ಕರ್ನಾಟಕ ಬಜೆಟ್‌ 2024 | ಸಿಎಂ ಮುಂದಿದೆ ಸವಾಲು- ನಿರೀಕ್ಷೆಗಳ ಕತ್ತಿಯಂಚಿನ ನಡಿಗೆ!

Update: 2024-02-15 17:52 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 15ನೇ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಫೆ.16ರ ಬೆಳಿಗ್ಗೆ ೧೦.15ಕ್ಕೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಅದಕ್ಕೂ ಮುನ್ನ ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಬಜೆಟ್ ಗೆ ಕ್ಯಾಬಿನೆಟ್ ಅನುಮೋದನೆ ಪಡೆಯಲಿದ್ದಾರೆ.

ಸಿದ್ದರಾಮಯ್ಯ ಅವರ ದಾಖಲೆಯ ಹದಿನೈದನೇ ಬಜೆಟ್ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿಯೂ ಈ ಬಜೆಟ್ ಮೇಲೆ ಇಡೀ ರಾಜ್ಯದ ಕಣ್ಣಿದೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ಹಣಕಾಸು ನಿರ್ವಹಣೆಯ ಸವಾಲು ಎದುರಿಸುತ್ತಿರುವ ಸರ್ಕಾರ, ಒಂದು ಕಡೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಪೂರಕವಾಗಿ ಜನಪರವಾದ ಬಜೆಟ್ ಮಂಡಿಸಬೇಕಾಗಿದೆ, ಮತ್ತೊಂದು ಕಡೆ ಬರ ಮತ್ತು ಗ್ಯಾರಂಟಿ ಯೋಜನೆಗಳಿಂದಾಗಿ ಸವಾಲು ಎದುರಿಸುತ್ತಿರುವ ಆರ್ಥಿಕ ಸ್ಥಿತಿ ಇದೆ. ಹಾಗಾಗಿ ಸಹಜವಾಗಿಯೇ ಇದು ಸಿದ್ದರಾಮಯ್ಯ ಪಾಲಿಗೆ ಸವಾಲಿನ ಬಜೆಟ್.

ಮೂರೂವರೆ ಲಕ್ಷ ಕೋಟಿ ಬಜೆಟ್?

ಕಳೆದ ಬಾರಿ ತಮ್ಮ ಸರ್ಕಾರ ರಚನೆಯ ಬಳಿಕ ಜುಲೈನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ, 2023-24ನೇ ಸಾಲಿಗೆ ಬರೋಬ್ಬರಿ 3.27 ಲಕ್ಷ ಕೋಟಿ ಮೊತ್ತದ ಆಯವ್ಯಯ ಲೆಕ್ಕಾಚಾರವನ್ನು ರಾಜ್ಯದ ಜನರ ಮುಂದಿಟ್ಟಿದ್ದರು. ಈ ಬಾರಿ ಬಜೆಟ್ ಗಾತ್ರ ಮೂರೂವರೆ ಲಕ್ಷ ಕೋಟಿ ದಾಟುವ ನಿರೀಕ್ಷೆ ಇದ್ದು, ಪ್ರಮುಖವಾಗಿ ಜನ ಕಲ್ಯಾಣ ಯೋಜನೆಗಳು ಮತ್ತು ಬರ ನಿರ್ವಹಣೆಗೆ ಆದ್ಯತೆ ಸಿಗುವ ಸಾಧ್ಯತೆ ಇದೆ. ಹಾಗೇ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಗಳಿಗೆ ಹೆಚ್ಚಿನ ಅನುದಾನ ಘೋಷಿಸುವ ನಿರೀಕ್ಷೆ ಕೂಡ ಇದೆ.

ಹಾಗೇ ಪ್ರಾದೇಶಿಕವಾಗಿ ಕೂಡ ಸಾಕಷ್ಟು ನಿರೀಕ್ಷೆಗಳಿವೆ. ಉತ್ತರ ಕರ್ನಾಟಕದ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರಮುಖವಾಗಿ ನೀರಾವರಿ, ಜವಳಿ, ಮತ್ತು ಕೃಷಿಗೆ ಸಂಬಂಧಿಸಿ ಈಗಾಗಲೇ ಘೋಷಣೆಯಾಗಿ ಕುಂಟುತ್ತಿರುವ ಮತ್ತು ಜಾರಿಗೇ ಬರದೇ ಉಳಿದಿರುವ ಯೋಜನೆಗಳಿಗೆ ಮರುಜೀವ ನೀಡುವ ನಿರೀಕ್ಷೆ ಆ ಭಾಗದ ಜನರದ್ದು.

ಇನ್ನು ಮಲೆನಾಡು ಮತ್ತು ಮಧ್ಯಕರ್ನಾಟಕದ ಭಾಗದಲ್ಲಿ ಈಗಾಗಲೇ ಜಾರಿಯಾಗಿರುವ ನೀರಾವರಿ ಯೋಜನೆಗಳಿಗೆ ಚುರುಕು, ಅಡಿಕೆಯಂತಹ ಈ ಭಾಗದ ಪ್ರಮುಖ ಬೆಳೆಗೆ ಆವರಿಸಿರುವ ಬರ, ಕೊಳೆ, ಮತ್ತು ಎಲೆಚುಕ್ಕೆ ರೋಗಗಳಿಗೆ ಪರಿಹಾರೋಪಾಯಗಳ ನಿರೀಕ್ಷೆ ಜನರದ್ದು. ಜೊತೆಗೆ ಮಲೆನಾಡು ಭಾಗದ ಜನರಲ್ಲಿ ಆತಂಕ ಮೂಡಿಸಿರುವ ಮಂಗನಕಾಯಿಲೆ(ಕೆಎಫ್ ಡಿ)ಗೆ ಸೂಕ್ತ ಲಸಿಕೆ ಮತ್ತು ಚಿಕಿತ್ಸಾ ಸೌಲಭ್ಯಗಳ ನಿರೀಕ್ಷೆ ಕಾಡಂಚಿನ ಜನಗಳದ್ದು.

ಹಳೇ ಮೈಸೂರು ಭಾಗದಲ್ಲಿ ಪ್ರಮುಖವಾಗಿ ಪ್ರವಾಸೋದ್ಯಮ ಅಭಿವೃದ್ಧಿ, ಕೈಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ ಮತ್ತು ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ಮತ್ತು ಮೈಸೂರು ನಗರಗಳ ಅಭಿವೃದ್ಧಿಗೆ ಮೂಲಸೌಕರ್ಯಗಳ ನಿರೀಕ್ಷೆಯಲ್ಲಿ ಆ ಭಾಗದ ಜನ ಇದ್ದಾರೆ. ಹಾಗೇ ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆ ಕಡಿತ ಮಾಡಲು ಟನಲ್ ರಸ್ತೆ, ಹೆಚ್ಚುವರಿ ಅಂಡರ್ ಪಾಸ್ ಮತ್ತು ಫ್ಲೈಓವರ್, ಮೆಟ್ರೋಗೆ ಹೆಚ್ಚಿನ ಅನುದಾನ ಮುಂತಾದ ಕ್ರಮಗಳ ನಿರೀಕ್ಷೆ ಮಹಾನಗರ ವಾಸಿಗಳದ್ದು.

ಹಾಗೇ ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಪ್ರವಾಸೋದ್ಯಮ ಅಭಿವೃದ್ಧಿ, ರಸ್ತೆ, ಆಸ್ಪತ್ರೆಯಂತಹ ಮೂಲ ಸೌಕರ್ಯಕ್ಕೆ ಆದ್ಯತೆ, ಮೀನುಗಾರಿಕೆ ಮತ್ತು ಪೂರಕ ಉದ್ಯಮ ಚಟುವಟಿಕೆಗೆ ವಿಶೇಷ ಉತ್ತೇಜನದ ನಿರೀಕ್ಷೆ ಇದೆ.

ಕತ್ತಿ ಅಲಗಿನ ಮೇಲಿನ ನಡಿಗೆ

ಒಟ್ಟಾರೆ, ಚುನಾವಣಾ ವರ್ಷದ ಬಜೆಟ್ ಮೇಲೆ ಜನ ಸಾಮಾನ್ಯರ ನಿರೀಕ್ಷೆಗಳು ಸಹಜವಾಗೇ ಹೆಚ್ಚಿವೆ. ಆದರೆ, ಅದೇ ಹೊತ್ತಿಗೆ ಬರ ಮತ್ತು ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಕೂಡ ಸೊರಗುವ ಸಾಧ್ಯತೆ ಇದೆ. ಹಾಗಾಗಿ ಎರಡಂಚಿನ ಕತ್ತಿ ಅಲಗಿನ ಮೇಲಿನ ನಡಿಗೆ ಈ ಬಾರಿಯ ಬಜೆಟ್. ಈ ನಡಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ನಿಭಾಯಿಸುತ್ತಾರೆ ಎಂಬುದಕ್ಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ!

Tags:    

Similar News