ಭಟ್ಕಳಕ್ಕೆ ಬಾಂಬ್ ಬೆದರಿಕೆ ಹಾಕಿದ ಖಾಲಿದ್ ಅಲಿಯಾಸ್ ನಿತಿನ್ ಶರ್ಮಾ ಸೆರೆ!

ಬೆದರಿಕೆ ಇಮೇಲ್ ಬಂದ ತಕ್ಷಣ ಪೊಲೀಸರು ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರೆ ಪ್ರಮುಖ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಹಾಯದಿಂದ ತೀವ್ರ ತಪಾಸಣೆ ನಡೆಸಿದ್ದರು.;

Update: 2025-07-16 04:26 GMT

ಭಟ್ಕಳದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಕೇರಳ ಮೂಲದ ಖಾಲಿದ್ ಅಲಿಯಾಸ್ ನಿತಿನ್ ಶರ್ಮಾ ಎಂಬಾತನನ್ನು ಉತ್ತರ ಕನ್ನಡ ಪೊಲೀಸರು ಬಂಧಿಸಿದ್ದಾರೆ. ಜುಲೈ 10 ರಂದು ಬೆಳಗ್ಗೆ 7.23 ರ ಸುಮಾರಿಗೆ ಭಟ್ಕಳ ನಗರ ಠಾಣೆಗೆ ಇಮೇಲ್ ಮೂಲಕ ಈ ಬೆದರಿಕೆ ಬಂದಿತ್ತು.

ಬೆದರಿಕೆ ಇಮೇಲ್ ಬಂದ ತಕ್ಷಣ ಪೊಲೀಸರು ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರೆ ಪ್ರಮುಖ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಹಾಯದಿಂದ ತೀವ್ರ ತಪಾಸಣೆ ನಡೆಸಿದರು.

'ಕಣ್ಣನ್' ಎಂಬ ಇಮೇಲ್ ಐಡಿಯಿಂದ ಬೆದರಿಕೆ ಬಂದಿದ್ದು, ಪೊಲೀಸರು ಇಮೇಲ್ ಕಳುಹಿಸಿದ ಮೊಬೈಲ್‌ನ IMEI ಸಂಖ್ಯೆ ಆಧಾರದ ಮೇಲೆ ತಮಿಳುನಾಡಿನಲ್ಲಿ ಕಣ್ಣನ್ ಗುರುಸ್ವಾಮಿ ಎಂಬಾತನನ್ನು ಬಂಧಿಸಿದರು. ವಿಚಾರಣೆ ವೇಳೆ ಕಣ್ಣನ್ ಗುರುಸ್ವಾಮಿ, ಖಾಲಿದ್ ಅಲಿಯಾಸ್ ನಿತಿನ್ ಶರ್ಮಾ ಬಗ್ಗೆ ಮಾಹಿತಿ ನೀಡಿದ್ದಾನೆ.

ಜೈಲಿನಲ್ಲಿ ಪರಿಚಯ ಮತ್ತು ಮೊಬೈಲ್ ಬಳಕೆ

ಕಣ್ಣನ್ ಗುರುಸ್ವಾಮಿ ಯಾವುದೋ ಪ್ರಕರಣದಲ್ಲಿ ಕೇರಳದ ಮುನ್ನಾರ್ ಠಾಣೆಯಲ್ಲಿ ಬಂಧಿತನಾಗಿದ್ದಾಗ, ಖಾಲಿದ್ ಕೂಡ ಅದೇ ಠಾಣೆಗೆ ಬಂದಿದ್ದನು. ಆಗ ಖಾಲಿದ್, ಕಣ್ಣನ್ ಗುರುಸ್ವಾಮಿಯ ಮೊಬೈಲ್ ಅನ್ನು ಪಡೆದು, ಅದರ ಇಮೇಲ್ ಮೂಲಕ ಭಟ್ಕಳ ಪೊಲೀಸರಿಗೆ ಬೆದರಿಕೆ ಇಮೇಲ್ ಕಳುಹಿಸಿದ್ದಾನೆ.

ಖಾಲಿದ್ ಅಲಿಯಾಸ್ ನಿತಿನ್ ಶರ್ಮಾ ಹಿನ್ನೆಲೆ

ಖಾಲಿದ್‌ನ ಮೂಲ ಹೆಸರು ನಿತಿನ್ ಶರ್ಮಾ. ಈತ ಈ ಹಿಂದೆ ಹಿಂದೂವಾಗಿದ್ದು, ನಂತರ ಧರ್ಮ ಬದಲಾಯಿಸಿಕೊಂಡು ಖಾಲಿದ್ ಎಂದು ಹೆಸರನ್ನು ಬದಲಾಯಿಸಿದ್ದಾನೆ. ಈತನ ವಿರುದ್ಧ ಕೇರಳ, ಪುದುಚೇರಿ, ದೆಹಲಿ, ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶ, ಉತ್ತರಾಖಂಡ್ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಟ್ಟು 16 ಅಪರಾಧ ಪ್ರಕರಣಗಳು ದಾಖಲಾಗಿವೆ. 2016-17ರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಒಂದು ವರ್ಷ ಶಿಕ್ಷೆಯನ್ನು ಸಹ ಅನುಭವಿಸಿದ್ದಾನೆ.

ಪ್ರಸ್ತುತ, ಭಟ್ಕಳ ಪೊಲೀಸರು ಮತ್ತು ಸೈಬರ್ ತನಿಖಾ ವಿಭಾಗದ ಪೊಲೀಸರು ಖಾಲಿದ್‌ನನ್ನು ವಶಕ್ಕೆ ಪಡೆದಿದ್ದು, ಕಣ್ಣನ್ ಗುರುಸ್ವಾಮಿಯಿಂದ ಮೊಬೈಲ್ ಹೇಗೆ ಪಡೆದುಕೊಂಡ ಮತ್ತು ಅವರಿಬ್ಬರ ಭೇಟಿಯ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Similar News