ಇ-ಖಾತಾ ಮಾಡಿಸಲು ಡೆಡ್‌ ಲೈನ್ ನೀಡಿಲ್ಲ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ
x
ಕಂದಾಯ ಸಚಿವ ಕೃಷ್ಣ ಬೈರೇಗೌಡ

ಇ-ಖಾತಾ ಮಾಡಿಸಲು ಡೆಡ್‌ ಲೈನ್ ನೀಡಿಲ್ಲ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ

ಆಸ್ತಿ ಮಾಲೀಕರು ತಮ್ಮ ಅಂತಿಮ ಇ-ಖಾತಾ ಪ್ರತಿಗಳನ್ನು ಬಿಬಿಎಂಪಿ ಕಚೇರಿಗಳಿಗೆ ಭೇಟಿ ನೀಡದೆ ಆನ್‌ಲೈನ್‌ನಲ್ಲಿ ಪಡೆಯಬಹುದು. ತಮ್ಮ ಮನೆಯಿಂದಲೇ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು.


Click the Play button to hear this message in audio format

ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಯೋಗಿಕ ಹಂತದಲ್ಲಿರುವ ಇ-ಖಾತಾ ಅರ್ಜಿಗಳಿಗೆ ರಾಜ್ಯ ಸರ್ಕಾರ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸಾರ್ವಜನಿಕರು ಭಯಭೀತರಾಗಬೇಡಿ ಅಥವಾ ಸರ್ಕಾರಿ ಕಚೇರಿಗಳಿಗೆ ಧಾವಿಸುವ ಅಗತ್ಯವಿಲ್ಲ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸೋಮವಾರ ಹೇಳಿದರು.

ಇ-ಖಾತಾ ಬಗೆಗಿನ ಗೊಂದಲಗಳ ಬಗ್ಗೆ ಸೋಮವಾರ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬಳಿಕ ವಿಕಾಸಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಚಿವರು ಮಾತನಾಡಿದರು. ಬಿಬಿಎಂಪಿ ವ್ಯಾಪ್ತಿಯ ಕೆಲವು ಭಾಗದಲ್ಲಿ ಮಧ್ಯವರ್ತಿಗಳು ಇ-ಖಾತಾ ಗೆ ಸರ್ಕಾರ ಗಡುವು ನಿಗದಿ ಮಾಡಿದೆ ಎಂದು ಜನರಲ್ಲಿ ಗೊಂದಲ ಸೃಷ್ಟಿಸಿ, ಇ-ಖಾತೆ ಮಾಡಿಸಿಕೊಡುವುದಾಗಿ ಜನರನ್ನು ಸುಲಿಗೆ ಮಾಡುತ್ತಿರುವ ಘಟನೆ ಗಮನಕ್ಕೆ ಬಂದಿದೆ. ಆದರೆ, ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಸರ್ಕಾರ ಯಾವುದೇ ಗಡುವು ನಿಗದಿ ಮಾಡಿಲ್ಲ. ಹೀಗಾಗಿ, ಸಾರ್ವಜನಿಕರು ಗಾಬರಿಗೊಳಗಾಗದೆ, ಆತುರಪಡದೆ ತಮ್ಮ ಸಮಯ ನೋಡಿಕೊಂಡು ಇ-ಖಾತಾ ಮಾಡಿಸಿಕೊಳ್ಳಬಹುದು. ಊಹಾಪೋಹಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬೇಡಿ ಎಂದು ಅವರು ತಿಳಿಸಿದರು.

"ಆಸ್ತಿ ಮಾಲೀಕರು ತಮ್ಮ ಅಂತಿಮ ಇ-ಖಾತಾ ಪ್ರತಿಗಳನ್ನು ಬಿಬಿಎಂಪಿ ಕಚೇರಿಗಳಿಗೆ ಭೇಟಿ ನೀಡದೆ ಆನ್‌ಲೈನ್‌ನಲ್ಲೇ ಪಡೆಯಬಹುದು. ತಮ್ಮ ಮನೆಯಿಂದಲೇ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು. ಸಾರ್ವಜನಿಕರಿಗೆ ಸಹಾಯ ಮಾಡಲು, ಇ-ಖಾತಾ-ಸಂಬಂಧಿತ ಪ್ರಶ್ನೆಗಳನ್ನು ನಿರ್ವಹಿಸಲು ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಗಳ (ಎಆರ್‌ಒ) ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಮುಂದಿನ ಎರಡು ಮೂರು ದಿನಗಳಲ್ಲಿʼಬೆಂಗಳೂರು ಒನ್ʼ ಕಚೇರಿಗಳ ಮುಖಾಂತರ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ತಮ್ಮ ಇ-ಖಾತೆಯನ್ನು ಪಡೆದುಕೊಳ್ಳಬಹುದುʼʼ ಎಂದು ಅವರು ತಿಳಿಸಿದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ನಕಲಿ ನೋಂದಣಿಗಳನ್ನು ತಪ್ಪಿಸಿ, ಆಸ್ತಿ ಮಾಲೀಕರ ಮಾಲೀಕತ್ವವನ್ನು ರಕ್ಷಿಸಲು ಇ-ಖಾತಾ ವ್ಯವಸ್ಥೆ ಶಾಶ್ವತ ಪರಿಹಾರ ನೀಡಲಿದೆ. ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿರುವುದು ನಿಜ. ಆದರೆ, ಆಸ್ತಿ ಮಾಲೀಕರು ಒಂದು ಬಾರಿ ಇ-ಖಾತಾ ಮಾಡಿಸಿಕೊಂಡರೆ ಯಾವ ಮಧ್ಯವರ್ತಿಗಳ ಮುಲಾಜಿಲ್ಲದೆ ಬದುಕಬಹುದು. ಸಾರ್ವಜನಿಕರ ಅನುಕೂಲಕ್ಕಾಗಿಯೇ ಹಲವು ಸವಾಲುಗಳ ನಡುವೆಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಇದು ನಕಲಿ ನೋಂದಣಿಗಳನ್ನು ತಡೆಯುವುದಕ್ಕೂ ಇದು ಸಹಕಾರಿಯಾಗಲಿದೆ. ಇ-ಖಾತಾ ವ್ಯವಸ್ಥೆಯನ್ನು ಒಂದು ಬಾರಿ ಅನುಷ್ಠಾನ ಮಾಡಿದರೆ, ಇಡೀ ದೇಶದಲ್ಲಿ ಅತ್ಯುತ್ತಮ ಮಾದರಿ ಖಾತಾ ವ್ಯವಸ್ಥೆಯನ್ನು ನೀಡಿದಂತಾಗುತ್ತದೆ. ಸಣ್ಣ ಪುಟ್ಟ ಗೊಂದಲಗಳಿಗೆ ವಾರದಲ್ಲಿ ತೆರೆ ಬೀಳಲಿದೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

Read More
Next Story