ಪರಿಶಿಷ್ಟ ಅಧಿಕಾರಿ, ನೌಕರರಿಗೆ ಮುಂಬಡ್ತಿ ಅನ್ಯಾಯ: ಸಿದ್ದರಾಮಯ್ಯಗೆ ಖರ್ಗೆ ಖಡಕ್ ಪತ್ರ
'ನಾನೇ 5 ವರ್ಷ ಸಿಎಂ' ಎಂದು ಹೇಳಿಕೆ ನೀಡಿ ಸಿಎಂ ಕುರ್ಚಿ ಗಟ್ಟಿಮಾಡಿಕೊಳ್ಳುವ ಸಿದ್ದರಾಮಯ್ಯ ರಣತಂತ್ರದ ಬೆನ್ನಲ್ಲೇ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳ ಮುಂಬಡ್ತಿ ವಿಷಯಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.;
'ನಾನೇ 5 ವರ್ಷ ಸಿಎಂ' ಎಂದು ಹೇಳಿಕೆ ನೀಡಿ ಸಿಎಂ ಕುರ್ಚಿ ಗಟ್ಟಿಮಾಡಿಕೊಳ್ಳುವ ಸಿದ್ದರಾಮಯ್ಯ ರಣತಂತ್ರದ ಬೆನ್ನಲ್ಲೇ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಅಧಿಕಾರಿಗಳ ಮುಂಬಡ್ತಿ ವಿಷಯಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.
ಎಸ್ ಸಿ ಎಸ್ ಟಿ ಅಧಿಕಾರಿಗಳಿಗೆ ಮುಂಬಡ್ತಿ ವಿಚಾರದಲ್ಲಿ ಕಟ್ಟು ನಿಟ್ಡಿನ ಕ್ರಮಕೈಗೊಳ್ಳಿ ಎಂದು ಹೇಳುವ ಮೂಲಕ ಮುಂಬಡ್ತಿ ವಿಚಾರ ಪಾಲನೆಯಾಗುತ್ತಿಲ್ಲ ಎಂದು ಪರೋಕ್ಷವಾಗಿ ಸಿಎಂ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ
ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡಗಳ (ಎಸ್‌ಟಿ) ಅಧಿಕಾರಿ, ನೌಕರರಿಗೆ ಮುಂಬಡ್ತಿ ನೀಡುವವಿಷಯದಲ್ಲಿ ಸರ್ಕಾರ ಹೊರಡಿಸಿರುವ ಆದೇಶ ಹಾಗೂ ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮುಂಬಡ್ತಿ ನೀಡುವಾಗ ಎಸ್‌ಸಿ, ಎಸ್‌ಟಿ ನೌಕರರಿಗೆ ಅನ್ಯಾಯವಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರ ಹೊರಡಿಸುವ ಆದೇಶಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡದೇ ಇದ್ದರೆ, ಎಸ್‌ಸಿ ಮತ್ತು ಎಸ್‌ಟಿ ವರ್ಗದ ಅಧಿಕಾರಿಗಳ ಮಟ್ಟದಲ್ಲಿ ಅಸಮಾಧಾನ ಉಂಟಾಗಿ ಸರ್ಕಾರದ ಕೆಲಸಗಳು ಸುಲಲಿತವಾಗಿ ನಡೆಯಲು ಕಷ್ಟ ಆಗಲಿದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸುಮಾರು ಒಂಬತ್ತು ಇಲಾಖೆಗಳಲ್ಲಿ ಮೀಸಲಾತಿ ರೋಸ್ಟರ್ ಪಾಲಿಸದೆ ವಂಚಿಸಲಾಗಿದೆ ಎಂದು ದಾಖಲೆಗಳ ಸಹಿತ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘವು ಖರ್ಗೆ ಅವರ ಗಮನಕ್ಕೆ ತಂದಿತ್ತು. ಅಲ್ಲದೆ, ಮುಖ್ಯಮಂತ್ರಿಗೆ ಅದಾಗಲೇ ಬರೆದಿದ್ದ ಪತ್ರದ ಪ್ರತಿಯನ್ನೂ ನೀಡಿತ್ತು. ಹಾಗಾಗಿ ತಕ್ಷಣ ಸ್ಪಂದಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಖರ್ಗೆ ಅವರು ಕೆಲವು ಸಲಹೆ ನೀಡಿದ್ದಾರೆ ಮತ್ತು ಈ ವಿಚಾರದಲ್ಲಿ ತಕ್ಷಣ ಗಮನಹರಿಸಿ ಬಂದಿರುವ ತೊಡಕುಗಳನ್ನು ನಿವಾರಣೆ ಮಾಡಬೇಕು ಎಂದು ತಿಳಿಸಿದ್ದಾರೆ.