Bus Fare Hike | ಬಸ್ ಪ್ರಯಾಣ ದರ ಏರಿಕೆಗೆ ಹೆಚ್ ಡಿ ಕುಮಾರಸ್ವಾಮಿ ಕಿಡಿ
ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಸಮ್ಮತಿಸಿದೆ. ಸರ್ಕಾರದ ಈ ನಡೆಯನ್ನು ಪ್ರತಿಪಕ್ಷಗಳು ಟೀಕಿಸಿವೆ. ಈಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಪ್ರಯಾಣ ದರ ಏರಿಕೆಯನ್ನು ಖಂಡಿಸಿದ್ದಾರೆ.;
ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಸಿರುವ ಸರ್ಕಾರದ ಕ್ರಮ ಪ್ರತಿಪಕ್ಷಗಳ ವ್ಯಾಪಕ ಟೀಕೆಗೆ ಗುರಿಯಾಗಿದೆ. ಗ್ಯಾರಂಟಿ ಯೋಜನೆಗಳಿಂದ ಸಾರಿಗೆ ನಿಗಮಗಳು ನಷ್ಟದ ಸುಳಿಗೆ ಸಿಲುಕಿವೆ. ಸಾರಿಗೆ ನಿಗಮಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಪ್ರಯಾಣಿಕರ ಮೇಲೆ ದರ ಏರಿಕೆಯ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಬಸ್ ಪ್ರಯಾಣ ದರವನ್ನು ಶೇ 15 ರಷ್ಟು ಏರಿಕೆ ಮಾಡಿದ ರಾಜ್ಯ ಸರ್ಕಾರದ ನಡೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನರ ಮೇಲೆ ಬರೆ ಎಳೆಯುವುದೇ ಕೆಲಸವಾಗಿದೆ. ಜನರಿಗೂ ಮಾಮೂಲಿ ಆಗಿಬಿಟ್ಟಿದೆ ಎಂದು ಹರಿಹಾಯ್ದಿದ್ದಾರೆ.
ಪ್ರತಿಭಟಿಸದ ಜನರ ಬಗ್ಗೆ ಬೇಸರ
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ದರ ಏರಿಕೆ ಅಚ್ಚರಿ ವಿಷಯವೇನಲ್ಲ. ಸರ್ಕಾರ ಪ್ರಯಾಣ ದರವನ್ನು ಶೇ.15ರಷ್ಟು ಏರಿಕೆ ಮಾಡಿ ಜನರ ಮೇಲೆ ಬರೆ ಎಳೆದಿದೆ. ಆದರೆ, ಜನರಿಗೆ ಬೆಲೆ ಏರಿಕೆ ಅಭ್ಯಾಸವಾಗಿ ಬಿಟ್ಟಿದೆ. ಎರಡು ದಿನ ಆಕ್ರೋಶ ವ್ಯಕ್ತಪಡಿಸಿ ಮೂರನೇ ದಿನ ಮರೆತು ಹೋಗುತ್ತಾರೆ. ಇದು ನೈಜ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ಯಾರೆಂಟಿ ಸಂತೋಷದಲ್ಲಿ ಜನರು
ಕಾಂಗ್ರೆಸ್ ಸರ್ಕಾರ ಡಿಸೇಲ್, ಪೆಟ್ರೋಲ್ ಮೇಲೆ ಸೆಸ್ ಹಾಕಿತ್ತು. ಜನರು ಪ್ರತಿಭಟನೆ ಮಾಡಿಲ್ಲ. ಮುದ್ರಾಂಕ ಶುಲ್ಕ, ಮಾರ್ಗಸೂಚಿ ಮೌಲ್ಯ, ಮದ್ಯದ ದರ ಏರಿಕೆ ಮಾಡಿದರೂ ತಲೆ ಕೆಡಿಸಿಕೊಂಡಿಲ್ಲ. ಹಾಲಿನ ದರದ ಜೊತೆಗೆ ಈಗ ನೀರಿನ ದರವೂ ಏರಿಕೆ ಆಗುತ್ತದೆ ಎಂಬ ಮಾಹಿತಿ ಇದೆ. ಹೀಗೆ ಎಲ್ಲಾ ದರಗಳನ್ನು ಸರ್ಕಾರ ಏರಿಕೆ ಮಾಡುತ್ತಿದೆ. ಆದರೆ, ಜನರು ಮಾತ್ರ ಗ್ಯಾರಂಟಿ ಸಂತೋಷದಲ್ಲಿ ಮುಳುಗಿ, ಆಕ್ರೋಶ ವ್ಯಕ್ತಪಡಿಸುತ್ತಿಲ್ಲ ಎಂದುಕುಮಾರಸ್ವಾಮಿ ಹೇಳಿದ್ದಾರೆ.
ಅನಿವಾರ್ಯ ಸಂದರ್ಭಗಳಲ್ಲಿ ಬೆಲೆ ಏರಿಕೆ ನೋಡಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅನಿವಾರ್ಯವಿದ್ದಾಗ ಬೆಲೆ ಏರಿಕೆ ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆ ಘೋಷಿಸಿ ತಪ್ಪು ಮಾಡದಿರುವ ಜನರ ಮೇಲೆ ಬರೆ ಎಳೆಯುತ್ತಿದೆ. ಎಲ್ಲಾ ಸಮಸ್ಯೆಗಳನ್ನೂ ಸರ್ಕಾರವೇ ಮೈಮೇಲೆ ಎಳೆದುಕೊಂಡಿದೆ ಎಂದು ಟೀಕಿಸಿದ್ದಾರೆ
ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಈ ಸರ್ಕಾರ ಬಂದ ದಿನದಿಂದ ಇದೇ ನಡೆಯುತ್ತಿದೆ. ಹೀಗೆ ಹೇಳುತ್ತಾ ಹೋದರೆ ಬಹಳಷ್ಟು ಹೇಳಬಹುದು. ಸಂಕ್ರಾಂತಿ ಬಳಿಕ ಸರ್ಕಾರದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.