Karnataka Budget : ಕೇಂದ್ರ ಸರ್ಕಾರದ ಜಿಎಸ್‌ಟಿ ಹಂಚಿಕೆ, ಬಾಕಿ ಅನುದಾನಗಳು ಎಷ್ಟಿವೆ?

ಬಜೆಟ್​ನಲ್ಲಿ ಉಲ್ಲೇಖಿಸಿರುವಂತೆ. 15ನೇ ಹಣಕಾಸು ಆಯೋಗದ ಹಂಚಿಕೆ ಸೂತ್ರದಡಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ತೆರಿಗೆ ಪಾಲಿನ ಶೇಕಡಾವಾರು ಗಂಭೀರವಾಗಿ ಕಡಿಮೆಯಾಗಿದೆ.;

Update: 2025-03-07 11:17 GMT

ಕರ್ನಾಟಕ ಬಜೆಟ್ 2025-26ರ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರದಿಂದ ಆಗಿರುವ ತೆರಿಗೆ ಹಂಚಿಕೆ ಪ್ರಮಾಣದ ಇಳಿಕೆ ಮತ್ತು ಬಾಕಿ ಇರುವ ಅನುದಾನಗಳ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೊಡಬೇಕಾಗಿರುವ ತೆರಿಗೆ ವಿತರಣೆಯಲ್ಲಿ ನ್ಯಾಯಯುತ ಹಂಚಿಕೆ ಆಗಿಲ್ಲ ಹಾಗೂ ವಿವಿಧ ಮೂಲಸೌಕರ್ಯ ಯೋಜನೆಗಳಿಗಾಗಿ ವಾಗ್ದಾನ ಮಾಡಲಾದ ಅನುದಾನ ಬಿಡುಗಡೆಯೂ ಆಗಿಲ್ಲ ಎಂಬುದನ್ನು ವಿವರಿಸಲಾಗಿದೆ. ಮುಂದಿನ ಹಣಕಾಸು ಆಯೋಗದಲ್ಲಿ ಇದನ್ನು ಸರಿಪಡಿಸುವ ಅಭಿಲಾಷೆಯನ್ನು ವ್ಯಕ್ತಪಡಿಸಲಾಗಿದೆ. .

ಬಜೆಟ್​ನಲ್ಲಿ ಉಲ್ಲೇಖಿಸಿರುವಂತೆ. 15ನೇ ಹಣಕಾಸು ಆಯೋಗದ ಹಂಚಿಕೆ ಸೂತ್ರದಡಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ತೆರಿಗೆ ಪಾಲಿನ ಶೇಕಡಾವಾರು ಗಂಭೀರವಾಗಿ ಕಡಿಮೆಯಾಗಿದೆ. 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕದ ಹಂಚಿಕೆ 4.713% ಕಡಿಮಯಾಗಿದ್ದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಅದು 3.647% ಗೆ ಕುಸಿತ ಕಂಡಿದೆ. ಪರಿಣಾಮವಾಗಿ ಪ್ರತಿವರ್ಷ ರಾಜ್ಯಕ್ಕೆ 12,000 ಕೋಟಿ ಆದಾಯ ನಷ್ಟ ವಾಗುತ್ತಿದೆ.

ಕರ್ನಾಟಕ ಸರ್ಕಾರವು 16ನೇ ಹಣಕಾಸು ಆಯೋಗದ ಮುಂದೆ ರಾಜ್ಯದ ಪಾಲು ಹಂಚಿಕೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದೆ. ಕೇಂದ್ರ-ರಾಜ್ಯ ತೆರಿಗೆ ಹಂಚಿಕೆ ಕನಿಷ್ಠ ಶೇಕಾಡ 50 ಇರುವಂತೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೆ, ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಹೆಚ್ಚುವರಿ ತೆರಿಗೆಗಳ ಮೇಲಿನ ಮಿತಿಯನ್ನು 5% ಆಗಿ ನಿಗದಿಪಡಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ. ಇದರಿಂದ ರಾಜ್ಯಗಳಿಗೆ ಆಗುವ ಅನ್ಯಾಯವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಬಾಕಿ ಅನುದಾನಗಳು. ಬಿಡುಗಡೆ ವಿಳಂಬ

15ನೇ ಹಣಕಾಸು ಆಯೋಗದ ಶಿಫಾರಸಿನ ಹೊರತಾಗಿಯೂ ಕರ್ನಾಟಕಕ್ಕೆ ನೀಡಬೇಕಾದ ಅನೇಕ ಅನುದಾನಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಬಜೆಟ್​ನಲ್ಲಿ ಉಲ್ಲೇಖಿಸಲಾಗಿದೆ.

5,495 ಕೋಟಿ ರೂಪಾಯಿ ವಿಶೇಷ ಅನುದಾನ ತೆರಿಗೆ ಹಂಚಿಕೆಯ ಕಡಿಮೆಯ ಪರಿಹಾರವಾಗಿ ನೀಡಿಲ್ಲ. ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ರೂಪಾಯಿ ಒದಗಿಸಿಲ್ಲ. ಬೆಂಗಳೂರು ಪರಿಫೆರಲ್ ರಿಂಗ್ ರೋಡ್ ಯೋಜನೆಗೆ ನೀಡಬೇಕಾದ 3,000 ಕೋಟಿ ರೂಪಾಯಿ ಅನುದಾನವೂ ಬಂದಿಲ್ಲ. ಭದ್ರಾ ಮೇಲ್ಡಂಡೆ ನೀರಾವರಿ ಯೋಜನೆ ಹೇಳಿರುವ 5,300 ಕೋಟಿ ರೂಪಾಯಿ ಬಾಕಿ ಇದೆ. ಇದು ಕೇಂದ್ರ ಬಜೆಟ್ 2023-24 ರಲ್ಲಿ ಪ್ರಕಟಗೊಂಡಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ.

ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆಯಡಿ ಕರ್ನಾಟಕಕ್ಕೆ 3,800 ಕೋಟಿ ರೂಪಾಯಿ ಬಾಕಿ ಇದೆ. ಇದು 2024-25ರಲ್ಲಿ ನಿಗದಿಯಾಗಿತ್ತು. ಅದರಲ್ಲಿ ಕೇವಲ 571 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಈ ಯೋಜನೆಯು ಸ್ಥಗಿತಗೊಳ್ಳದಂತೆ 8,400 ಕೋಟಿ ಮುಂಗಡವಾಗಿ ವೆಚ್ಚ ಮಾಡಿದೆ.

ರಾಜ್ಯದ ಆರ್ಥಿಕ ಸ್ಥಿತಿಗೆ ಪರಿಣಾಮ

ಈ ಆರ್ಥಿಕ ಸವಾಲುಗಳ ನಡುವೆಯೂ, ಕರ್ನಾಟಕವು ತನ್ನ ಸ್ವಂತ ತೆರಿಗೆ ಸಂಗ್ರಹದ ಬಲದಿಂದ ಆರ್ಥಿಕ ಬೆಳವಣಿಗೆಯನ್ನು ನಿರ್ವಹಿಸುತ್ತಿದೆ. ಇದರಲ್ಲಿ 2024-25ರಲ್ಲಿ 10.3% ಬೆಳವಣಿಗೆ ನಿರೀಕ್ಷಿಸಲಾತ್ತು ಹಾಗೂ ತೆರಿಗೆಯೇತರ ಆದಾಯವು 10.5% ಹೆಚ್ಚಳ ಕಂಡು 14,500 ಕೋಟಿ ರೂಪಾಯಿ ತಲುಪಿದೆ.

ಜಿಡಿಪಿಯ ಶೇಕಡಾವಾರು ಪಾಲಿನ ದೃಷ್ಟಿಯಿಂದ, ತೆರಿಗೆಯೇತರ ಆದಾಯ ಸ್ಥಿರವಾಗಿರುವುದರಿಂದ, ರಾಜ್ಯ ಸರ್ಕಾರವು ಆದಾಯ ಸಂಗ್ರಹ ಸಮಿತಿಯನ್ನು (Resource Mobilization Committee) ರಚಿಸಿದ್ದು ಕೇಂದ್ರ ಅನುದಾನಗಳ ಅವಲಂಬನೆ ಕಡಿಮೆ ಮಾಡಲು ಹೊಸ ಆದಾಯ ಸೂತ್ರಗಳನ್ನು ಅಭಿವೃದ್ಧಿಪಡಿಸುವ ಸಲಹೆ ನೀಡಲಾಗಿದೆ.

ನ್ಯಾಯಯುತ ಹಣಕಾಸು ಹಂಚಿಕೆಯ ಬೇಡಿಕೆ

ಕರ್ನಾಟಕ ಸರ್ಕಾರವು ಸಮತೋಲಿತ ಹಣಕಾಸು ನೀತಿಯ ಅವಶ್ಯಕತೆಯನ್ನು ಒತ್ತಿಹೇಳಿದ್ದು, ಆರ್ಥಿಕವಾಗಿ ಅಭಿವೃದ್ಧಿಯಲ್ಲಿರುವ ರಾಜ್ಯಗಳು ಹಿಂದುಳಿದ ರಾಜ್ಯಗಳಿಗೆ ಬೆಂಬಲ ನೀಡಬೇಕಾದರೂ, ಈ ನಿಯಮ ತಮ್ಮ ಸ್ವಂತ ಆರ್ಥಿಕ ಅಭಿವೃದ್ಧಿಗೆ ತೊಡಕು ಆಗಬಾರದು ಎಂದು ಅಭಿಪ್ರಾಯಪಟ್ಟಿದೆ. 16ನೇ ಹಣಕಾಸು ಆಯೋಗವು ಸಮಾನತೆ ಮತ್ತು ಬೆಳವಣಿಗೆ ನಡುವಿನ ಸಮತೋಲನವನ್ನು ಸಾಧಿಸಬೇಕು ಎಂಬುದನ್ನು ಬಜೆಟ್​ನಲ್ಲಿ ಉಲ್ಲೇಖಿಸಲಾಗಿದೆ.

Tags:    

Similar News