Karnataka By-Election | ಮೂರೂ ಕ್ಷೇತ್ರದಲ್ಲಿ ಮತದಾನಕ್ಕೆ ಕ್ಷಣಗಣನೆ

ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ಮೂರು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬುಧವಾರ(ನ.13) ಮತದಾನ ನಡೆಯಲಿವೆ. ಬೆಳಿಗ್ಗೆ 7ರಿಂದ ಮತದಾನ ಆರಂಭವಾಗಲಿದ್ದು, ಸಂಜೆ 6ಕ್ಕೆ ಮುಕ್ತಾಯವಾಗಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ.

Update: 2024-11-12 11:36 GMT

ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ಮೂರು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬುಧವಾರ(ನ.13) ಮತದಾನ ನಡೆಯಲಿವೆ. ಮೂರೂ ಕ್ಷೇತ್ರಗಳಿಂದ ಯಾರನ್ನು ವಿಧಾನಸಭೆಗೆ ಕಳಿಸಬೇಕು ಎಂಬುದನ್ನು ಮತದಾರರು ನಿರ್ಧರಿಸಲಿದ್ದಾರೆ.

ಬುಧವಾರ ಬೆಳಿಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 6ಕ್ಕೆ ಮತದಾನ ಮುಕ್ತಾಯವಾಗಲಿದೆ. ಮತ ಎಣಿಕೆ ನ.23 ರಂದು ನಡೆಯಲಿದ್ದು, ಫಲಿತಾಂಶಕ್ಕಾಗಿ ಆವರೆಗೆ ಕಾಯಬೇಕಾಗಿದೆ.

ಮೂರೂ ಪಕ್ಷಗಳ ನಾಯಕರಿಗೆ ಪ್ರತಿಷ್ಠೆಯ ಕಣಗಳಾಗಿರುವ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರಿನಲ್ಲಿ ಬಹಿರಂಗ ಪ್ರಚಾರ ಸೋಮವಾರವೇ ಮುಗಿದಿದ್ದು, ಇದೀಗ ಮತದಾರನ ಮನೆ-ಮನೆಗೆ ತೆರಳಿ ಮತಯಾಚನೆ ಬಿರುಸುಗೊಂಡಿದೆ.

ವಿಶೇಷವೆಂದರೆ, ಈ ಮೂರೂ ಕ್ಷೇತ್ರಗಳಲ್ಲಿ ಈ ಮೊದಲು ಆ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದ ಮೂರೂ ಪಕ್ಷಗಳ ನಾಯಕರ ಕುಟುಂಬದವರೇ ಮತ್ತೆ ಈಗ ಕಣಕ್ಕಿಳಿದಿದ್ದಾರೆ. ಅಂದರೆ, ಮೂರೂ ಪಕ್ಷಗಳು ಉಪ ಚುನಾವಣೆಯಲ್ಲಿ ಸ್ಥಾನ ಉಳಿಸಿಕೊಳ್ಳಲು ಕುಟುಂಬ ರಾಜಕಾರಣದ ಮೊರೆಹೋಗಿವೆ. ಆ ಪೈಕಿ ಎರಡು ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರರೇ ಕಣದಲ್ಲಿದ್ದು, ತಮ್ಮ ಮಕ್ಕಳ ಪರವಾಗಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಸಾಕಷ್ಟು ಬೆವರು ಸುರಿಸಿದ್ದಾರೆ.

ಚನ್ನಪಟ್ಟಣದಲ್ಲಿ ತಮ್ಮ ಭದ್ರಕೋಟೆಯನ್ನು ಉಳಿಸಿಕೊಳ್ಳಲು ತಮ್ಮ ಉತ್ತರಾಧಿಕಾರಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಇನ್ನು ಶಿಗ್ಗಾವಿಯ ತಮ್ಮ ಕುಟುಂಬದ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಪುತ್ರ ಭರತ್ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿದ್ದು, ಅವರೂ ಕೂಡ ಕಳೆದ ಹದಿನೈದು ದಿನಗಳಿಂದ ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಎರಡೂ ಕ್ಷೇತ್ರಗಳಲ್ಲಿ ಉತ್ತರಾಧಿಕಾರಿಗಳ ರಾಜಕೀಯ ಭವಿಷ್ಯಕ್ಕೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳಿಗೆ ಈ ಉಪ ಚುನಾವಣೆ ನಿರ್ಣಾಯಕ.

ಇನ್ನು ಸಂಡೂರಿನಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಇ ತುಕಾರಾಂ ಕೂಡ ತಮ್ಮ ಭದ್ರಕೋಟೆಯನ್ನು ಉಳಿಸಿಕೊಳ್ಳಲು ತಮ್ಮ ಪತ್ನಿ ಅನ್ನಪೂರ್ಣ ಅವರನ್ನೇ ಕಣಕ್ಕಿಳಿಸಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ


ಮೂರೂ ಕ್ಷೇತ್ರಗಳಲ್ಲಿ ಆಡಳಿತರೂಢ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಚನ್ನಪಟ್ಟಣದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ತಮ್ಮ ಕುಟುಂಬಕ್ಕೇ ಉಳಿಸಿಕೊಳ್ಳಲು ಮಗ ನಿಖಿಲ್ ಅವರನ್ನು ಕಣಕ್ಕಿಳಿಸಿರುವ ಜೆಡಿಎಸ್ ಶತಾಯಗತಾಯ ಪ್ರಯತ್ನ ನಡೆಸಿದೆ.

ಜೆಡಿಎಸ್‌ಗೆ ಬಿಜೆಪಿಯ ಬಲ ಕೂಡ ಇದೆ. ಆದರೆ, ಅಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಸಿ ಪಿ ಯೋಗೇಶ್ವರ್ ಚುನಾವಣಾ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಸೇರಿ, ಆ ಪಕ್ಷದ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ ಕೆ ಸುರೇಶ್ ಅವರ ಪಾಲಿಗೂ ಈ ಕ್ಷೇತ್ರ ಪ್ರತಿಷ್ಠೆಯ ಪ್ರಶ್ನೆ. ಹಾಗಾಗಿ ಕಾಂಗ್ರೆಸ್ನ ಪ್ರಭಾವಿ ನಾಯಕರು ಮತ್ತು ಸ್ವತಃ ಕ್ಷೇತ್ರದಾದ್ಯಂತ ತಮ್ಮದೇ ಬೆಂಬಲಿಗರ ಪಡೆ ಹೊಂದಿರುವ ಸಿ ಪಿ ಯೋಗೇಶ್ವರ ಅವರ ಬಲ ಇಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಭಾರೀ ಸವಾಲನ್ನೇ ಒಡ್ಡಿವೆ.

ಕ್ಷೇತ್ರದಲ್ಲಿ 2,32,836 ಮತದಾರಿದ್ದಾರೆ. ಆ ಪೈಕಿ 1,12,271 ಪುರುಷರು ಮತ್ತು 1,20,557 ಮಹಿಳಾ ಮತದಾರರಿದ್ದಾರೆ. ಜೊತೆಗೆ ಇತರೆ 8 ಮತದಾರರು ಕೂಡ ಇದ್ದಾರೆ.

ಶಿಗ್ಗಾವಿ ವಿಧಾನಸಭಾ ಕ್ಷೇತ್ರ


ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾಂಪ್ರದಾಯಿಕ ಕ್ಷೇತ್ರ; ಭದ್ರಕೋಟೆ.

ನಾಲ್ಕು ಬಾರಿ ಶಾಸಕರಾಗಿ ತಾವು ಆಯ್ಕೆಯಾದ ಕ್ಷೇತ್ರದಲ್ಲಿ ತಮ್ಮ ಪುತ್ರ ಭರತ್ ಅವರನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಭರತ್ ಬೊಮ್ಮಾಯಿ ಎದುರು ಕಣಕ್ಕಿಳಿದಿರುವ ಕಾಂಗ್ರೆಸ್ನ ಯಾಸೀರ್ ಅಹಮದ್ ಪಠಾಣ್, ಕ್ಷೇತ್ರದಲ್ಲಿ ಎರಡನೇ ಅತಿದೊಡ್ಡ ಮತದಾರ ಸಮೂಹದ ಬಲದ ಮೇಲೆ ಬೊಮ್ಮಾಯಿ ಅವರ ವಂಶಪಾರಂಪರ್ಯವನ್ನು ಮುರಿಯುವ ಉಮೇದಿನಲ್ಲಿದ್ದಾರೆ. ಈ ಎರಡು ಪ್ರಬಲ ಅಭ್ಯರ್ಥಿಗಳ ನಡುವೆ ಕೆಆರ್ಎಸ್ ಪಾರ್ಟಿಯ ರವಿ ಕೃಷ್ಣಾ ರೆಡ್ಡಿ ಕೂಡ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿದ್ದಾರೆ.

ಶಿಗ್ಗಾಂವಿ ಕ್ಷೇತ್ರದಲ್ಲಿ 2,37,525 ಮತದಾರರಿದ್ದಾರೆ. ಇದರಲ್ಲಿ 1.21,443 ಪುರುಷರು ಹಾಗೂ 1,16, 076 ಮಹಿಳೆಯರು ಇದ್ದಾರೆ. ಇತರೆ 6 ಮತದಾರರು ಇದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರ


ರಾಜ್ಯದ ಕಬ್ಬಿಣದ ಅದಿರಿನ ಗಣಿ ಸಂಡೂರು ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಹಣಾಹಣಿ ನಡೆದಿದೆ. ಹಾಗೆ ನೋಡಿದರೆ, ಸಂಡೂರಿನಲ್ಲಿ ನಡೆಯುತ್ತಿರುವ ಈ ಉಪ ಚುನಾವಣೆಯ ಕದನ, ಎರಡು ಪಕ್ಷಗಳ ನಡುವಿನ ಸಮರಕ್ಕಿಂತಲೂ ಗಾಲಿ ಜನಾರ್ದನ ರೆಡ್ಡಿ ಮತ್ತು ಸಂತೋಷ್ ಲಾಡ್ ನಡುವಿನ ಪ್ರತಿಷ್ಠೆಯ ಹಣಾಹಣಿ ಎಂಬುದೇ ಹೆಚ್ಚು ಸೂಕ್ತ.

ಕಾಂಗ್ರೆಸ್ನಿಂದ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಾಲಿ ಸಂಸದ ಇ ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣ ಕಣಕ್ಕಿಳಿದಿದ್ದರೆ ಬಿಜೆಪಿಯಿಂದ ಪಕ್ಷದ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತ ಕಣಕ್ಕಿಳಿದಿದ್ದಾರೆ. ಕ್ಷೇತ್ರದ ಅಪಾರ ನಿಧಿಯಾಗಿರುವ ಅದಿರು ಮತ್ತು ಗಣಿಗಾರಿಕೆಯ ಸುತ್ತಲೇ ಚುನಾವಣಾ ಪ್ರಚಾರ ಗಿರಕಿ ಹೊಡೆದಿದೆ. ಬಿಜೆಪಿಯ ಅಭ್ಯರ್ಥಿ ಪರ ರೆಡ್ಡಿ ಮತ್ತು ಶ್ರೀರಾಮುಲು ಬಲವಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪರ ಲಾಡ್ ಮತ್ತು ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಬಲವಿದೆ. ಹಾಗಾಗಿ ಈ ಬಾರಿಯ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಂಡೂರು ಪ್ರಭಾವ ಮತ್ತು ಪೈಪೋಟಿಯ ದೃಷ್ಟಿಯಲ್ಲಿ ಭರ್ಜರಿ ಕಾಳಗವೇ ಆಗಿದೆ.

ಕ್ಷೇತ್ರದಲ್ಲಿ ಒಟ್ಟು 2,36,100 ಮತದಾರರಿದ್ದಾರೆ. ಆ ಪೈಕಿ 1,18,282 ಮಹಿಳೆಯರಿದ್ದರೆ, 1,17,789 ಪುರುಷರಿದ್ದಾರೆ. ಇತರೆ ಮತದಾರರು 29 ಮಂದಿ ಇದ್ದಾರೆ.

Tags:    

Similar News