ಸಿಎಂ ಆರೋಪ ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕೋಟ ಶ್ರೀನಿವಾಸ ಪೂಜಾರಿ ಧರಣಿ

"ಈಗಿನ ಅಧಿಕಾರಿಗಳೂ ಸಹ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಿಂದೆ ಅವ್ಯವಹಾರ ನಡೆದಿಲ್ಲ ಎಂದು ಸಿಎಂಗೆ ಮಾಹಿತಿ ನೀಡಿದ್ದಾರೆ. ಸತ್ಯಕ್ಕೆ ಎಂದೂ ಅಪಚಾರ ಆಗಬಾರದು. ಹೀಗಾಗಿ ಸೃಷ್ಟಿಕರಣಕ್ಕಾಗಿ ಸಿಎಂಗೆ ಪತ್ರ ಬರೆದಿದ್ದೇನೆ" ಎಂದು ಹೇಳಿದ್ದರು. ತಮ್ಮ ಪತ್ರಕ್ಕೆ ಸಿಎಂ ಪ್ರತಿಕ್ರಿಯಿಸದೇ ಇರುವ ಹಿನ್ನೆಲೆಯಲ್ಲಿ ಅವರು ಧರಣಿ ನಡೆಸಿದ್ದಾರೆ.;

Update: 2024-07-29 06:32 GMT

ತಾವು ಸಚಿವರಾಗಿದ್ದ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮ ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಹಗರಣ ಆಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪವನ್ನು ವಿರೋಧಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸೋಮವಾರ(ಜು.29) ಸಾಂಕೇತಿಕ ಧರಣಿ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಅವರು, ʻʻಮುಖ್ಯಮಂತ್ರಿಗಳೇ ನಮ್ಮ ಮೇಲೆ ಸತ್ಯಕ್ಕೆ ದೂರವಾದ ಆರೋಪವನ್ನು ಮಾಡಿದ್ದೀರಿ, ಅದನ್ನು ಹಿಂಪಡೆಯಿರಿ. ಇಲ್ಲವಾದರೆ ಸಿಬಿಐ ತನಿಖೆಗೆ ಶಿಫಾರಸು ಮಾಡಿ ಎಂದು ಸಿದ್ದರಾಮಯ್ಯರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಆದರೆ ಈ ಬಗ್ಗೆ ಮುಖ್ಯಮಂತ್ರಿಯ ಮೌನ ನೋವು ತಂದಿದೆ. ಆದ್ದರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಇಟ್ಟುಕೊಂಡು ಸಾಂಕೇತಿಕವಾಗಿ ಧರಣಿ ಕೂತಿದ್ದೇನೆ, ರಾಜ್ಯದ ಜನತೆ ತೀರ್ಪು ನೀಡಲಿʼʼ ಎಂದು ಹೇಳಿದ್ದಾರೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಶಾಸಕ ಸುರೇಶ್ ಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ‌ ನಾರಾಯಣ ಸ್ವಾಮಿ, ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಎನ್. ರವಿಕುಮಾರ್, ಶಾಂತರಾಮ ಸಿದ್ದಿ ಮೊದಲಾದವರು ಸಾಥ್ ನೀಡಿದರು.

ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ನಡೆಸಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಸಚಿವರಾಗಿದ್ದಾಗ ಅವರು ನಿಭಾಯಿಸಿದ ಸಮಾಜ ಕಲ್ಯಾಣ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂದು ಉಲ್ಲೇಖಿಸಿದ್ದರು.

ಸಿದ್ದರಾಮಯ್ಯ ಅವರ ಈ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ವಾರವೇ ಪ್ರತಿಕ್ರಿಯಿಸಿದ್ದ ಕೋಟ, ʻʻನಾನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದ ಅವಧಿಯಲ್ಲಿ ಕೊಳವೆಬಾವಿ ನಿರ್ಮಾಣ ಹಾಗೂ ಭೋವಿ ನಿಗಮದಲ್ಲಿ ಅವ್ಯವಹಾರ ಮಾಡಿದ್ದಾಗಿ ಆರೋಪಿಸಿದ್ದಾರೆ. ಇದರಲ್ಲಿ ಸತ್ಯಾಂಶ ಇಲ್ಲ. ಹೀಗಾಗಿ ವಾರದೊಳಗೆ ಸಿಎಂ ಸಿದ್ದರಾಮಯ್ಯ ಆರೋಪ ಹಿಂಪಡೆಯಬೇಕು. ಅಥವಾ ನನ್ನ ವಿರುದ್ಧ ಸಿಬಿಐ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಸತ್ಯ ಪ್ರತಿಪಾದನೆಗಾಗಿ ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸುತ್ತೇನೆ" ಎಂದು ತಿಳಿಸಿದ್ದರು.

"ಈಗಿನ ಅಧಿಕಾರಿಗಳೂ ಸಹ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಿಂದೆ ಅವ್ಯವಹಾರ ನಡೆದಿಲ್ಲ ಎಂದು ಸಿಎಂಗೆ ಮಾಹಿತಿ ನೀಡಿದ್ದಾರೆ. ಸತ್ಯಕ್ಕೆ ಎಂದೂ ಅಪಚಾರ ಆಗಬಾರದು. ಹೀಗಾಗಿ ಸೃಷ್ಟಿಕರಣಕ್ಕಾಗಿ ಸಿಎಂಗೆ ಪತ್ರ ಬರೆದಿದ್ದೇನೆ" ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರು ಕೋಟ ಅವರ ಪತ್ರಕ್ಕೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಸೋಮವಾರ(ಜು.29) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ್ದಾರೆ.

Tags:    

Similar News