ಸಂತ್ರಸ್ತೆ ಅಪಹರಣ ಪ್ರಕರಣ: :ಎರಡನೇ ಆರೋಪಿ‌ ಎಸ್‌ಐಟಿ ವಶಕ್ಕೆ

ಸತೀಶ್ ಬಾಬು ಪ್ರಕರಣದಲ್ಲಿ ಮುಖ್ಯವಾದ ಆರೋಪಿಯಾಗಿದ್ದು, ಅಪಹರಣಕ್ಕೊಳಗಾದ ಮಹಿಳೆಯನ್ನು ಕೆ.ಆರ್. ನಗರ, ಹೊಳೆನರಸೀಪುರ ಎಲ್ಲ ಕಡೆ ಸುತ್ತಾಡಿಸಿದ್ದಾನೆ.;

Update: 2024-05-06 14:34 GMT
ಸಂತ್ರಸ್ತ ಮಹಿಳೆ ಅಪಹರಣ ಆರೋಪ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬು.
Click the Play button to listen to article

ಅಶ್ಲೀಲ ವಿಡಿಯೋ ಸಂಬಂಧ ಸಂತ್ರಸ್ತ ಮಹಿಳೆ ಅಪಹರಣ ಆರೋಪ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬುರನ್ನು ಮೇ 13 ರವರೆಗೂ ವಿಶೇಷ ತನಿಖಾ ತಂಡ (ಎಸ್ಐಟಿ)ದ ಕಸ್ಟಡಿಗೆ ನೀಡಿ, ನಗರದ 17 ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಹೆಚ್.ಡಿ.ರೇವಣ್ಣನನ್ನು ಎಸ್ಐಟಿ ಬಂಧಿಸಿದೆ. ಈ ನಡುವೆ 2ನೇ ಆರೋಪಿ ಸತೀಶ್ ಬಾಬುವನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ, ಇಂದು ಬೆಂಗಳೂರಿನ 17ನೇ ಎಸ್‌ಎಂಕಾರ್ಟ್‌ಗೆ ಹಾಜರುಪಡಿಸಿದ್ದಾರೆ. ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಿದ್ದರು.

''ಸತೀಶ್ ಬಾಬು ಪ್ರಕರಣದಲ್ಲಿ ಮುಖ್ಯವಾದ ಆರೋಪಿಯಾಗಿದ್ದು, ಅಪಹರಣಕ್ಕೊಳಗಾದ ಮಹಿಳೆಯನ್ನು ಕೆ.ಆರ್. ನಗರ, ಹೊಳೆನರಸೀಪುರ ಎಲ್ಲ ಕಡೆ ಸುತ್ತಾಡಿಸಿದ್ದಾನೆ. ಆಕೆಯನ್ನು ಎ-1 ಆರೋಪಿಯ ಬಳಿ ಬಿಟ್ಟಿದ್ದಾನೆ. ಆದ್ದರಿಂದ ಪ್ರಕರಣದಲ್ಲಿ ಯಾರ ಪಾತ್ರವಿದೆ ಎಂಬ ಸ್ಪಷ್ಟತೆಯ ಅಗತ್ಯ ಇರುವುದರಿಂದ 10 ದಿನಗಳ ಕಾಲ ಕಸ್ಟಡಿಗೆ ನೀಡಬೇಕು'' ಎಂದು ಎಸ್ಐಟಿ ಪರ ವಕೀಲರಾದ ಬಿ.ಎನ್. ಜಗದೀಶ್ ಅವರು ವಾದ ಮಂಡಿಸಿದ್ದರು.

ಸತೀಶ್‌ಬಾಬು ಪ್ರಕರಣದ ಎ1ಆರೋಪಿ‌ ಹೆಚ್.ಡಿ.ರೇವಣ್ಣ‌ ಪತ್ನಿ ಭವಾನಿ ರೇವಣ್ಣನ‌ ಆಪ್ತನಾಗಿದ್ದು, ಭವಾನಿ‌ ರೇವಣ್ಣನಿಗೂ‌ ಸಂಕಷ್ಟ ಎದುರಾಗಿದೆ.

ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಆಕೆಯ ಪುತ್ರ ಮೇ 2 ರಂದು ಪೊಲೀಸ್​​ ಠಾಣೆಯಲ್ಲಿ ದೂರು ನೀಡಿದ್ದರು. ಅದರ ಅನ್ವಯ ಸತೀಶ್ ಬಾಬುರನ್ನು ​ಪೊಲೀಸರು ಬಂಧಿಸಿದ್ದಾರೆ. ಬಳಿಕ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಎಸ್ಐಟಿಗೆ ವಹಿಸಲಾಗಿತ್ತು.

ಇದೇ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಅವರನ್ನೂ ಕೂಡ ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ರೇವಣ್ಣ ಅವರನ್ನು ನ್ಯಾಯಾಲಯವು 4 ದಿನಗಳ ಕಾಲ ಎಸ್​ಐಟಿ ಕಸ್ಟಡಿಗೆ ನೀಡಿದೆ. ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. 

Tags:    

Similar News