ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಬಂದರೆ ತಪ್ಪೇನಿಲ್ಲ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು ಮತ್ತು ಸುದೀರ್ಘ ಅನುಭವ ಇರುವವರು. ನಮ್ಮ ಪಕ್ಷದಲ್ಲಿ ಅವರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಯಾರು ಮುಖ್ಯಮಂತ್ರಿ ಆಗಬೇಕೆಂದು ನಿರ್ಧರಿಸುವವರೇ ಅವರೇ ಎಂದು ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.;

Update: 2025-07-29 06:09 GMT

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್‌

"ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ರಾಜಕಾರಣಕ್ಕೆ ಮರಳುವುದಾದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಅವರು ಎಲ್ಲ ಹುದ್ದೆಗಳಿಗೂ ಸಮರ್ಥರಿದ್ದಾರೆ," ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಇಂದು ಹಲವು ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಖರ್ಗೆಯವರ ನಾಯಕತ್ವವನ್ನು ಬಲವಾಗಿ ಸಮರ್ಥಿಸಿಕೊಂಡರು.

"ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು ಮತ್ತು ಸುದೀರ್ಘ ಅನುಭವ ಇರುವವರು. ನಮ್ಮ ಪಕ್ಷದಲ್ಲಿ ಅವರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಯಾರು ಮುಖ್ಯಮಂತ್ರಿ ಆಗಬೇಕೆಂದು ನಿರ್ಧರಿಸುವವರೇ ಅವರು. ಒಂದು ವೇಳೆ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದರೆ ಯಾರೂ ತಪ್ಪು ಭಾವಿಸುವ ಅಗತ್ಯವಿಲ್ಲ. ಅವರ ಬಗ್ಗೆ ಈಗ ಟೀಕೆ ಮಾಡುತ್ತಿರುವವರು ಯಾರೂ ಅವರ ಹಂತಕ್ಕೆ ಬೆಳೆದವರಲ್ಲ," ಎಂದು ಪರಮೇಶ್ವರ್ ಖಾರವಾಗಿ ಪ್ರತಿಕ್ರಿಯಿಸಿದರು.

ಸಿಎಂ ಸಭೆಯಿಂದ ಸಮಸ್ಯೆ ಪರಿಹಾರ

ಮಂಗಳವಾರದಿಂದ ಆರಂಭವಾಗಿರುವ ಮುಖ್ಯಮಂತ್ರಿಗಳ ಜಿಲ್ಲಾವಾರು ಶಾಸಕರ ಸಭೆ ಕುರಿತು ಮಾತನಾಡಿದ ಅವರು, "ಅನುದಾನ ಮತ್ತು ಕ್ಷೇತ್ರದ ಸಮಸ್ಯೆಗಳ ಚರ್ಚೆಗೆ ಈ ಸಭೆಗಳು ಸಹಕಾರಿಯಾಗಲಿವೆ. ಎಐಸಿಸಿ ಅಧ್ಯಕ್ಷರ ಸೂಚನೆಯಂತೆ ಈ ಸಭೆ ನಡೆಯುತ್ತಿರಬಹುದು," ಎಂದರು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ರಸಗೊಬ್ಬರ ಅಭಾವದ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, "ಕಾಳಸಂತೆ ಮಾರಾಟ ತಡೆಯಲು ಸೂಚಿಸಲಾಗಿದೆ, ಕೇಂದ್ರ ಸರ್ಕಾರವು ರಾಜ್ಯಕ್ಕೆ ಗೊಬ್ಬರವನ್ನು ಸಕಾಲದಲ್ಲಿ ಪೂರೈಸಬೇಕು," ಎಂದು ಆಗ್ರಹಿಸಿದರು. ನಟಿ ರಮ್ಯಾ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ನೀಡಿದ ದೂರಿನ ಬಗ್ಗೆ ಮಾತನಾಡಿದ ಅವರು, "ಇದು ಗಂಭೀರ ವಿಚಾರವಾಗಿದ್ದು, ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ," ಎಂದರು.

ಸರ್ಕಾರಕ್ಕೆ ಹಿನ್ನಡೆಯಲ್ಲ

ಕಾಲ್ತುಳಿತ ಪ್ರಕರಣದಲ್ಲಿ ಅಧಿಕಾರಿಗಳ ಅಮಾನತು ವಾಪಸ್ ಪಡೆದಿರುವುದು ಸರ್ಕಾರದ ಹಿನ್ನಡೆಯಲ್ಲ, ಅದು ಆಡಳಿತಾತ್ಮಕ ನಿರ್ಧಾರವಾಗಿದ್ದು, ವಿಚಾರಣೆ ಮುಂದುವರಿಯಲಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು. ಹಾಗೆಯೇ, ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎಸ್‌ಐಟಿ ಗಂಭೀರವಾಗಿ ನಡೆಸುತ್ತಿದ್ದು, ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿದರು.

Tags:    

Similar News