KIAL Terminal-2 | ಕೆಐಎಲ್​ ಸ್ಕೈಟ್ರಾಕ್ಸ್‌ 5 ಸ್ಟಾರ್‌ ಮಾನ್ಯತೆ ಪಡೆದ ದೇಶದ ಮೊದಲ ಟರ್ಮಿನಲ್

ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹಿರಿಮೆಯನ್ನೂ ಸತತ ಎರಡನೇ ಬಾರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಡಿಗೇರಿಸಿಕೊಂಡಿದೆ.;

Update: 2025-04-10 14:30 GMT

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ -2ಗೆ ಸ್ಕೈಟ್ರಾಕ್ಸ್‌ “5 ಸ್ಟಾರ್‌ ಮಾನ್ಯತೆ” ಸಂದಿದೆ. ಈ ಮಾನ್ಯತೆ ಪಡೆದ ದೇಶದ ಮೊದಲ ಟರ್ಮಿನಲ್‌ ಎಂಬ ಹೆಗ್ಗಳಿಕೆಗೆ ಟರ್ಮಿನಲ್‌ ಪಾತ್ರವಾಗಿದೆ. ಅತ್ಯುತ್ತಮ ಸೇವೆ, ಸೌಕರ್ಯ ಒಳಗೊಂಡ ವಿಮಾನ ನಿಲ್ದಾಣಗಳಿಗೆ ʼಸ್ಕೈಟ್ರಾಕ್ಸ್‌ʼ ಸಂಸ್ಥೆ ತನ್ನದೇ ಆದ ಮಾನದಂಡಗಳ ಆಧಾರದ ಮೇಲೆ ಈ ಮಾನ್ಯತೆ ನೀಡಲಿದೆ.

ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹಿರಿಮೆಯನ್ನೂ ಸತತ ಎರಡನೇ ಬಾರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಡಿಗೇರಿಸಿಕೊಂಡಿದೆ.  ಆ ಮೂಲಕ ಕೆಐಎಎಲ್‌(ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಪ್ರಮುಖ ಜಾಗತಿಕ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮಿದೆ.

ವಿಮಾನ ನಿಲ್ದಾಣಗಳ ಶ್ರೇಷ್ಠತೆಯ ಮಾನದಂಡವೆಂದೇ ಸ್ಕೈಟ್ರಾಕ್ಸ್ ವಲ್ಡ್‌ ಏರ್‌ಪೋರ್ಟ್‌ ಅವಾರ್ಡ್‌ ಹೆಸರುವಾಸಿಯಾಗಿದೆ. ಪ್ರಯಾಣ ಅನುಭವ ಹೆಚ್ಚಿಸುವಲ್ಲಿ ಉತ್ತಮ ಸಾಧನೆ ಮಾಡಿದ ವಿಮಾನ ನಿಲ್ದಾಣಗಳನ್ನು ಸ್ಕೈಟ್ರಾಕ್ಸ್ ಗುರುತಿಸುತ್ತದೆ. ಟರ್ಮಿನಲ್ ವಿನ್ಯಾಸ, ಸ್ವಚ್ಛತೆ, ಭದ್ರತೆ, ಡಿಜಿಟಲ್ ಏಕೀಕರಣ, ಆತಿಥ್ಯ, ಒಳಗೊಳ್ಳುವಿಕೆ ಮತ್ತು ಸುಸ್ಥಿರತೆ ಸೇರಿ 30ಕ್ಕೂ ಹೆಚ್ಚು ವಿಭಾಗಗಳಲ್ಲಿ 800 ಕ್ಕೂ ಹೆಚ್ಚು ಪ್ರಯಾಣಿಕರ ಅಭಿಪ್ರಾಯ, ಲೆಕ್ಕಪರಿಶೋಧನೆ ಆಧರಿಸಿ ಟರ್ಮಿನಲ್‌ 2ಗೆ 5 ಸ್ಟಾರ್ ಮಾನ್ಯತೆ ನೀಡಲಾಗಿದೆ.

5 ಸ್ಟಾರ್‌ ಮಾನ್ಯತೆ ಪಡೆದ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮರಾರ್‌ ಅವರು, " ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ತಡೆರಹಿತ, ನವೀನ ಮತ್ತು ಸುಸ್ಥಿರವಾದ ವಿಶ್ವದರ್ಜೆಯ ಪ್ರಯಾಣದ ಅನುಭವ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಸ್ಕೈಟ್ರಾಕ್ಸ್‌ನಿಂದ ಭಾರತದಲ್ಲೇ ಮೊದಲ 5 ಸ್ಟಾರ್ ಮಾನ್ಯತೆ ಪಡೆದಿರುವುದು ಹಾಗೂ ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗುರುತನ್ನು ಸತತ ಎರಡನೇ ಬಾರಿಗೆ ಗಳಿಸಿರುವುದು ನಮ್ಮ ಪ್ರಯತ್ನಗಳಿಗೆ ದೊರೆತ ಮಾನ್ಯತೆಯಷ್ಟೇ ಅಲ್ಲದೇ, ನಮ್ಮ ತಂಡದ ಉತ್ಸಾಹ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಈ ಪ್ರತಿಷ್ಠಿತ ಮಾನ್ಯತೆ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 5-ಸ್ಟಾರ್ ಮಾನ್ಯತೆ ಪಡೆದ ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳ ಸಾಲಿಗೆ ಸೇರಿದಂತಾಗಿದೆ. 

" ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2ಗೆ  5 ಸ್ಟಾರ್ ಮಾನ್ಯತೆಯೊಂದಿಗೆ ಪ್ರಮಾಣೀಕರಿಸಲು ಅತೀವ ಸಂತೋಷವೆನಿಸುತ್ತದೆ. ಈ ಅತ್ಯುನ್ನತ ಮಾನ್ಯತೆ ಸಾಧಿಸಿದ ಭಾರತದ ಮೊದಲ ವಿಮಾನ ನಿಲ್ದಾಣ ಇದಾಗಿದ್ದು, ಅತ್ಯುನ್ನತ ಗುಣಮಟ್ಟಕ್ಕೆ ಸಂದ ಮನ್ನಣೆಯಾಗಿದೆ" ಎಂದು ಸ್ಕೈಟ್ರಾಕ್ಸ್‌ನ ಸಿಇಒ ಎಡ್ವರ್ಡ್ ಪ್ಲಾಸ್ಟೆಡ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಾನ್ಯತೆಯ ಮಾನದಂಡಗಳು ಹೀಗಿವೆ

  • ಟರ್ಮಿನಲ್‌ -2 ರ ಪರಿಸರ ಸ್ನೇಹಿ ‘ಉದ್ಯಾನದಲ್ಲಿ ಟರ್ಮಿನಲ್’ ವಿನ್ಯಾಸ, ಹೇರಳವಾದ ನೈಸರ್ಗಿಕ ಬೆಳಕು ಮತ್ತು ಪ್ರಕೃತಿ ಸೊಬಗಿನ ನಿರ್ಮಾಣಗಳು ಪ್ರಯಾಣಿಕರಿಗೆ ವಿಶೇಷ ಅನುಭೂತಿ ಒದಗಿಸಲಿವೆ. ಪ್ರಯಾಣಿಕ-ಕೇಂದ್ರಿತ ಮಾರ್ಗ ಶೋಧಕ‌ ಸೌಲಭ್ಯಗಳು (ವೇಫೈಂಡಿಂಗ್) ಅಡೆತಡೆಯಿಲ್ಲ. ಟರ್ಮಿನಲ್‌ 2ರಲ್ಲಿನ ಕಲೆ ಮತ್ತು ಸಾಂಸ್ಕೃತಿಕ ವಿನ್ಯಾಸವು ಪ್ರಯಾಣಿಕರ ಮನಸೂರೆಗೊಳಿಸುವಂತಿದ್ದು, ವಿಶ್ವ ದರ್ಜೆಯ ಟರ್ಮಿನಲ್ ಅನುಭವ ನೀಡಿದೆ. 
  • ಡಿಜಿ ಯಾತ್ರಾದ ಮೂಲಕ ಬಯೋಮೆಟ್ರಿಕ್ ಪ್ರವೇಶ, ಕೃತಕ ಬುದ್ಧಿಮತ್ತೆ ಚಾಲಿತ ಬಿಎಲ್‌ಆರ್‌ ಪಲ್ಸ್ ಅಪ್ಲಿಕೇಶನ್, ಫಾಸ್ಟ್-ಟ್ಯಾಕ್ಡ್ ವಲಸೆ ಮತ್ತು ಸುಧಾರಿತ ಸರತಿ ಸಾಲು ನಿರ್ವಹಣೆಯೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಹೆಚ್ಚಿನ ಸೇವಾ ದಕ್ಷತೆ ಒದಗಿಸಲಿದೆ. ಸ್ವಯಂಚಾಲಿತ ಭದ್ರತಾ ವ್ಯವಸ್ಥೆಗಳು ಡಿಜಿಟಲ್ ಅನುಭವವನ್ನು ಸುಗಮಗೊಳಿಸುವ ಮೂಲಕ ತಡೆರಹಿತ ಡಿಜಿಟಲ್ ನಾವೀನ್ಯತೆ ಹೊಂದಿದೆ.
  • ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ವಿಮಾನ ನಿಲ್ದಾಣಗಳಲ್ಲೇ ಮೊದಲ ಸಂವೇದನಾ ಕೊಠಡಿ ಆರಂಭಿಸಿದೆ. ಇದು ಸಂವೇದನಾ ಸೂಕ್ಷ್ಮತೆಗಳನ್ನು ಹೊಂದಿರುವ ಪ್ರಯಾಣಿಕರಿಗೆ ಒತ್ತಡ ಮುಕ್ತ ಅನುಭವ ಒದಗಿಸುತ್ತಿದೆ. ಸಂವೇದನಾ ಆಧಾರಿತ ಸ್ಲೈಡಿಂಗ್ ಬಾಗಿಲುಗಳು, ಆಡಿಯೊ ಪ್ರಾಂಪ್ಟ್‌ಗಳೇ ಮೊದಲಾದ ಸೀಮಿತ ಚಲನಶೀಲ ಪ್ರಯಾಣಿಕ ಸ್ನೇಹಿ ಸೌಲಭ್ಯಗಳು ಸೇರಿದಂತೆ ಗುಪ್ತ ದಿವ್ಯಾಂಗ ಸನ್‌ಫ್ಲಾವರ್‌ ಲ್ಯಾನ್ಯಾರ್ಡ್ ಕಾರ್ಯಕ್ರಮವು ಅಗತ್ಯವಿರುವ ಪ್ರಯಾಣಿಕರಿಗೆ ಸಹಾಯ ಒದಗಿಸುತ್ತದೆ.
  • ಪ್ಲಾಟಿನಂ LEED ಪೂರ್ವ-ಪ್ರಮಾಣೀಕರಣ ಮತ್ತು ಎಸಿಐ 5ನೇ ಹಂತದ ಕಾರ್ಬನ್ ಮಾನ್ಯತೆ ಹೊಂದಿರುವ ವಿಶ್ವದ ಅತಿದೊಡ್ಡ ಟರ್ಮಿನಲ್ ಆಗಿರುವ ಟರ್ಮಿನಲ್‌ 2ನಲ್ಲಿ ನವೀಕರಿಸಬಹುದಾದ ಇಂಧನ, ಪರಿಸರ ಸ್ನೇಹಿ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದೆ.
  • ಚಿಲ್ಲರೆ ವ್ಯಾಪಾರ, ಆಹಾರ ಮತ್ತು ಪಾನೀಯ, ಲೌಂಜ್ ಅನುಭವಗಳ ಉತ್ಕೃಷ್ಟತೆ ಒಳಗೊಂಡಿದೆ.  ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ 080 ಲೌಂಜ್‌ಗಳು, ಪ್ರೀಮಿಯಂ ಆತಿಥ್ಯ ಕೊಡುಗೆಗಳು ಮತ್ತು ಸಹಯೋಗಿ ಸಂಸ್ಥೆಗಳು ಪ್ರಯಾಣಿಕರಿಗೆ ಅತ್ಯುತ್ತಮ ದರ್ಜೆಯ ಸೌಕರ್ಯ ಮತ್ತು ಸೇವೆ ಒದಗಿಸುವ ಗುರಿ ಹೊಂದಿವೆ.
Tags:    

Similar News