Language Divide: ಅಮಿತ್ ಶಾ ಸವಾಲು ಹಾಕುವ ಮೊದಲೇ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಕಲಿಸುವ ಪ್ರಯತ್ನ

ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್​​ ಪದವಿ ಕಲಿಸುವ ಪ್ರಯತ್ನ ಕರ್ನಾಟಕದಲ್ಲಿ 5 ವರ್ಷದ ಹಿಂದೆಯೇ ಆರಂಭಗೊಂಡಿತ್ತು. ಹೆಚ್ಚೇಕೆ, ಮೈಸೂರು ವಿಶ್ವವಿದ್ಯಾಲಯವು 1970ರಲ್ಲೇ ಕನ್ನಡ ಮಾಧ್ಯಮದಲ್ಲಿ ಬಿಎಸ್‌ಸಿ ಆರಂಭಿಸಿತ್ತು.;

Update: 2025-03-08 10:29 GMT

ಕೃತಕ ಬುದ್ಧಿಮತ್ತೆ ರಚಿತ ಸಾಂದರ್ಭಿಕ ಚಿತ್ರ.

ಚೆನ್ನೈನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಷಾ ಸಮರದ ವಿಚಾರವನ್ನು ಮುನ್ನೆಲೆಗೆ ತಂದಿದ್ದರು. ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ತಮಿಳುನಾಡು ಸರ್ಕಾರದ ಆರೋಪಕ್ಕೆ ಪ್ರತಿಯಾಗಿ, ''ನಿಮ್ಮ ಭಾಷೆ ಮಾತ್ರ ನಿಮ್ಮ ರಾಜ್ಯಗಳಲ್ಲಿ ಇರಬೇಕು ಎಂದಾರೆ ಮಾತೃ ಭಾಷೆಯಲ್ಲಿಯೇ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್​ಗಳನ್ನು ಕಲಿಸಿ,'' ಎಂದು ಸವಾಲು ಎಸೆದಿದ್ದರು.

ಹೀಗಾಗಿ ಮಾತೃ ಭಾಷೆಯಲ್ಲಿ ವೃತ್ತಿಪರ ಕೋರ್ಸ್​ಗಳನ್ನು ಕಲಿಸುವ ವಿಷಯ ಚರ್ಚೆಗೆ ಬಂದಿದೆ. ಆದರೆ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಅಮಿತ್ ಶಾ ಸವಾಲು ಹಾಕುವ ಮೊದಲೇ ಮಾತೃಭಾಷೆಯಲ್ಲಿ ಕೋರ್ಸ್​ಗಳನ್ನು ನೀಡುವ ಪ್ರಯತ್ನಗಳು ನಡೆದಿವೆ ಎಂಬದು ವಾಸ್ತವ. ನಮ್ಮ ರಾಜ್ಯದಲ್ಲಿ ಕನ್ನಡದಲ್ಲಿ ಎಂಜಿನಿಯರಿಂಗ್ ಕಲಿಯಲು ಅವಕಾಶ ನೀಡಲಾಗಿದೆ. ಆದರೆ, ವಿದ್ಯಾರ್ಥಿಗಳ ನಿರಾಸಕ್ತಿ ಮಾತ್ರ ಯೋಜನೆಗೆ ತೊಡಕಾಗಿದೆ.    

ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್​​ ಪದವಿ ಕಲಿಸುವ ಪ್ರಯತ್ನ ಕರ್ನಾಟಕದಲ್ಲಿ 5 ವರ್ಷದ ಹಿಂದೆಯೇ ಆರಂಭಗೊಂಡಿತ್ತು. ಆದರೆ ಹೊಸ ಪ್ರಯತ್ನಕ್ಕೆ ಇದುವರೆಗೂ ಯಶಸ್ಸು ಸಿಕ್ಕಿಲ್ಲ. ಸಿವಿಲ್​ ಎಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್​ ಎಂಜಿನಿಯರಿಂಗ್​​ ಪದವಿಯನ್ನು ಕನ್ನಡದಲ್ಲಿ ಓದುವ ಅವಕಾಶವಿದ್ದರೂ ಒಬ್ಬನೇ ಒಬ್ಬ ವಿದ್ಯಾರ್ಥಿ ಕೋರ್ಸ್​ಗೆ ಸೇರಿಕೊಂಡಿಲ್ಲ.

ಎಲ್ಲಿಂದ ಆರಂಭ?

2021ರಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೇ ಎಂಜಿನಿಯರಿಂಗ್​ ಶಿಕ್ಷಣ ನೀಡಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅವಕಾಶ ನೀಡಿದ ಬಳಿಕ ಸಿವಿಲ್ ಮತ್ತು ಮೆಕ್ಯಾನಿಕಲ್ಎಂಜಿನಿಯರಿಂಗ್ ಕೋರ್ಸ್​ಗಳನ್ನು ಕನ್ನಡ ಮಾಧ್ಯಮದಲ್ಲಿ ನೀಡುವ ಪ್ರಯತ್ನಗಳು ಆರಂಭಗೊಂಡಿತು.

2021-22ನೇ ಶೈಕ್ಷಣಿಕ ವರ್ಷದಲ್ಲಿ ಐದು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಕನ್ನಡ ಮಾಧ್ಯಮದಲ್ಲಿ ಬಿಇ ಶಿಕ್ಷಣ ನೀಡಲು ನಿರ್ಧರಿಸಿದ್ದವು. ಸಿಇಟಿ ಕೌನ್ಸೆಲಿಂಗ್​ ವೇಳೆ ಕೆಲವು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲೇ ಕಲಿಸುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡಿದ್ದರೂ. ಕೊನೆಗೆ ಆ ಸೀಟಿಗೆ ಪ್ರವೇಶ ಪಡೆಯದೆ ನಿರ್ಧಾರ ಬದಲಿಸಿದ್ದರು.

2022-23ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲು ಚಿಕ್ಕಬಳ್ಳಾಪುರದ ಎಸ್​ಜೆಸಿ ಇನ್​ಸ್ಟಿಟ್ಯೂಟ್​ ಆಫ್​​ ಟೆಕ್ನಾಲಜಿ ಮತ್ತು ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್​ಸ್ಟಿಟ್ಯೂಟ್​ ಆಫ್​​ ಟೆಕ್ನಾಲಜಿ ಎಐಸಿಟಿಇಯಿಂದ ಅನುಮತಿ ಪಡೆದಿದ್ದವು. ಒಬ್ಬ ವಿದ್ಯಾರ್ಥಿ ಚಿಕ್ಕಬಳ್ಳಾಪುರದ ಎಸ್​ಜೆಸಿ ಇನ್ಸಿಟ್ಯೂಟ್ಆಫ್ ಟೆಕ್ನಾಲಜಿಯನ್ನು ಅಪ್ಷನ್ಎಂಟ್ರಿಯಲ್ಲಿ ಆಯ್ಕೆ ಮಾಡಿಕೊಂಡು ಸೀಟು ಪಡೆದಿದ್ದರೂ ಶುಲ್ಕ ಕಟ್ಟಿ ಸೇರ್ಪಡೆ ಆಗಲಿಲ್ಲ. ಮೈಸೂರಿನ ಮಹಾರಾಜ ಇನ್ಸಿಟ್ಯೂಟ್ಆಫ್ ಟೆಕ್ನಾಲಜಿಗೆ (ಎಂಐಟಿ) ಒಬ್ಬ ವಿದ್ಯಾರ್ಥಿ ದಾಖಲಾಗಿದ್ದರೂ, ಅಂತಿಮವಾಗಿ ಕೋರ್ಸ್​ ಬದಲಾಯಿಸಿಕೊಂಡಿದ್ದ.

2024ರಲ್ಲಿ ಒಬ್ಬ ವಿದ್ಯಾರ್ಥಿ ಮೆಕ್ಯಾನಿಕಲ್ ಎಂಜಿನಿಯರಿಂಗ್​ ವಿಷಯವನ್ನು ಕನ್ನಡ ಭಾಷೆಯಲ್ಲಿ ಓದಲು ವಿದ್ಯಾರ್ಥಿ ತನ್ನ ಹೆಸರು ದಾಖಲು ಮಾಡಿಕೊಂಡಿದ್ದರೂ ಓದು ಮುಂದುವರಿಸಲು ಹಿಂದೇಟು ಹಾಕಿದ್ದ. 

ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೂಕ್ತವಲ್ಲ

''ಮಾತೃ ಭಾಷೆಯಲ್ಲಿ ಮೆಡಿಕಲ್ ಅಥವಾ ಎಂಜಿನಿಯರಿಂಗ್ ಓದಬೇಕು ಎಂದು ಹೇಳುವುದು ಸ್ಪರ್ಧಾತ್ಮಕ ಜಗತ್ತಿಗೆ ಸೂಕ್ತವಲ್ಲ. ಪ್ರಮುಖವಾಗಿ ಉದ್ಯೋಗಾವಕಾಶಗಳ ವಿಚಾರಕ್ಕೆ ಬಂದಾಗ ದೇಶದ ಎಲ್ಲ ಕಡೆಯ ಅಭ್ಯರ್ಥಿಗಳನ್ನು ಮೀರಿ ಗೆಲ್ಲಬೇಕಾಗುತ್ತದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ಮಾತೃ ಭಾಷೆಯಲ್ಲಿ ವೃತ್ತಿಪರ ಕೋರ್ಸ್​ಗಳನ್ನು ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಭಾಷೆ ಸಂವಹನಕ್ಕೆ ಸೀಮಿತವಾಗಿದ್ದರೆ ಸಾಕು.  ಕೇಂದ್ರ ಗೃಹ ಸಚಿವ ಅಮಿತ್‌  ಶಾ ಅವರು ಈ ರೀತಿಯ ಸವಾಲು ಒಡ್ಡುವುದೇ ಅನಪೇಕ್ಷಿತ,'' ಎಂದು ಅಭಿಪ್ರಾಯಪಟ್ಟಿದ್ದಾರೆ ಶಿವಮೊಗ್ಗ ವಿವಿಯ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಡಿ. ಎಸ್​ ಪೂರ್ಣಾನಂದ.

ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಓದಲು ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ(ಕೆಡಿಎ) ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಗೆ ಸಲಹೆ ನೀಡಿ ಆ ವೇಳೆ ಪತ್ರ ಬರೆದಿತ್ತು. ಈ ವಿಚಾರದಲ್ಲೂ ಹೆಚ್ಚಿನ ಬೆಳವಣಿಗೆಗಳು ನಡೆದಿಲ್ಲ.

ಮೈಸೂರಿನ ಮಹಾರಾಜಾ ಇನ್​ಸ್ಟಿಟ್ಯೂಟ್ ಆಫ್​ ಟೆಕ್ನಾಲಜಿ, ಚಿಕ್ಕಬಳ್ಳಾಪುರದ ಎಸ್​ಜೆಸಿ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಬೀದರ್​ನ ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್​ಸ್ಟಿಟ್ಯೂಟ್ ಆಫ್​ ಟೆಕ್ನಾಲಜಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಓದುವ ಅವಕಾಶ ಇದೆ. ಆದರೆ, ಕಲಿಕೆಯ ಕಷ್ಟ ಹಾಗೂ ಉದ್ಯೋಗದ ಆತಂಕ ವಿದ್ಯಾರ್ಥಿಗಳ ಮುಂದಿರುವ ದೊಡ್ಡ ಸವಾಲು.

70ರ ದಶಕದಲ್ಲಿಯೇ ನಡೆದಿತ್ತು ಮಾತೃಭಾಷೆಯಲ್ಲಿ ವಿಜ್ಞಾನ ವಿಷಯಗಳ ಕಲಿಕೆ ಪ್ರಯತ್ನ

ಕರ್ನಾಟಕದ ಅತ್ಯಂತ ಹಳೆಯ ವಿಶ್ವ ವಿದ್ಯಾಲಯ ಎನಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾಲಯವು 1970ರಲ್ಲೇ ಬಿಎಸ್​ಸಿ (ಬ್ಯಾಚುಲರ್​ ಆಫ್​ ಸೈನ್ಸ್​) ಅನ್ನು ಕನ್ನಡ ಮಾಧ್ಯಮದಲ್ಲಿ ಕಲಿಯುವ ಅವಕಾಶ ನೀಡಿತ್ತು. ಮೊದಲ ಬಾರಿಗೆ ಕೆಲವೊಂದಿಷ್ಟು ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ವಿಜ್ಞಾನ ವಿಷಯ ​ ಕಲಿಯಲು ಮುಂದಾಗಿದ್ದರು. ಈ ಯೋಜನೆ ಆ ಬ್ಯಾಚ್​ನೊಂದಿಗೆ ಕೊನೆಗೊಂಡಿತ್ತು. ಕಲಿಕೆ ವೇಳೆಯ ಸವಾಲುಗಳಿಂದಾಗಿ ಮುಂದೆ ಯಾರೂ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಕಲಿಯಲು ಮುಂದಾಗಲಿಲ್ಲ. ಆ ಬ್ಯಾಚ್​ನ ಮೂರು ವರ್ಷದ ಕಲಿಕೆಯೊಂದಿಗೆ ಪ್ರಯತ್ನ ಕೊನೆಗೊಂಡಿತು ಎಂದು ಪ್ರಸಾರಾಂಗದ ಮಾಜಿ ಉಪ ನಿರ್ದೇಶಕರಾಗಿದ್ದ ಸುದರ್ಶನ್ ಸಾ. ರಾ​. ಹೇಳಿದ್ದಾರೆ.

ಜಾಗತಿಕ ಸ್ಪರ್ಧೆಗಳು ಇನ್ನೂ ಶುರುವಾಗದ ಸಂದರ್ಭದಲ್ಲಿ ಮತ್ತು ಭಾಷಾಂತರದ ಅವಕಾಶಗಳು ಅತ್ಯಂತ ಕನಿಷ್ಠವಾಗಿದ್ದ ವೇಳೆಯಲ್ಲಿಯೇ ಕರ್ನಾಟಕದಲ್ಲಿ ಇಂಥದ್ದೊಂದು ಪ್ರಯತ್ನ ನಡೆದಿತ್ತು. ಆದರೆ, ಅದು ಕಾರ್ಯಸಾಧುವಲ್ಲ ಎಂಬುದು ವಿವಿಗೆ ಮನವರಿಕೆಯಾದ ಬಳಿಕ ನಿಲ್ಲಿಸಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಕೋರ್ಸ್ ಕತೆಯೇನು?

ಕರ್ನಾಟಕದಲ್ಲಿ ವೈದ್ಯಕೀಯ ಪದವಿಯನ್ನು ಕನ್ನಡದಲ್ಲಿ ಕಲಿಸುವ ಪ್ರಯತ್ನಗಳು ನಡೆದಿಲ್ಲ. ಆದರೆ, ವೈದ್ಯಕೀಯ ಪದವಿ ಪಡೆಯುವ ವಿದ್ಯಾರ್ಥಿಗಳು ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು ಎಂದು ಉನ್ನತ ಶಿಕ್ಷಣ ಸಮಿತಿ ನಿರ್ಧಾರ ಕೈಗೊಂಡಿತ್ತು. ಸ್ಥಳೀಯವಾಗಿ ಸಂಹವನಕ್ಕೆ ಸುಲಭವಾಗಲಿ ಎಂಬುದೇ ಇದರ ಉದ್ದೇಶವಾಗಿತ್ತು. ಕೆಲವೊಂದು ಸಂಸ್ಥೆಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದವು. 

ತಮಿಳುನಾಡಿನಲ್ಲಿಯೂ ವಿಫಲ

ತಮಿಳುನಾಡು ಸರ್ಕಾರ 2010ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಎಂ. ಕರುನಾನಿಧಿ ಆಡಳಿತದಲ್ಲಿ ಅಣ್ಣಾ ವಿಶ್ವವಿದ್ಯಾಲಯದಲ್ಲಿ ತಮಿಳು ಮಾಧ್ಯಮದಲ್ಲಿ ಸಿವಿಲ್​ ಮತ್ತು ಮೆಕ್ಯಾನಿಕಲ್​ ಎಂಜಿನಿಯರಿಂಗ್ ಕೋರ್ಸುಗಳನ್ನುಆರಂಭಿಸಿದ್ದರು. ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಶಿಕ್ಷಣವನ್ನು ಸುಲಭಗೊಳಿಸುವ ಉದ್ದೇಶ ಇತ್ತು.

ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದ್ದರೂ ವರ್ಷಗಳು ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಗಣನೀಯ ಕುಸಿತ ಕಂಡುಬಂದಿತು. 2023ರಲ್ಲಿ ಅಣ್ಣಾ ವಿವಿ ತನ್ನ 11 ಕಾಲೇಜುಗಳಲ್ಲಿ ತಮಿಳು ಮಾಧ್ಯಮದ ಎಂಜಿನಿಯರಿಂಗ್ ಕೋರ್ಸುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿತ್ತು. ಬಳಿಕ, ತಮಿಳುನಾಡಿನ ಉನ್ನತ ಶಿಕ್ಷಣ ಇಲಾಖೆಯ ವಿನಂತಿಯ ಮೇರೆಗೆ ಈ ನಿರ್ಧಾರವನ್ನು ಹಿಂಪಡೆದರೂ ವಿದ್ಯಾರ್ಥಿಗಳ ಪ್ರತಿಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ.

ಇದೀಗ ಕರುನಾನಿಧಿ ಅವರ ಪುತ್ರ ಸಿಎಂ ಸ್ಟಾಲಿನ್ ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪ್ರಾರಂಭಿಸುವ ಯೋಜನೆ ಪ್ರಕಟಿಸಿದ್ದರೂ. ಅದಕ್ಕೂ ನಿರೀಕ್ಷಿತ ಬೆಂಬಲ ದೊರಕಿಲ್ಲ.

Tags:    

Similar News