KIADB Land Controversy | ಸಿದ್ದಾರ್ಥ ವಿಹಾರ ಟ್ರಸ್ಟ್‌ ನಿವೇಶನ ವಾಪಸ್‌: ಭ್ರಷ್ಟರು ಮಣಿಯುತ್ತಿದ್ದಾರೆ ಎಂದ ಬಿಜೆಪಿ

ಸರ್ಕಾರಿ ಜಾಗ ಹಿಂತಿರುಗಿಸುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಭ್ರಷ್ಟರು ಮಣಿಯುತ್ತಿದ್ದಾರೆ. ಆದರೆ, ಯಾರೊಬ್ಬರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ

Update: 2024-10-14 07:38 GMT

ಸಿಎಂ ಸಿದ್ದರಾಮಯ್ಯನವರ ಪತ್ನಿ ಬಿ.ಎಂ.ಪಾರ್ವತಿ ಅವರು 14 ಮುಡಾ ನಿವೇಶನಗಳನ್ನು ಮುಡಾಗೆ ಹಿಂತಿರುಗಿಸಿದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್ ಪಡೆದಿದ್ದ 5 ಎಕರೆ ಸಿಎ ಜಾಗವನ್ನು ಕೂಡ ಕೆಐಎಡಿಬಿಗೆ ಮರಳಿಸಿದೆ.

ಕಾಂಗ್ರೆಸ್‌ ಮುಖಂಡರು ಹೀಗೆ ಸರಣಿಯಲ್ಲಿ ಸರ್ಕಾರಿ ಜಾಗಗಳನ್ನು ವಾಪಸ್ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಪ್ರತಿಪಕ್ಷ ಬಿಜೆಪಿ, "ಭ್ರಷ್ಟರು ಮಣಿಯುತ್ತಿದ್ದಾರೆ. ಆದರೆ, ಯಾರೊಬ್ಬರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಟಾಂಗ್ ನೀಡಿದೆ.

ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿ, "ನಮ್ಮ ಹೋರಾಟಗಳಿಗೆ ಭ್ರಷ್ಟರು ಮಣಿಯುತ್ತಿದ್ದಾರೆ. ಖರ್ಗೆ ಕುಟುಂಬ ಸಿದ್ದಾರ್ಥ ವಿಹಾರ ಟ್ರಸ್ಟ್ 5 ಎಕರೆ ಸಿಎ ನಿವೇಶನವನ್ನು ಬೇಷರತ್ತಾಗಿ ಹಿಂದಿರುಗಿಸಿರುವುದನ್ನು ಗಮನಿಸಿದರೆ ಅಕ್ರಮ ಮಂಜೂರಾತಿ ಪ್ರಕರಣ ಎನಿಸುತ್ತದೆ. ನ್ಯಾಯಾಲಯದ ಮೆಟ್ಟಿಲೇರುವ ಮುನ್ನವೇ ಖರ್ಗೆ ಕುಟುಂಬ ಸಿಎಂ ಸಿದ್ದರಾಮಯ್ಯ ಅವರ ಹಾದಿ ತುಳಿದಿರುವುದು ಸಾಬೀತಾಗುತ್ತಿದೆ" ಎಂದು ವ್ಯಂಗ್ಯವಾಡಿದೆ.

"ಸರಣಿ ಭ್ರಷ್ಟಚಾರಗಳಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂಬುದನ್ನು ಕಾಲವೇ ಉತ್ತರಿಸಲಿದೆ. ಆಮಿಷಗಳನ್ನು ಒಡ್ಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ರಾಜ್ಯವನ್ನು ಲೂಟಿ ಮಾಡುತ್ತಿದೆ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೂ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ" ಎಂದು ಎಚ್ಚರಿಸಿದೆ.


ಏರೋಸ್ಪೇಸ್ ನಿವೇಶನ ಅಕ್ರಮ

ಏರೋಸ್ಪೇಸ್‌ ಕೈಗಾರಿಕಾ ವಸಾಹತುವಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಪಡೆದಿರುವ ನಿವೇಶನ ಕಾನೂನು ಬಾಹಿರವಾಗಿದೆ. ಕೂಡಲೇ ಕೆಐಎಡಿಬಿಯವರು ನಿವೇಶನ ವಾಪಸ್ ಪಡೆಯಬೇಕು. ಇಲ್ಲವಾದರೆ ನ್ಯಾಯಾಲಯ ಮೆಟ್ಟಿಲು ತುಳಿಯಬೇಕಾಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದಾರ್ಥ ವಿಹಾರ ಟ್ರಸ್ಟ್ 5 ಎಕರೆ ಸಿಎ ನಿವೇಶನ ಹಿಂತಿರುಗಿಸಿದ್ದಕ್ಕೆ ರಾಹುಲ್ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಹುಲ್ ಖರ್ಗೆ ಸೌಮ್ಯ ಸ್ವಭಾವದವರು. ಆದರೆ, ಪ್ರಿಯಾಂಕ್ ಖರ್ಗೆ ಆ ಗುಣ ಮೈಗೂಡಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಜಾಗ ಪಡೆದಿರುವುದಾಗಿ ನನ್ನ ಮೇಲೆ ಆರೋಪ ಮಾಡಿದ್ದರು. ಧಮ್ ಬಿರಿಯಾನಿ ಬಗ್ಗೆ ಮಾತಾಡಿದ್ದರು. ಕೆಐಎಡಿಬಿಯಿಂದ ಜಾಗ ಪಡೆಯಲು ನಾನು ಸಚಿವ ಎಂ.ಬಿ.ಪಾಟೀಲ್ ಮುಖಾಂತರ ಒತ್ತಡ ಹಾಕಿಸಿದ್ದೆ ಎಂದೆಲ್ಲಾ ಹೇಳಿದ್ದರು. ಈಗ ಅವರು ಪಡೆದಿದ್ದ ಸಿಎ ನಿವೇಶನ ಸಕ್ರಮವಾಗಿದ್ದರೆ ಯಾಕೆ ವಾಪಸ್ ಕೊಡಬೇಕಾಗಿತ್ತು ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಕೂಡ ನಿವೇಶನ ವಾಪಸ್ ಕೊಡುವ ಅವಶ್ಯಕತೆ ಇರಲಿಲ್ಲ. ವಿಚಾರಣೆ ನಡೆಯುತ್ತಿರುವಾಗ ನಿವೇಶನ ವಾಪಸ್ ಕೊಟ್ಟು ಏನು ಮಾಡುತ್ತೀರಿ ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ಕ್ಲೀನ್‌ಚಿಟ್‌ ಪಡೆಯಲು ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಬಿಟ್ಟು ಮೈಸೂರಿನಲ್ಲಿ ಸುತ್ತಾಡುತ್ತಿದ್ದಾರೆ. ಒಂದು ವೇಳೆ ತನಿಖಾ ಸಂಸ್ಥೆಗಳು ಕ್ಲೀನ್‌ಚಿಟ್‌ ಕೊಟ್ಟರೆ ಸಿಬಿಐ ಎಂಟ್ರಿಯಾಗಲಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ತಪ್ಪು ಮಾಡಿ ಮೈಪರಚಿಕೊಳ್ಳೋದು ಪ್ರಿಯಾಂಕ್ ಖರ್ಗೆಗೆ ರೂಢಿಗತವಾಗಿದೆ. ನನ್ನನ್ನು ಬಿಟ್ಟರೆ ಪ್ರವೀಣರೇ ಇಲ್ಲ ಎಂಬ ಮನೋಭಾವ ಅವರದ್ದು. ನಾವೆಲ್ಲರೂ ತಳ್ಳಮಟ್ಟದ ರಾಜಕೀಯದಿಂದ ಬಂದವರು. ತೊಡೆ ತಟ್ಟಿದರೆ ಈಗ ಎದುರಾಗಿರುವ ಪರಿಸ್ಥಿತಿಯೇ ಮುಂದೆಯೂ ಬರಲಿದೆ. ಪ್ರಿಯಾಂಕ್ ಖರ್ಗೆ ಮೊದಲು ಸಿಎಂ ರೀತಿ ಆಡುವುದನ್ನು ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

Tags:    

Similar News