E-Khata Part 1: ಏನಿದು ಇ- ಖಾತಾ? ಪಡೆಯುವುದು ಹೇಗೆ? ಭೂ ಅಕ್ರಮಗಳಿಗೆ ಹೇಗೆ ವಿರಾಮ?
ಇ-ಖಾತಾ ಪಡೆಯಲು ಯಾವುದೇ ಗಡುವು ನಿಗದಿ ಮಾಡಿಲ್ಲ. ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಅನಧಿಕೃತ ಆಸ್ತಿಗಳಿಗೆ ಖಾತಾ ನೀಡುವ ಅಭಿಯಾನ ಇದಾಗಿದೆ.;
ಆಸ್ತಿ ಮಾಲೀಕರು ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಅಥವಾ ಮಾರಾಟ ಮಾಡಲು ಮಧ್ಯವರ್ತಿಗಳಿಗೆ ಲಕ್ಷಗಟ್ಟಲೆ ಹಣ ನೀಡಬೇಕಾದ ದುಸ್ಥಿತಿ ಇತ್ತು. ಇದೇ ಕಾರಣಕ್ಕೆ ಈ ಎಲ್ಲಾ ಸಮಸ್ಯೆಗಳಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪೇಪರ್ ಖಾತಾ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಯಾರು ಬೇಕಾದರೂ ನಕಲಿ ಖಾತಾ ಸೃಷ್ಟಿಸುವ ಅಪಾಯ ಇತ್ತು. ನಕಲಿ ಖಾತೆಗಳ ಮೂಲಕ ಭೂ ಮಾಫಿಯಾದವರು ಹಲವರ ಆಸ್ತಿಗಳನ್ನು ಲಪಟಾಯಿಸಿರುವ ಉದಾಹರಣೆಗಳೂ ಸಾಕಷ್ಟಿವೆ.
ಕಷ್ಟಪಟ್ಚು ದುಡಿದ ಯಾರದ್ದೋ ಮನೆ-ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಇನ್ಯಾರೋ ಕಬಳಿಸುವುದನ್ನು ತಪ್ಪಿಸಲು ಹಾಗೂ ಪ್ರತಿಯೊಬ್ಬರ ಆಸ್ತಿ ಮಾಲೀಕತ್ವಕ್ಕೆ ಬಲ ತುಂಬಬೇಕು ಎಂಬ ಏಕೈಕ ಉದ್ದೇಶದಿಂದಲೇ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಸಂಬಂಧ ಅಭಿಯಾನ ಪ್ರಾರಂಭಿಸಿದೆ. ಇ-ಖಾತಾ ಪಡೆಯಲು ಯಾವುದೇ ಗಡುವು ನಿಗದಿ ಮಾಡಿಲ್ಲ. ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಅನಧಿಕೃತ ಆಸ್ತಿಗಳಿಗೆ ಖಾತಾ ನೀಡುವ ಅಭಿಯಾನ ಇದಾಗಿದೆ. ಈ ಸಂಬಂಧ ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಅಧಿಕೃತ ಮತ್ತು ಅನಧಿಕೃತ ಆಸ್ತಿಗಳಿಗೆ ತಂತ್ರಾಂಶದಲ್ಲಿ ಇ-ಖಾತಾ ನೀಡಲು ಅವಕಾಶ ಕಲ್ಪಿಸಲಾಗಿದೆ.
ಮಧ್ಯಮ ವರ್ಗದ ಜನ ಕಷ್ಟಪಟ್ಟು ದುಡಿದು ನಗರ ಭಾಗದಲ್ಲಿ ಆಸ್ತಿ ಖರೀದಿಸಿದರೆ, ಅದನ್ನ ಮತ್ಯಾರೋ ನಕಲಿ ದಾಖಲೆ ಸೃಷ್ಟಿಸಿ ಕಬಳಿಸುವುದು ನಡೆಯುತ್ತಿದೆ. ಹೀಗಾಗಿ ಇ-ಖಾತಾ ಅಭಿಯಾನ ನಡೆಯುತ್ತಿದೆ. ಒಮ್ಮೆ ಇ-ಖಾತಾ ಪಡೆದುಕೊಂಡರೆ ಆಸ್ತಿ ಮಾಲೀಕತ್ವಕ್ಕೆ ರಕ್ಷಣೆ ದೊರಕಲಿದೆ. ನಕಲಿ ವಹಿವಾಟು ಶಾಶ್ವತವಾಗಿ ಕೊನೆಗೊಳ್ಳಲಿದೆ. ಅಲ್ಲದೆ, ಭವಿಷ್ಯದಲ್ಲಿ ಆಸ್ತಿ ಮಾರಾಟ-ವಹಿವಾಟು ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿಯನ್ನೂ ತಡೆಯಬಹುದಾಗಿದೆ.
ಅನಧಿಕೃತ ಬಡಾವಣೆಗಳಲ್ಲಿನ ನಿವೇಶನ, ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಪ್ರಕರಣಗಳ ವ್ಯಾಪ್ತಿಗೆ ಬರುವ ಆಸ್ತಿ ಮಾಲೀಕರು ತಮ್ಮ ವ್ಯಾಪ್ತಿಯ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ನಿಗದಿತ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಗಳನ್ನು ಪಡೆಯಬಹುದಾಗಿದೆ. ಆ ಮೂಲಕ ಖಾತಾ ಇಲ್ಲದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ನೀಡಿತ್ತು. ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತ ಹಾಗೂ ರೆವಿನ್ಯೂ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನಗಳ ಸ್ವತ್ತುಗಳಿಗೆ ಇ-ಆಸ್ತಿ ನೀಡುವ ಅಭಿಯಾನ ಇದಾಗಿದೆ.
ಇ-ಖಾತಾ ಪಡೆಯಲು ಬೇಕಾದ ದಾಖಲೆಗಳೇನು?
ಅಧಿಕೃತ ಆಸ್ತಿಗಳಿಗೆ 'ಎ' ಖಾತಾ ಮತ್ತು ಅನಧಿಕೃತ ಆಸ್ತಿಗಳಿಗೆ 'ಬಿ' ಖಾತಾ ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ. 'ಎ' ಖಾತಾ ಪಡೆದುಕೊಳ್ಳಲು ಬಯಸುವವರು ಭೂ ಪರಿವರ್ತನಾ ಆದೇಶ, ಬಡಾವಣೆ ನಕ್ಷೆ, ಸ್ವತ್ತಿನ ಮಾಲೀಕತ್ವ ದೃಢೀಕರಿಸುವ ಕ್ರಯ, ದಾನ, ವಿಲ್, ಹಕ್ಕುಪತ್ರ, ವಿಭಾಗ ಪತ್ರ, ನಮೂನೆ 15ರಲ್ಲಿ ಪಡೆದ ಋಣಭಾರ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಕಂದಾಯ ಇಲಾಖೆಯಿಂದ 94 ಸಿ.ಸಿ. ಅಡಿ ನೀಡಲಾದ ಹಕ್ಕು ಪತ್ರ, ಭಾವಚಿತ್ರ, ಸ್ವತ್ತಿನ ಜಿಪಿಎಸ್ ಛಾಯಾಚಿತ್ರ, ಮಾಲೀಕರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ಕಾರ್ಡ್, ಚಾಲ್ತಿ ಸಾಲಿನ ಕಂದಾಯ ರಸೀದಿ, ವಿದ್ಯುತ್ ಬಿಲ್, ಸಂಪರ್ಕ ಹೊಂದಿದ್ದಲ್ಲಿ ನೀರಿನ ಕಂದಾಯ ಪಾವತಿಸಿರುವ ರಸೀದಿಗಳನ್ನು ಸಲ್ಲಿಸಿ ಎ-ಖಾತೆಯನ್ನು ಪಡೆಯಬಹುದು.
'ಬಿ' ಖಾತೆ ಪಡೆಯಬಯಸುವವರು ಅನಧಿಕೃತ ಬಡಾವಣೆಯ ಭೂ ಪರಿವರ್ತನ ಆದೇಶ, ಸ್ವತ್ತಿನ ಮಾಲೀಕತ್ವದ ಪ್ರಮಾಣಪತ್ರ, ಆಸ್ತಿಗಳಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು, ಹಕ್ಕು ಖುಲಾಸೆ ಪತ್ರಗಳನ್ನು ನೀಡಬೇಕು. ಕಟ್ಟಡವಾಗಿದ್ದಲ್ಲಿ ಕಟ್ಟಡದ ನಕ್ಷೆ ಮತ್ತು ಪರವಾನಗಿ ಪತ್ರ, ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು, ಹಕ್ಕು ಖುಲಾಸೆ ಇತ್ಯಾದಿಗಳೊಂದಿಗೆ ಕಂದಾಯ ರಸೀದಿ, ನೀರಿನ ರಸೀದಿ, ವಿದ್ಯುತ್ ಬಿಲ್ ಇವುಗಳನ್ನು ಸಲ್ಲಿಸಿ 'ಬಿ' ಖಾತೆ ಪಡೆಯಬಹುದಾಗಿದೆ.
ಇ-ಖಾತೆ ಪಡೆಯುವುದು ಹೇಗೆ?;
ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಕರ್ನಾಟಕ ಮಹಾನಗರಪಾಲಿಕೆ ತೆರಿಗೆ ನಿಯಮ 2025 ಅನ್ನು ಜಾರಿಗೆ ತಂದಿದ್ದು ಇದರಂತೆ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎ-ಖಾತಾ ಮತ್ತು ಬಿ-ಖಾತೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 2024ರ ಸೆಪ್ಟೆಂಬರ್ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ/ ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಲಿದ್ದು ಇಂತಹ ಪ್ರಕರಣಗಳ ವ್ಯಾಪ್ತಿಗೆ ಬರುವ ಆಸ್ತಿ ಮಾಲೀಕರು ತಮ್ಮ ವ್ಯಾಪ್ತಿಯ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ನಿಗದಿತ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಗಳನ್ನು ಪಡೆಯಬಹುದು.
ಇ-ಖಾತೆ ಮಾಡಿಸುವಲ್ಲಿ ಇಸಿ ಪಡೆಯಲು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಇಸಿಗೆ ಅರ್ಜಿ ಸಲ್ಲಿಸಿದ 3 ದಿನಗಳ ಒಳಗೆ ಹಾಗೂ ಗರಿಷ್ಟ 1 ವಾರದೊಳಗೆ ಇಸಿ ನೀಡಬೇಕು ಹಾಗೂ ಆಸ್ತಿ ಮಾಲೀಕರ ವ್ಯವಹಾರದ ನಂತರದ ಒಂದು ವರ್ಷದ ಇಸಿ ಹಾಗೂ ಆನ್‌ಲೈನ್ ಇಸಿ ಯನ್ನು ಪರಿಗಣಿಸಬೇಕು ಎಂಬುದು ಸರ್ಕಾರದ ಸೂಚನೆಯಾಗಿದೆ. ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದೇ, ಇಸಿ ಪಡೆಯಲು ಸಮರ್ಪಕವಾಗಿ ಮಾಹಿತಿಯನ್ನು ಮಾಲೀಕರಿಗೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಇ-ಖಾತಾ ಅಭಿಯಾನ ಯಶಸ್ವಿಗೊಳ್ಳಲು ಸರ್ಕಾರ ಕ್ರಮ:
ಯಾವುದೇ ದೂರುಗಳು ಬಾರದಂತೆ ಎಚ್ಚರಿಕೆ ವಹಿಸಿ, ಇ-ಖಾತಾ ಅಭಿಯಾನವನ್ನು ಸಕ್ರಿಯವಾಗಿ ಕೈಗೊಳ್ಳಬೇಕು. ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಂಡು ಸಾರ್ವಜನಿಕರಿಗೆ ಉತ್ತಮವಾಗಿ ಸ್ಪಂದಿಸಬೇಕು. ಎ-ಖಾತೆ, ಬಿ-ಖಾತೆ ಪಡೆಯುವ ಕುರಿತು ಜನದಟ್ಟಣೆ ಇರುವ ಕಡೆ ಫ್ಲೆಕ್ಸ್, ಹೋರ್ಡಿಂಗ್, ಕಸದ ವಾಹನದಲ್ಲಿ ಜಿಂಗಲ್ಸ್, ಆಟೋ ಪ್ರಚಾರ, ಕರಪತ್ರಗಳ ಮೂಲಕ ವ್ಯಾಪಕವಾಗಿ ಪ್ರಚಾರ ನೀಡಬೇಕು. ಅಲ್ಲದೇ, ಸಹಾಯವಾಣಿ ಮೂಲಕ ಇ-ಖಾತೆ ಪಡೆಯಲು ಮಾಲೀಕರಿಗೆ ಸಹಕರಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ.
ಇ-ಖಾತಾ ಅಭಿಯಾನದ ಪ್ರಗತಿ:
ರಾಜ್ಯದಲ್ಲಿ ಖಾತೆ ರಹಿತ ಒಟ್ಟು 44,85,107 ಅಧಿಕೃತ ಆಸ್ತಿಗಳಿವೆ. ಇನ್ನು ಒಟ್ಟು 9,93,342 ಅನಧಿಕೃತ ಆಸ್ತಿಗಳಿವೆ. ಅಂದರೆ ಒಟ್ಟು 54,78,449 ಆಸ್ತಿಗಳಿಗೆ ಯಾವುದೇ ಖಾತೆಗಳು ಇಲ್ಲ. ಈ ಪೈಕಿ ಇ-ಖಾತಾ ಅಭಿಯಾನದಡಿ ಶೇ.43 ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ. ಒಟ್ಟು ಅಧಿಕೃತ ಆಸ್ತಿಗಳ ಪೈಕಿ 21,18,459 ಆಸ್ತಿಗಳಿಗೆ ಎ-ಖಾತಾ ನೀಡಲಾಗಿದ್ದರೆ, ಒಟ್ಟು ಅನಧಿಕೃತ ಆಸ್ತಿಗಳ ಪೈಕಿ 2,21,691 ಆಸ್ತಿಗಳಿಗೆ ಬಿ-ಖಾತಾ ನೀಡಲಾಗಿದೆ. ಅಂದರೆ ಇಲ್ಲಿವರೆಗೆ ಒಟ್ಟು 23,40,150 ಆಸ್ತಿಗಳಿಗೆ ಎ, ಬಿ ಖಾತೆಗಳನ್ನು ನೀಡಲಾಗಿದೆ. ಒಟ್ಟು 54,78,449 ಆಸ್ತಿಗಳ ಪೈಕಿ 23,40,150 ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ ಎಂದು ಹೇಳಿದೆ.
ವಹಿವಾಟು ನಡೆಸಲು ಅನುಕೂಲ
ಇ-ಖಾತಾ ಅಭಿಯಾನ ಕ್ರಮದಿಂದ ಅನಧಿಕೃತ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ತೆರಿಗೆ ಸಂಗ್ರಹಣೆ ಮಾಡಲು ಅನುಕೂಲವಾಗುತ್ತದೆ. ಅಲ್ಲದೇ, ಸಾರ್ವಜನರಿಗೆ ತಮ್ಮ ಆಸ್ತಿಯ ಇ-ಖಾತೆ ದೊರೆಯುವುದರಿಂದ ವಹಿವಾಟುಗಳನ್ನು ನಡೆಸಲು ಪ್ರಯೋಜನವಾಗುತ್ತಿದೆ. ಇ-ಖಾತಾ ನೀಡುವುದನ್ನು ಅಭಿಯಾನದ ರೂಪದಲ್ಲಿ ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಅಭಿಯಾನವನ್ನು ನಡೆಸುತ್ತಿರುವ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಲಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನಿಗದಿಪಡಿಸಿದ ಸಮಯದೊಳಗೆ ಇ-ಖಾತಾ ದೊರೆಯುವಂತೆ ಕ್ರಮ ಕೈಗೊಳ್ಳಲಿದ್ದಾರೆ. ಇ-ಖಾತಾ ಪಡೆಯಲು ಅನುಪರಿಸಬೇಕಾದ ಕ್ರಮಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆಯಿಂದ ಈಗಾಲಗೇ ಪ್ರಮಾಣಿತ ಕಾರ್ಯವಿಧಾನ, ಸುತ್ತೋಲೆ ಹೊರಡಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶಗಳನ್ನು ಜೋಡಣೆ ಮಾಡಲಾಗಿದ್ದು, ಇ-ಖಾತಾಗಳನ್ನು ತ್ವರಿತವಾಗಿ ನೀಡುವುದರಿಂದ ವಹಿವಾಟುಗಳನ್ನು ನಡೆಸಲು ಅನುಕೂಲವಾಗುತ್ತದೆ ಮತ್ತು ರಾಜ್ಯದ ಬೊಕ್ಕಸಕ್ಕೆ ಆದಾಯ ಶೇಖರಣೆ ಮಾಡಲು ಅನುಕೂಲವಾಗಲಿದೆ.
ಸಮಸ್ಯೆಗಳಿದ್ದಲ್ಲಿ ಯಾರನ್ನು ಸಂಪರ್ಕಿಸಬೇಕು?
ಇ-ಖಾತಾ ಪಡೆಯಲು ಸಮಸ್ಯೆಗಳಿದ್ದರೆ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿಯನ್ನು ಸಂಪರ್ಕಿಸಬೇಕು. ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾದ ಸಹಾಯವಾಣಿ: 6366674001 ಸಂಪರ್ಕಿಸಬಹುದಾಗಿದೆ.