ಅಧಿಕಾರದಲ್ಲಿ ಮುಂದುವರಿಯಲು ರಾಜ್ಯಪಾಲ ಗೆಹ್ಲೋಟ್ ಅನರ್ಹ: ಸಚಿವ ಕೃಷ್ಣ ಬೈರೇಗೌಡ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಅನುಮತಿ ನೀಡಿರುವುದನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗೆಹ್ಲೋಟ್ ಅವರು ಅಧಿಕಾರದಲ್ಲಿ ಮುಂದುವರಿಯಲು ‘ನಾಲಾಯಕ್’ (ಅನರ್ಹ) ಎಂದು ವಾಗ್ದಾಳಿ ನಡೆಸಿದ್ದಾರೆ
"ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿ, "ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕಾರದಲ್ಲಿ ಮುಂದುವರಿಯಲು ‘ನಾಲಾಯಕ್’ (ಅನರ್ಹ)" ಎಂದಿದ್ದಾರೆ.
"ಕಾನೂನು ತುಂಬಾ ಸ್ಪಷ್ಟವಾಗಿದೆ. ಅಂತಹ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಮಂಜೂರಾತಿ ಕೋರುವ ಅರ್ಜಿಗಳನ್ನು ಲೋಕಾಯುಕ್ತ ಅಥವಾ ಡಿಐಜಿ ಸಲ್ಲಿಸಬೇಕು. ಆದರೆ ಈ ರಾಜ್ಯಪಾಲರು 'ದಾರಿಹೋಕರ' ದೂರಿನ ಮೇರೆಗೆ ಮನವಿಯನ್ನು ಅಂಗೀಕರಿಸಿದ್ದಾರೆ. ರಾಜ್ಯಪಾಲರಾಗಿ ಮುಂದುವರಿಯಲು ಅವರಿಗೆ ಯಾವ ಹಕ್ಕಿದೆ?" ಎಂದು ಸಚಿವರು ಪ್ರಶ್ನಿಸಿದರು.
ಉಪ ಮುಖ್ಯಮಂತ್ರಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, "ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಪ್ರಮಾಣ ಮಾಡಿದ ಗೆಹ್ಲೋಟ್ ಈಗ ಅದನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಗೆ ಕರ್ನಾಟಕದ ಜನತೆ 136 ಸ್ಥಾನಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಗೌರವಾನ್ವಿತ ರಾಜ್ಯಪಾಲ ಹುದ್ದೆಗೆ ಕಳಂಕ ತರಬೇಡಿ. ವಿಪರ್ಯಾಸವೆಂದರೆ, ಸಿಎಂ ವಿರುದ್ಧದ ಆರೋಪಗಳು ಗಂಭೀರವಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಯಾವುದೇ ಸಂಸ್ಥೆಯಿಂದ ಪ್ರಕರಣ ತನಿಖೆ ನಡೆಯುವ ಮುನ್ನವೇ ರಾಜ್ಯಪಾಲರು ಇಂತಹ ನಿಲುವ ಪ್ರಕಟಿಸಿದ್ದಾರೆ" ಎಂದು ಶಿವಕುಮಾರ್ ಹೇಳಿದರು.
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು. ಸಚಿವ ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಬಿ ಕೆ ಹರಿಪ್ರಸಾದ್, ಯು ಬಿ ವೆಂಕಟೇಶ್, ಸಲೀಂ ಅಹ್ಮದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.