Karnataka By-Election: ಪಾರದರ್ಶಕ ಚುನಾವಣೆ ಹಾಳುಗೆಡವಲು ಕಾಂಗ್ರೆಸ್ ಸಂಚು; ಎಚ್‌ಡಿಕೆ ನೇರ ಆರೋಪ

Update: 2024-11-03 04:07 GMT

ಚನ್ನಪಟ್ಟಣ ಕ್ಷೇತ್ರದಲ್ಲಿ ಮತದಾರರಿಗೆ ಲುಲು ಮಾಲ್ ಗಿಫ್ಟ್ ಕೂಪನ್ ಹಂಚಿಕೊಂಡು ಕಾಂಗ್ರೆಸ್ ಚುನಾವಣಾ ಅಕ್ರಮ ನಡೆಸಲು ಮುಂದಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಚುನಾವಣಾ ಪ್ರಚಾರದ ನಡುವೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭಾರೀ ಅಕ್ರಮ ನಡೆಸಲು ಸಂಚು ರೂಪಿಸಿದೆ. ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕಿದೆ. ಪಾರದರ್ಶಕವಾಗಿ ಚುನಾವಣೆ ನಡೆಸಬೇಕಿದೆ. ಕಾಂಗ್ರೆಸ್ ಎಲ್ಲಾ ವಾತಾವರಣ ಹಾಳು ಮಾಡುತ್ತಿದೆ ಎಂದು ದೂರಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ವ್ಯಾಪಕ ಅಕ್ರಮ ನಡೆಸಿ ಜನರನ್ನು ನಂಬಿಕೆಗೆ ಮಾಡಿತು. ಹಲವು ಕ್ಷೇತ್ರಗಳಲ್ಲಿ ಲುಲು ಮಾಲ್ ಗಿಫ್ಟ್ ಕೂಪನ್ ಗಳನ್ನು ಹಂಚಿಕೆ ಮಾಡಿತ್ತು. ರಾತ್ರೋರಾತ್ರಿ ಹಳ್ಳಿಗಳಿಗೆ ಹೋಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಇಂತಹ ಕೂಪನ್ ಹಂಚಿಕೆ ಮಾಡಿದ್ದರು. ಚುನಾವಣೆ ಮುಗಿದ ಮೇಲೆ ಹಣವೂ ಇಲ್ಲ, ಕೂಪನ್ನೂ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜನರು ಹಿಡಿಶಾಪ ಹಾಕಿದರು. ಇಂಥ ಮೋಸಕ್ಕೆ ನೀವು ತುತ್ತಾಗಬೇಡಿ ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಏಕವಚನದಲ್ಲಿ ಟೀಕೆ ಮಾಡುತ್ತಿದ್ದಾರೆ. ಅವರ ಟೀಕೆಗಳನ್ನು ನಾನು ವಿನಮ್ರವಾಗಿ ಸ್ವೀಕಾರ ಮಾಡುತ್ತೇನೆ. ನ.13ನೇ ತಾರೀಕು ಜನರೇ ಉತ್ತರ ಕೊಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

Tags:    

Similar News