Karnataka By-Election | ಸಂಡೂರು ಅಭ್ಯರ್ಥಿ ಘೋಷಣೆ: ತುಕಾರಾಂ ಪತ್ನಿಗೇ ಟಿಕೆಟ್‌ ಎಂದ ಸಿಎಂ

Update: 2024-10-22 07:44 GMT

ಉಪ ಚುನಾವಣೆ ಘೋಷಣೆಯಾಗಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಸಂಸದ ಹಾಗೂ ಕ್ಷೇತ್ರದ ಮಾಜಿ ಶಾಸಕ ಇ ತುಕಾರಾಂ ಅವರ ಪತ್ನಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದು, ಸಂಡೂರು ಕ್ಷೇತ್ರದಿಂದ ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರನ್ನು ಪಕ್ಷದಿಂದ ಕಣಕ್ಕಿಳಿಸಲಾಗುವುದು. ಇನ್ನುಳಿದ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಸದ್ಯದಲ್ಲೇ ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮೂರೂ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಂಜೆಯೊಳಗೆ ಅಂತಿಮಗೊಳಿಸಲಾಗುವುದು. ಸಂಜೆಯ ಹೊತ್ತಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬಹುದು ಎಂದೂ ಅವರು ಮಾಹಿತಿ ನೀಡಿದರು.

ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ

ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯ ಟಿಕೆಟ್ಗಾಗಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರೊಂದಿಗೆ ನಾನು ಮಾತನಾಡಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಸಂಡೂರು ಪ್ರತಿಷ್ಠೆಯ ಕಣ

ಈ ಬಾರಿಯ ಉಪ ಚುನಾವಣೆಯ ಮೂರು ಕ್ಷೇತ್ರಗಳ ಪೈಕಿ ಸಂಡೂರು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹಣಾಹಣಿಯ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಒಂದು ಕಡೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳೆರಡರಲ್ಲೂ ಸತತ ಸೋಲು ಕಂಡು ತಮ್ಮ ಸ್ವಂತ ಪ್ರತಿಷ್ಠೆ ಮತ್ತು ಪಕ್ಷದ ವರ್ಚಸ್ಸು ನೆಲಕಚ್ಚಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಮತ್ತು ಬರೋಬ್ಬರಿ ದಶಕದ ಬಳಿಕ ಬಳ್ಳಾರಿಯಲ್ಲಿ ತಮ್ಮ ಗತ ಅಧಿಪತ್ಯ ಮರು ಸ್ಥಾಪಿಸುವ ಹವಣಿಕೆಯಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಈ ಚುನಾವಣೆ ನಿರ್ಣಾಯಕ. ಅದೇ ಹೊತ್ತಿಗೆ ಮತ್ತೊಂದು ಕಡೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಆರೋಪದಲ್ಲಿ ಕೇಂದ್ರದ ಇಡಿ ವಶದಲ್ಲಿದ್ದು ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಬಿಜೆಪಿ ತಮ್ಮ ವಿರುದ್ಧ ನಡೆಸಿದ ಸೇಡಿನ ರಾಜಕಾರಣಕ್ಕೆ ಮುಯ್ಯಿ ತೀರಿಸಿಕೊಳ್ಳಲು ಇದೊಂದು ಅವಕಾಶ.

ಈಗಾಗಲೇ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ಬಿ ನಾಗೇಂದ್ರ ಅವರೇ ಸಂಡೂರು ಚುನಾವಣೆಯ ಉಸ್ತುವಾರಿ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಸಂಡೂರು ಕದನ ಕುತೂಹಲ ಮೂಡಿಸಿದೆ.

Tags:    

Similar News