Mysore Muda Scam| ಲೋಕಾಯುಕ್ತ ಪೊಲೀಸರಿಂದ ಭೂಮಾಪನ

Update: 2024-10-01 11:41 GMT

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರ ತಂಡವು ಮಂಗಳವಾರ ಸಂಬಂಧಿಸಿದ ಜಮೀನಿನ ಮಾಪನ ನಡೆಸಿದೆ.

ಲೋಕಾಯುಕ್ತ ತಂಡದಲ್ಲಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ವಿಶೇಷ ಭೂಸ್ವಾಧೀನ ಅಧಿಕಾರಿ, ಭೂಮಾಪಕರು ಮತ್ತು ನಗರ ಯೋಜನಾ ಸದಸ್ಯರು ಭೂಮಿಯನ್ನು ಸರ್ವೆ ಮಾಡಿ, ಟಿಪ್ಪಣಿ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ. 

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ, ಅವರ ಪತ್ನಿ ಮತ್ತು ಇತರ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಕೃಷ್ಣ ಅವರಿಗೆ ತನಿಖಾಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಅವರು ಲೋಕಾಯುಕ್ತ ಪೊಲೀಸರ ಮುಂದೆ ಮಂಗಳವಾರ ಹಾಜರಾಗಿದ್ದರು.

14 ನಿವೇಶನಗಳ ಮಾಲೀಕತ್ವ ಮತ್ತು ಸ್ವಾಧೀನವನ್ನು ತ್ಯಜಿಸುವುದಾಗಿ ಪಾರ್ವತಿ ಅವರು ಬರೆದ ಪತ್ರವನ್ನು ಮುಡಾ ಆಯುಕ್ತ ಎ.ಎನ್. ರಘುನಂದನ್ ಅವರ ಕಚೇರಿಗೆ ಮೇಲ್ಮನೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಸಲ್ಲಿಸಿದ್ದಾರೆ. ಪತ್ರವನ್ನು ಪರಿಶೀಲಿಸಿದ ನಂತರ ಸೂಕ್ತ ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಮುಡಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಕಾನೂನಿನಡಿ ಮೊಕದ್ದಮೆ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಅವರ ಪತ್ನಿ ಮುಡಾಗೆ ಪತ್ರ ಬರೆದು, 14 ನಿವೇಶನಗಳ ಮಾಲೀಕತ್ವ ಮತ್ತು ಸ್ವಾಧೀನವನ್ನು ಬಿಟ್ಟುಕೊಡುವುದಾಗಿ ಹೇಳಿದ್ದರು.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಮೈಸೂರಿನ ವಿಜಯನಗರ ಲೇಔಟ್ 3 ಮತ್ತು 4ನೇ ಹಂತದಲ್ಲಿ 14 ನಿವೇಶನ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮುಡಾ 50:50 ಅನುಪಾತದಡಿ ಅವರ 3.16 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಮಂಜೂರು ಮಾಡಿತ್ತು ಮತ್ತು ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸಿತು.

ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಸೆಪ್ಟೆಂಬರ್ 27 ರಂದು ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ, ಅವರ ಪತ್ನಿ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ಇನ್ನಿತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ಮರುದಿನವೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಆದೇಶ ಹೊರಬಿದ್ದಿತು.

Tags:    

Similar News