Beard Controversy | ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯಲು ಸೂಚನೆ; ಸರ್ಕಾರದ ಎಚ್ಚರಿಕೆ ಬಳಿಕ ವಿವಾದ ಸುಖಾಂತ್ಯ
ಗಡ್ಡ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರ ಸೂಚನೆಯು ವಿವಾದದ ಸ್ವರೂಪ ಪಡೆದು, ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರದ ಸಿಎಂ ಅಂಗಳ ತಲುಪಿದೆ. ಸರ್ಕಾರದ ಎಚ್ಚರಿಕೆ ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ವಿವಾದ ಸುಖಾಂತ್ಯ ಕಂಡಿದೆ.;
ಕಾಲೇಜುಗಳಲ್ಲಿ ಹಿಜಾಬ್ ಗಲಾಟೆಯ ಬಳಿಕ ಇದೀಗ ಗಡ್ಡ ವಿವಾದ ಮುನ್ನೆಲೆಗೆ ಬಂದಿದೆ.
ಹಾಸನ ಜಿಲ್ಲೆಯ ಹೊಳೆ ನರಸೀಪುರದ ಸರ್ಕಾರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳಿಗೆ ಗಡ್ಡ ಬಿಡದಂತೆ ಪ್ರಾಂಶುಪಾಲರು ನೀಡಿರುವ ಮೌಖಿಕ ಸೂಚನೆ ವಿವಾದದ ಸ್ವರೂಪ ಪಡೆದುಕೊಂಡಿದೆ.
ಪ್ರಾಂಶುಪಾಲರ ಸೂಚನೆಗೆ ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ವಿವಾದವನ್ನು ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರದ ಸಿಎಂ ಅಂಗಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಸರ್ಕಾರದ ಎಚ್ಚರಿಕೆ ಹಾಗೂ ಮುಸ್ಲಿಂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ವಿವಾದ ಸುಖಾಂತ್ಯ ಕಂಡಿದೆ.
ಏನಿದು ಗಡ್ಡ ವಿವಾದ?
ಹೊಳೆ ನರಸೀಪುರದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪಿಎಂ ವಿದ್ಯಾರ್ಥಿ ವೇತನ ಯೋಜನೆಯಡಿ ಕಾಶ್ಮೀರದ ಸುಮಾರು 13ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶನಿವಾರ(ನ.9) ಕಾಲೇಜಿನ ಪ್ರಾಶುಪಾಲ ಚಂದ್ರಶೇಖರ್ ಅವರು ಕಾಶ್ಮೀರ ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯುವಂತೆ ಸೂಚನೆ ನೀಡಿದ್ದರು. ಇದಕ್ಕೆ ವಿದ್ಯಾರ್ಥಿಗಳು ನಿರಾಕರಿಸಿದ ಪರಿಣಾಮ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ವಾಕ್ಸಮರ ನಡೆದಿತ್ತು.
ಗಡ್ಡ ತೆಗೆಯದ ಹೊರತು ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಪ್ರಾಂಶುಪಾಲರು ಖಡಕ್ ಸೂಚನೆ ನೀಡಿದ್ದರು. ಅದನ್ನು ಖಂಡಿಸಿ ಕಾಶ್ಮೀರಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪೋಸ್ಟ್ ಹಾಕಿದ್ದರು.
ಸಿಎಂ ಮಧ್ಯಪ್ರವೇಶಕ್ಕೆ ಮೊರೆ
ಗಡ್ಡ ಬಿಡುವುದು ನಮ್ಮ ಸಂಪ್ರದಾಯ ಹಾಗೂ ಹಕ್ಕು. ಗಡ್ಡ ತೆಗೆಯುವಂತೆ ಒತ್ತಡ ಹೇರುವುದರಿಂದ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ, ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರಿಗೆ ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್ ಮನವಿ ಮಾಡಿತ್ತು. ಕಾಶ್ಮೀರಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿರುವ ರಾಜ್ಯದ ಸಿಎಂ ಕಚೇರಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವಿವಾದ ಬಗೆಹರಿಸಿದೆ.
ಗಡ್ಡ ತೆಗೆಯಲು ಎಲ್ಲರಿಗೂ ಹೇಳಿದ್ದೆವು
ಗಡ್ಡ ವಿವಾದ ಕುರಿತು ಹಾಸನದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ಗಡ್ಡ ತೆಗೆಯಲು ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಹೇಳಿಲ್ಲ. ಎಲ್ಲ ವಿದ್ಯಾರ್ಥಿಗಳಿಗೂ ಸೂಚಿಸಿದ್ದೆವು. ಕ್ಲಿನಿಕಲ್ ಲ್ಯಾಬ್‌ನಲ್ಲಿ ಗಡ್ಡ ಬಿಟ್ಟು ಭಾಗವಹಿಸಿದರೆ ಸಮಸ್ಯೆ ಆಗಲಿದೆ ಎಂಬ ಕಾರಣಕ್ಕಾಗಿ ಹೇಳಿದ್ದೆವು. ಜಮ್ಮು-ಕಾಶ್ಮೀರದ 13 ವಿದ್ಯಾರ್ಥಿಗಳು ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ. ಉದ್ದದ ಗಡ್ಡ ಬಿಟ್ಟುಕೊಂಡು, ಕೊಳಕು ಬಟ್ಟೆ ತೊಟ್ಟು ಬರುತ್ತಿದ್ದರು. ಶೂ ಬದಲು ಚಪ್ಪಲಿ ಹಾಕಿಕೊಂಡು ಬರುತ್ತಿದ್ದರು. ಕಾಲೇಜಿನ ನಿಯಮದಂತೆ ಗಡ್ಡ ತೆಗೆದು, ಶಿಸ್ತಿನಿಂದ ಬರುವಂತೆ ಸೂಚಿಸಿದ್ದೆವು ಎಂದು ಹೇಳಿದ್ದಾರೆ.
ಕಾಲೇಜಿನ ಕ್ಲಿನಿಕಲ್ ಪ್ರಯೋಗಶಾಲೆಯ ಉಪನ್ಯಾಸಕ ವಿಜಯಕುಮಾರ್ ಪ್ರತಿಕ್ರಿಯಿಸಿ, ಕಾಶ್ಮೀರದ 13 ವಿದ್ಯಾರ್ಥಿಗಳಿಗೆ ಶಿಸ್ತಿನಿಂದ ಕಾಲೇಜಿಗೆ ಬರುವಂತೆ ಸತತ ಮೂರು ದಿನ ಸೂಚನೆ ನೀಡಿದರೂ ಮಾತು ಕೇಳಿರಲಿಲ್ಲ. ಕಾಲೇಜಿನಲ್ಲಿ ಶಿಸ್ತಿಗೆ ಮೊದಲ ಆದ್ಯತೆ. ಲ್ಯಾಬ್‌ಗೆ ಎರಡು-ಮೂರು ಗಂಟೆ ತಡವಾಗಿ ಬರುತ್ತಿದ್ದರು. 13 ವಿದ್ಯಾರ್ಥಿಗಳ ಹಾಜರಾತಿಯೂ ಕಡಿಮೆ ಇದ್ದುದರಿಂದ ಪ್ರಶ್ನಿಸಿದ್ದೆವು. ಈಗ ಗಡ್ಡ ತೆಗೆಯುವಂತೆ ಹೇಳಿದ್ದನ್ನೇ ನೆಪ ಮಾಡಿಕೊಂಡು ಸಂಪ್ರದಾಯ ಟೀಕಿಸಿದಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸುಖಾಂತ್ಯವಾದ ವಿವಾದ
ಗಡ್ದ ವಿವಾದದ ಕುರಿತು ಸಿಎಂ ಸಿದ್ದರಾಮಯ್ಯ ಅವರ ಸಚಿವಾಲಯದಿಂದ ಸೂಕ್ತ ನಿರ್ದೇಶನ ಬರುತ್ತಿದ್ದಂತೆ ವಿವಾದ ಸುಖಾಂತ್ಯಗೊಂಡಿದೆ. ಈ ಬಗ್ಗೆ ʼಎಕ್ಸ್ʼನಲ್ಲಿ ಆರೋಪಿಸಿದ್ದ ವಿದ್ಯಾರ್ಥಿಗಳೇ ಸ್ಪಷ್ಟೀಕರಣ ನೀಡಿ ಪೋಸ್ಟ್ ಮಾಡಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಗಳ ಸಂಸ್ಕೃತಿ, ಧಾರ್ಮಿಕ ಆಚರಣೆಗೆ ಅಡ್ಡಿಯಾಗುವಂತಹ ಸೂಚನೆಗೆ ಕಳವಳ ವ್ಯಕ್ತಪಡಿಸಿದ್ದ ಜಮ್ಮು- ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್, ಈ ಬಗ್ಗೆ ಸಿಎಂ ಕಚೇರಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಮೊಹಮದ್ ಮೊಹಿಸಿನ್ ಅವರ ಗಮನ ಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ಸಿಎಂ ಕಚೇರಿ ಅಧಿಕಾರಿಗಳು, ಗಡ್ಡ ತೆಗೆಯುವಂತೆ ಒತ್ತಡ ಹೇರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ವಿವಾದ ಬಗೆಹರಿಸಿದೆ ಎಂದು ಅಸೋಸಿಯೇಷನ್‌ನ ನಾಸಿರ್ ಖುಹಮಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಾಂಶುಪಾಲರಿಗೆ ಷೋಕಾಸ್ ನೋಟಿಸ್
ಗಡ್ಡ ತೆಗೆಯುವಂತೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಸೂಚನೆ ನೀಡಿರುವ ಕುರಿತು ಸ್ಪಷ್ಟನೆ ನೀಡುವಂತೆ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ. ಅಲ್ಲದೇ ಕಾಲೇಜಿನ ಪ್ರಾಂಶುಪಾಲರಿಗೆ ಎಚ್ಚರಿಕೆ ನೀಡಲಾಗಿದೆ. ಇಂತಹ ಸೂಕ್ಷ್ಮ ವಿಚಾರಗಳನ್ನು ತಕ್ಷಣವೇ ಬಗೆಹರಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಿಎಂ ಕಚೇರಿ ಸೂಚಿಸಿದೆ.
ವಿವಾದ ಸಂಬಂಧ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಕಾಲೇಜು ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಿದ್ದು, ವರದಿ ನೀಡುವಂತೆ ಸೂಚಿಸಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಸಂಧಾನ ಮಾತುಕತೆ
ವಿದ್ಯಾರ್ಥಿಗಳ ಗಡ್ಡ ವಿವಾದ ಕುರಿತಂತೆ ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿತು. ಸಂಧಾನ ಮಾತುಕತೆ ಬಳಿಕ ಮಾತನಾಡಿದ ಜಮ್ಮು-ಕಾಶ್ಮೀರದ ವಿದ್ಯಾರ್ಥಿ ಉಮರ್, ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಸೂಚನೆಯಂತೆ ನಡೆದುಕೊಳ್ಳುತ್ತೇವೆ. ಕಾಲೇಜು ನಿಯಮದಂತೆ ಶಿಸ್ತಿನಿಂದ ಇರಬೇಕೆಂದು ಹೇಳಿದ್ದಾರೆ. ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಕೈ ಬಿಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಗಡ್ಡ ತೆಗೆಯಬೇಕೆಂಬ ಒತ್ತಡ ಹೇರಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗಡ್ಡ ತೆಗೆಯುವಂತೆ ನಮ್ಮ ಮೇಲೆ ಯಾರೂ ಒತ್ತಡ ಹೇರಿಲ್ಲ. ಶಿಸ್ತಿನ ವಿಚಾರದಲ್ಲಿ ಗಡ್ಡ ಟ್ರಿಮ್ ಮಾಡಲು ಹೇಳಿದ್ದರು. ಯಾವುದೇ ತಾರತಮ್ಯ ಮಾಡಿಲ್ಲ. ಸಮಸ್ಯೆ ಬಗೆಹರಿದಿರುವುದರಿಂದ ಸಂಪ್ರದಾಯ ಪಾಲನೆಗೆ ಅಡ್ಡಿ ಇಲ್ಲ ಎಂದು ತಿಳಿಸಿದ್ದಾರೆ.
ಶಿಸ್ತು ಪಾಲಿಸಲು ಎಲ್ಲರಿಗೂ ಸೂಚಿಸಿದ್ದರು
ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಗಡ್ಡ ತೆಗೆಯಲು ಸೂಚನೆ ನೀಡಿದ್ದರೆಂಬ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಕಾಲೇಜಿನ ವಿದ್ಯಾರ್ಥಿಗಳಾದ ಚನ್ನಬಸವನಗೌಡ ಹಾಗೂ ಗಿರೀಶ್, ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಎಲ್ಲ ವಿದ್ಯಾರ್ಥಿಗಳಿಗೆ ಗಡ್ಡ ಟ್ರಿಮ್ ಮಾಡಿಕೊಂಡು ಬರುವಂತೆ ಸೂಚನೆ ನೀಡಿದ್ದರು. ನರ್ಸಿಂಗ್ ಕಾಲೇಜಿನ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದ್ದರು ಎಂದರು.
ರೋಗಿಗಳ ಶುಶ್ರೂಷೆ ಮಾಡುವಾಗ ನಿಮ್ಮನ್ನು ನೋಡಿದ ಕೂಡಲೇ ಚಿಕಿತ್ಸೆ ಕೊಡುತ್ತಾರೆ ಎನ್ನುವ ಭಾವನೆ ರೋಗಿಗಳಲ್ಲಿ ಬರಬೇಕು. ಅದ್ದರಿಂದ ಗಡ್ಡ ಟ್ರಿಂ ಮಾಡಿಕೊಂಡು ಶಿಸ್ತಿನಿಂದ ಕಾಲೇಜಿಗೆ ಬನ್ನಿ ಎಂದಿದ್ದರು. ಬರೀ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರವಲ್ಲ. ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಸೂಚನೆ ನೀಡಿದ್ದರು. ಆದರೆ, ಕಾಶ್ಮೀರಿ ವಿದ್ಯಾರ್ಥಿಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದರು.
ಹಿಜಾಬ್ ವಿವಾದ
2022ರಲ್ಲಿ ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿತ್ತು. ಉಡುಪಿಯಲ್ಲಿ ಆರಂಭವಾಗಿದ್ದ ಹಿಜಾಬ್ ವಿವಾದ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹಿಜಾಬ್ ಧರಿಸಿ ಕಾಲೇಜಿಗೆ ಬರುವುದನ್ನು ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ನಿಷೇಧಿಸಿ ಅಲ್ಲಿನ ಪ್ರಾಂಶುಪಾಲರು ಆದೇಶಿಸಿದ್ದರು. ಆದರೆ, ಹಿಜಾಬ್ ಧರಿಸುವುದು ನಮ್ಮ ಹಕ್ಕು ಎಂದು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಹೇಳಿದ್ದರು. ವಿವಾದ ಹೈಕೋರ್ಟ್, ಸುಪ್ರೀಂಕೋರ್ಟ್ ಅಂಗಳಲ್ಲೂ ಮುಟ್ಟಿತ್ತು.