ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಬಾರಿ ನರಸಿಂಹಲು ಸಾರಥ್ಯ

Update: 2024-12-15 06:35 GMT

ಶನಿವಾರ(ಡಿ.14) ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನರಸಿಂಹಲು ಆಯ್ಕೆಯಾಗಿದ್ದಾರೆ.

ಶನಿವಾರ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯ ಮತದಾನ ನಡೆದಿದ್ದು, ಅಂದೇ ಫಲಿತಾಂಶ ಕೂಡ ಪ್ರಕಟಿಸಲಾಗಿದೆ. ಇದೇ ಮೊದಲ ಬಾರಿಗೆ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಇವಿಎಂ ಬಳಸಲಾಗಿತ್ತು.

ಚುನಾವಣೆಯಲ್ಲಿ ಈ ಬಾರಿಯೂ ಸಾ ರಾ ಗೋವಿಂದು ಬಳಗದವರ ಕೈ ಮೇಲಾಗಿದ್ದು, ಅಧ್ಯಕ್ಷರಾಗಿ ನರಸಿಂಹಲು ಅವರು ಆಯ್ಕೆಯಾಗಿದ್ದರೆ, ಉಪಾಧ್ಯಕ್ಷರಾಗಿ ಕೆ ವಿ ವೆಂಕಟೇಶ್ ಆಯ್ಕೆಯಾಗಿದ್ದಾರೆ.

ಸಾ ರಾ ಗೋವಿಂದು ಬಣ ಮತ್ತು ಭಾ ಮಾ ಹರೀಶ್ ಬಣಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿಗೆ ಈ ಬಾರಿಯ ಚುನಾವಣೆ ಸಾಕ್ಷಿಯಾಗಿತ್ತು.

ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ವಲಯಗಳಿಂದ ಒಟ್ಟು 128 ಮಂದಿ ಚುನಾವಣಾ ಕಣದಲ್ಲಿದ್ದರು. ಆ ಪೈಕಿ 24 ಮಂದಿ ವಿವಿಧ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಡಳಿಯಲ್ಲಿ ಒಟ್ಟು 1409 ಮತದಾರರಿದ್ದು, ಅತಿ ಹೆಚ್ಚು ಮತ ನಿರ್ಮಾಪಕರ ವಲಯದಲ್ಲಿವೆ. ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಪ್ರದರ್ಶಕರ ವಲಯಕ್ಕೆ ಮೀಸಲಾಗಿಡಲಾಗಿತ್ತು. ಆ ಹಿನ್ನೆಲೆಯಲ್ಲಿ ವೈಭವಿ ಚಿತ್ರಮಂದಿರದ ಮಾಲೀಕರಾದ ಎಂ ನರಸಿಂಹಲು ಮತ್ತು ವಜ್ರೇಶ್ವರಿ ಚಿತ್ರಮಂದಿರದ ಮಾಲೀಕರಾದ ಸುಂದರ್ ರಾಜು ಅವರ ನಡುವೆ ಪೈಪೋಟಿ ಇತ್ತು.

ನೂತನ ಪದಾಧಿಕಾರಿಗಳು

ಚುನಾವಣೆಯಲ್ಲಿ ಮಂಡಳಿಯ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಎಂ ನರಸಿಂಹಲು, ಉಪಾಧ್ಯಕ್ಷರಾಗಿ ನಿರ್ಮಾಪಕ ವಲಯದಿಂದ ಕೆ ವಿ ವೆಂಕಟೇಶ್, ವಿತರಕರ ವಲಯದಿಂದ ಉಪಾಧ್ಯಕ್ಷರಾಗಿ ಎಚ್ ಸಿ ಶ್ರೀನಿವಾಸ್ ಪ್ರದರ್ಶಕರ ವಲಯದಿಂದ ಉಪಾಧ್ಯಕ್ಷರಾಗಿ ರಂಗಪ್ಪ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಪ್ರವೀಣ್ ಕುಮಾರ್, ವಿತರಕರ ವಲಯದಿಂದ ಕೆ ಸಿಎನ್ ಕುಮಾರ್, ಪ್ರದರ್ಶಕರ ವಲಯದಿಂದ ಎಲ್ ಕುಶಾಲ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಚಿಂಗಾರಿ ಮಹದೇವ್ ಅವರು ಆಯ್ಕೆಯಾಗಿದ್ದಾರೆ.

Tags:    

Similar News