Karnataka By-Election | ಚನ್ನಪಟ್ಟಣದಲ್ಲಿ ನಿಖಿಲ್‌ಗೆ ಭಾರೀ ಹಿನ್ನಡೆ, ಮೂರೂ ಕಡೆ ಕಾಂಗ್ರೆಸ್ ಮುನ್ನಡೆ
ಆರಂಭಿಕ ಸುತ್ತುಗಳಲ್ಲಿ ಶಿಗ್ಗಾವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದನ್ನು ಹೊರತುಪಡಿಸಿ, ಮೂರೂ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ನಿರಂತರ ಮುನ್ನಡೆ ಸಾಧಿಸಿದ್ದಾರೆ.;
ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಅರ್ಧದಷ್ಟು ಮುಗಿದಿದ್ದು, ಮೂರೂ ಕಡೆ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದೆ.
ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನ.13ರಂದು ಉಪ ಚುನಾವಣೆಯ ಮತದಾನ ನಡೆದಿತ್ತು. ಮತ ಎಣಿಕೆ ಶನಿವಾರ(ನ.23) ಬೆಳಿಗ್ಗೆ 8ರಿಂದ ಮತ ಎಣಿಕೆ ನಡೆಯುತ್ತಿದೆ. ಈಗಾಗಲೇ ಮೂರೂ ಕಡೆ ಅರ್ಧದಷ್ಟು ಸುತ್ತುಗಳ ಮತ ಎಣಿಕೆ ಮುಕ್ತಾಯವಾಗಿದೆ.
ಆರಂಭಿಕ ಸುತ್ತುಗಳಲ್ಲಿ ಶಿಗ್ಗಾವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದನ್ನು ಹೊರತುಪಡಿಸಿ, ಮೂರೂ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ನಿರಂತರ ಮುನ್ನಡೆ ಸಾಧಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸಿಪಿವೈ ಮುನ್ನಡೆ
ಸದ್ಯದ ಮಾಹಿತಿ ಪ್ರಕಾರ, ತೀವ್ರ ರಾಜಕೀಯ ಹಣಾಹಣಿಗೆ ಕಾರಣವಾಗಿದ್ದ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಸಿ ಪಿ ಯೋಗೇಶ್ವರ್ ಅವರು 19 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ 10ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ಹೊತ್ತಿಗೆ ಸಿ ಪಿ ಯೋಗೇಶ್ವರ್ ಅವರು 61,265 ಮತಗಳನ್ನು ಪಡೆದಿದ್ದರೆ, ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು 41,472 ಮತಗಳನ್ನು ಪಡೆದಿದ್ದಾರೆ.
ಶಿಗ್ಗಾವಿ ಕ್ಷೇತ್ರದಲ್ಲಿ ಪಠಾಣ್ ಫೈಟ್
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸತತ ನಾಲ್ಕು ಬಾರಿ ಗೆಲುವು ಪಡೆದಿದ್ದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ 11ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ಹೊತ್ತಿಗೆ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹಮದ್ ಖಾನ್ ಪಠಾಣ್ 12,793 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಪಠಾಣ್ ಅವರು 68,078 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿಯ ಭರತ್ ಬೊಮ್ಮಾಯಿ 55,285 ಮತ ಪಡೆದಿದ್ದಾರೆ.
ಏಳನೇ ಸುತ್ತಿನ ಮತ ಎಣಿಕೆಯವರೆಗೆ ಅಲ್ಪ ಮುನ್ನಡೆ ಪಡೆದುಕೊಂಡಿದ್ದ ಭರತ್ ಬೊಮ್ಮಾಯಿ, ಆ ಬಳಿಕ ನಿರಂತರ ಹಿನ್ನಡೆ ಅನುಭವಿಸಿದ್ದಾರೆ. ಒಟ್ಟು 19 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ಸಂಡೂರಿನಲ್ಲಿ ಅನ್ನಪೂರ್ಣ ಮೇಲುಗೈ
ಸಂಡೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೂಡ ಈಗಾಗಲೇ ಹತ್ತು ಸುತ್ತು ಮುಕ್ತಾಯ ಕಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಇ ಅನ್ನಪೂರ್ಣ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಂಗಾರು ಹನುಮಂತ ವಿರುದ್ಧ 3,488 ಮತಗಳ ಮುನ್ನಡೆ ಪಡೆದಿದ್ದಾರೆ.
ಅನ್ನಪೂರ್ಣ ಅವರು 50,692 ಮತ ಪಡೆದಿದ್ದರೆ, ಬಿಜೆಪಿಯ ಬಂಗಾರು ಅವರು 47,204 ಮತ ಪಡೆದುಕೊಂಡಿದ್ದಾರೆ.
ಕ್ಷೇತ್ರದಲ್ಲಿ ಇನ್ನೂ ಒಂಬತ್ತು ಸುತ್ತಿನ ಮತ ಎಣಿಕೆ ಬಾಕಿ ಇದೆ.