ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಎನ್. ರಾಜಣ್ಣ 7ನೇ ಬಾರಿಗೆ ಅವಿರೋಧ ಆಯ್ಕೆ
ಆರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರಾಜಣ್ಣ, ಈಗ 7ನೇ ಬಾರಿಗೆ ಈ ಸ್ಥಾನವನ್ನು ಅಲಂಕರಿಸಿದ್ದು, ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.;
ಕೆ. ಎನ್ ರಾಜಣ್ಣ
ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ (DCC Bank) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತೊಮ್ಮೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ರಾಜಣ್ಣ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ವಿಷಯವಾಗಿತ್ತು. ಇದಕ್ಕೂ ಮೊದಲು ಆರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರಾಜಣ್ಣ, ಈಗ 7ನೇ ಬಾರಿಗೆ ಈ ಸ್ಥಾನವನ್ನು ಅಲಂಕರಿಸಿದ್ದು, ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ 14 ಜನ ನಿರ್ದೇಶಕರನ್ನೊಳಗೊಂಡ ಆಡಳಿತ ಮಂಡಳಿ ರಾಜಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿತು. ಚುನಾವಣಾ ಫಲಿತಾಂಶ ತಿಳಿದ ಕೂಡಲೇ, ಬ್ಯಾಂಕ್‌ನ ಮುಂಭಾಗದಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.
ಸಹಕಾರಿ ಕ್ಷೇತ್ರದಲ್ಲಿ ದೀರ್ಘಕಾಲದ ಪ್ರಭಾವ
1972ರಿಂದಲೇ ಸಹಕಾರಿ ಚಳವಳಿಯಲ್ಲಿ ಸಕ್ರಿಯರಾಗಿರುವ ಕೆ.ಎನ್. ರಾಜಣ್ಣ, ರಾಷ್ಟ್ರೀಯ ಕೃಷಿ ಸಹಕಾರ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ನಿರ್ದೇಶಕರಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಏಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾಗಿ (2001–2005 ಮತ್ತು 2015–2020) ಎರಡು ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದರು.
ರಾಜಕೀಯ ಬದುಕು
ರಾಜಣ್ಣ ತಮ್ಮ ರಾಜಕೀಯ ಜೀವನವನ್ನು 1972ರಲ್ಲಿ ಕಾಂಗ್ರೆಸ್‌ನ ಕ್ಯಾತಸಂದ್ರ ಘಟಕದ ಕಾರ್ಯದರ್ಶಿಯಾಗಿ ಆರಂಭಿಸಿದರು. 1998ರಲ್ಲಿ ವಿಧಾನ ಪರಿಷತ್‌ಗೆ ಪ್ರವೇಶ ಪಡೆದ ಅವರು, 2004ರಲ್ಲಿ ಜಡಿಎಸ್‌ನಿಂದ ಶಾಸಕನಾಗಿ ಗೆದ್ದರು. ನಂತರ ಮಧುಗಿರಿ ಕ್ಷೇತ್ರದಿಂದ 2013 ಮತ್ತು 2023ರಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು. 2023ರಲ್ಲಿ ಸಹಕಾರ ಸಚಿವರಾಗಿ ಸೇವೆ ಸಲ್ಲಿಸಿದ ಅವರು, ಆಗಸ್ಟ್ 2025ರಲ್ಲಿ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಸಂಪುಟದಿಂದ ಅವರನ್ನು ಕೈಬಿಡಲಾಯಿತು.
ತುಮಕೂರು ಡಿಸಿಸಿ ಬ್ಯಾಂಕ್‌ವು ಜಿಲ್ಲೆಯ ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ರೈತರಿಗೆ, ಸಣ್ಣ ಉದ್ಯಮಿಗಳಿಗೆ ಮತ್ತು ಗ್ರಾಮೀಣ ಜನತೆಗೆ ಸಾಲ, ಠೇವಣಿ ಸೇರಿದಂತೆ ವಿವಿಧ ಆರ್ಥಿಕ ಸೇವೆಗಳನ್ನು ಒದಗಿಸುತ್ತದೆ. ರಾಜಣ್ಣ ಅವರ ಅವಿರೋಧ ಆಯ್ಕೆ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ.