Karnataka By Election | ಮೂರೂ ಕ್ಷೇತ್ರಗಳಲ್ಲಿ ಮತದಾರರ ಉತ್ಸಾಹ: ಚನ್ನಪಟ್ಟಣದಲ್ಲಿ ದಾಖಲೆಯ ಮತದಾನ

ಶಿಗ್ಗಾವಿ ಕ್ಷೇತ್ರದ ಸವಣೂರಿನ ದಂಡಿನಪೇಟೆ ಗ್ರಾಮದ ಸುಮಾರು 60ಕ್ಕೂ ಹೆಚ್ಚು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. ಗ್ರಾಮದ ಏಳು ಮನೆಗಳ ಮುಂದೆ ಮತದಾನದ ಬಹಿಷ್ಕಾರ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

Update: 2024-11-13 15:15 GMT

ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬುಧವಾರ ನಡೆದ ಮತದಾನದಲ್ಲಿ ಅಲ್ಲಲ್ಲಿ ಕೆಲ ಅಹಿತಕರ ಘಟನೆ ಹೊರತುಪಡಿಸಿ ಉಳಿದಂತೆ ಶಾಂತಿಯುತವಾಗಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಮೂರೂ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡರು. ಸಂಜೆ 6ಗಂಟೆ ವೇಳೆಗೆ ಶಿಗ್ಗಾವಿ ಕ್ಷೇತ್ರದಲ್ಲಿ ಶೇ78 ಮತದಾನ ದಾಖಲಾಯಿತು. ಒಟ್ಟು 2.37 ಲಕ್ಷ ಮತದಾರರ ಪೈಕಿ 1,85,265 ಮತದಾರರು ಮತದಾನ ಮಾಡಿದರು. ಸಂಜೆ 6ರ ನಂತರವೂ ಮತಗಟ್ಟೆಗಳ ಬಳಿ ಮತದಾರರ ಸರದಿ ಕಂಡು ಬಂದಿದೆ. ಎಲ್ಲರೂ ಮತದಾನ ಮಾಡಿದ ಬಳಿಕ ಮತದಾನದ ಖಚಿತ ಪ್ರಮಾಣ ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯ ಮಹಂತೇಶ ದಾನಮ್ಮನವರ ಹೇಳಿದ್ದಾರೆ.


ಬಳ್ಳಾರಿಯ ಸಂಡೂರು ಕ್ಷೇತ್ರದಲ್ಲಿ ಸಂಜೆ 5ರವರೆಗೆ ಶೇ 71.47ರಷ್ಟು ಮತದಾನವಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಅತ್ಯಂತ ಉತ್ಸಾಹದಿಂದ ಮತದಾರರು ಮತದಾನದಲ್ಲಿ ಭಾಗವಹಿಸಿದ್ದರಿಂದ ಸಂಜೆ 5 ಗಂಟೆ ಹೊತ್ತಿಗೆ ಶೇ85.26 ರಷ್ಟು ಮತದಾನ ದಾಖಲಾಗಿದೆ. ಕ್ಷೇತ್ರದಲ್ಲಿರುವ ಒಟ್ಟು 2.32ಲಕ್ಷ ಮತದಾರರ ಪೈಕಿ 1,96,286 ಮತದಾರರ ಹಕ್ಕು ಚಲಾಯಿಸಿದರು. ಕ್ಷೇತ್ರದಲ್ಲಿ ಒಟ್ಟು 276 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

ಅಂಧನ ಪರವಾಗಿ ಮತ ಹಾಕಿದ ಅಪರಿಚಿತ

ಶಿಗ್ಗಾವಿ ಕ್ಷೇತ್ರದ ತವರುಮೆಳ್ಳಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಅಂಧ ವ್ಯಕ್ತಿಯನ್ನು ಕರೆತಂದು ಅಪರಿಚಿತರೊಬ್ಬರು ಮತ ಹಾಕಿಸಿದ ಘಟನೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ದಾದಕ್ಕೆ ಕಾರಣವಾಯಿತು.

ಇದೇ ಗ್ರಾಮದ ಅಂಧ ವ್ಯಕ್ತಿಯು ಮಕ್ಕಳ ಸಹಾಯದಿಂದ ಮತಗಟ್ಟೆಗೆ ಬಂದಿದ್ದರು. ಅಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅಂಧನನ್ನು ಕರೆದೋಯ್ದು ಮತ ಹಾಕಿಸಿ ಬಂದರು. ಕಾಂಗ್ರೆಸ್ ಪಕ್ಷದ ಅಪರಿಚಿತ ವ್ಯಕ್ತಿಯೇ ಅಂಧ ವ್ಯಕ್ತಿಯ ಮತ ಹಾಕಿದ್ದಾನೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಬಿಜೆಪಿ ಕಡೆಯವರೇ ಅಂಧ ವ್ಯಕ್ತಿಗೆ ಮತ ಚಲಾಯಿಸಲು ಸಹಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಾದಿಸಿದರು. ಈ ವೇಳೆ ಎರಡೂ ಕಡೆಯವರ ಮಧ್ಯೆ ವಾಗ್ವಾದ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪೊಲೀಸರಿಂದ ಪರಿಸ್ಥಿತಿ ನಿಯಂತ್ರಿಸಲು ಆಗಲಿಲ್ಲ. ಆಗ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನಗೊಳಿಸಿದರು.


ಕ್ರಮಸಂಖ್ಯೆ ಅದಲು ಬದಲು ಆರೋಪ

ಇನ್ನು ಚನ್ನಪಟ್ಟಣ ಕ್ಷೇತ್ರದ ಹೊಂಗನೂರಿನ ಮತಗಟ್ಟೆ 4ರಲ್ಲಿ ವಿದ್ಯುನ್ಮಾನ ಮತಯಂತ್ರಕ್ಕೆ ಅಂಟಿಸಿದ್ದ ಅಭ್ಯರ್ಥಿಗಳ ಕ್ರಮಸಂಖ್ಯೆಯಲ್ಲಿ ಅದಲು ಬದಲಾಗಿದೆ ಎಂಬ ಆರೋಪ ಕೇಳಿಬಂದಿತು. ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಸ್ಥಳಕ್ಕೆ ಧಾವಿಸಿ ಆಕ್ಷೇಪ ವ್ಯಕ್ತಪಡಿಸಿದರು. ಬೆಳಿಗ್ಗೆ 8ಗಂಟೆಗೆ ಕ್ರಮಸಂಖ್ಯೆ ಅದಲು ಬದಲಾಗಿರುವ ಮಾಹಿತಿ ಇದೆ. ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.


ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ಶಿಗ್ಗಾವಿ ಕ್ಷೇತ್ರದ ಸವಣೂರಿನ ದಂಡಿನಪೇಟೆ ಗ್ರಾಮದ ಸುಮಾರು 60ಕ್ಕೂ ಹೆಚ್ಚು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. ಗ್ರಾಮದ ಏಳು ಮನೆಗಳ ಮುಂದೆ ಮತದಾನದ ಬಹಿಷ್ಕಾರ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

 ದಲಿತರ ಜಮೀನನ್ನು ಕಂದಾಯ ಇಲಾಖೆ ಬೇರೊಬ್ಬರಿಗೆ ಮಾರಿಕೊಂಡಿದೆ ಎಂದು ಆರೋಪಿಸಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ್ದರು. ಇಲ್ಲಿನ ಮೂಲ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದಾಗಿ ಉಪವಿಭಾಗಾಧಿಕಾರಿ ಸುಳ್ಳು ಭರವಸೆ ನೀಡಿದ್ದಾರೆ. ಹಾಗಾಗಿ ಮತದಾನದಲ್ಲಿ ಭಾಗವಹಿಸಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಬಳಿಕ ಅಧಿಕಾರಿಗಳು ಮನವೊಲಿಸಿದರು.

Tags:    

Similar News