ ನೀಡಲಾಗಿದೆ. ನಿರ್ಮಲಾ ಅವರು ಕಾರ್ಯದರ್ಶಿ-2 ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದಕ್ಕೂ ಮುನ್ನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಅವರು ವಿರೋಧ ವ್ಯಕ್ತಪಡಿಸಿ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದರು. ವಿಧಾನಪರಿಷತ್ ಸಚಿವಾಲಯದಲ್ಲಿ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಹಾಗೂ ಸೇವಾ ಷರತ್ತುಗಳು) ನಿಯಮದ ಅನ್ವಯ ಕಾರ್ಯದರ್ಶಿ-2 ಹುದ್ದೆಗೆ ಅವಕಾಶವಿಲ್ಲ ಎಂದಿದ್ದರು.
ವಿಧಾನ ಪರಿಷತ್ ಇರುವ ಇತರೆ ರಾಜ್ಯಗಳಲ್ಲಿ ಎಲ್ಲಿಯೂ ಎರಡು ಕಾರ್ಯದರ್ಶಿ ಹುದ್ದೆಗಳು ಇಲ್ಲ. ರಾಜ್ಯ ವಿಧಾನಸಭೆಯಲ್ಲಿ 224 ಶಾಸಕರಿದ್ದು, 900 ಮಂದಿ ಅಧಿಕಾರಿ, ಸಿಬ್ಬಂದಿ ಇದ್ದಾರೆ. ಅಲ್ಲಿಯೂ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಮತ್ತು ಕಾರ್ಯದರ್ಶಿ-2 ಹುದ್ದೆ ಇಲ್ಲ. ವಿಧಾನ ಪರಿಷತ್ತಿನಂತಹ ಚಿಕ್ಕ ಸಚಿವಾಲಯಕ್ಕೆ ಎರಡು ಕಾರ್ಯದರ್ಶಿ ಹುದ್ದೆಗಳ ಅವಶ್ಯಕತೆ ಇರುವುದಿಲ್ಲ. 75 ಸದಸ್ಯರಿದ್ದು, 284 ಅಧಿಕಾರಿ, ಸಿಬ್ಬಂದಿ ಇದ್ದಾರೆ. ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯು ಕೆಳಗಿನ ಹಂತದ ಹುದ್ದೆಯಾಗಿದೆ. ಅದನ್ನು ಕಾರ್ಯದರ್ಶಿ-2 ಹುದ್ದೆಗೆ ಉನ್ನತೀಕರಿಸುವುದರಿಂದ ಎರಡು ಕಾರ್ಯದರ್ಶಿ ಹುದ್ದೆಗಳು ಸಮಾನಾಂತರ ಹುದ್ದೆಗಳಾಗುತ್ತವೆ. ಎರಡೂ ಕಾರ್ಯದರ್ಶಿ ಹುದ್ದೆಗಳಿಗೆ ಕಾರ್ಯ ಹಂಚಿಕೆ ಆಗುವುದರಿಂದ ಕಚೇರಿ ಆಡಳಿತದಲ್ಲಿ ವಿನಾಕಾರಣ ಗೊಂದಲ, ಭಿನ್ನಭಿಪ್ರಾಯ, ತಿಕ್ಕಾಟಗಳಿಗೆ ಕಾರಣವಾಗುತ್ತದೆ. ಗುಂಪುಗಾರಿಕೆಗೆ ಕಾರಣವಾಗುತ್ತದೆ ಎಂದಿದ್ದರು.
ನಿರ್ಮಲಾ ಅವರು ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಹೊಂದಿ ಎರಡು ವರ್ಷಗಳಾಗಿದ್ದು, ದೀರ್ಘ ಕಾಲ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವುದಿಲ್ಲ. ಅಲ್ಲದೇ, ನೌಕರರ ಜೇಷ್ಠತೆ ಮತ್ತು ಸೇವಾ ಹಿರಿತನವನ್ನು ಕಾಪಾಡಬೇಕಾಗಿದೆ. ಈ ಎಲ್ಲಾ ಕಾರಣಗಳಿಂದ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯನ್ನು ಕಾರ್ಯದರ್ಶಿ-2 ಹುದ್ದೆಗೆ ಉನ್ನತೀಕರಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ನಂತರ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ ನಿರ್ಮಲಾ ಅವರನ್ನು ನಿಯೋಜಿಸಿದರು. ಆದರೆ ಇಲ್ಲಿ ಅದೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿರ್ಮಲಾ ಅವರಿಗೆ ಅವಕಾಶ ನೀಡಲಾಗಿದೆ. ವಿಧಾನಸಭೆಯಲ್ಲಿ ಬೇರೆ ವಿಭಾಗದವರನ್ನು ನಿಯೋಜನೆ ಬೇಡ. ಶಶಿಧರ್ ಅವರಿಗೆ ಅವರದೇ ವಿಭಾಗದಲ್ಲಿ ಹುದ್ದೆ ಸೃಷ್ಟಿಸಿ ಅವಕಾಶ ನೀಡಬಹುದು. ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಸಾಮಾನ್ಯ ವಿಭಾಗದಲ್ಲಿ ಬೇಡ ಎಂಬ ಮಾತುಗಳು ಕೇಳಿಬರುತ್ತಿವೆ.
ಬೇರೆ ರಾಜ್ಯಗಳ ಉದಾಹರಣೆಗಳೇನು?
ಲೋಕಸಭೆ ಸೇರಿದಂತೆ ರಾಜ್ಯದ ಹಲವು ರಾಜ್ಯಗಳಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಇದೆ. ಈ ಪೈಕಿ ಲೋಕಸಭೆ ಹಾಗೂ 12 ದೇಶದ ರಾಜ್ಯಗಳಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಇದೆ. ಇಲ್ಲಿ ಕಾನೂನು ಪದವಿಯ ಅಗತ್ಯ ಇಲ್ಲ. ಕೇವಲ ಪದವಿ ಮಾತ್ರ ಪರಿಗಣಿಸಲಾಗುತ್ತದೆ. ಲೋಕಸಭೆ ಮತ್ತು ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸ್‌ಘಡ್, ದೆಹಲಿ, ಹಿಮಾಚಲಪ್ರದೇಶ, ಜಾರ್ಖಂಡ್, ಮಿಜೋರಾಂ, ಪಂಜಾಬ್, ಸಿಕ್ಕಿಂ, ತಮಿಳುನಾಡು, ಉತ್ತರಪ್ರದೇಶ, ಜಾರ್ಖಂಡ್ ರಾಜ್ಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಇದ್ದು, ಪದವಿ ಮಾತ್ರ ಪರಿಗಣಿಸಲಾಗಿದೆ. ಇನ್ನುಳಿದ ರಾಜ್ಯದಲ್ಲಿ ಕಾನೂನು ಪದವಿ ಅತ್ಯಗತ್ಯ ಎಂದು ತಿಳಿಸಲಾಗಿದೆ.
ಎಸ್‌ಎಸಿ/ಎಸ್‌ಟಿ ಸರ್ಕಾರಿ ನೌಕರರಿಂದ ಮನವಿ
ವಿಧಾನಸಭೆ ಸಚಿವಾಲಯದಲ್ಲಿ ಐಟಿ ವಿಭಾಗದ ನಿರ್ದೇಶಕರಾಗಿರುವ ಜೆ.ಇ.ಶಶಿಧರ್ ಪರವಾಗಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಮಾಡಿದೆ. ಶಶಿಧರ್ ಅವರು 22 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ. ಕಂಪ್ಯೂಟರ್ ವಿಭಾಗ ಸೇರಿದಂತೆ ಶಾಸಕರ ಭವನದ ಮೇಲುಸ್ತವಾರಿ, ಇ-ವಿಧಾನ ಮಂಡಲ ಯೋಜನೆಯ ಕಾರ್ಯ ಮತ್ತು ನಿರ್ವಹಣೆ ಸೇರಿದಂತೆ ಇತರೆ ತಾಂತ್ರಿಕತೆಗೆ ಸಂಬಂಧಪಟ್ಟ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 75 ಶಾಸಕ ಬಲ ಹೊಂದಿರುವ ವಿಧಾನಪರಿಷತ್ ಸಚಿವಾಲಯದಲ್ಲಿ ಈಗಾಗಲೇ ಕಾರ್ಯದರ್ಶಿ-1 ಮತ್ತು ಕಾರ್ಯದರ್ಶಿ-2 ಹುದ್ದೆಗಳನ್ನು ಸೃಷ್ಟಿಸಿ ಅಧಿಕಾರಿಯನ್ನು ನೇಮಿಸಲಾಗಿದೆ. ಆದರೆ 224 ಶಾಸಕರ ಬಲ ಹೊಂದಿರುವ ವಿಧಾನಸಭಾ ಸಚಿವಾಲಯಕ್ಕೆ ಕಾರ್ಯದರ್ಶಿ-2 ಹುದ್ದೆಯನ್ನು ಸೃಷ್ಟಿಸಿದ್ದರೂ ಎಲ್ಲಾ ರೀತಿಯ ಅರ್ಹ ಹೊಂದಿರುವ ಶಶಿಧರ್ ಅವರನ್ನು ಮುಂಬಡ್ತಿ ನೀಡಿ ನೇಮಕ ಮಾಡದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಸಮಿತಿಯ ಅಧ್ಯಕ್ಷ ಡಿ. ಶಿವಶಂಕರ್ ಮನವಿ ಮಾಡಿದ್ದಾರೆ.