ಸಾರಿಗೆ ಮುಷ್ಕರ | ಡಿಸೆಂಬರ್ 31ರಿಂದ ಮುಷ್ಕರ: ಬೆಂಬಲ ನೀಡುವಂತೆ ಕರಪತ್ರ ಹಂಚಿದ ಮುಖಂಡರು
‘ಜನವರಿ ಒಂದರಿಂದ ಬಸ್ ಸಂಚಾರ ಇರುವುದಿಲ್ಲ, ಸಹಕರಿಸಿ’ ಎಂದು ಸಾರಿಗೆ ನೌಕರರ ಸಂಘಟನೆಗಳ ಮುಖಂಡರು, ಪ್ರಯಾಣಿಕರಿಗೆ ಮತ್ತು ಸಾರಿಗೆ ನೌಕರರಿಗೆ ಕರಪತ್ರ ಹಂಚಿದ್ದಾರೆ.
ರಾಜ್ಯ ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯ ಸಮಿತಿ ಸೇರಿದಂತೆ, ಒಟ್ಟು ಆರು ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ಡಿ.31 ರಿಂದ ಸಾರಿಗೆ ಇಲಾಖೆಯ ಬಸ್ಸುಗಳ ರಸ್ತೆಗೆ ಇಳಿಯುವುದಿಲ್ಲ.
ಸಾರಿಗೆ ಮುಷ್ಕರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಮುಷ್ಕರ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬುಧವಾರದಿಂದಲೇ ಸಾರಿಗೆ ನೌಕರರ ಸಂಘಟನೆಗಳು ಕರಪತ್ರ ಹಂಚಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಇಲಾಖೆಯ ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರ ಸಹಕಾರ ಕೋರಿದ್ದಾರೆ.
‘ಜನವರಿ ಒಂದರಿಂದ ಬಸ್ ಸಂಚಾರ ಇರುವುದಿಲ್ಲ, ಸಹಕರಿಸಿ’ ಎಂದು ಪ್ರಯಾಣಿಕರಿಗೆ ಮತ್ತು ಸಾರಿಗೆ ನೌಕರರಿಗೆ ಬುಧವಾರ ಕರಪತ್ರ ಹಂಚಿಕೆ ಮಾಡಲಾಗಿದೆ. ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್, ಡಿಪೋ-7 ವೋಲ್ವೋ ಬಸ್ ಡಿಪೋ, ಡಿಪೋ- 13 ಕತ್ರಿಗುಪ್ಪೆ, ಡಿಪೋ-20 ಬನಶಂಕರಿ ಸೇರಿದಂತೆ ಬಿಎಂಟಿಸಿ ಬಸ್ ಡಿಪೋಗಳಿಗೆ ತೆರಳಿ ಡಿಸೆಂಬರ್ 31 ರಿಂದ ಯಾರೂ ಕರ್ತವ್ಯ ನಿರ್ವಹಿಸಬಾರದು ಎಂದು ಕಂಡಕ್ಟರ್, ಡ್ರೈವರ್, ಮೆಕಾನಿಕ್ಗಳಿಗೆ ಸಾರಿಗೆ ಮುಖಂಡರು ಕರಪತ್ರ ಹಂಚಿದ್ದಾರೆ.
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಪ್ರಮುಖ ಸಾರಿಗೆ ನಿಗಮಗಳ ನೌಕರರ ಸಂಬಂಳ ಹೆಚ್ಚಳ, ಬಾಕಿ ವೇತನ ಪಾವತಿಯ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯವು ಒಟ್ಟು 1750 ಕೋಟಿ ರೂಪಾಯಿಗಳ ಬಾಕಿ ಮತ್ತು ಹೆಚ್ಚುವರಿ 399.29 ಕೋಟಿ ಗ್ರಾಚ್ಯುಟಿ ಪಾವತಿಗಳನ್ನು ನಿವೃತ್ತ ಕಾರ್ಮಿಕರಿಗೆ ನೀಡಬೇಕಿದೆ. ಕೆಎಸ್‌ಆರ್‌ಟಿಸಿ -714.39 ಕೋಟಿ ರೂ, ಬಿಎಂಟಿಸಿ – 290.97 ಕೋಟಿ ರೂ, ಎನ್ಡಬ್ಲ್ಯುಕೆಆರ್ಟಿಸಿ – 408.42 ಕೋಟಿ ರೂ, ಕೆಕೆಆರ್ಟಿಸಿ – 347.86 ಕೋಟಿ ರೂ ಸೇರಿದಂತೆ ಒಟ್ಟು 1761.64 ಕೋಟಿ ರುಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಬೇಕಾಗಿದೆ. ಇದಲ್ಲದೆ ರಾಜ್ಯ ಸರ್ಕಾರ 2024 ಜನವರಿಯಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡಬೇಕಾಗಿತ್ತು. ಅದಲ್ಲದೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಸೇರಿದಂತೆ ನಾಲ್ಕು ನಿಗಮದ ನೌಕರರಿಗೆ 38 ತಿಂಗಳ ವೇತನ ಬಾಕಿ ಹಣವನ್ನು ಬಿಡುಗಡೆ ಕೂಡ ಮಾಡಿಲ್ಲ. ನಿವೃತ್ತಿ ಹೊಂದಿದ ನೌಕರರಿಗೆ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿಲ್ಲ. ಗ್ರಾಚ್ಯುಟಿ ಹಣ ಸುಮಾರು 399.29 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದೆ. ಆದರೆ ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಈ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಜಂಟಿ ಕ್ರಿಯಾ ಸಮಿತಿಯಿಂದ ಈ ಹಿಂದೆ ತೀರ್ಮಾನಿಸಿದಂತೆ ಡಿಸೆಂಬರ್ 9ರಂದು ಬೆಳಗಾವಿಯ ಚಳಿಗಾಲದ ಅಧಿವೇಶನದ ಮೊದಲ ದಿನವೇ ʻಬೆಳಗಾವಿ ಚಲೋ ʼನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿ. 31 ರಿಂದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂಬ ಕುರಿತು ನಿಯಮದಂತೆ ನೋಟೀಸ್ ಕೊಡಲಾಗಿದೆ.
ಮುಷ್ಕರದ ನೋಟೀಸ್ ಸರ್ಕಾರದ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ವೀಕರಿಸಿ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದರು. ಆದರೆ ಇದೀಗ ಸರ್ಕಾರದ ವಿಳಂಬ ಧೋರಣೆ ಮತ್ತು ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮತ್ತು ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಈ ಜಂಟಿ ಕ್ರಿಯಾ ಸಮಿತಿಯ ಅಡಿ ಕೆ.ಎಸ್.ಆರ್.ಟಿ.ಸಿ ಸ್ಟಾಫ್ & ವರ್ಕರ್ಸ್ ಫೆಡರೇಷನ್ (ಎ.ಐ.ಟಿ.ಯು.ಸಿ.), ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ (ಸಿ.ಐ.ಟಿ.ಯು.), ಕೆ.ಎಸ್.ಆರ್.ಟಿ.ಸಿ. ಪ.ಜಾ. ಮತ್ತು ಪ.ಪಂ. ನೌಕರರ ಸಂಘ, ಕ.ರಾ.ರ.ಸಾ.ಸಂಸ್ಥೆ ಪ.ಜಾ. /ಪ.ಪಂ.ಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಸೇರಿದಂತೆ ಸಾರಿಗೆ ನೌಕರರು ಮತ್ತು ಅಧಿಕಾರಿಗಳ ಎಲ್ಲಾ ಸಂಘಟನೆಗಳೂ ಮುಷ್ಕರಕ್ಕೆ ಬೆಂಬಲ ಘೋಷಿಸಿವೆ.