ಈಶ್ವರಪ್ಪನವರೇ ಕೈ ಮುಗಿಯುತ್ತೇನೆ ವಾಪಸ್ ಬನ್ನಿ: ಬಿ.ವೈ ವಿಜಯೇಂದ್ರ!
ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಈಶ್ವರಪ್ಪ ಪಾತ್ರ ದೊಡ್ಡದಿದೆ. ಪರಿಸ್ಥಿತಿ, ತಪ್ಪು ಸಂದರ್ಭದಿಂದ ಈ ರೀತಿಯ ಸನ್ನಿವೇಶ ನಿರ್ಮಾಣ ಆಗಿದೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.;
"ಕೆ.ಎಸ್ ಈಶ್ವರಪ್ಪ ಅವರು ಹಿರಿಯರು. ನಮ್ಮಿಂದ ಏನಾದರೂ ನೋವಾಗಿದ್ದರೆ ದಯವಿಟ್ಟು ಅದನ್ನೆಲ್ಲ ಮರೆತು ಬಿಜೆಪಿ ಪಕ್ಷಕ್ಕೆ ಸಹಕಾರ ನೀಡಬೇಕು" ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್ ಈಶ್ವರಪ್ಪ ಹಿರಿಯರು. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ದೊಡ್ಡದಿದೆ. ಪರಿಸ್ಥಿತಿ, ತಪ್ಪು ಸಂದರ್ಭದಿಂದ ಈ ರೀತಿಯ ಸನ್ನಿವೇಶ ನಿರ್ಮಾಣ ಆಗಿದೆ. ಕಾಲ ಇನ್ನೂ ಮಿಂಚಿಲ್ಲ ವಾಪಸ್ ಬನ್ನಿ, ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿಯ ಹಿತದೃಷ್ಟಿಯಿಂದ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವುದಕ್ಕೆ ಈಶ್ವರಪ್ಪ ಸಹಕಾರ ನೀಡಬೇಕು. ಈಶ್ವರಪ್ಪ ಅವರು ಬೆಂಬಲ ನೀಡುವ ಮೂಲಕ ರಾಘವೇಂದ್ರನನ್ನು ಗೆಲ್ಲಿಸಬೇಕು. ಕೇಂದ್ರದ ವರಿಷ್ಠರು ಕೆ.ಎಸ್ ಈಶ್ವರಪ್ಪ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ. ವರಿಷ್ಠರು ಒಂದೆರಡು ದಿನಗಳಲ್ಲಿ ಕೆ.ಎಸ್ ಈಶ್ವರಪ್ಪ ಅವರೊಂದಿಗೆ ಮಾತನಾಡುವ ಸಾಧ್ಯತೆ ಇದೆ. ಇನ್ನು ಕೇಂದ್ರ ಸರ್ಕಾರದ ಯೋಜನೆ ರಾಜ್ಯದ ಜನರಿಗೆ ತಲುಪಬಾರದು ಎನ್ನುವ ದುರುದ್ದೇಶದಿಂದ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜನರೇ ರಾಘವೇಂದ್ರ ಅವರ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರ ಅವರು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಇನ್ನು ಹಾಸನದಲ್ಲಿ ಪ್ರೀತಂಗೌಡ ಅವರೊಂದಿಗೆ ಮಾತನಾಡಿದ್ದು, ಮೈಸೂರು - ಚಾಮರಾಜನಗರ ಜವಾಬ್ದಾರಿ ಕೊಟ್ಟಿದ್ದೇವೆ ಎಲ್ಲವೂ ಸರಿ ಹೋಗಲಿದೆ. ಪ್ರಜ್ವಲ್ ರೇವಣ್ಣ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಕ್ಕೆ ಬಿಡುವುದಿಲ್ಲ. ಲೋಕಸಭೆ ಚುನಾವಣೆಯ ನಂತರವೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಬೇಕು. ಗ್ಯಾರಂಟಿ ನಿಲ್ಲಿಸಿದರೆ ನಾವು ಸುಮ್ಮನಿರುವುದಿಲ್ಲ. ಗ್ಯಾರಂಟಿ ಯೋಜನೆಗಳ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದೀರಿ. ಅದನ್ನು ಮುಂದುವರಿಸಲೇಬೇಕು ಎಂದು ಒತ್ತಾಯಿಸಲಿದ್ದೇವೆ. ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರಿಗೆ ಸಹಾಯ ಮಾಡಿಲ್ಲ. ಯಡಿಯೂರಪ್ಪ ಅವರ ಸರ್ಕಾರವಿದ್ದಾಗ ಸಾಕಷ್ಟು ಅನುದಾನ ಕೊಟ್ಟಿದ್ದರು. ಈಗ ಪರಿಹಾರ ಕೊಡಲು ಕಾಂಗ್ರೆಸ್‌ನವರಿಗೆ ಏನು ದಾಡಿಯಾಗಿದೆ. ರೈತರಿಗೆ ಮೊದಲು ಪರಿಹಾರ ಕೊಡಲಿ ಎಂದು ಹೇಳಿದರು.
ಕರ್ನಾಟಕದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿ ಪರ ಒಲವು ಕಾಣಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಾಗುತ್ತಲ್ಲೇ ಇದೆ. ಈ ಬೆಳವಣಿಗೆ ಕಾಂಗ್ರೆಸ್ ನಿದ್ದೆಗೆಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಲ್ಕೈದು ಬಾರಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಬರಲಿದ್ದಾರೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ನೀಡಿಲ್ಲ ಎಂದು ಅಸಮಾಧಾನಗೊಂಡಿರುವ ಕೆ.ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.