10 ಜನರನ್ನು ಆಸ್ಪತ್ರೆಗೆ ಅಟ್ಟಿ, 25 ಮಂದಿ ಊರು ಬಿಡಿಸಿದ ಕುರ್‌ಕುರೇ...!
ಖರೀದಿಸಿದ ಕುರ್‌ಕುರೇ ಎಕ್ಸ್‌ಪೈರಿ ಡೇಟ್ ಆಗಿದ್ದು ಬೇರೆ ಕುರ್ ಕುರೆ ನೀಡುವಂತೆ ಕೇಳಿದ ಗ್ರಾಹಕರೊಂದಿಗೆ ಅಂಗಡಿಯವರು ತೆಗೆದ ತಗಾದೆ ವಿಕೋಪಕ್ಕೆ ಹೋಗಿ ಆದ ಅನಾಹುತ ಒಂದೆರಡಲ್ಲ..
ಕುರ್‌ಕುರೇ ಪ್ಯಾಕ್ ಒಂದು ಹಳ್ಳಿಯ ಹತ್ತಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ಅಟ್ಟಿ, ಸುಮಾರು 25 ಮಂದಿಯನ್ನು ಊರು ಬಿಡಿಸಿದ ಅಚ್ಚರಿಯ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ನಡೆದಿದೆ.
ಕುರ್‌ಕುರೇಗಾಗಿ ಮಕ್ಕಳು ಜಗಳಾಡುವುದು, ಕಿತ್ತಾಡುವುದು ಸಹಜ. ಆದರೆ, ಇಲ್ಲಿ ಕುರ್‌ಕುರೇ ಪ್ಯಾಕಿನ ವಿಷಯದಲ್ಲಿ ದೊಡ್ಡವರು ಬಡಿದಾಡಿದ್ದಾರೆ. ಎರಡು ಕುಟುಂಬಗಳ ನಡುವೆ ಮಾರಾಮಾರಿಯೇ ನಡೆದುಹೋಗಿದೆ.
ಕುರ್‌ಕುರೇ ಪ್ಯಾಕ್ ಎರಡು ಕುಟುಂಬಗಳ ನಡುವೆ ತಂದಿಟ್ಟ ಜಗಳದಿಂದಾಗಿ ಬೀದಿ ರಂಪಾಟ ಆರಂಭವಾಗಿ ಕೊನೆಗೆ ಅದು ಮಾರಾಮಾರಿಯಲ್ಲಿ ಅಂತ್ಯಕಂಡಿದೆ. ಎರಡು ಕುಟುಂಬಗಳ ನಡುವೆ ನಡೆದ ಮಾರಾಮಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಡೆದಿದ್ದೇನು?
ಹೊನ್ನೇಬಾಗಿ ಗ್ರಾಮದಲ್ಲಿ ಅತೀಫ್ ಉಲ್ಲಾ ಎಂಬುವವರು ಹೊನ್ನೆಬಾಗಿ ಗ್ರಾಮದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದು, ಅವರ ಅಂಗಡಿಯಿಂದ ಸದ್ದಾಂ ಎಂಬುವವರ ಮಕ್ಕಳು ಕುರ್ ಕುರೇ ಖರೀದಿಸಿದ್ದರು. ಆದರೆ, ಕುರ್ ಕುರೇ ಪ್ಯಾಕ್ ಮೇಲಿನ ದಿನಾಂಕ ಗಮನಿಸಿದಾಗ ಅದು ಈಗಾಗಲೇ ಅವಧಿ ಮೀರಿದೆ(ಎಕ್ಸ್‌ಪೈರಿ ಡೇಟ್) ಎಂದು ಗೊತ್ತಾಗಿತ್ತು. ಹಾಗಾಗಿ ಬೇರೆ ಕುರ್ ಕುರೇ ಪ್ಯಾಕ್ ನೀಡುವಂತೆ ಸದ್ದಾಂ ಮನೆಯವರು ಆಗ್ರಹಿಸಿದ್ದಾರೆ. ಆದರೆ, ಅಂಗಡಿಯವರು ಕೊಡಲು ಆಗುವುದಿಲ್ಲ ಎಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಎರಡು ಕುಟುಂಬಗಳ ಮಧ್ಯೆ ಬೀದಿ ಹೊಡೆದಾಟ ನಡೆದಿದೆ.
ಅಷ್ಟಕ್ಕೆ ಗಲಾಟೆ ಮುಗಿಯದೆ ಮಾರನೇ ದಿನ ಸದ್ದಾಂ, ಅಂಗಡಿ ಮಾಲೀಕ ಅತೀಫ್ ವಿರುದ್ಧ ದೂರು ನೀಡಿದ್ದಾರೆ. ದೂರು ನೀಡಿದ್ದಕ್ಕೆ ರೊಚ್ಚಿಗೆದ್ದ ಅತೀಫ್ ಕಡೆಯ 30ಕ್ಕೂ ಹೆಚ್ಚು ಮಂದಿ ಸದ್ದಾಂ ಮೇಲೆ ಹಲ್ಲೆ ಮಾಡಿ, ರಸ್ತೆ ಬದಿಯ ಅವರ ಹೋಟೆಲ್ ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಗಲಾಟೆ ಬಿಡಿಸಲು ಬಂದವರ ಮೇಲೂ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಊರು ಬಿಟ್ಟ 25 ಮಂದಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಿಂದ ಗ್ರಾಮದ 25 ಜನ ಊರು ತೊರೆದಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದು, ಗ್ರಾಮದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಎರಡೂ ಕಡೆಯವರಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಕುರಿತು ಚನ್ನಗಿರಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಜಗದೀಶ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ಮಾಹಿತಿ ನೀಡಿ, ಘಟನೆ ಸಂಬಂಧ ಎರಡೂ ಕಡೆಯವರ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಊರು ಬಿಟ್ಟು ಹೋಗಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.