ಶಾಲಾ ವಾಹನಗಳಿಗೆ ಹೊಸ ನಿಯಮ ಜಾರಿ ಮಾಡಿದ ಸರ್ಕಾರ
ಕರ್ನಾಟಕ ಸರ್ಕಾರ ಮೋಟಾರು ವಾಹನಗಳಿಗೆ ಹೊಸ ತಿದ್ದುಪಡಿಯನ್ನು ಪ್ರಕಟಿಸಿದ್ದು, ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೂ ನಿಯಮಗಳನ್ನು ಬಿಗಿಗೊಳಿಸಿದೆ. ಈ ಬಗ್ಗೆ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಿದ್ದು ತಿದ್ದುಪಡಿಗಳು ತಕ್ಷಣದಿಂದಲೇ ಜಾರಿಗೆ ಬರುತ್ತಿವೆ.;
ಕರ್ನಾಟಕ ಸರ್ಕಾರ ಮೋಟಾರು ವಾಹನಗಳಿಗೆ ಹೊಸ ತಿದ್ದುಪಡಿಯನ್ನು ಪ್ರಕಟಿಸಿದ್ದು, ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳಿಗೂ ನಿಯಮಗಳನ್ನು ಬಿಗಿಗೊಳಿಸಿದೆ. ಜೂನ್ 15, 2024 ರಂದು ಕರ್ನಾಟಕ ಅಸಾಧಾರಣ ಗೆಜೆಟ್‌ನಲ್ಲಿ ಪ್ರಕಟಿಸಲಾದ ಈ ತಿದ್ದುಪಡಿಗಳು ತಕ್ಷಣವೇ ಜಾರಿಗೆ ಬರುತ್ತವೆ.
ಕರ್ನಾಟಕ ಸರ್ಕಾರ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳು ಕರ್ನಾಟಕ ರಿಜಿಸ್ಟ್ರೇಷನ್ ಹೊಂದಿರಬೇಕು. ಈ ಕ್ಯಾಬ್‌ಗಳು ಶಾಲಾ ಮಕ್ಕಳನ್ನು ಸಾಗಿಸಲು ಬಳಸಲಾಗುತ್ತಿದೆ ಎಂಬ ಪ್ರತ್ಯೇಕ ದಾಖಲೆಯನ್ನು ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಈ ದಾಖಲೆಯನ್ನು ಪೋಷಕರು ಅಥವಾ ಶಾಲೆಯ ಆಡಳಿತ ಮಂಡಳಿಯಿಂದ ಪಡೆದುಕೊಳ್ಳಬಹುದು. ನಂತರ ಈ ಪತ್ರವನ್ನು ನೀಡಿ ತಮ್ಮ ವಾಹನವನ್ನು ನೋಂದಾಯಿಸಲು ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಹೇಳಲಾಗಿದೆ.
ಮೋಟಾರು ವಾಹನ ಕಾಯಿದೆ, 1988 ರ ಸೆಕ್ಷನ್ 96(2) ಮತ್ತು 212 ರ ಅಧಿಕಾರ ಚಲಾಯಿಸಿ ಶಾಲಾ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ತಿದ್ದುಪಡಿಗಳನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ ಶಾಲಾ ಮಕ್ಕಳ ಸಂಚಾರದ ಸಮಸ್ಯೆಗಳ ಕುರಿತು ಪೋಷಕರು ಹಾಗೂ ಚಾಲಕರ ಜೊತೆ ಮಂಡಳಿ ಆಗಾಗ ಸಭೆ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾರ್ಚ್‌ನಲ್ಲಿ ಕರಡು ಪ್ರಕಟವಾದ 30 ದಿನಗಳಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿತ್ತು. ಆದರೆ ಯಾವುದೇ ರೀತಿಯ ಆಕ್ಷೇಪಣೆ ಅಥವಾ ಸಲಹೆಗಳು ಬರದೇ ಇರುವ ಕಾರಣ ಈ ನಿಯಮಗಳನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ.