ಸಂತ್ರಸ್ತೆ ಅಪಹರಣ ಪ್ರಕರಣ | ಯಾವುದೇ ಕ್ಷಣದಲ್ಲಿ ಭವಾನಿ ರೇವಣ್ಣ ಬಂಧನ

Update: 2024-05-31 12:51 GMT

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಭವಾನಿ ರೇವಣ್ಣ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಅರ್ಜಿ ವಜಾ ಹಿನ್ನೆಲೆಯಲ್ಲಿ ಭವಾನಿ ಅವರನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸುವ ಸಾಧ್ಯತೆಗಳಿವೆ.

ಕಳೆದ ಹದಿನೈದು ದಿನಗಳಿಂದ ಭವಾನಿ ರೇವಣ್ಣ ಅವರು ತಲೆಮೆರೆಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಎಸ್‌ ಐಟಿ ಅಧಿಕಾರಿಗಳು ಇದೀಗ ಅವರ ಬಂಧನಕ್ಕೆ ಬಲೆ ಬೀಸಲಿದ್ದಾರೆ.

ಪ್ರಜ್ವಲ್ ರೇವಣ್ಣ ಅವರಿಗೆ ಜಾಮೀನು ನಿರಾಕರಿಸಿ ಆರು ದಿನ ಎಸ್​​ಐಟಿ ವಶಕ್ಕೆ ನೀಡಿದ ಬೆನ್ನಲ್ಲೇ ಅವರ ತಾಯಿ ಭವಾನಿ ಅವರಿಗೆ ಬಂಧನ ಭೀತಿ ಹೆಚ್ಚಾಗಿದೆ. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಜಾಗೊಂಡಿರುವ ಕಾರಣ ಎಸ್​ಐಟಿ ಅಧಿಕಾರಿಗಳು ಅವರನ್ನು ಯಾವುದೇ ಸಂದರ್ಭದಲ್ಲೂ ಬಂಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ಪೊಲೀಸರು ಭವಾನಿ ಅವರಿಗೆ ತನಿಖೆಗೆ ಹಾಜರಾಗುವಂತೆ 15 ದಿನಗಳ ಹಿಂದೆ ನೋಟಿಸ್​ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸದ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಬೆಳಗ್ಗೆ ಎಸ್​ಐಟಿ ಅಧಿಕಾರಿಗಳೂ ಭವಾನಿ ಅವರಿಗೆ ಎರಡನೇ ನೋಟಿಸ್​ ನೀಡಿದ್ದರು. ಅವರು ಮನೆಯಲ್ಲಿ ಇಲ್ಲದ ಕಾರಣ ನೋಟಿಸ್ ಅಂಟಿಸಿ ಬಂದಿದ್ದರು. ಇದೀಗ ಕೋರ್ಟ್​​ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ವಾದ-ಪ್ರತಿವಾದ

ಭವಾನಿ ರೇವಣ್ಣ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು, ʻʻಎಫ್ಐಆರ್ ದಾಖಲಿಸಿ 27 ದಿನಗಳಾದರೂ ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಇದುವರೆಗೂ ಏಕೆ ವಿಚಾರಣೆಗೆ ಕರೆಯಲಿಲ್ಲ? ತನಿಖೆಗೆ ಸಹಕರಿಸುವುದಾಗಿ ಈ ಹಿಂದೆಯೇ ಎಸ್ಐಟಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಭವಾನಿಗೆ ನಿರೀಕ್ಷಣಾ ಜಾಮೀನು ನೀಡಬೇಕು; ಎಂದು ವಾದ ಮಂಡಿಸಿದ್ದರು.

ಎಸ್‌ಐಟಿ ಪರ ವಾದ ಮಾಡಿದ್ದ ಎಸ್​ಪಿಪಿ ಬಿ.ಎನ್.ಜಗದೀಶ್, ʻʻಭವಾನಿ ಅವರು ಸತೀಶ್ ಬಾಬು ಮತ್ತಿತರರಿಗೆ ಮೊಬೈಲ್ ಕರೆಗಳನ್ನು ಮಾಡಿಸಿದ್ದಾರೆ. ಭವಾನಿಯನ್ನು ಬಂಧಿಸದೇ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಭವಾನಿ ಹಣಬಲ ಹೊಂದಿದ್ದು ರಾಜಕೀಯವಾಗಿ ಬಲಾಢ್ಯರಾಗಿದ್ದಾರೆ. ಹೀಗಾಗಿ ಅವರ ಬಂಧನ ಅನಿವಾರ್ಯ ಇದೆ. ಭವಾನಿ ರೇವಣ್ಣ ಎಸ್ಐಟಿ ನೀಡಿರುವ ಪತ್ರದ ವೈಖರಿ ಗಮನಿಸಬೇಕು. ಎಸ್ಐಟಿ ಯಾವಾಗ ನೋಟಿಸ್ ನೀಡಬೇಕೆಂದು ಭವಾನಿ ನಿರ್ಧರಿಸುವಂತಿಲ್ಲ. ಪ್ರಕರಣದಲ್ಲಿ ಸಾಕ್ಷಿಯಾಗಲು ಅವರು ಪ್ರಯತ್ನಿಸಿದಂತಿದೆ. ಸಂತ್ರಸ್ತೆ ಇಟ್ಟಿದ್ದ ಸ್ಥಳದಿಂದ ತಪ್ಪಿಸಿಕೊಂಡು ಸಹೋದರಿ ಮನೆಗೆ ತೆರಳಿದ್ದಾಳೆ. ಸಂತ್ರಸ್ತೆ ತನ್ನ ಪುತ್ರನ ವಿರುದ್ಧ ದೂರು ನೀಡದಂತೆ ತಡೆಯಲು ಭವಾನಿ ಯತ್ನಿಸಿದ್ದಾರೆ. ಸಂತ್ರಸ್ತೆಯ ಸಿಆರ್​​ಪಿಸಿ 161, 164 ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಭವಾನಿ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯ ಸಂಗ್ರಹಸಲಾಗಿದೆʼʼ ಎಂದು ವಾದ ಮಂಡಿಸಿದ್ದರು.

ವಿಶೇಷ ನ್ಯಾಯಾಲಯವು ವಾದ ಪ್ರತಿವಾದ ಆಲಿಸಿ, ಜಾಮೀನು ಆದೇಶವನ್ನು ಇಂದಿಗೆ ಅಂದರೆ ಮೇ 31ಕ್ಕೆ ಕಾಯ್ದಿರಿಸಿತ್ತು. ಇದೀಗ ಭವಾನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

Tags:    

Similar News